ಎಸ್.ಎಂ ಕೃಷ್ಣ ಬಿಜೆಪಿ ಸೇರ್ತಾರೆ ಅಂದ್ರು ಯಡಿಯೂರಪ್ಪ- ಜಗದೀಶ್ ಶೆಟ್ಟರ್, ಕೊನೆಗೂ ಸಿಕ್ಕ ಎಟಿಎಂ ಹಲ್ಲೆಕೋರ?, ಅಕ್ರಮ ವಿದೇಶಿ ಪ್ರಜೆಗಳ ಗಡಿಪಾರಿಗೆ ಸೂಚನೆ, ಈಶ್ವರಪ್ಪ ಇಟ್ಟ ಹೊಸ ಬೇಡಿಕೆ ಏನು?

ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ನೆರಳುಪರದೆ ಮನೆಗಳನ್ನು ನಿರ್ಮಿಸಿದ ಫಲಾನುಭವಿಗಳಿಗೆ ಸಹಾಯಧನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಶನಿವಾರ ಬೆಂಗಳೂರಿನ ಆನಂದರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಡಿಜಿಟಲ್ ಕನ್ನಡ ಟೀಮ್:

ಎಸ್.ಎಂ ಕೃಷ್ಣ ಬಿಜೆಪಿಗೆ

ಕಾಂಗ್ರೆಸ್ ತೊರೆದಿರುವ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ.

ಎಸ್.ಎಂ ಕೃಷ್ಣ ಅವರು ಬಿಜೆಪಿ ಸೇರ್ಪಡೆಯಾಗುತ್ತಿರುವ ಬಗ್ಗೆ ಪತ್ರಕರ್ತರ ಜತೆ ಮಾತನಾಡಿದ ಯಡಿಯೂರಪ್ಪನವರು, ಕೃಷ್ಣ ಅವರ ನಿರ್ಧಾರವನ್ನು ಸ್ವಾಗತಿಸಿದ್ದು, ನಾಳೆ ಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.

‘ಕೃಷ್ಣ ಅವರು ಬಿಜೆಪಿಗೆ ಬರುವುದು ನೂರಕ್ಕೆ ನೂರಾ ಒಂದು ಪರ್ಸೆಂಟ್ ನಿಶ್ಚಿತ. ಇದರಲ್ಲಿ ಯಾವ ಅನುಮಾನವೂ ಬೇಡ. ಶ್ರೀನಿವಾಸ್ ಪ್ರಸಾದ್ ಅವರಂತೆ ಕೃಷ್ಣ ಅವರೂ ಬಿಜೆಪಿಗೆ ಬರುವುದರಿಂದ ರಾಜ್ಯದಲ್ಲಿ ನಿಸ್ಸಂಶಯವಾಗಿ ಬಿಜೆಪಿಯ ಶಕ್ತಿ ಹೆಚ್ಚಲಿದೆ. ಈ ಹಿಂದೆಯೇ ತಾವು ಕೃಷ್ಣ ಅವರನ್ನು ಭೇಟಿ ಮಾಡಬೇಕಿತ್ತು. ಆದರೆ ಅವರು ವಿದೇಶ ಪ್ರವಾಸಕ್ಕೆ ಹೋಗುತ್ತಾರೆ ಎಂಬ ಮಾಹಿತಿ ಇದ್ದ ಕಾರಣದಿಂದ ಭೇಟಿ ಮಾಡಲು ಹೋಗಲಿಲ್ಲ. ಆದರೆ ಇದೀಗ ಅವರ ವಿದೇಶ ಪ್ರವಾಸ ರದ್ದಾಗಿರುವ ಕುರಿತು ಮಾಹಿತಿ ಸಿಕ್ಕಿದೆ. ಹೀಗಾಗಿ ಭಾನುವಾರ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನಿಸುತ್ತೇನೆ’ ಎಂದು ಯಡಿಯೂರಪ್ಪ ತಿಳಿಸಿದರು.

ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ‘ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ಎಸ್.ಎಂ.ಕೃಷ್ಣ ಅವರು ಬಿಜೆಪಿಗೆ ಬರುತ್ತಿದ್ದಾರೆ. ನರೇಂದ್ರ ಮೋದಿ ಅವರ ಹಲವು ನಿರ್ಧಾರಗಳನ್ನು ಹೊಗಳಿದವರು ಕೃಷ್ಣ. ಅವರನ್ನು ನಾನು ಮುಕ್ತ ಮನಸ್ಸಿನಿಂದ ಪಕ್ಷಕ್ಕೆ ಸ್ವಾಗತಿಸುತ್ತೇನೆ’ ಎಂದರು.

ಯಡಿಯೂರಪ್ಪ ಅವರ ಈ ಹೇಳಿಕೆ ಬೆನ್ನಲ್ಲೇ ಕೃಷ್ಣ ಅವರ ಕಚೇರಿಯಿಂದ ಪತ್ರಿಕಾ ಹೇಳಿಕೆ ಹೊರ ಬಂದಿದ್ದು, ‘ಮೂರು ದಿನಗಳ ಕಾಲ ಯಾರನ್ನೂ ಭೇಟಿ ಮಾಡುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಿಗೂ ಸಮಯವಕಾಶ ನೀಡಿಲ್ಲ’ ಎಂದು ಸ್ಪಷ್ಟಪಡಿಸಲಾಗಿದೆ.

