ಈಗ ಸಾಗರದ ನೀರು ಕುಡಿಯಬಹುದು– ತಂತ್ರಜ್ಞಾನದಲ್ಲಿ ಮತ್ತೊಂದು ಮಹತ್ತರ ದಾಪುಗಾಲು

ಇಸ್ರೆಲಿನ ಸೊರೆಕ್ ನಿರ್ಲವಣೀಕರಣ ಘಟಕ…

author-ananthramuಸುತ್ತ ಬರಿಯ ನೀರೇ ಎಲ್ಲ…

ಕುಡಿಯಲೊಂದು ಹನಿಯೂ ಇಲ್ಲ…

ಸಮುದ್ರದ ನೀರಿನ ರುಚಿ ಕುರಿತು ಇಂಗ್ಲಿಷ್ ಕವಿ ಸ್ಯಾಮ್ಯುಯಲ್ ಕಾಲರಿಡ್ಜ್ 1797 ರಲ್ಲಿ ಬರೆದ `ದಿ ರೈಮ್ ಆಫ್ ದಿ ಏನ್ಷೆಂಟ್ ಮೇರಿನರ್’ ಎಂಬ ದೀರ್ಘ ಪದ್ಯದ ಒಂದು ಚರಣ ಇದು.  ಅದರಲ್ಲಿ ನಾವಿಕನೊಬ್ಬ ದೀರ್ಘಕಾಲ ಸಮುದ್ರಯಾನ ಮಾಡಿ ಹಿಂತಿರುಗಿ ಬರುವಾಗ ಮದುವೆ ದಿಬ್ಬಣದಲ್ಲಿದ್ದ ಒಬ್ಬನನ್ನು `ನನ್ನ ಕಥೆ ಕೇಳು’ ಎಂದು ಪೀಡಿಸುತ್ತಾನೆ. ಮೊದಮೊದಲು ಆ ವ್ಯಕ್ತಿ ಈ ಕಥೆಯನ್ನು ಕೇಳಿ ಕೋಪಗೊಳ್ಳುತ್ತಾನೆ. ಅವನೋ ತರಾತುರಿಯಲ್ಲಿದ್ದಾನೆ. ಕಥೆ ಬೆಳೆದ ಹಾಗೆ ನಾವಿಕನ ಅನುಭವಕ್ಕೆ ಕಿವಿತೆತ್ತು ವಿಸ್ಮಯಗೊಂಡು ಭಿನ್ನಲೋಕಕ್ಕೆ ಹೋಗಿಬಿಡುತ್ತಾನೆ.

ಸಾಮಾನ್ಯವಾಗಿ ಸಾಗರದ ನೀರು ಉಪ್ಪು ಎಂದು ಹೇಳಲು ಮೇಲಿನ ಎರಡು ಸಾಲನ್ನು ಜಗತ್ತು ನೆನಪಿಗೆ ತಂದುಕೊಳ್ಳುವುದು ರೂಢಿ. ಅರಿಸ್ಟಾಟಲನ ಕಾಲಕ್ಕೆ ಸಮುದ್ರದಲ್ಲಿ ದೀರ್ಘಯಾನಕ್ಕೆ ಹೋಗುವ ಗ್ರೀಕ್ ನಾವಿಕರು ತಮ್ಮ ನಿತ್ಯ ಬಳಕೆಗೆ ಬೇಕಾಗಿದ್ದ ಕುಡಿಯುವ ನೀರಿಗಾಗಿ ಸಾಗರದ ನೀರನ್ನು ಬಾಷ್ಪೀಕರಣಮಾಡಿ ಆ ಬಾಷ್ಪವನ್ನೇ ಹಿಡಿದಿಟ್ಟು ಬಳಸುತ್ತಿದ್ದುದು ರೂಢಿಯಲಿತ್ತು, ಎರಡನೇ ಮಹಾಯುದ್ಧ ಸಮಯದಲ್ಲಿ ಈ ತಂತ್ರಜ್ಞಾನ ದೊಡ್ಡ ರೂಪ ಪಡೆಯಿತು. ಅಷ್ಟೇ ಅಲ್ಲ, ಅದು ಅನಿವಾರ್ಯವಾಯಿತು. ಈ ತಂತ್ರಜ್ಞಾನ ಸ್ಪಷ್ಟ ರೂಪು ಪಡೆದದ್ದು 1950ರ ದಶಕದಲ್ಲಿ.

