ಎಪಿಎಂಸಿ ಅಧ್ಯಕ್ಷನ ಮೇಲೆ ಗುಂಡಿನ ದಾಳಿ, ಬೆಂಗ್ಳೂರಲ್ಲಿ ಆ್ಯಪಲ್ ಫೋನ್ ಉತ್ಪಾದನಾ ಘಟಕ?, ಮಾರ್ಚ್ 17ಕ್ಕೆ ರಾಜ್ಯ ಬಜೆಟ್?, ಕರ್ನಾಟಕ ಮಾಧ್ಯಮ ಪ್ರಶಸ್ತಿ ಪ್ರಕಟ

ರಾಜ್ಯ ಸರ್ಕಾರ ಮತ್ತು ಯೋಗ ಗಂಗೋತ್ರಿ ಟ್ರಸ್ಟ್ ವತಿಯಿಂದ ಶುಕ್ರವಾರ ವಿಧಾನಸೌಧದ ಆವರಣದಲ್ಲಿ ಆಯೋಜಿಸಲಾಗಿದ್ದ ಸಮೂಹ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ನೂರಾರು ಭಾಗವಹಿಸಿದ್ದರು.

ಡಿಜಿಟಲ್ ಕನ್ನಡ ಟೀಮ್:

ಎಪಿಎಂಸಿ ಅಧ್ಯಕ್ಷನ ಮೇಲೆ ದಾಳಿ

ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ಕಡಬಗೆರೆ ಅವರ ಮೇಲೆ ಶುಕ್ರವಾರ ಗುಂಡಿನ ದಾಳಿ ನಡೆದಿದೆ. ಯಲಹಂಕದ ಕೋಗಿಲು ಕ್ರಾಸ್ ಸಿಗ್ನಲ್ ಬಳಿ ಸರ್ಕಾರಿ ಕಾರಿನಲ್ಲಿದ್ದ ಶ್ರೀನಿವಾಸ್ ಅವರ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ದಾಳಿಯಲ್ಲಿ ಶ್ರೀನಿವಾಸ್ ಅವರು ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಇತ್ತ ಪೊಲೀಸರು ಸಹ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ದಾಸನಪುರ ಎಪಿಎಂಸಿ ಅಧ್ಯಕ್ಷರಾಗಿರುವ ಶ್ರೀನಿವಾಸ್ ಅವರನ್ನು ಡಾಬಾ ಸೀನ ಅಂತಲೂ ಕರೆಯಲಾಗುವುದು. ಈ ದಾಳಿಯಲ್ಲಿ ಇವರ ಮೇಲೆ ಆರು ಸುತ್ತು ಗುಂಡು ಹಾರಿಸಲಾಗಿದ್ದು, ಕಾರು ಚಾಲಕ ಸಹ ಗಾಯಗೊಂಡಿದ್ದಾನೆ. ಒಂದು ಕಾಲದಲ್ಲಿ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದ ಶ್ರೀನಿವಾಸ್ ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು. ಈಗ ಕಾಂಗ್ರೆಸ್ ಪಕ್ಷದಿಂದ ಎಪಿಎಂಸಿ ಅಧ್ಯಕ್ಷರಾಗಿದ್ದಾರೆ.

