SCAM ಅಂದ್ರೆ ಏನ್ಗೊತ್ತಾ? ಸಮಾಜವಾದಿ. ಕಾಂಗ್ರೆಸ್. ಅಖಿಲೇಶ್. ಮಾಯಾವತಿ; ಉ.ಪ್ರ ಎದುರಾಳಿಗಳನ್ನು ಹಗರಣಕ್ಕೆ ಸಮೀಕರಿಸಿದ ಮೋದಿ ಪಂಚಿಂಗ್ ಡೈಲಾಗ್

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಬಿರುಸೇರಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಮೀರಟ್ ನಲ್ಲಿ ಬಿಜೆಪಿ ಪರ ಬೃಹತ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದರು. ನಾಳೆ ಮೊದಲ ಹಂತದ ಮತದಾನ ಶುರುವಾಗಲಿರುವ ರಾಜ್ಯದಲ್ಲಿ ಮೀರಟ್ ಸಮೀಪದ ಕ್ಷೇತ್ರಗಳ 18 ಅಭ್ಯರ್ಥಿಗಳ ಪರ ಪ್ರಚಾರವದು.

ಉತ್ತರ ಪ್ರದೇಶವು ವಿಸ್ತಾರ ಮತ್ತು ಜನಸಂಖ್ಯೆಗಳಲ್ಲಿ ದೊಡ್ಡ ರಾಜ್ಯವಾಗಿರುವುದರಿಂದ, ಭಾರತದ ಅಭಿವೃದ್ಧಿ ಸಾಧ್ಯವಾಗುವುದು ಉತ್ತರ ಪ್ರದೇಶದ ಅಭಿವೃದ್ಧಿಯಾದಾಗ ಮಾತ್ರ ಎನ್ನುವುದು ನರೇಂದ್ರ ಮೋದಿ ಪ್ರಾರಂಭದಿಂದಲೇ ತಮ್ಮ ಭಾಷಣಗಳಲ್ಲಿ ಹೇಳುತ್ತ ಬಂದಿರುವ ವ್ಯಾಖ್ಯಾನ. ಹೀಗೆ ಉತ್ತರ ಪ್ರದೇಶ ಅಭಿವೃದ್ಧಿಯಾಗಬೇಕು ಎನ್ನುವುದಾದರೆ ಅಲ್ಲಿ ಎಸ್ಪಿ-ಬಿಎಸ್ಪಿಗಳ ಅಧಿಕಾರ ಚಕ್ರವನ್ನು ಮುರಿದು ಬಿಜೆಪಿಗೆ ಅನುಕೂಲ ಮಾಡಿಕೊಡಬೇಕು ಎಂಬ ವಿನಂತಿಯ ಮೇಲೆಯೇ ಮೋದಿ ಈ ಎರಡು ತಿಂಗಳಿನಿಂದ ತಮ್ಮ ಪ್ರಚಾರವನ್ನು ಕಟ್ಟಿಕೊಂಡು ಬಂದಿದ್ದಾರೆ.

ಶನಿವಾರದ ಭಾಷಣ ಆರಂಭವಾಗಿದ್ದೂ ಇದೇ ಅಂಶದ ಪ್ರಸ್ತಾಪದೊಂದಿಗೆ. ತಾವು ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಉತ್ತರ ಪ್ರದೇಶದಲ್ಲಿರುವ ಸರ್ಕಾರಗಳೇ ಅಡ್ಡಿಯಾಗಿವೆ ಎಂಬುದನ್ನು ಪುನರುಚ್ಛರಿಸಿದರು. ಎಸ್ಪಿ-ಬಿಎಸ್ಪಿ ಮರು ಅವಕಾಶಗಳ ಕತೆ ಮುರಿಯಬೇಕೆಂಬ ಪ್ರಧಾನಿ ಮಾತಿಗೆ ಈ ಬಾರಿ ಹೊಸ ಅಂಶ ಸೇರಿಕೊಳ್ಳಲೇಬೇಕಾಗಿತ್ತು. ಏಕೆಂದರೆ ಇತ್ತೀಚೆಗೆ ಸಮಾಜವಾದಿ ಹಾಗೂ ಕಾಂಗ್ರೆಸ್ ಪಕ್ಷಗಳು ಅಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆಯಲ್ಲ?

ಹಾಗೆಂದೇ ಈ ಎಲ್ಲ ಶಕ್ತಿಗಳನ್ನೂ ಬಿಜೆಪಿಯ ಎದುರಾಳಿ ಸ್ಥಾನದಲ್ಲಿರಿಸಿ ಪ್ರಧಾನಿ ಮೋದಿ ಹೊಸೆದ ಸೂತ್ರ- ಸ್ಕ್ಯಾಮ್ (SCAM). ಎಲ್ಲರಿಗೂ ತಿಳಿದಿರುವಂತೆ ಈ ಪದದ ಅರ್ಥ ಹಗರಣ ಎಂದು. ಹಗರಣಗಳನ್ನು ಬಿಡಬೇಕಾಗಿದೆ ಎಂಬುದು ಮೋದಿ ರವಾನಿಸಿದ ಸಂದೇಶ. ಹಾಗೆಂದೇ ಹಗರಣಕ್ಕೆ ಸಮಾಜವಾದಿ, ಕಾಂಗ್ರೆಸ್, ಅಖಿಲೇಶ್, ಮಾಯಾವತಿ ಎಂಬ ಸ್ಕ್ಯಾಮ್ ವ್ಯಾಖ್ಯಾನ ಮಾಡಿ ಈ ಪದವನ್ನು ಆಕರ್ಷಣೆಯನ್ನಾಗಿಸಿ ಮತದಾರರ ತಲೆಗಿಳಿಸುವ ಪ್ರಯತ್ನ ಮಾಡಿದರು ಮೋದಿ.