ಇಸ್ರೇಲಿನ ವಿಜ್ಞಾನಿಗಳು ತಂತ್ರಜ್ಞಾನದಲ್ಲಿ ಉಳಿದ ದೇಶಗಳಿಗಿಂತ ಭಾರಿ ಮುಂದು. ಈಗ ಇಸ್ರೇಲಿನಲ್ಲಿ ಟೆಲ್ ಅವಿವ್‍ನಿಂದ 15 ಕಿಲೋಮೀಟರ್ ದಕ್ಷಿಣಕ್ಕಿರುವ `ಸೊರೆಕ್’ ಎಂಬ ಸ್ಥಾವರದಿಂದ ಕೇವಲ 55 ಸೆಂಟ್‍ಗೆ ಸಾಗರ ನೀರನ್ನು ನಿರ್ಲವಣೀಕರಣಗೊಳಿಸಿ ಒಂದು ಸಾವಿರ ಲೀಟರ್ ಕುಡಿಯುವ ನೀರನ್ನು ಒದಗಿಸುತ್ತಿದೆ. ದಿನಕ್ಕೆ 624,000 ಘನ ಮೀಟರು ಸಾಗರ ನೀರು ಇಲ್ಲಿ ನಿರ್ಲವಣೀಕರಣವಾಗುತ್ತದೆ. ನಿಧಾನವಾಗಿ ಉಳಿದೆಲ್ಲ ರಾಷ್ಟ್ರಗಳೂ ಅತ್ತ ಮುಖ ಮಾಡುವಂತೆ ಮಾಡಿದೆ. ಭಾರತದಲ್ಲಿ ಸಮುದ್ರದ ನೀರನ್ನು ನಿರ್ಲವಣೀಕರಣ ಮಾಡಲೆಂದೇ ಚೆನ್ನೈನಲ್ಲಿ ಒಂದು ಸಂಘವಿದೆ. ಚೆನ್ನೈನಲ್ಲೋ ಅಂತರ್ಜಲ ಅತಿ ಹೆಚ್ಚು ಲವಣದಿಂದ ಕೂಡಿದ್ದು, ಕುಡಿಯಲು ಅನರ್ಹವಾಗಿದೆ. ಎಲ್ಲಿ ನೆಲ ಬಗೆದರೂ ಆ ನಗರದಲ್ಲಿ ನೀರು ಉಕ್ಕುತ್ತದೆ, ಆದರೆ ಉಪ್ಪುಮಯ. ಇದಕ್ಕೆ ಪರಿಹಾರವೆಂಬಂತೆ ಈ ಸಂಘ ಸಾಗರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ದೊಡ್ಡ ಹೆಜ್ಜೆ ಇಟ್ಟಿದೆ.

ಇಸ್ರೇಲ್, ಸಾಗರದ ನೀರನ್ನು ಉಪ್ಪಿನಿಂದ ಮುಕ್ತಮಾಡಿ ಕುಡಿಯಲು, ಕೃಷಿಗೆ ಮತ್ತು ಮನೆಬಳಕೆಗೂ ಬೇಕಾದ ಪ್ರಮಾಣದ ನೀರನ್ನು ಬಹು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆ. ಇದರ ಹಿಂದೆಯೇ ಕೆರೆಬಿಯೆನ್ ದ್ವೀಪಗಳು, ಮಧ್ಯ ಪ್ರಾಚ್ಯ, ದಕ್ಷಿಣ ಆಫ್ರಿಕ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ಈ ಕಾರ್ಯತಂತ್ರವನ್ನು ಈಗಾಗಲೇ ಅಳವಡಿಸಿಕೊಂಡುಬಿಟ್ಟಿವೆ. ವಿಶ್ವಸಂಸ್ಥೆಯ ಇತ್ತೀಚಿನ ವರದಿಯಂತೆ 150 ದೇಶಗಳಲ್ಲಿ ಸದ್ಯ 17,000 ನಿರ್ಲವಣೀಕರಣ ಸ್ಥಾವರಗಳು ಕೆಲಸಮಾಡುತ್ತಿವೆ. ಅಷ್ಟೇ ಅಲ್ಲ, ಪ್ರತಿದಿನ ಈ ಸ್ಥಾವರಗಳಿಂದ ಬರುವ ನಿರ್ಲವಣೀಕೃತ ನೀರು 21 ಬಿಲಿಯನ್ ಗ್ಯಾಲನ್ ಎಂದು ಅಂದಾಜು. ಹೌದು, ನೀರಿನ ಅಭಾವ ದಿನೇ ದಿನೇ ಉಲ್ಬಣಿಸುತ್ತಿದೆ. ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಮತ್ತೆ ಮತ್ತೆ ಬರದ ಬಿಗಿಮುಷ್ಟಿಗೆ ಸಿಲುಕುತ್ತಿವೆ. ಇಂಥ ಸನ್ನಿವೇಶದಲ್ಲಿ ಸಮುದ್ರ ಪಕ್ಕದಲ್ಲಿರುವ ನಗರ, ಪಟ್ಟಣಗಳಲ್ಲಿ ಎಲ್ಲಿ ಅತಿಯಾದ ಅಂತರ್ಜಲ ಬಳಕೆ ಹಾಗೆಯೇ ಅತಿ ಉಪ್ಪಿನ ಸಾಂದ್ರತೆ ಇದೆಯೋ, ಅಂಥ ಪ್ರದೇಶಗಳಲ್ಲಿ ನಿರ್ಲವಣೀಕರಣ ದೊಡ್ಡ ಮಾಯಾದಂಡವನ್ನೇ ಬೀಸಿದೆ. ಸಮುದ್ರದ ನೀರು ಅಭಯಕೊಟ್ಟಿದೆ. ಅದೇನೂ ಬತ್ತಿಹೋಗುವ ಮೂಲವಲ್ಲ.

