ವಿಧಾನ ಮಂಡಲದಲ್ಲಿ ರಾಜ್ಯಪಾಲರ ಭಾಷಣ- ಪ್ರತಿಪಕ್ಷಗಳ ಟೀಕೆ, SCAM ಬಗ್ಗೆ ಅಖಿಲೇಶ್ ಹೊಸ ವ್ಯಾಖ್ಯಾನ, ಜಯಲಲಿತಾ ಸಾವಿನ ಬಗ್ಗೆ ಅಪೋಲೊ ಆಸ್ಪತ್ರೆ ವೈದ್ಯರ ಸ್ಪಷ್ಟನೆ ಏನು?

ಡಿಜಿಟಲ್ ಕನ್ನಡ ಟೀಮ್:

ರಾಜ್ಯಪಾಲರ ಭಾಷಣ, ವಿಪಕ್ಷಗಳ ಟೀಕೆ

ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಾಜೂಭಾಯಿ ವಾಲಾ ಸೋಮವಾರ ಮಾಡಿದ ಭಾಷಣದಲ್ಲಿ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಮಾಡಿರುವ ಸಾಧನೆಯನ್ನು ಮುಂದಿಟ್ಟು, ಮುಂದಿನ ದಿನಗಳಲ್ಲಿ ಪ್ರಗತಿಪರ ಸಮಾಜ ನಿರ್ಮಾಣ ಹಾದಿಯಲ್ಲಿ ಮುನ್ನಡೆಯಲು ಬದ್ಧವಾಗಿರುವುದಾಗಿ ತಿಳಿಸಿದರು. ಈ ಮಧ್ಯೆ, ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಪಕ್ಷ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು: ‘ಕಾವೇರಿ, ಕೃಷ್ಣಾ, ಮಹದಾಯಿ ನದಿ ನೀರು ಹಂಚಿಕೆಯಲ್ಲಿ ರಾಜ್ಯದ ಜನತೆಗೆ ಸಿಗಬೇಕಿರುವ ಪಾಲು ಪಡೆಯಲು ಸರ್ಕಾರ ಬದ್ಧವಾಗಿದೆ. ನೆಲ, ಜಲ ಮತ್ತು ಭಾಷೆ ಸಂರಕ್ಷಿಸಲು ಸರ್ಕಾರ ಕಂಕಣ ತೊಟ್ಟಿದೆ. ಬರಗಾಲದ ಹಿನ್ನೆಲೆಯಲ್ಲಿ 2.25 ಲಕ್ಷ ರೈತರ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಸಿಬ್ಬಂದಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸಲಾಗುತ್ತಿದೆ. ನಾಲ್ಕು ವರ್ಷಗಳಲ್ಲಿ ಸಂಪತ್ತು, ಅವಕಾಶ ಮತ್ತು ಅಧಿಕಾರ ಸರ್ವರಿಗೂ ಸಮಪಾಲು ಸಿಗಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು, ಗ್ರಾಮ ಮತ್ತು ಪಟ್ಟಣಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಕ್ರಮ ತೆಗೆದುಕೊಂಡಿದೆ. ಬರ ಪರಿಸ್ಥಿತಿ ನಿಭಾಯಿಸಲು ₹ 1195 ಕೋಟಿ ಬಿಡುಗಡೆ ಮಾಡಿದೆ. ಒಂದು ಲಕ್ಷ ಕೃಷಿ ಹೊಂಡ, 2450 ಶೆಡ್ ನೆಟ್, ಪಾಲಿಗೃಹ ನಿರ್ಮಾಣದಿಂದ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ನಾಲ್ಕು ವರ್ಷಗಳಲ್ಲಿ ₹ 3924 ಕೋಟಿ ವೆಚ್ಚದಲ್ಲಿ 921 ಕೆರೆಗಳನ್ನು ಭರ್ತಿ ಮಾಡುವ ಯೋಜನೆ ಪೂರ್ಣಗೊಳಿಸಿದೆ’.

