ಪದ್ಮಶ್ರೀ ಹೆಮ್ಮೆ- 6: ಮಾನವ ಕಳ್ಳಸಾಗಾಣಿಕೆ- ವೇಶ್ಯಾವಾಟಿಕೆ ವಿರುದ್ಧ ಹೋರಾಡಿದ ಗಟ್ಟಿಗಿತ್ತಿ, 12 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳ ಪಾಲಿಗೆ ತಾಯಿಯಾದ ಅನುರಾಧ ಕೊಯಿರಾಲ

ಡಿಜಿಟಲ್ ಕನ್ನಡ ಟೀಮ್:

ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳು ನಮ್ಮ ಸಮಾಜದಲ್ಲಿ ಪದೇ ಪದೇ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿ ನಿಲ್ಲುವವರು ಅನುರಾಧ ಕೊಯಿರಾಲ. ಕಾರಣ, ಒಂದಲ್ಲ ಎರಡಲ್ಲ… ಸಾವಿರಾರು ಹೆಣ್ಣು ಮಕ್ಕಳ ಕತ್ತಲೆ ಬದುಕಿಗೆ ಬೆಳಕು ತಂದ ಆಶಾ ಕಿರಣ ಈ ಸಾಧಕಿ ಇವರು. ಇತ್ತೀಚೆಗೆ ಭಾರತದ ಪ್ರತಿಷ್ಠಿತ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅನುರಾಧ ಅವರ ಸಾಧನೆ ನಿಜಕ್ಕೂ ನಮ್ಮೆಲ್ಲರಿಗೂ ಸ್ಫೂರ್ತಿಯ ಜತೆಗೆ ಜವಾಬ್ದಾರಿಯನ್ನು ತುಂಬುತ್ತದೆ.

ಅಂದು ಮದರ್ ಥೆರೆಸಾ ಬಡವರ, ಅನಾಥರಿಗೆ ಬಾಳು ಕೊಟ್ಟು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದರು. ಅಂತಹ ಮಹಾನ್ ಚೇತನಗಳ ಸಾಲಿನಲ್ಲಿ ನಿಲ್ಲುವಂತಹ ಸಾಧನೆ ಅನುರಾಧಾ ಕೊಯಿರಾಲ ಅವರದು. ಈ ವಾರಾಂತ್ಯದಲ್ಲಿ ಅವರ ಮುಗಿಲೆತ್ತರದ ಸಾಧನೆ ಏನು? ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಮಾರಾಟ ಹಾಗೂ ವೇಶ್ಯಾವಾಟಿಕೆಯ ಕೂಪಕ್ಕೆ ಅವರನ್ನು ತಳ್ಳುವುದನ್ನು ತಡೆಗಟ್ಟಲು ಇವರ ಹೋರಾಟ ಎಂಥಹದು ಎಂಬುದನ್ನು ನೋಡೋಣ ಬನ್ನಿ…

ನೇಪಾಳದ ಸಾಮಾಜಿಕ ಹೋರಾಟಗಾರ್ತಿಯಾಗಿರುವ ಅನುರಾಧ ಕೊಯಿರಾಲ ಅವರು ಮಾನವ ಕಳ್ಳ ಸಾಗಾಣೆ ಹಾಗೂ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ಧಂದೆಗೆ ತಳ್ಳುವುದರ ವಿರುದ್ಧ ಹಲವು ದಶಕಗಳಿಂದ ಹೋರಾಡುತ್ತಾ ಬಂದಿರುವ ಗಟ್ಟಿಗಿತ್ತಿ. ಮೈತಿ ನೇಪಾಳ್ (ತಾಯಿ ನೇಪಾಳ) ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ಅನುರಾಧ ಅವರು 12 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಆಶ್ರಯವಾಗಿದ್ದಾರೆ.

ಮಾನವ ಕಳ್ಳಸಾಗಾಣೆಗೆ ಬಲಿಯಾದ, ವೇಶ್ಯಾವಾಟಿಕೆ ಧಂದೆಯಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಳಲಿದವರಿಗೆ ಪುನರ್ ಜೀವನ ನೀಡುವ ಒಂದು ಪವಿತ್ರ ಸ್ಥಳ ಈ ಮೈತಿ ನೇಪಾಳ ಸಂಸ್ಥೆ.