ಎಟಿಎಂ ಹಲ್ಲೆಕೋರ ಪತ್ತೆ?

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ 2013 ರ ನ.19 ರಂದು ಎಟಿಎಂನಲ್ಲಿ ಮಹಿಳೆ ಮೇಲಿನ ಹಲ್ಲೆ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ ಎಂಬ ವರದಿಗಳು ಬಂದಿವೆ.

ಎಟಿಎಂ ನಲ್ಲಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಶಂಕಿತ ಓರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈತನೇ ಆರೋಪಿ ಎಂಬ ದಟ್ಟ ಶಂಕೆ ವ್ಯಕ್ತವಾಗಿದೆ. ಈತನನ್ನು ಮಧುಕರ ರೆಡ್ಡಿ ಎಂದು ಗುರುತಿಸಲಾಗಿದ್ದು, ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈತನೇ ಎಟಿಎಂನಲ್ಲಿ ನಡೆದ ಹಲ್ಲೆ ಪ್ರಕರಣದ ಆರೋಪಿ ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜ್ಯೋತಿ ಉದಯ್ ಎಂಬ ಬ್ಯಾಂಕ್ ಮಹಿಳಾ ಉದ್ಯೋಗಿ ಮೇಲೆ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ 2103ರ ನವೆಂಬರ್ 19ರಂದು ಬೆಳ್ಳಂಬೆಳಗ್ಗೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಪ್ರಕರಣ ನಡೆದು ಮೂರೂ ವರ್ಷವಾದರೂ ಆರೋಪಿ ಸಿಕ್ಕಿರಲಿಲ್ಲ.

ಮದನಪಲ್ಲಿಯ ಟ್ರಾಫಿಕ್ ಪೊಲೀಸರು ಕಳೆದ ತಿಂಗಳು 31 ರಂದು ಮಧುಕರ ರೆಡ್ಡಿಯ ಅನುಮಾನಾಸ್ಪದ ವರ್ತನೆ ನೋಡಿ ಆತನನ್ನು ವಶಕ್ಕೆ ಪಡೆದುಕೊಂಡರು. ನಂತರ ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡಿದ್ದನ್ನು ಗಮನಿಸಿ ಸತತ ಮೂರು ದಿನಗಳ ಕಾಲ ತನಿಖೆ ನಡೆಸಿದ್ದಾರೆ. ಈ ಹಂತದಲ್ಲಿ ಆತ ಎಟಿಎಂ ಮೇಲಿನ ದಾಳಿಯ ಬಗ್ಗೆ ಬಾಯಿ ಬಿಟ್ಟಿರುವುದಾಗಿ ಮಾಹಿತಿಗಳು ಬಂದಿವೆ.

ಅಕ್ರಮ ವಿದೇಶಿ ಪ್ರಜೆಗಳನ್ನು ಒಂದು ತಿಂಗಳಲ್ಲಿ ಗಡಿಪಾರು

ವೀಸಾ ಅವಧಿ ಮುಗಿದರೂ ರಾಜ್ಯದ ವಿವಿಧೆಡೆ ಕಾನೂನು ಬಾಹಿರವಾಗಿ ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳನ್ನು ಒಂದು ತಿಂಗಳೊಳಗೆ ಗಡಿಪಾರು ಮಾಡುವಂತೆ ರಾಜ್ಯ ಸರ್ಕಾರ ಗೃಹ ಇಲಾಖೆಗೆ ಆದೇಶಿಸಿದೆ.

ದಕ್ಷಿಣ ಆಫ್ರಿಕಾ ಮತ್ತು ಅದರ ಸುತ್ತಮುತ್ತಲ ರಾಷ್ಟ್ರದ ವಿದ್ಯಾರ್ಥಿಗಳು ವ್ಯಾಸಂಗಕ್ಕೆಂದು ರಾಜ್ಯದಲ್ಲಿ ನೆಲಸಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದಾರೆ. ಇದರಲ್ಲಿ ವೀಸಾ ಅವಧಿ ಪೂರ್ಣಗೊಂಡಿದ್ದರೂ, ಅನಧಿಕೃತವಾಗಿ ನೆಲಸಿದ್ದಾರೆ. ಕಳೆದ ವಾರ ಹತ್ಯೆಯಾದ ಉಗಾಂಡ ವಿದ್ಯಾರ್ಥಿನಿಯ ವೀಸಾ ಅವಧಿ ಪೂರ್ಣಗೊಂಡಿತ್ತು.