ಉಳಿದಂತೆ ಅಣೆಕಟ್ಟು ಪುನಶ್ಚೇತನಾ ಕಾರ್ಯ, ನೀರಾವರಿ ಅಭಿವೃದ್ಧಿ, ಅರಣ್ಯ ಪ್ರದೇಶ ಹೆಚ್ಚಳ, ಅರಣ್ಯ ಪ್ರದೇಶಗಳಲ್ಲಿ ವಾಸಿಸುವವರಿಗೆ ಎಲ್ ಪಿಜಿ ಸಂಪರ್ಕ, ಬೆಳೆ ಹಾನಿಗೆ ಪರಿಹಾರ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ₹ 19 ಸಾವಿರ ಕೋಟಿ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, 1400 ಹೊಸ ಅಂಗನವಾಡಿ, ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ 38 ಲಕ್ಷ ಮಕ್ಕಳಿಗೆ ವಾರದಲ್ಲಿ ಮೂರು ಬಾರಿ ಹಾಲು ನೀಡಿಕೆ, ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಠಾಣೆ, ಪೋಲೀಸ್ ತರಬೇತಿ ಶಾಲೆ ನಿರ್ಮಾಣ, ಇನ್ಸ್ ಪೆಕ್ಟರ್ ಮತ್ತು ಕಾನ್ಸ್ ಟೇಬಲ್ ಸೇರಿದಂತೆ ಆರು ಸಾವಿರ ಸಿಬ್ಬಂದಿ ನೇಮಕ, ಪೊಲೀಸರ ಮಾಸಿಕ ಭತ್ಯೆ ಹೆಚ್ಚಳ, ಪೊಲೀಸ್ ವಸತಿ ಗೃಹ ನಿರ್ಮಾಣದಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.’

ಪ್ರತಿಪಕ್ಷ ನಾಯಕರ ಟೀಕೆ:

ವಿಧಾನ ಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್: ‘ರಾಜ್ಯದ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ₹ 2 ಸಾವಿರ ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದು, ಅದನ್ನು ಸಮರ್ಪಕವಾಗಿ ವಿತರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಗೋಶಾಲೆಗಳಿಲ್ಲ. ಶುದ್ಧ ಕುಡಿವ ನೀರಿನ ಘಟಕಗಳಿಲ್ಲ. ಇದುವರೆಗೂ ಎಷ್ಟು ಘಟಕಗಳ ನಿರ್ಮಾಣವಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ರಸ್ತೆಗಳು ಹದಗೆಟ್ಟು ನಿಂತಿವೆ. ಇವೆಲ್ಲ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಈ ಬಗ್ಗೆ ಯಾವುದೇ ಮಾತು ಆಡದ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದೆ.’

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ: ‘ರಾಜ್ಯಪಾಲರ ಭಾಷಣ ಅತ್ಯಂತ ಕಳಪೆಯದು. ದೂರದೃಷ್ಟಿ ಮತ್ತು ಬದ್ಧತೆ ಇಲ್ಲದ, ಹೊಸ ಕಾರ್ಯಕ್ರಮವಿಲ್ಲದ ಭಾಷಣ. ಸರ್ಕಾರ ಮೂರು ವರ್ಷ ಕಾಲಹರಣ ಮಾಡಿದ್ದು, ಮುಂದಿನ ಒಂದು ವರ್ಷಕ್ಕಾದರೂ ಕಾರ್ಯಕ್ರಮ ರೂಪಿಸಬೇಕಿತ್ತು. ನೀರಾವರಿ, ರೈತರು, ನಂಜುಡಪ್ಪ ವರದಿ ಅನುಷ್ಠಾನ, ಹೈ-ಕರ್ನಾಟಕ ಭಾಗದ ವಿಶೇಷ ಅನುದಾನದ ಬಗ್ಗೆ ಯೋಗ್ಯ ಪ್ರಸ್ತಾಪವಿಲ್ಲ. ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಮೂರು ವರ್ಷಗಳ ಕಾಲ ಸರ್ಕಾರ ನಿದ್ರಾವಸ್ಥೆಯಲ್ಲಿತ್ತು ಎಂದು ಹೇಳಿದ್ದಾರೆ. ಸಚಿವರೇ ಹೀಗೆ ಹೇಳಿದ ಮೇಲೆ ನಾವು ಟೀಕಿಸಲು ಏನು ಉಳಿದಿದೆ.’