ಜೀವಂತ ಶವಗಳಂತಾಗಿರುವ ಪರಿಸ್ಥಿತಿಯಲ್ಲಿ ಈ ಸಂಸ್ಥೆಗೆ ಕಾಲಿಡುವ ಹೆಣ್ಣು ಮಕ್ಕಳು, ಇಲ್ಲಿಗೆ ಬಂದ ಮೇಲೆ ತಮ್ಮ ನರಕದ ಜೀವನವನ್ನು ಮರೆತು ನೆಮ್ಮದಿಯ ಹೊಸ ಜೀವನ ಆರಂಭಿಸುತ್ತಾರೆ. ಆ ಮೂಲಕ ಪುನರ್ಜನ್ಮ ಪಡೆಯುತ್ತಾರೆ. ಈ ಸಂಸ್ಥೆಯಲ್ಲಿರುವ ಹೆಣ್ಣು ಮಕ್ಕಳಲ್ಲಿ ಕೇವಲ ವಯಸ್ಕರಷ್ಟೇ ಅಲ್ಲ, 10, 12, 13 ವಯೋಮಾನದ ನೂರಾರು ಹೆಣ್ಣು ಮಕ್ಕಳು ಇದ್ದಾರೆ. ಈ ಹೆಣ್ಣು ಮಕ್ಕಳ ಪೈಕಿ ಅನೇಕರು ಎಚ್ಐವಿ/ ಏಡ್ಸ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂಬುದು ಆಘಾತಕಾರಿ ಅಂಶ.

ಬಡ ಕುಟುಂಬದಲ್ಲಿನ ಹೆಣ್ಣು ಮಕ್ಕಳನ್ನು ನಗರ ಪ್ರದೇಶಗಳಲ್ಲಿ ಉತ್ತಮ ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿ ಅಥವಾ ಬಡತನದಿಂದ ಬಳಲಿದ ಪೋಷಕರಿಗೆ ದುಡ್ಡುಕೊಟ್ಟು ಕರೆದುಕೊಂಡು ಹೋಗಿ ಬೇರೆಯವರಿಗೆ ಮಾರಾಟ ಮಾಡುವುದು, ಆಮೂಲಕ ವೇಶ್ಯಾವಾಟಿಕೆಗೆ ದೂಡಲಾಗುತ್ತದೆ. ಒಮ್ಮೆ ಈ ನರಕಕ್ಕೆ ಹೋದ ಹೆಣ್ಣು ಮಕ್ಕಳನ್ನು ಸ್ವತಃ ಅವರ ಕುಟುಂಬದವರೇ ಮತ್ತೆ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಹೀಗೆ ಕ್ರೂರ ಸಮಾಜದಲ್ಲಿ ಶೋಷಣೆಗೆ ಒಳಗಾಗಿ, ತಮ್ಮವರಿಂದಲೇ ತಿರಸ್ಕಾರಕ್ಕೊಳಗಾದ ಹೆಣ್ಣು ಮಕ್ಕಳ ಪಾಲಿಗೆ ಅಕ್ಕನಾಗಿ, ತಾಯಿಯಾಗಿ ಹೊಸ ಬಾಳು ನೀಡುತ್ತಿರುವವರು ಅನುರಾಧ ಕೊಯಿರಾಲ.

ಇವರಿಗೆ ಕೇವಲ ಆಶ್ರಯ ನೀಡುವುದಷ್ಟೇ ಅಲ್ಲ, ಮಕ್ಕಳಿಗೆ ಸೂಕ್ತ ಶಿಕ್ಷಣ, ವಯಸ್ಕರಿಗೆ ಕರಕುಶಲ ಕೆಲಸ ಹೇಳಿಕೊಟ್ಟು ಸ್ವಾವಲಂಬನೆಯ ಬದುಕು ಕಟ್ಟಿಕೊಡುತ್ತಿದೆ ಈ ಮೈತಿ ನೇಪಾಳ ಸಂಸ್ಥೆ.