ವಿದ್ಯಾಭ್ಯಾಸಕ್ಕೆಂದು ಬಂದ ಬಹುತೇಕ ವಿದ್ಯಾರ್ಥಿನಿಯರು ವೇಶ್ಯವಾಟಿಕೆ ಹಾಗೂ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಭಾರೀ ಧಕ್ಕೆ ತಂದಿದೆ. ಈ ವಿದ್ಯಾರ್ಥಿಗಳೇ ಗಲಾಟೆ, ಗಲಭೆ ಎಬ್ಬಿಸಿ, ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ವಿಶ್ವಕ್ಕೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ 14 ಸಾವಿರಕ್ಕೂ ಹೆಚ್ಚು ಮಂದಿ ವೀಸಾ ನವೀಕರಿಸಿಕೊಳ್ಳದೇ, ಹಾಗೆಯೇ ಮುಂದುವರೆದಿದ್ದಾರೆ. ಇದರಲ್ಲಿ ಆರು ಸಾವಿರಕ್ಕೂ ಹೆಚ್ಚು ಆಫ್ರಿಕದ ಪ್ರಜೆಗಳಿದ್ದಾರೆ. ಇಂತಹವರನ್ನು ಗುರುತಿಸಿ, ಗಡಿಪಾರು ಮಾಡುವಂತೆ ಮತ್ತು ಆ ರಾಷ್ಟ್ರಗಳ ಕಮೀಷನರ್ ಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಅಲ್ಲದೆ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಪತ್ರ ಬರೆದಿರುವ ಗೃಹ ಕಾರ್ಯದರ್ಶಿಗಳು ಗಡಿಪಾರಿಗೆ ಮನವಿ ಮಾಡಲಾಗಿದೆ. ಕೇಂದ್ರದಿಂದ ಅನುಮತಿ  ಬರುತ್ತಿದ್ದಂತೆ ಇವರನ್ನು ದೇಶದಿಂದ ಹೊರ ಹಾಕುವ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಆರು ಜಿಲ್ಲಾಧ್ಯಕ್ಷರ ಬದಲಾವಣೆಗೆ ಈಶ್ವರಪ್ಪ ಆಗ್ರಹ

ಮೈಸೂರು, ಚಾಮರಾಜನಗರ, ಹಾಸನ, ಸೇರಿದಂತೆ ಬಿಜೆಪಿಯ ಆರು ಜಿಲ್ಲಾಧ್ಯಕ್ಷರ ಬದಲಾವಣೆಯಾಗಬೇಕು ಹಾಗೂ ಒಂದಕ್ಕಿಂತ ಹೆಚ್ಚು ಅಧಿಕಾರ ಅನುಭವಿಸುತ್ತಿರುವವರನ್ನು ಬದಲಾವಣೆ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಅವರ ನಡುವಿನ ಭಿನ್ನಾಬಿಪ್ರಾಯ ಬಗೆಹರಿಸಲು ನೇಮಕಗೊಂಡಿರುವ ಮುರುಳೀಧರ್ ರಾವ್ ನೇತೃತ್ವದ ಸಮಿತಿ ನಾಳೆ ಸಭೆ ಸೇರಲಿದ್ದು, ಈ ಸಭೆಗೂ ಮುನ್ನ ಈಶ್ವರಪ್ಪನವರು ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಸಮಿತಿಗೆ ಸುದೀರ್ಘ ಪತ್ರ ಬರೆದಿರುವ ಈಶ್ವರಪ್ಪ, ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ಪದಾಧಿಕಾರಿಗಳ ನೇಮಕಾತಿಯಲ್ಲಿ ಉಂಟಾಗಿರುವ ಗೊಂದಲ, ತಾರತಮ್ಯದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಎಂದು ಮಾಹಿತಿ ಬಂದಿವೆ.

ಫೆ.6ರಿಂದ ವಿಧಾನಮಂಡಲ ಅಧಿವೇಶನ

ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಫೆಬ್ರವರಿ 6ರ ಸೋಮವಾರದಿಂದ ಆರಂಭವಾಗಲಿದೆ. ಈ ಬಾರಿಯ ವಿಧಾನಮಂಡಲ ಅಧಿವೇಶನವನ್ನು 15 ದಿನಗಳ ಬದಲಾಗಿ ಕೇವಲ 4 ದಿನಗಳಿಗೆ ಮಾತ್ರ ಸೀಮಿತಗೊಳಿಸಿರುವುದಕ್ಕೆ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2015ರಲ್ಲಿ ರೂಪಿಸಲಾದ ಕಾನೂನಿನಂತೆ ಆರಂಭಿಕ ಅಧಿವೇಶನವನ್ನು 15 ದಿನಕ್ಕೆ, ಬಜೆಟ್ ಅಧಿವೇಶನವನ್ನು 20 ದಿನ, ಮಳೆಗಾಲದ ಅಧಿವೇಶನ 15, ಚಳಿಗಾಲ ಅಧಿವೇಶನದ 10ದಿನಕ್ಕೆ  ನಡೆಯಬೇಕು. ಆದರೆ, ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗುವ ಆರಂಭಿಕ ಅಧಿವೇಶನವನ್ನು ಕೇವಲ 4 ದಿನ ಮಾತ್ರ ನಡೆಸಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪ್ರಜಾಪ್ರಭುತ್ವದ ಉದ್ದೇಶ ಈಡೇರುವುದಿಲ್ಲ’ ಎಂದರು.

Leave a Reply