ಹಿಮಪಾತದ ನಡುವೆಯೂ ತಾಯಿಯ ಮೃತದೇಹವನ್ನು 30 ಕಿ.ಮಿ ಹೊತ್ತು ಸಾಗಿ ಅಂತ್ಯ ಸಂಸ್ಕಾರ ಮಾಡಿದ ಯೋಧನೊಬ್ಬನ ಕರುಣಾಜನಕ ಕಥೆ

ಡಿಜಿಟಲ್ ಕನ್ನಡ ಟೀಮ್:

ಯುದ್ಧ, ಉಗ್ರರ ದಾಳಿಯಂತಹ ಸಂದರ್ಭಗಳಲ್ಲಿ ಯೋಧರನ್ನು ಸ್ಮರಿಸುವ ನಾವು ಆ ನಂತರ ಅವರನ್ನು ಮರೆತು ಬಿಡುತ್ತೇವೆ. ದೇಶ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಅವರ ಜೀವನ ಹೇಗಿರುತ್ತದೆ, ಅವರು ಯಾವ ರೀತಿಯ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಾರೆ ಎಂಬುದರ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟೆಲಿಗ್ರಾಫಿನ ವರದಿಯೊಂದು, ಇತ್ತೀಚೆಗೆ ಯೋಧನೊಬ್ಬ ಮೃತ ತಾಯಿಯ ಅಂತ್ಯ ಸಂಸ್ಕಾರಕ್ಕೆ ಪಟ್ಟ ಪಾಡನ್ನು ನಮ್ಮ ಮನಮುಟ್ಟಿಸುತ್ತದೆ.

ಮೊಹಮದ್ ಅಬ್ಬಾಸ್ ಖಾನ್ ಎಂಬ ಭಾರತೀಯ ಯೋಧ, ತಾಯಿ ಸತ್ತ ನಂತರ ಆಕೆಯ ಅಂತ್ಯ ಸಂಸ್ಕಾರ ಮಾಡಿದ ಪರಿಯೇ ಒಂದು ಸಾಹಸದಂತಿದೆ. ಆತ ಎದುರಿಸಿದ ಸವಾಲು, ಅನುಭವಿಸಿದ ನೋವು ನಿಜಕ್ಕೂ ನಮ್ಮ ಎದೆಗಿಳಿಯಬೇಕಿದೆ. ಆತನ ಪಾಡು ಹೇಗಿತ್ತು ಎಂಬುದು ಇಲ್ಲಿದೆ ನೋಡಿ…

ಅಬ್ಬಾಸ್, ಪಂಜಾಬಿನ ಪಠಾಣ್ ಕೋಟ್ ನಲ್ಲಿ ಪೋಸ್ಟಿಂಗ್ ಪಡೆದಿದ್ದರು. ತಮ್ಮ ಹುಟ್ಟೂರಾದ ಕುಪ್ವಾರದ ದ್ರಂಗ್ಯಾರಿಯಲ್ಲಿ ತಾಯಿ ಹಿಮಪಾತದಿಂದ ಅಸ್ವಸ್ಥರಾಗಿದ್ದರು. ಈ ವೇಳೆ ತಾಯಿ ನೋಡಲು ಅಬ್ಬಾಸ್ ಆಗಮಿಸಿದ್ದರು. ಮೊನ್ನೆ, ಜನವರಿ 28 ರಂದು ಅಬ್ಬಾಸ್ ತಾಯಿ ಹೃದಯಾಘಾತದಿಂದ ಮೃತಪಟ್ಟರು.

ಅತಿಯಾಗಿ ಹಿಮ ಸುರಿದ ಪರಿಣಾಮ ರಸ್ತೆ ಸಂಪರ್ಕಗಳೆಲ್ಲವೂ ಸಂಪೂರ್ಣವಾಗಿ ಬಂದ್ ಆಗಿದ್ದವು. ಹೀಗಾಗಿ ಅಬ್ಬಾಸ್ ಗೆ ತಾಯಿಯ ಅಂತ್ಯ ಸಂಸ್ಕಾರ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿತು. ತಾಯಿಯ ಮೃತ ದೇಹವನ್ನು ಅಂತ್ಯಕ್ರಿಯೆಗಾಗಿ ಅಬ್ಬಾಸ್ ಕುಪ್ವಾರದ ದ್ರಂಗ್ಯಾರಿಯಿಂದ 52 ಕಿ.ಮೀ ದೂರದಲ್ಲಿರುವ ಚಿತ್ರಕೋಟೆಗೆ ಸಾಗಿಸಬೇಕಿತ್ತು. ರಸ್ತೆ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಸೌಲಭ್ಯ ಕಲ್ಪಿಸುವಂತೆ ಅಬ್ಬಾಸ್ ಹಿರಿಯ ಸೇನಾ ಅಧಿಕಾರಿಗಳು ಹಾಗೂ ಅಲ್ಲಿನ ಸರ್ಕಾರಿ ಅಧಿಕಾರಿಗಳನ್ನು ಕೋರಿದರು. ಆದರೆ ಅವರಿಂದ ಭರವಸೆ ಸಿಕ್ಕಿತೇ ವಿನಃ ಯಾವುದೇ ಹೆಲಿಕಾಪ್ಟರ್ ಇವರ ನೆರವಿಗೆ ಬರಲಿಲ್ಲ. ಹೀಗೆ ಸುದೀರ್ಘ ನಾಲ್ಕು ದಿನಗಳಾದರೂ ಯಾವುದೇ ನೆರವು ಸಿಗದ ಹಿನ್ನೆಲೆಯಲ್ಲಿ ಅಬ್ಬಾಸ್ ಸಂಬಂಧಿಕರ ಜತೆ ಸೇರಿ ಹಿಮರಾಶಿಗಳ ನಡುವೆಯೇ ತಾಯಿಯ ದೇಹವನ್ನು ಹೊತ್ತು ಸಾಗುವಂತಾಯಿತು.

