ಜಿಯೋಗೆ ಸ್ಪರ್ಧೆ ನೀಡಲು ಸಿದ್ಧವಾದ ಬಿಎಸ್ಎನ್ಎಲ್, ₹ 36 ಕ್ಕೆ ಒಂದು ಜಿಬಿ ಇಂಟರ್ ನೆಟ್ ನೀಡಲು ನಿರ್ಧಾರ

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಸೃಷ್ಟಿಸಿರುವ ಬೆಲೆ ಯುದ್ಧ (ಪ್ರೈಸ್ ವಾರ್)ದ ಪರಿಣಾಮವಾಗಿ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಈಗ ತನ್ನ ಅಂತರ್ಜಾಲ ಸೇವೆಯ ಬೆಲೆಯನ್ನು ಕಡಿಮೆ ಮಾಡಿದೆ. ಇನ್ನು ಮುಂದೆ ಬಿಎಸ್ಎನ್ಎಲ್ ₹ 36 ಕ್ಕೆ ಒಂದು ಜಿಬಿಯಂತೆ ಇಂಟರ್ ನೆಟ್ ಸೇವೆ ನೀಡಲಿದೆ.

ಸ್ಪೆಷಲ್ ಟಾರಿಫ್ ಯೋಜನೆ (ಎಸ್ಟಿವಿ) ಮೂಲಕ ಎರಡು ಪ್ಲಾನ್ ಬಿಡುಗಡೆ ಮಾಡಿರುವ ಬಿಎಸ್ಎನ್ಎಲ್ ₹ 291 ರ ಪ್ಯಾಕೇಜ್ ನಲ್ಲಿ 28 ದಿನಗಳಿಗೆ 8 ಜಿಬಿಯಷ್ಟು ಅಂತರ್ಜಾಲ ಸೇವೆ ನೀಡಲಿದೆ. ಇನ್ನು ₹ 78 ಕ್ಕೆ 2 ಜಿಬಿ ನೀಡಲಿದೆ. ‘ಈ ಹೊಸ ಎಸ್ಟಿವಿ ಮೂಲಕ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಪ್ರತಿ ಜಿಬಿಗೆ ₹36 ಬೆಲೆ ನಿಗದಿಪಡಿಸಿದೆ. ಬಿಎಸ್ಎನ್ಎಲ್ ಈಗ ನಾಲ್ಕು ಪಟ್ಟು ಬೆಲೆ ಕಡಿಮೆ ಮಾಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿದೆ ಇಂಟರ್ ನೆಟ್ ನೀಡುತ್ತಿದೆ’ ಎಂದಿದೆ ಬಿಎಸ್ಎನ್ಎಲ್.

ಸದ್ಯ ರಿಲಯನ್ಸ್ ಜಿಯೋ ಮಾರ್ಚ್ 31ರ ವರೆಗೂ ಉಚಿತ ಇಂಟರ್ ನೆಟ್ ನೀಡುತ್ತಿದ್ದು, ಪ್ರತಿ ದಿನಕ್ಕೆ 1 ಜಿಬಿಯಷ್ಟು 4ಜಿ ವೇಗದಲ್ಲಿ ಸೇವೆ ನೀಡುತ್ತಿದೆ. ಪ್ರತಿ ದಿನದ ಇಂಟರ್ ನೆಟ್ ಮಿತಿ ಮುಕ್ತಾಯವಾದರೆ ನಂತರ ಅದರ ವೇಗ 4ಜಿ ಗಿಂತ ಕಡಿಮೆಯಾಗಲಿದೆ. ಜಿಯೋ ಉಚಿತ ಇಂಟರ್ ನೆಟ್ ನೀಡಿದ ಪರಿಣಾಮವಾಗಿ ಮೂರು ತಿಂಗಳಲ್ಲೇ 52.23 ಮಿಲಿಯನ್ ಗ್ರಾಹಕರನ್ನು ಸಂಪಾದಿಸಿದೆ. ಜಿಯೋನ ಈ ಪರಿಣಾಮದಿಂದಾಗಿ ಟೆಲಿಕಾಂ ಕ್ಷೇತ್ರದಲ್ಲಿ ಇತರೆ ಕಂಪನಿಗಳು ತಮ್ಮ ಬೆಲೆ ಕಡಿಮೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಸಿಲುಕಿವೆ.

ಹೀಗಾಗಿ 9.95 ಮಿಲಿಯನ್ ಗ್ರಾಹಕರಿಗೆ ಬ್ರಾಡ್ ಬ್ಯಾಂಡ್ ಸೇವೆ ನೀಡುತ್ತಿರುವ ಹಾಗೂ 20.39 ಮಿಲಿಯನ್ ಮೊಬೈಲ್ ಬ್ರಾಡ್ ಬ್ಯಾಂಡ್ ಸೇವೆ ನೀಡುತ್ತಿರುವ ಬಿಎಸ್ಎನ್ಎಲ್ ಈಗ ಇದೇ ಹಾದಿ ಹಿಡಿದಿದೆ. ಈ ಹೊಸ ಯೋಜನೆ ಕುರಿತು ಬಿಎಸ್ಎನ್ಎಲ್ ಹೇಳಿರೋದು ಇಷ್ಟು…

‘ನಮ್ಮ ಗ್ರಾಹಕರಿಗೆ ನಾವು ಆದಷ್ಟು ಕಡಿಮೆ ದರದಲ್ಲಿ ಇಂಟರ್ ನೆಟ್ ಸೇವೆ ಕಲ್ಪಿಸಲು ಬದ್ಧರಾಗಿದ್ದೇವೆ. ಈ ಹೊಸ ಯೋಜನೆ ಫೆಬ್ರವರಿ 6ರಿಂದ ಜಾರಿಗೆ ಬರಲಿದೆ.’

Leave a Reply