1993 ರಿಂದಲೂ ಮಾನವ ಕಳ್ಳಸಾಗಾಣೆ ಹಾಗೂ ವೇಶ್ಯಾವಾಟಿಕೆಯಲ್ಲಿ ಹೆಣ್ಣು ಮಕ್ಕಳು ಸಿಲುಕುವುದರ ವಿರುದ್ಧ ಹೋರಾಡುತ್ತಲೇ ಬಂದಿರುವ ಅನುರಾಧಾ ಅವರು ಹಳ್ಳಿ ಹಳ್ಳಿಗಳಿಗೆ ತೆರಳಿ, ಬೀದಿ ಬೀದಿಗಳಲ್ಲಿ ಸುತ್ತಿ ಯಾರು ಕೂಡ ತಮ್ಮ ಮಕ್ಕಳನ್ನು ಮಾರಾಟ ಮಾಡುವುದಾಗಲಿ ಅಥವಾ ದಳ್ಳಾಳಿಗಳ ಜತೆ ಕಳುಹಿಸಿಕೊಡಬಾರದು ಎಂಬ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಎರಡೂವರೆ ದಶಕಗಳಿಂದ ತಮ್ಮ ಜೀವನವನ್ನು ಈ ಹೋರಾಟಕ್ಕೆ ಹಾಗೂ ನೊಂದ ಹೆಣ್ಣು ಮಕ್ಕಳ ರಕ್ಷಣೆಗಾಗಿ ತಮ್ಮ ಜೀವನವನ್ನು ಮೀಸಲಿಟ್ಟಿರುವ ಅನುರಾಧ ಅವರು 2010ರಲ್ಲಿ ಸಿಎನ್ಎನ್ ಹೀರೋ ಪ್ರಶಸ್ತಿಗೆ ಭಾಜನರಾಗುತ್ತಾರೆ. ಆ ಸಭೆಯಲ್ಲಿ ಆಕೆ ಹೇಳಿದ ಮಾತುಗಳು ಪ್ರತಿಯೊಬ್ಬರ ಮಾನವೀಯತೆಯನ್ನು ಬಡಿದೆಬ್ಬಿಸುತ್ತದೆ. ಆ ಸಮಾರಂಭದಲ್ಲಿ ಆಕೆ ಹೇಳಿದ ಮಾತುಗಳು ಹೀಗಿತ್ತು… ‘ನೀವೆಲ್ಲರೂ ಕಣ್ಣು ಮುಚ್ಚಿಕೊಳ್ಳಿ, ನಿಮ್ಮ ಮಕ್ಕಳ ಜಾಗದಲ್ಲಿ ಆ ಹೆಣ್ಣು ಮಕ್ಕಳನ್ನು ನೋಡಿ. ಆಗ ಅವರ ನೋವು ಎಂಥಹದು ಎಂಬುದು ನಿಮಗೆ ಅರ್ಥವಾಗುತ್ತದೆ. ನಿಮ್ಮ ಮಕ್ಕಳು ಆ ಜಾಗದಲ್ಲಿ ಇದ್ದಿದ್ದರೆ ನೀವು ಏನು ಮಾಡುತ್ತಿದ್ದಿರಿ? ಮಾನವ ಕಳ್ಳಸಾಗಾಣಿಕೆ ಅಂತ್ಯವಾಗಲೇಬೇಕು. ಆ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತಿದ್ದೇನೆ. ನೀವು ನನ್ನ ಜೊತೆ ಕೈಜೋಡಿಸಿ… ಒಂದಲ್ಲಾ ಒಂದು ದಿನ ಈ ಹೋರಾಟದಲ್ಲಿ ನಾನು ಯಶಸ್ವಿಯಾಗುತ್ತೇನೆ ಎಂಬ ನಂಬಿಕೆ ಇದೆ.’

ಆ ಸಮಾರಂಭದಲ್ಲಿ ಅನುರಾಧ ಅವರ ಈ ಮಾತುಗಳನ್ನು ಕೇಳಿದ ಪ್ರತಿಯೊಬ್ಬರ ಮನಸ್ಸು ಭಾರವಾಗಿ ಭಾವುಕರಾದರು. ಅವರ ಈ ಮಾತುಗಳು ಕೇವಲ ಆ ವೇದಿಕೆಗೆ ಮಾತ್ರ ಸೀಮಿತವಾಗುವುದಿಲ್ಲ, ನಮಗೆ ನಿಮಗೆ, ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲುವವರೆಗೂ ಆ ಮಾತುಗಳು ಅನ್ವಯವಾಗುತ್ತಲೇ ಇರುತ್ತವೆ.

2010ರಲ್ಲಿ ಸಿಎನ್ಎನ್ ಹೀರೋ ಪ್ರಶಸ್ತಿ ಪಡೆದ ಕಾರ್ಯಕ್ರಮದಲ್ಲಿ ಆಕೆಯ ಮಾತಿನ ವಿಡಿಯೋ ಇಲ್ಲಿದೆ ನೋಡಿ…

Leave a Reply