ಬೆಂಗಳೂರಿನಲ್ಲಿ ಆ್ಯಪಲ್ ಫೋನ್ ತಯಾರಿಕೆ

ಕರ್ನಾಟಕದಲ್ಲಿ ಪ್ರತಿಷ್ಠಿತ ಆ್ಯಪಲ್ ಫೋನ್ ಉತ್ಪಾದನಾ ಘಟಕ ನಿರ್ಮಾಣದ ಪ್ರಸ್ತಾಪವನ್ನು ಕರ್ನಾಟಕ ಸರ್ಕಾರ ಸ್ವಾಗತಿಸಿದೆ. ಇದರಿಂದ ಇನ್ನು ಮುಂದೆ ರಾಜ್ಯದಲ್ಲೇ ಆ್ಯಪಲ್ ಫೋನ್ ತಯಾರಾಗುವ ಸಾಧ್ಯತೆಗಳು ಹೆಚ್ಚಾಗಿವೆ. ‘ಆ್ಯಪಲ್ ಕಂಪನಿಯು ಬೆಂಗಳೂರಿನಲ್ಲಿ ಮೊಬೈಲ್ ತಯಾರಿಸಲು ಉತ್ಸುಕವಾಗಿದೆ’ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಹಾಗೂ ಆ್ಯಪಲ್ ಕಂಪನಿ ಇನ್ನಷ್ಟೇ ಒಪ್ಪಂದಕ್ಕೆ ಸಹಿ ಹಾಕಬೇಕಿದ್ದು, ಬೆಂಗಳೂರಿನ ಕೈಗಾರಿಕ ಪ್ರದೇಶವಾಗಿರುವ ಪೀಣ್ಯದಲ್ಲಿ ಈ ಘಟಕ ಸ್ಥಾಪನೆಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ಕೇವಲ ರಾಜ್ಯ ಸರ್ಕಾರ ಮಾತ್ರ ಹೇಳಿಕೆ ನೀಡಿದ್ದು, ಆ್ಯಪಲ್ ಕಂಪನಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ತನ್ನ ಘಟಕ ಸ್ಥಾಪಿಸಲು ಆ್ಯಪಲ್ ಉತ್ಸುಕವಾಗಿರುವುದಾಗಿ ಈ ಹಿಂದೆ ತಿಳಿಸಿತ್ತು. ಮುಂದಿನ ಕೆಲವು ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ.

ಮಾರ್ಚ್ 17ಕ್ಕೆ ರಾಜ್ಯ ಬಜೆಟ್

ಮುಖ್ಯಮಂತ್ರಿ ಸಿದ್ದರಾಮಯ್ಯ 2017-18ರ ಮುಂಗಡಪತ್ರವನ್ನು ಮಾರ್ಚ್ 17ರಂದು ಮಂಡಿಸಲು ತೀರ್ಮಾನಿಸಿದ್ದಾರೆ. 2018ರ ಮೇನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಜನಪರ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಈಗಾಗಲೇ ಅನ್ನಭಾಗ್ಯ ಯೋಜನೆಯಡಿ ಪ್ರತಿ ಯುನಿಟ್ ನೀಡುತ್ತಿರುವ ಆಹಾರ ಧಾನ್ಯಗಳ ಪ್ರಮಾಣ ಹೆಚ್ಚಳ ಮಾಡಿದ್ದು, ಮತ್ತಷ್ಟು ಜನಪ್ರಿಯ ಯೋಜನೆಗಳು ಈ ಬಾರಿಯ ಬಜೆಟ್ ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿಗಳು ಬಂದಿವೆ.

ವಿದ್ಯುತ್ ಕೊರತೆ ಇಲ್ಲ: ಡಿಕೆಶಿ

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ ಎಂದು ಹೇಳಿರುವ ಇಂಧನ ಸಚಿವ ಡಿ.ಕೆ ಶಿವಕುಮಾರ್, ಮುಂಬರುವ ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ಒದಗಿಸುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗ್ರಾಮೀಣ ವಿದ್ಯುತೀಕರಣದ ಇಲಾಖೆ ನಿಗಮದ ಅಧಿಕಾರಿಗಳು ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚಿನ ವಿದ್ಯುತ್ ಇದೆ. ಅದನ್ನು ಯಾರಿಗೆ ಹಂಚಬೇಕೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಬರುವುದಿಲ್ಲ. ಹೀಗಾಗಿ ರೈತರು, ಕೈಗಾರಿಕೆಗಳು ಹಾಗೂ ಇತರ ಗೃಹ ಬಳಕೆದಾರರಿಗೆ ಅವರ ಬೇಡಿಕೆಗೆ ಅನುಗುಣವಾಗಿ ನೀಡುತ್ತೇವೆ.’

