ತಮಿಳುನಾಡು ನೂತನ ಮುಖ್ಯಮಂತ್ರಿ ಆಗಿ ಶಶಿಕಲಾ ನಟರಾಜನ್? ಜಯಾ ಆಪ್ತರಿಗೆ ಗೇಟ್ ಪಾಸ್ ಕೊಟ್ಟು ಹೊಸ ಬಳಗ ಕಟ್ಟಲು ಸಿದ್ಧತೆ

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನಲ್ಲಿ ಸಾಕಷ್ಟು ರಾಜಕೀಯ ವಿದ್ಯಮಾನಗಳು ಕುತೂಹಲ ಕೆರಳಿಸಿವೆ. ಮುಂದಿನ ಎರಡು ಮೂರು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಓ.ಪನ್ನೀರ ಸೆಲ್ವಂ ರಾಜಿನಾಮೆ ನೀಡಲಿದ್ದು, ಆ ಸ್ಥಾನವನ್ನು ಶಶಿಕಲಾ ನಟರಾಜನ್ ಅವರು ಅಲಂಕರಿಸುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾನುವಾರ ಎಐಡಿಎಂಕೆ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಈ ಕುರಿತ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಹೀಗಾಗಿ ನಾಳಿನ ಸಭೆ ಸಾಕಷ್ಟು ಗಮನ ಸೆಳೆದಿದೆ. ಜಯಲಲಿತಾ ಅವರ ನಿಧನದ ನಂತರ ನಿರೀಕ್ಷೆಯಂತೆ ಅವರ ಆಪ್ತೆಯಾಗಿದ್ದ ಶಶಿಕಲಾ, ಎಐಡಿಎಂಕೆ ಪಕ್ಷದ ಮುಖ್ಯಸ್ಥೆಯಾಗಿ ಆಯ್ಕೆಯಾದರು. ಈಗ ಮುಖ್ಯಮಂತ್ರಿಯಾಗಿಯೂ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಎಐಡಿಎಂಕೆ ಪಕ್ಷದ ಸಂಪೂರ್ಣ ಹಿಡಿತವನ್ನು ತನ್ನ ಮುಷ್ಟಿಗೆ ತೆಗೆದುಕೊಳ್ಳಲಿರುವುದು ಸ್ಪಷ್ಟವಾಗಿದೆ. ಮೂಲಗಳ ಪ್ರಕಾರ ಫೆ.8 ಅಥವಾ 9ರಂದು ಶಶಿಕಲಾ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಅಧಿಕಾರಕ್ಕೆ ಏರುವ ಮುನ್ನ ಶಶಿಕಲಾ ತಮ್ಮದೇ ಆದ ಹೊಸ ಬಳಗವನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಅದರ ಪರಿಣಾಮವಾಗಿ ಜಯಲಲಿತಾ ಅವರ ಆಪ್ತರಾಗಿದ್ದ ಶೀಲಾ ಬಾಲಕೃಷ್ಣನ್ ಹಾಗೂ ಮುಖ್ಯಮಂತ್ರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೆಂಕಟರಮಣನ್, ರಾಮಕೃಷ್ಣನ್ ಅವರಿಗೆ ರಾಜಿನಾಮೆ ನೀಡುವಂತೆ ಸೂಚನೆ ನೀಡಲಾಗಿತ್ತು. ಹೀಗಾಗಿ ಇಂದು ಶಿಲಾ ಬಾಲಕೃಷ್ಣನ್ ರಾಜ್ಯ ಸರ್ಕಾರದ ಸಲಹೆಗಾರ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ನಿನ್ನೆಯಷ್ಟೇ ನಡೆದ ಎಐಡಿಎಎಂಕೆ ಪದಾಧಿಕಾರಿಗಳ ಸಭೆಯಲ್ಲಿ ಜಯಲಲಿತಾ ಆಪ್ತ ವಲಯದಲ್ಲಿದ್ದ ನಾಯಕರನ್ನು ದೂರವಿಟ್ಟಿರುವ ಶಶಿಕಲಾ, ಜಯಲಲಿತಾ ಅವರು ಕಡೆಗಣಿಸಿದ್ದ ನಾಯಕರಿಗೆ ಉನ್ನತ ಸ್ಥಾನಮಾನ ನೀಡಿ ಹೊಸ ತಂಡ ರಚಿಸಿಕೊಂಡಿದ್ದಾರೆ.