ಆಗ ದ್ರಂಗ್ಯಾರಿಯಲ್ಲಿರುವ ಸೇನಾ ನೆಲೆಯಲ್ಲಿನ ಸೈನಿಕರು ಅಬ್ಬಾಸ್ ನೆರವಿಗೆ ಧಾವಿಸಿ, ಅಲ್ಲಿದ್ದ ಕೆಲವು ಕಾರ್ಮಿಕರನ್ನು ಇವರ ಸಹಾಯಕ್ಕೆ ನಿಯೋಜಿಸಿದರು. ಸಂಬಂಧಿಕರು ಹಾಗೂ ಕಾರ್ಮಿಕರ ಜತೆಗೆ ಅಬ್ಬಾಸ್ ತಮ್ಮ ಮನೆಯಿಂದ ಸುಮಾರು 30 ಕಿ.ಮೀ ದೂರ ಹಿಮದ ರಾಶಿಯ ನಡುವೆ ಕಾಲ್ನಡಿಗೆಯಲ್ಲೇ ಸಾಗಿದರು. ಸಂಬಂಧಿಕರು ಹಾಗೂ ಕಾರ್ಮಿಕರು ಸೇರಿದಂತೆ ಒಟ್ಟು 50 ಮಂದಿ ಅಬ್ಬಾಸ್ ತಾಯಿಯ ದೇಹವನ್ನು ಸಾಗಿಸುವ ಕಾರ್ಯಕ್ಕೆ ಮುಂದಾದರು. 50 ಜನರ ಪೈಕಿ 40 ಮಂದಿ ಹಿಮದ ರಾಶಿಗಳನ್ನು ಪಕ್ಕಕ್ಕೆ ತಳ್ಳುತ್ತಾ ಮುಂದಕ್ಕೆ ಸಾಗಲು ಹಾದಿ ಮಾಡುವುದರಲ್ಲಿ ತೊಡಗಿಕೊಂಡರೆ, ಉಳಿದ ಹತ್ತು ಮಂದಿ ಒಬ್ಬರಾದ ಮೇಲೆ ಒಬ್ಬರಂತೆ ಅಬ್ಬಾಸ್ ತಾಯಿಯ ಮೃತ ದೇಹವನ್ನು ಹೆಗಲ ಮೇಲೆ ಹೊತ್ತು ಸಾಗಿದರು.

ಈ ಕಾರ್ಯದ ವೇಳೆ ಅನೇಕರು ಹಿಮದ ರಾಶಿಯೊಳಗೆ ಬಿದ್ದು ಸಿಲುಕಿದರು, ಆಗ ಉಳಿದವರೆಲ್ಲ ಸೇರಿ ಹಿಮದಲ್ಲಿ ಸಿಲುಕಿದವರನ್ನು ಮೇಲೆತ್ತಿ, ಸುರಕ್ಷಿತ ಹಾದಿ ಮಾಡಿಕೊಂಡು ಮುಂದೆ ಸಾಗಿದರು. ಹೀಗೆ ಸುದೀರ್ಘ 10 ತಾಸುಗಳಲ್ಲಿ 30 ಕಿ.ಮೀ ದೂರ ಕ್ರಮಿಸಿದರು. ನಂತರ ವಾಹನ ಸೌಲಭ್ಯ ದೊರೆಯಿತು. ಅಲ್ಲಿಂದ ಉಳಿದ 22 ಕಿ.ಮೀ ದೂರವನ್ನು ವಾಹನದ ಮೂಲಕ ಕ್ರಮಿಸಿ ಅಬ್ಬಾಸ್ ತಾಯಿಯ ಅಂತ್ಯಕ್ರಿಯೆ ಮಾಡಿದರು.

Leave a Reply