SCAM ಬಗ್ಗೆ ಅಖಿಲೇಶ್ ಹೇಳಿದ್ದೇನು?

ಮೊನ್ನೆಯಷ್ಟೇ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಕ್ಯಾಮ್ ಎಂದರೆ, ಸಮಾಜವಾದಿ ಪಕ್ಷ, ಕಾಂಗ್ರೆಸ್, ಅಖಿಲೇಶ್, ಮಾಯಾವತಿ ಎಂದು ದಾಳಿ ಮಾಡಿದ್ದರು. ಈಗ ಇದಕ್ಕೆ ಪ್ರತಿಯಾಗಿ ಅಖಿಲೇಶ್ ಯಾದವ್ ಉತ್ತರಕೊಟ್ಟಿದ್ದು, ಸ್ಕ್ಯಾಮ್ ಎಂದರೆ ‘ಸೇವ್ ದ ಕಂಟ್ರಿ ಫ್ರಮ್ ಅಮಿತ್ ಶಾ ಮತ್ತು ಮೋದಿ’ (ದೇಶವನ್ನು ಅಮಿಶ್ ಶಾ ಮತ್ತು ಮೋದಿಯಿಂದ ರಕ್ಷಿಸಿ) ಎಂದು ಮರು ವ್ಯಾಖ್ಯಾನಿಸಿದ್ದಾರೆ.

‘ಬಿಜೆಪಿಯ ಅಚ್ಛೆ ದಿನ್ ನಲ್ಲಿ ಪ್ರತಿಯೊಬ್ಬರೂ ತಮ್ಮ ಪರಿಶ್ರಮದ ಹಣವನ್ನು ಪಡೆಯಲು ಬೆಳಗಿನಿಂದ ಸಂಜೆಯವರೆಗೂ ಕ್ಯೂನಲ್ಲಿ ನಿಂತು ಬಳಲಿದ್ದಾರೆ’ ಎಂದು ಹರಿಹಾಯ್ದರು.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಬಗ್ಗೆ ಇದ್ದ ಅನೇಕ ಅನುಮಾನಗಳನ್ನು ಸ್ಪಷ್ಟಪಡಿಸಲು ಇಂದು ಅಪೋಲೊ ಆಸ್ಪತ್ರೆಯ ವೈದ್ಯರ ತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ‘ಜಯಲಲಿತಾ ಅವರು ರಕ್ತದ ಸೋಂಕಿನಿಂದ ಬಳಲುತ್ತಿದ್ದರು. ರಕ್ತ ಕೆಟ್ಟಿತ್ತು, ಮಧುಮೇಹ ತೀವ್ರಗೊಂಡಿತ್ತು. ಇದರಿಂದ ಚಿಕಿತ್ಸೆಗೆ ಅಡ್ಡಿಯಾಯಿತು. ರಕ್ತದಲ್ಲಿ ವಿಷಕಾರಿ ಅಂಶ ಹೆಚ್ಚಿದ್ದರಿಂದ ಅದು ಹೃದಯಕ್ಕೆ ಸೇರಿ ಅವರು ನಿಧನರಾದರು’ ಎಂದು ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಿದ್ದ ಲಂಡನ್ ವೈದ್ಯ ಡಾ. ರಿಚರ್ಡ್ ಬೀಲೆ ಮಾಹಿತಿ ಕೊಟ್ಟರು.
  • ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಅವರ ಅವಧಿಯಲ್ಲಿ ಬಿಸಿಸಿಐಗೆ ನೇಮಕವಾಗಿದ್ದ ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಮಂಡಳಿ ವಜಾಗೊಳಿಸಿದೆ. ಫೆ.1 ರಂದು ನಡೆದ ಸಿಒಎ ಸಭೆಯಲ್ಲೇ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಲೋಧಾ ಸಮಿತಿ ಶಿಫಾರಸ್ಸಿನ ಅನ್ವಯ ಅರ್ಹತೆಯ ಮಾನದಂಡಗಳನ್ನು ಆಧರಿಸಿ ಹಲವು ಅಧಿಕಾರಿಗಳನ್ನು ವಜಾ ಮಾಡಲಾಗಿದೆ.

Leave a Reply