sea-water

`ಡೌನ್ ಟು ಅರ್ಥ್’ ಎಂಬ ಪಾಕ್ಷಿಕ ಪರಿಸರ ಪತ್ರಿಕೆ ಇತ್ತೀಚಿನ ಸಂಚಿಕೆಯಲ್ಲಿ ನಿರ್ಲವಣೀಕರಣ ಕುರಿತು ಆಗುವ ಲಾಭವನ್ನೂ, ಅದರ ತುರ್ತನ್ನೂ ಬಿಂಬಿಸುವ ಅಗ್ರಲೇಖನ ಪ್ರಕಟಿಸಿದೆ. ನಮ್ಮಲ್ಲಿ ತಮಿಳುನಾಡು, ಪಾಂಡಿಚೆರಿ, ಆಂಧ್ರಪ್ರದೇಶ ಈಗಾಗಲೇ ನಿರ್ಲವಣೀಕರಣ ಸ್ಥಾವರಗಳನ್ನು ಸ್ಥಾಪಿಸಿ ತಮಗೆ ಅವಶ್ಯಕತೆ ಇರುವ ನೀರನ್ನು ಉತ್ಪಾದಿಸುತ್ತಿವೆ. ಈ ಪತ್ರಿಕೆಯ ಸಮೀಕ್ಷೆಯಂತೆ ಇಡೀ ದೇಶದಲ್ಲಿ ಈಗ 20 ಘನ ಮೀಟರ್ ನೀರಿನಿಂದ ಹಿಡಿದು 10,000 ಘನ ಮೀಟರುವರೆಗಿನ ಸಿಹಿನೀರನ್ನು ಉತ್ಪಾದಿಸುವ ಕನಿಷ್ಠ 1000 ಸ್ಥಾವರಗಳು ಈಗ ಕೆಲಸಮಾಡುತ್ತಿವೆ. 30 ವರ್ಷಗಳ ಹಿಂದೆ ಇದಕ್ಕೆ ಎಷ್ಟು ಖರ್ಚು ಬರುತ್ತಿತ್ತೋ ಅದರ ಮೂರನೇ ಒಂದು ಭಾಗದಲ್ಲಿ ಈಗ ನಿರ್ವಹಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ.

