ಸಖತ್ ಸೌಂಡ್ ಮಾಡ್ತಿದೆ ಕನ್ನಡದ ‘ಶುದ್ಧಿ’ ಸಿನಿಮಾ, ನೀವು ನೋಡಿದ್ರಾ ಇದರ ಟ್ರೇಲರ್?

ಡಿಜಿಟಲ್ ಕನ್ನಡ ಟೀಮ್:

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ‘ಶುದ್ಧಿ’ ಕನ್ನಡ ಸಿನಿಮಾದ ಟ್ರೈಲರ್ ಸಾಕಷ್ಟು ಸದ್ದು ಮಾಡುತ್ತಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಎಳೆಯನ್ನು ಆಧರಿಸಿರುವ ಈ ಚಿತ್ರದ ಟ್ರೇಲರ್ ನೋಡುಗರಲ್ಲಿ ಕುತೂಹಲ ಹಾಗೂ ರೋಚಕತೆ ಹೆಚ್ಚಿಸಿದೆ.

ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯ, ಹಲ್ಲೆಯಂತಹ ಪ್ರಕರಣಗಳು ನಮ್ಮನ್ನು ಸುತ್ತಲು ಕಾಡುತ್ತಿರುವ ಪರಿಸ್ಥಿತಿಯಲ್ಲಿ ಈ ಚಿತ್ರದ ಪ್ರಸ್ತುತತೆ ನಿಜಕ್ಕೂ ಮಹತ್ವ ಪಡೆದುಕೊಂಡಿದೆ. ಭಾರತ ಹಾಗೂ ಭಾರತೀಯ ಸಂಸ್ಕೃತಿ, ಇಲ್ಲಿನ ಪುರಾಣದ ಕಥೆಗಳ ಬಗ್ಗೆ ಆಸಕ್ತಿ ವಹಿಸಿ ಅದರ ಬಗ್ಗೆ ತಿಳಿದುಕೊಳ್ಳುವ ಬಯಕೆಯಿಂದ ವಿದೇಶಿ ಮಹಿಳೆ ಬೆಂಗಳೂರಿಗೆ ಆಗಮಿಸುತ್ತಾಳೆ. ಹೆಣ್ಣನ್ನು ದೇವತೆಯಾಗಿ ಪರಿಗಣಿಸುವ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಂಡು ಆಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬ ಅಂಶ ಇದೆ. ಇನ್ನು ಚಿತ್ರದಲ್ಲಿ ಕೆಲವು ನೈಜ್ಯ ಘಟನೆಗಳ ಎಳೆಯನ್ನು ಬಳಸಿಕೊಂಡು ನಮ್ಮ ಸಮಾಜದಲ್ಲಿನ ಸಮಸ್ಯೆಯ ವಿವಿಧ ಆಯಾಮಗಳನ್ನು ತೋರಿಸುವ ಪ್ರಯತ್ನ ಹಾಗೂ ಆ ಮೂಲಕ ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಎದುರಿಸಿ ನಿಲ್ಲಬೇಕು ಹಾಗೂ ನಮ್ಮ ಪುರಾಣದಲ್ಲಿ ಹೆಣ್ಣಿಗೆ ಯಾವ ಸ್ಥಾನಮಾನ ನೀಡಲಾಗಿದೆ ಎಂಬ ಕನಿಷ್ಠ ಕಲ್ಪನೆಯೂ ಇರದ ಸದ್ಯದ ಯುವ ಜನಾಂಗಕ್ಕೆ ಸಂದೇಶ ರವಾನಿಸುವ ಕಥಾ ಹಂದರ ಈ ಚಿತ್ರದಲ್ಲಿರುವುದು ಟ್ರೇಲರ್ ನಲ್ಲಿ ಗೊತ್ತಾಗುತ್ತದೆ. ನಿರ್ದೇಶಕ ಆದರ್ಶ್ ಎಚ್ ಈಶ್ವರಪ್ಪ ಸೇರಿದಂತೆ ಹೊಸಬರ ತಂಡದ ಈ ಪ್ರಯತ್ನ ನಿಜಕ್ಕೂ ಎಲ್ಲರ ಮೈನವಿರೇಳಿಸುವಂತಿದೆ.

ಚಿತ್ರಕಥೆಯಲ್ಲಿನ ಗಟ್ಟಿತನ ಹಾಗೂ ವಿವಿಧ ಆಯಾಮ, ಚಿತ್ರದ ತಾಂತ್ರಿಕ ಗುಣಮಟ್ಟ, ನಟರ ಅತ್ಯುತ್ತಮ ಪ್ರದರ್ಶನ ಎಲ್ಲವೂ ಗಮನ ಸೆಳೆಯುತ್ತಿದ್ದು, ಚಿತ್ರ ಅತ್ಯುತ್ತಮವಾಗಿ ಮೂಡಿ ಬರುವ ವಿಶ್ವಾಸ ಹೆಚ್ಚಿಸಿದೆ.

ಈ ಚಿತ್ರದ ಟ್ರೇಲರ್ ಅನ್ನು ನೀವು ಮಿಸ್ ಮಾಡದೇ ನೋಡಿ…

 

Leave a Reply