ನಾಗಾಲ್ಯಾಂಡ್ ಹೊತ್ತಿ ಉರಿಯುತ್ತಿದೆ… ಅದಕ್ಕೆ ಕಾರಣ ಇಲ್ಲಿದೆ…

ಡಿಜಿಟಲ್ ಕನ್ನಡ ಟೀಮ್:

ಕಳೆದ ಎರಡು ಮೂರು ದಿನಗಳಿಂದ ದೇಶದ ಈಶಾನ್ಯ ಭಾಗದಲ್ಲಿರುವ ನಾಗಾಲ್ಯಾಂಡ್ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಿರುವ ನಿರ್ಧಾರವನ್ನು ಪ್ರಶ್ನಿಸಿ ಆರಂಭವಾದ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆದುಕೊಂಡಿದೆ.

ನಾಗಾಲ್ಯಾಂಡ್ ಪ್ರದೇಶಕ್ಕೆ ಸಂವಿಧಾನದ 371 (ಎ) ವಿಧಿ ಪ್ರಕಾರ ಕೆಲವು ವಿಶೇಷ ಅಧಿಕಾರಗಳನ್ನು ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳಾ ಮೀಸಲಾತಿಯನ್ನು ತಂದಿರುವುದು ಸ್ಥಳೀಯ ಹಕ್ಕುಗಳನ್ನು ಹಾಗೂ ಸಂಪ್ರದಾಯವನ್ನು ಪ್ರಶ್ನೆ ಮಾಡಿದಂತಾಗಿದ್ದು, ಆಮೂಲಕ ಸಂವಿಧಾನದಲ್ಲಿ ನೀಡಲಾಗಿರುವ ವಿಶೇಷ ಅಧಿಕಾರಕ್ಕೆ ಧಕ್ಕೆಯಾಗಿದೆ ಎಂಬ ಕಾರಣ ಕೊಟ್ಟು ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬುದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಕಾರಣ.

ಆದರೆ, ಕೆಲವರ ವಿಶ್ಲೇಷಣೆ ಗಮನಿಸಿದರೆ ನಾಗಾಲ್ಯಾಂಡ್ ನಲ್ಲಿನ ಈ ಹಿಂಸಾಚಾರ ಪ್ರತಿಭಟನೆಗೆ ಬೇರೆಯದೇ ಕಾರಣ ಇದೆ.

ಮಹಿಳಾ ಮೀಸಲಾತಿಯಿಂದಾಗಿ ಈ ಪ್ರತಿಭಟನೆ ನಡೆಯುತ್ತಿದೆ ಎಂಬುದು ಕೇವಲ ನೆಪ ಮಾತ್ರ. ಇಲ್ಲಿನ ಜನರಿಗೆ ಸ್ಥಳೀಯ ಚುನಾವಣೆ ನಡೆಯುತ್ತಿರುವುದಕ್ಕೇ ವಿರೋಧವಿದೆ. ತಮ್ಮನ್ನು ಸಂಪರ್ಕಿಸದೇ ಅಭಿಪ್ರಾಯ ಪರಿಗಣಿಸದೇ ಚುನಾವಣೆ ಘೋಷಣೆ ಮಾಡುತ್ತಿರುವುದಕ್ಕೆ ಇಲ್ಲಿನ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಆಡಳಿತದಲ್ಲಿರುವ ಎನ್ಸಿಎನ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ, ಸದ್ಯಕ್ಕೆ ಚುನಾವಣೆಗಳು ನಡೆದುಬಿಡಲಿ, ನಂತರ ಜನರ ಅಭಿಪ್ರಾಯ ಕೇಳುತ್ತೇವೆ ಎಂಬ ವಾದಕ್ಕೆ ಅಂಟಿಕೊಂಡಿವೆ. ಈ ಎಲ್ಲ ಕಾರಣಗಳಿಂದ ನಾಗಾಲ್ಯಾಂಡ್ ನಲ್ಲಿನ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

Leave a Reply