ಸಾಗರದ ನೀರಿನಲ್ಲಿ ಸಾಮಾನ್ಯವಾಗಿ ನಾವು ಭಾವಿಸುವ ಸೋಡಿಯಂ ಕ್ಲೋರೈಡ್-ಮನೆಯಲ್ಲಿ ಬಳಸುವ ಉಪ್ಪು-ದೊಡ್ಡ ಪ್ರಮಾಣದಲ್ಲಿರುತ್ತದೆ. ಆದರೆ ಉಪ್ಪೆಂದರೆ ಇದೊಂದೇ ಅಲ್ಲ, ಮೆಗ್ನೀಸಿಯಂ, ಕ್ಯಾಲ್ಸಿಯಂ, ಬ್ರೋಮಿಯಂ, ಸ್ಟ್ರಾನ್‍ಷಿಯಂ ಇನ್ನೂ ಅನೇಕ ಬಗೆಯ ಉಪ್ಪುಗಳು ಸಮುದ್ರದ ನೀರಿನಲ್ಲಿ ವಿಲೀನವಾಗಿರುತ್ತವೆ. ಒಂದು ಕಿಲೋಗ್ರಾಂ ಸಾಗರದ ನೀರಿನಲ್ಲಿ 35 ಗ್ರಾಂ ವಿಲೀನವಾದ ಲವಣವಿರುತ್ತದೆ. ಒಂದು ಘನ ಕಿಲೋ ಮೀಟರ್ ಸಾಗರ ನೀರನ್ನು ನೀವು ಸಂಗ್ರಹಿಸಿಟ್ಟಿರುತ್ತೀರಿ ಎನ್ನೋಣ. ಇದರಲ್ಲಿ ಸೋಡಿಯಂ ಕ್ಲೋರೈಡ್ ಪ್ರಮಾಣವೇ 120 ಮಿಲಿಯನ್ ಟನ್ ಆಗುತ್ತದೆ ಎಂದರೆ ಸಾಗರದ ನೀರಿನ ರಾಸಾಯನಿಕ ಸ್ಥಿತಿ ಏನೆಂದು ನೀವು ಊಹಿಸಬಹುದು.

ತಾಂತ್ರಿಕವಾಗಿ ಈ ಲವಣಭರಿತ ಸಮುದ್ರ ನೀರನ್ನು, ಉಪ್ಪಿನ ಅಂಶವನ್ನು ನಿವಾರಿಸಿ ಕುಡಿಯುವ ನೀರಾಗಿ ಪರಿವರ್ತಿಸುವುದು ಹೇಗೆ? ಇದು ತಂತ್ರಜ್ಞಾನಕ್ಕೆ ಸಾಗರ ಒಡ್ಡಿದ ಶತಮಾನಗಳ ಸವಾಲು. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ನೀವು ಒಂದು ಪುಟ್ಟ ಉದಾಹರಣೆಯನ್ನು ಗಮನಿಸಬಹುದು. ನೀರನ್ನು ಒಳಗೆ ಹೋಗಲು ಬಿಡುವ ಒಂದು ಅರೆವ್ಯಾಪಿ ಪೊರೆ (ಸೆಮಿ ಪರ್ಮಿಯೆಬಲ್ ಮೆಂಬ್ರೇನ್) ಇಟ್ಟಿದ್ದೀರಿ ಎನ್ನೋಣ. ಅದರ ಇನ್ನೊಂದು ಬದಿಯಲ್ಲಿ ಸಕ್ಕರೆ ಪಾನಕ ಇದೆ ಎನ್ನೋಣ. ನೀರಿನ ಸ್ವಭಾವವೆಂದರೆ ಅದು ಮೆಲ್ಲನೆ ಪಾನಕದತ್ತ ಹರಿಯುವುದು. ಅಂದರೆ ಹೆಚ್ಚು ಸಾರತೆ (ಕಾನ್‍ಸಂಟ್ರೇಷನ್) ಇರುವತ್ತ. ಈ ಪ್ರಕ್ರಿಯೆ ಮುಂದುವರಿದು ಎರಡೂ ಬದಿಯಲ್ಲಿ ಸಾರತೆ ಸಮವಾಗಿಬಿಡುತ್ತದೆ. ಇದಕ್ಕೆ ಸರಿಯಾದ ಪ್ರಮಾಣದ ಒತ್ತಡ ಹೇರಬೇಕಾಗುತ್ತದೆ. ಇದನ್ನು ವಿಜ್ಞಾನದ ಪರಿಭಾಷೆಯಲ್ಲಿ `ಆಸ್ಮಾಸಿಸ್’ ಎನ್ನುವುದುಂಟು. ನಮ್ಮ ಶರೀರದಲ್ಲಿರುವ ಕೋಶಗಳಲ್ಲೂ ಈ ಪ್ರಕ್ರಿಯೆ ಸದಾ ನಡೆಯುತ್ತಿರುತ್ತದೆ. ಒಂದೆರಡು ಪದಗಳನ್ನು ನೀವು ಗ್ರಹಿಸಬೇಕು. ರಸಾಯನ ವಿಜ್ಞಾನ ಉಪ್ಪನ್ನು ದ್ರಾವ್ಯ ಎನ್ನುತ್ತದೆ. ಅದು ನೀರಿನಲ್ಲಿ ವಿಲೀನವಾಗುವುದರಿಂದ; ಹಾಗೆಯೇ ನೀರನ್ನು ದ್ರಾವಕ ಎನ್ನುತ್ತದೆ. ವಿಲೀನಗೊಳಿಸುವ ಗುಣ ಇರುವುದರಿಂದ–ಇದರ ಮೊತ್ತ ದ್ರಾವಣ-ಆಸ್ಮಾಸಿಸ್ ಪ್ರಕ್ರಿಯೆಯನ್ನು ಉಲ್ಟಾ ಮಾಡಬಹುದು. ಅಂದರೆ ಸಾಗರದ ಉಪ್ಪು ನೀರನ್ನು ಅರೆ ವ್ಯಾಪ್ಯ ಪೊರೆಯ ಮೂಲಕ ಹಾಯಿಸಿದರೆ ಅದು ದ್ರವ್ಯವನ್ನು ಒಂದೆಡೆ ಉಳಿಸಿಕೊಳ್ಳುತ್ತದೆ. ಶುದ್ಧ ದ್ರಾವಕವನ್ನು ಅಂದರೆ ನೀರನ್ನು ಇನ್ನೊಂದು ಬದಿಗೆ ಹರಿಯಗೊಡುತ್ತದೆ. ಇಲ್ಲಿ ಆಸ್ಮಾಸಿಸ್‍ಗೆ ಬೇಕಾಗುವ ಒತ್ತಡಕ್ಕಿಂತ ಇನ್ನೂ ಅಧಿಕ ಒತ್ತಡಬೇಕು. ಇದನ್ನೇ `ರಿವರ್ಸ್ ಆಸ್ಮಾಸಿಸ್’ ಎಂದು ಕರೆಯುವುದುಂಟು-ಇದಕ್ಕೆ ವಿದ್ಯುಚ್ಛಕ್ತಿ ಬೇಕು-ಸದ್ಯದಲ್ಲಿ ಸೌರಶಕ್ತಿಯ ಆಯ್ಕೆ ಈ ಬಾಬತ್ತಿನ ಖರ್ಚನ್ನು ಮಿತಗೊಳಿಸುತ್ತದೆ.