ನಿಮಗೆ ಸ್ಕ್ಯಾಮ್ ಬೇಕೋ, ಕಮಲ ಬೇಕೋ ಎಂಬುದನ್ನು ನಿರ್ಧರಿಸಿ. ನಿಮಗೆ ಸ್ಕ್ಯಾಮ್ ಬೇಕೋ ವಿಕಾಸ ಬೇಕೋ ಎಂಬುದನ್ನು ನಿರ್ಧರಿಸಿ ಎನ್ನುವ ಮೂಲಕ ಜನರನ್ನು ಪ್ರಚೋದಿಸಿದರು.

ಭ್ರಷ್ಟಾಚಾರ ವಿರೋಧ ಹಾಗೂ ಸರ್ಜಿಕಲ್ ಸ್ಟ್ರೈಕ್ ಇವೆರಡರ ಶ್ರೇಯಸ್ಸಿನ ಜಾಗದಲ್ಲೂ ತಮ್ಮನ್ನು ನಿಲ್ಲಿಸಿಕೊಂಡು ಮಾತು ಹೊಸೆದರು ಮೋದಿ. ‘ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಪ್ರದರ್ಶಿಸಿದರೆ ನಮ್ಮ ಸೇನೆಯನ್ನು ತಡೆಯುವವರಿಲ್ಲ’ ಎಂದರಲ್ಲದೇ, ಗುರಿ ನಿರ್ದಿಷ್ಟ ದಾಳಿಯ ಮೇಲೆ ಸಂಶಯ ವ್ಯಕ್ತಪಡಿಸಿದವರೇ ಅದನ್ನು ರಾಜಕೀಯಗೊಳಿಸಿದ್ದು ಅಂತಲೂ ದೂರಿದರು. ನಲ್ವತ್ತು ವರ್ಷಗಳಿಂದ ಅನುಷ್ಠಾನವಾಗದೇ ಉಳಿದಿದ್ದ ಯೋಧರ ಒಂದು ಹುದ್ದೆ-ಒಂದು ಪಿಂಚಣಿ ನೀತಿ ತಮ್ಮಿಂದಲೇ ಜಾರಿಗೆ ಬಂದಿದ್ದು ಎಂಬುದನ್ನೂ ನೆನಪಿಸಿದರು.

ಭಾಷಣದ ಒಟ್ಟಾರೆ ಸಂದೇಶವಿದ್ದದ್ದು ಬಿಜೆಪಿಯು ‘ಸ್ಕ್ಯಾಮ್’ ವಿರುದ್ಧ ಎಂಬುದೇ ಆಗಿತ್ತು. ನೋಟು ಅಮಾನ್ಯ ಪ್ರಸ್ತಾಪಿಸುತ್ತ, ‘ಎಲ್ಲ ಭ್ರಷ್ಟರು ಹಾಗೂ ಕಾಳಧನಿಕರು ನನ್ನ ವಿರುದ್ಧ ಒಂದಾಗಿದ್ದಾರೆ’ ಎಂದರು.

‘ಉತ್ತರ ಪ್ರದೇಶಕ್ಕೆ ಕೇಂದ್ರ ಬಿಡುಗಡೆಗೊಳಿಸಿದ 7200 ಕೋಟಿ ರುಪಾಯಿಗಳ ಪೈಕಿ ಕೇವಲ 400 ಕೋಟಿ ರುಪಾಯಿಗಳನ್ನು ಮಾತ್ರವೇ ರಾಜ್ಯ ಸರ್ಕಾರ ಉಪಯೋಗಿಸಿಕೊಂಡಿದೆ. ಉಳಿದ ಹಣವನ್ನೆಲ್ಲ ಬೇರೆಡೆ ತಿರುಗಿಸಲು ಪ್ರಯತ್ನಿಸಿದ್ದರು. ಆದರೆ ನಾನು ಎಲ್ಲ ಹಣಕ್ಕೂ ಲೆಕ್ಕ ಕೇಳುವವನು’ ಎಂದು ಹಗರಣದ ಕಥಾನಕವನ್ನು ಗಟ್ಟಿಗೊಳಿಸಿದರು ಮೋದಿ. ರಾಜ್ಯದಲ್ಲಿ ತಮ್ಮ ಸರ್ಕಾರ ಬರದ ಹೊರತೂ ದೆಹಲಿಯಿಂದ ಏನೇ ಕೊಡುಗೆ ನೀಡಿದರೂ ಅದು ಉತ್ತರ ಪ್ರದೇಶವನ್ನು ತಲುಪುವುದಿಲ್ಲ ಎಂಬುದು ಮತದಾರರಿಗೆ ಮೋದಿ ಹೇಳುತ್ತಿರುವ ಮಾತು.

1857ರಲ್ಲಿ ಬ್ರಿಟಿಷರ ವಿರುದ್ಧ ಮೊದಲಿಗನಾಗಿ ಹೋರಾಡಿದ್ದು ಉತ್ತರ ಪ್ರದೇಶ. ಈಗ ಬಡತನದ ವಿರುದ್ಧವೂ ಅಂಥ ಹೋರಾಟ ಮಾಡಬೇಕಿದೆ ಎಂಬ ರಮ್ಯ ಕಥಾನಕದ ಮೂಲಕ ಅಭಿಮಾನ ಉತ್ತೇಜಿಸಿದ ಮೋದಿ, ಉತ್ತರ ಪ್ರದೇಶಕ್ಕೆ ದೇಶದ ನಂಬರ್ 1 ರಾಜ್ಯವಾಗುವ ಸಾಮರ್ಥ್ಯವಿದೆ ಅಂತಲೂ ಹೇಳಿದರು.

Leave a Reply