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ

2016ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, 15 ಮಂದಿ ಪತ್ರಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಹೀಗಿದೆ…

ಹಿರಿಯ ಪತ್ರಕರ್ತರಾದ ಎಚ್.ಆರ್ ಶ್ರೀಶ (ಬೆಂಗಳೂರು), ಶಾಂತಲಾ ಧರ್ಮರಾಜ್ (ಸಂಯುಕ್ತ ಕರ್ನಾಟಕ, ಮೈಸೂರು), ಜೆ.ವೀರಣ್ಣ (ವಿಜಯವಾಣಿ, ಬಳ್ಳಾರಿ), ಹಿರಿಯ ಪತ್ರಕರ್ತ ಸಿದ್ದಕಿ ಆಲ್ದೂರು (ಚಿಕ್ಕಮಗಳೂರು), ರೊನಾಲ್ಡ್ ಫರ್ನಾಂಡಿಸ್ (ಡೆಕ್ಕನ್ ಹೆರಾಲ್ಡ್, ಮಂಗಳೂರು), ಚೀ.ನಿ.ಪುರುಷೋತ್ತಮ (ಉದಯವಾಣಿ, ತುಮಕೂರು), ಎ.ಸಿ.ಪ್ರಭಾಕರ (ಮೈಸೂರು ಮಿತ್ರ, ಚಾಮರಾಜನಗರ), ಉಜ್ಜನಿ ರುದ್ರಪ್ಪ (ಕನ್ನಡಪ್ರಭ, ಕೊಪ್ಪಳ), ಹೇಮಂತ್ ಕುಮಾರ್ (ಇಂಡಿಯನ್ ಎಕ್ಸ್ ಪ್ರೆಸ್, ಬೆಂಗಳೂರು), ರಾಮಸ್ವಾಮಿ (ಈಸಂಜೆ, ರಾಮನಗರ), ಶಂಕ್ರಪ್ಪ ಹುಸನಪ್ಪ ಚಲವಾಧಿ (ಹುಚ್ಚ ಪತ್ರಿಕೆ, ಬಾಗಲಕೋಟೆ), ನಾಗರಾಜ್ ಸುಣಗಾರ (ಉದಯ ಟಿವಿ, ಧಾರವಾಡ), ಅನಿಲ್ ಕುಮಾರ್ ಹೊಸಮನಿ (ಬಹುಜನ ನಾಯಕ, ವಿಜಯಪುರ), ಮಾಲತೇಶ ಅಂಗೂರ( ಕೌರವ ಪತ್ರಿಕೆ, ಹಾವೇರಿ) ಮತ್ತು ಕೆ. ಹೆಚ್. ಚಂದ್ರು (ಛಾಯಾಗ್ರಾಹಕರು, ಮೈಸೂರು).

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು…

  • 2ಜಿ ಹಗರಣದ ಪ್ರಕರಣದಲ್ಲಿ ಮಾರನ್ ಸಹೋದರರನ್ನು ಆರೋಪ ಮುಕ್ತರನ್ನಾಗಿ ಮಾಡಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡದಂತೆ ಇಡಿ ಸುಪ್ರೀಂಗೆ ಮನವಿ ಮಾಡಿದೆ.
  • ನೋಯ್ಡಾದ ಎಬ್ಲೇಜ್ ಇನ್ಫೋ ಸೊಲ್ಯೂಷನ್ ಲಿಮಿಟೆಡ್ ಸಂಸ್ಥೆ ಮೂಲಕ 7 ಲಕ್ಷ ಜನರಿಗೆ ₹ 3700 ಕೋಟಿ ವಂಚನೆ ಮಾಡಿದ್ದ ಜಾಲವನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆ ಹಚ್ಚಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಅನುಭವ್ ಮಿತ್ತಲ್, ಶ್ರೀಧರ್ ಪ್ರಸಾದ್ ಮತ್ತು ಮಹೇಶ್ ದಯಾಳ್ ಎಂದು ಗುರುತಿಸಲಾಗಿದೆ. ಇವರು ಟ್ರೇಡ್ ಡಾಟ್ ಬಿಜ್ ಎಂಬ ಪೋರ್ಟಲ್ ಆರಂಭಿಸಿ ಆ ಮೂಲಕ ಪ್ರತಿ ಕ್ಲಿಕ್ ಗೆ ₹ 5 ರುಪಾಯಿ ನೀಡುವುದಾಗಿ ಗ್ರಾಹಕರನ್ನು ಸೆಳೆಯುತ್ತಿದ್ದರು ಎಂದು ಹೇಳಲಾಗಿದೆ.

Leave a Reply