sea-3

ಸಾಗರದ ನೀರನ್ನು ನಿರ್ಲವಣೀಕರಣ ಮಾಡಲು ಇನ್ನೂ ಹಲವು ವಿಧಾನಗಳಿವೆ. ಅವೂ ಕೂಡ ಬದಲಾಗುತ್ತಿವೆ. ಸದ್ಯಕ್ಕಂತೂ `ರಿವರ್ಸ್ ಆಸ್ಮಾಸಿಸ್’ ಜಗತ್ತಿನಾದ್ಯಂತ ಬಳಕೆಯಲ್ಲಿದೆ. ಭವಿಷ್ಯದಲ್ಲಿ ಯುದ್ಧವಾದರೆ ಅದು ದೇಶ ದೇಶಗಳ ನಡುವೆ ನೀರಿಗಾಗಿ ನಡೆಯುವ ಯುದ್ಧ ಎಂಬ ಭಯವೂ ಕಾಡುತ್ತಿರುವ ಈ ಸಮಯದಲ್ಲಿ ಈ ತಂತ್ರಜ್ಞಾನ ಅಂಥ ಸನ್ನಿವೇಶವನ್ನೂ ಭಯವನ್ನೂ ದೂರಮಾಡಲು ಈಗಾಗಲೇ ಹೆಜ್ಜೆಇಟ್ಟಿದೆ. ಬಾಯಾರಿದ ಬಾಯಿಗಳಿಗೆ ಸಮುದ್ರವೇ ಸಾಂತ್ವನ ಹೇಳುವುದಾದರೆ ತಂತ್ರಜ್ಞಾನದ ಸಾರ್ಥಕತೆಗೆ ಇದಕ್ಕಿಂತ ಉದಾಹರಣೆ ಬೇಕೆ?

Leave a Reply