ಎಐಡಿಎಂಕೆ ಶಾಸಕಾಂಗ ಪಕ್ಷದ ಮುಖ್ಯಸ್ಥೆಯಾಗಿ ಶಶಿಕಲಾ ಆಯ್ಕೆ, ಮುಖ್ಯಮಂತ್ರಿ ಸ್ಥಾನಕ್ಕೆ ಪನ್ನೀರ್ ಸೆಲ್ವಂ ರಾಜಿನಾಮೆ

ಡಿಜಿಟಲ್ ಕನ್ನಡ ಟೀಮ್:

ಎಐಡಿಎಂಕೆ ಶಾಸಕಾಂಗ ಪಕ್ಷದ ಮುಖ್ಯಸ್ಥೆಯಾಗಿ ಶಶಿಕಲಾ ನಟರಾಜನ್ ಭಾನುವಾರ ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವುದು ಖಚಿತವಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಓ.ಪನ್ನೀರ್ ಸೆಲ್ವಂ ರಾಜಿನಾಮೆ ಕೊಟ್ಟಿದ್ದಾರೆ.

ಭಾನುವಾರ ಮಧ್ಯಾಹ್ನ ನಡೆಯಬೇಕಿದ್ದ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಶಶಿಕಲಾ ಅವರು ಬೆಳಗ್ಗೆ ಪನ್ನೀರ್ ಸೆಲ್ವಂ ಹಾಗೂ ಇತರೆ ಸಚಿವರುಗಳೊಂದಿಗೆ ಮಾತನಾಡಿದ್ದರು. ನಂತರ ನಡೆದ ಶಾಸಕಾಂಗ ಸಭೆಯಲ್ಲಿ ಶಶಿಕಲಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಯಿತು. ಈ ಬಗ್ಗೆ ನಿನ್ನೆಯೇ ಡಿಜಿಟಲ್ ಕನ್ನಡ ಸಹ ವರದಿ ಮಾಡಿತ್ತು.

 ‘ನಿಮ್ಮೆಲ್ಲರ ಒತ್ತಡಕ್ಕೆ ಹಾಗೂ ಪ್ರೀತಿಗೆ ಮಣಿದು ನಾನು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಿದ್ದೇನೆ. ನಮ್ಮ ಅಮ್ಮನ ಕನಸು ನನಸು ಮಾಡೋಣ, ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗೋಣ’ ಎಂದು ಶಾಸಕಾಂಗ ಸಭೆಯಲ್ಲಿ ಶಶಿಕಲಾ ತಿಳಿಸಿದ್ದಾರೆ.

ಇಂದು ಸಂಜೆ ತಮಿಳುನಾಡಿನ ರಾಜ್ಯಪಾಲರಾದ ವಿದ್ಯಾಸಾಗರ್  ಅವರು ಇಂದು ಸಂಜೆ ಚೆನ್ನೈಗೆ ಆಗಮಿಸಲಿದ್ದು, 6 ಗಂಟೆಗೆ ಎಐಟಿಎಂಕೆ ಪಕ್ಷದ ನಾಯಕರ ಭೇಟಿಗೆ ಸಮಯ ನಿಗಧಿ ಮಾಡಿದ್ದಾರೆ. ಇನ್ನು ಶಶಿಕಲಾ ಅವರ ಪ್ರಮಾಣ ವಚನ ಸಮಾರಂಭವವನ್ನು ಮದ್ರಾಸ್ ವಿಶ್ವವಿದ್ಯಾಲಯದ ಶತಮಾನೋತ್ಸವ ಕಟ್ಟಡ ಅಥವಾ ಮರಿನಾ ಬೀಚ್ ಬಳಿ ಇರುವ ಜಯಲಲಿತಾ ಅವರ ಸಮಾಧಿ ಬಳಿ ನಡೆಸುವ ಸಾಧ್ಯತೆಗಳಿವೆ ಎಂಬ ವರದಿಗಳು ಬಂದಿವೆ. ಪ್ರಮಾಣವಚನ ಸ್ವೀಕರಿಸುವ ದಿನ ಇನ್ನಷ್ಟೇ ನಿಗದಿಯಾಗಬೇಕಿದ್ದು. ಫೆ.6ರಿಂದ 9ರ ಒಳಗೆ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆ ಇದೆ.

ಮತ್ತೊಂದೆಡೆ ಶಶಿಕಲಾ ಅವರು ಮುಖ್ಯಮಂತ್ರಿಯಾಗುತ್ತಿರುವುದನ್ನು ವಿರೋಧಿಸಿರುವ ಪ್ರತಿಪಕ್ಷ ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್, ‘ತಮಿಳುನಾಡಿನ ಜನ ಜಯಲಲಿತಾ ಅವರಿಗೆ ಮತ ಹಾಕಿ ಗೆಲ್ಲಿಸಿದ್ದರೆ ಹೊರತು ಅವರ ಮನೆಯವರು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂರಲು ಅಲ್ಲ. ಜಯಲಲಿತಾ ಅವರ ನಾಯಕತ್ವದಲ್ಲಿ ಸರ್ಕಾರ ನಡೆಯಬೇಕು ಎಂದು ಜನ ಬಯಸಿದ್ದರೇ ವಿನಃ ಪನ್ನೀರ್ ಸೆಲ್ವಂ ಆಗಲಿ ಅಥವಾ ಶಶಿಕಲಾ ಅವರ ನಾಯಕತ್ವಕ್ಕೆ ಅಲ್ಲ. ಒಂದು ಜವಾಬ್ದಾರಿಯುತ ಪಕ್ಷವಾಗಿ ಈ ಎಲ್ಲ ಬೆಳೆವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ನಾವು ಏನೇ ನಿರ್ಧಾರ ತೆಗೆದುಕೊಂಡರೂ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ತೆಗೆದುಕೊಳ್ಳುತ್ತೇವೆ’ ಎಂದು ಟೀಕೆ ಮಾಡಿದ್ದಾರೆ.

Leave a Reply