ಈ ಹಿಂದೆ ಎಂಜಿಆರ್ ನಿಧನವಾದ ನಂತರ ಜಯಲಲಿತಾ ಅವರು ಯಾವ ರೀತಿ ಎಂಜಿಆರ್ ಆಪ್ತರನ್ನು ದೂರವಿಟ್ಟು ತಮ್ಮ ಹೊಸ ಬಳಗವನ್ನು ಕಟ್ಟಿಕೊಂಡು ಆಡಳಿತ ನಡೆಸಿದರೋ ಅದೇ ರೀತಿ ಶಶಿಕಲಾ ಈಗ ಜಯಲಲಿತಾ ಅವರ ಆಪ್ತರನ್ನು ದೂರವಿಟ್ಟು ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದ್ದಾರೆ. ತಮಿಳುನಾಡಿನಲ್ಲಿ ಮುಂದಿನ ನಾಲ್ಕೂವರೆ ವರ್ಷಗಳ ಅಧಿಕಾರದ ಅವಧಿಯಲ್ಲಿ ಶಶಿಕಲಾ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಬಹುತೇಕ ಖಚಿತವಾಗಿದೆ.

ಆದರೆ, ಶಶಿಕಲಾ ಅವರ ಈ ಹಾದಿಗೆ ಒಂದು ಕಾನೂನು ತೊಡಕಿದೆ. ಜಯಲಲಿತಾ ಅವರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಕರ್ನಾಟಕದ ಮೇಲ್ವನವಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆದಿದ್ದು, ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ. ಈ ಪ್ರಕರಣದಲ್ಲಿ ಶಶಿಕಲಾ ಅವರು ಆರೋಪಿಗಳಲ್ಲಿ ಒಬ್ಬರಾಗಿದ್ದು, ಈ ತೀರ್ಪಿನ ಮೇಲೆ ಅವರ ಅಧಿಕಾರದ ಭವಿಷ್ಯ ನಿರ್ಧಾರವಾಗಲಿದೆ. ಈ ಪ್ರಕರಣದಲ್ಲಿ ಶಶಿಕಲಾ ಪರವಾಗಿ ತೀರ್ಪು ಪ್ರಕಟವಾದರೆ ಅವರ ಸಿಎಂ ಗಾದಿಗೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ವೇಳೆ ಪ್ರತಿಕೂಲವಾಗಿ ತೀರ್ಪು ಪ್ರಕಟವಾದರೆ, ತಮಿಳುನಾಡಿನ ರಾಜಕೀಯದಲ್ಲಿ ಮತ್ತೆ ಬದಲಾವಣೆಯಾಗಲಿದೆ. ಹೀಗಾಗಿ ತೀರ್ಪು ಪ್ರಕಟಕ್ಕೂ ಮೊದಲೇ ಮುಖ್ಯಮಂತ್ರಿಯಾಗಿ ಒಮ್ಮೆ ಅಧಿಕಾರಕ್ಕೆ ವಹಿಸಿಕೊಂಡರೆ, ಆನಂತರ ತೀರ್ಪು ವ್ಯತಿರಿಕ್ತವಾಗಿ ಬಂದರೂ ತಮ್ಮ ಆಪ್ತ ಬಳಗದವರನ್ನೇ ಸಿಎಂ ಕುರ್ಚಿ ಮೇಲೆ ಕೂರಿಸಿ ಪರೋಕ್ಷವಾಗಿ ಪಕ್ಷ ಹಾಗೂ ಸರ್ಕಾರದ ಅಧಿಕಾರವನ್ನು ತನ್ನ ನಿಯಂತ್ರಣದಲ್ಲೇ ಇಟ್ಟುಕೊಳ್ಳಬಹುದು ಎಂಬ ಲೆಕ್ಕಾಚಾರ ಶಶಿಕಲಾ ಅವರದ್ದಾಗಿದೆ.

Leave a Reply