ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ತುದಿಗಾಲಲ್ಲಿ ನಿಂತಿರುವ ಶಶಿಕಲಾ ಮುಂದೆ ಇರುವ ಸವಾಲುಗಳೇನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಜಯಲಲಿತಾ ಅವರ ನಿಧನದ ನಂತರ ತಮಿಳುನಾಡಿನ ರಾಜಕಾರಣದಲ್ಲಿ ಸಾಕಷ್ಟು ಪ್ರಭಾವ ಬೀರುತ್ತಿರುವ ಶಶಿಕಲಾ ನಟರಾಜನ್, ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೆ ಬೇಕಾದ ಎಲ್ಲ ತಯಾರಿಗಳು ಮುಕ್ತಾಯವಾಗಿದ್ದು, ಅವರು ಪ್ರಮಾಣವಚನ ಸ್ವೀಕರಿಸಿ ಅಧಿಕೃತವಾಗಿ ಸಿಎಂ ಕುರ್ಚಿ ಅಲಂಕರಿಸುವುದೊಂದೇ ಬಾಕಿ.

ಮುಂದಿನ ಎರಡು ಮೂರು ದಿನಗಳಲ್ಲಿ ಶಶಿಕಲಾ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೂ ಅವರ ಮುಂದೆ ಮೂರು ದೊಡ್ಡ ಸವಾಲುಗಳು ನಿಂತಿದ್ದು, ಅವುಗಳನ್ನು ಮೆಟ್ಟಿನಿಂತರಷ್ಟೇ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯ ಅಧಿಕಾರ ಅವರ ಮುಷ್ಠಿಯಲ್ಲಿರುತ್ತದೆ. ಹಾಗಾದರೆ ಶಶಿಕಲಾ ಅವರ ಮುಂದಿರುವ ಪ್ರಮುಖ ಸವಾಲುಗಳೇನು? ಇಲ್ಲಿದೆ ನೋಡಿ…

  • ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ: ಜಯಲಲಿತಾ ಅವರ ಆಪ್ತೆಯಾದ ಶಶಿಕಲಾ ಅವರು ಈವರೆಗೂ ತೆರೆಮರೆಯಲ್ಲಿದ್ದ ಮಹಿಳೆ. ಜಯಲಲಿತಾ ಅವರ ನಿಧನದ ನಂತರ ಪಕ್ಷದ ಸಂಪೂರ್ಣ ಅಧಿಕಾರವನ್ನು ಹಿಡಿದುಕೊಳ್ಳುವ ಮೂಲಕ ಸಿಎಂ ಗಾದಿಯನ್ನು ಅಲಂಕರಿಸಲು ಮುಂದಾಗಿರುವ ಶಶಿಕಲಾ ಈ ಹಿಂದೆ ಬಹಿರಂಗವಾಗಿ ರಾಜಕೀಯ ಅಖಾಡದಲ್ಲಿ ಕಾಣಿಸಿಕೊಂಡಿರುವುದು ತೀರಾ ಕಡಿಮೆ. ಸದ್ಯಕ್ಕೆ ಸಿಎಂ ಸ್ಥಾನ ಅಲಂಕರಿಸಿದರೂ ಮುಂದಿನ ಆರು ತಿಂಗಳ ಒಳಗಾಗಿ ತಮಿಳುನಾಡಿನ ಯಾವುದಾದರೂ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕಿದೆ. ಆಗ ಮಾತ್ರ ಅವರು ಸಿಎಂ ಆಗಿ ಮುಂದುವರಿಯಲು ಸಾಧ್ಯ. ಈವರೆಗೂ ಮತದಾನರ ಮುಂದೆ ನಿಲ್ಲದ ಶಶಿಕಲಾ ಈಗ ಏಕಾಏಕಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಿದೆ. ಈಗಾಗಲೇ ಹಲವು ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಶಶಿಕಲಾ ಅವರನ್ನು ಗೆಲ್ಲಿಸಲೇಬೇಕೆಂಬ ಪಣದ್ದಾರೆ. ಕಳೆದ ಚುನಾವಣೆಯಲ್ಲಿ ಜಯಲಲಿತಾ ಅವರನ್ನು ನೋಡಿ ಮತಾ ಚಲಾಯಿಸಿದ್ದ ಜನರು ಈಗ ಶಶಿಕಲಾ ಅವರಿಗೆ ಅದೇ ಬೆಂಬಲ ನೀಡುವರೆ ಎಂಬುದು ಸದ್ಯಕ್ಕಿರುವ ದೊಡ್ಡ ಪ್ರಶ್ನೆ.
  • ಅಕ್ರಮ ಆಸ್ತಿ ಪ್ರಕರಣ: ಸದ್ಯ ಶಶಿಕಲಾ ಅವರ ಮುಂದಿರುವ ದೊಡ್ಡ ಸವಾಲೆಂದರೆ ಅದು ಕಾನೂನಿನ ಹೋರಾಟ. ಜಯಲಲಿತಾ ಅವರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಶಿಕಲಾ ಅವರು ಕೂಡ ಆರೋಪಿಯಾಗಿದ್ದಾರೆ. ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ಮುಕ್ತಾಯವಾಗಿದ್ದು, ಮುಂದಿನವಾರ ತೀರ್ಪು ಪ್ರಕಟವಾಗಲಿದೆ. ಹೀಗಾಗಿ ಶಶಿಕಲಾ ಅವರ ಭವಿಷ್ಯವನ್ನು ನಿರ್ಧರಿಸಲಿರುವ ಈ ತೀರ್ಪು ಸಾಕಷ್ಟು ಕುತೂಹಲ ಮೂಡಿಸಿದೆ. ಒಂದು ವೇಳೆ ತೀರ್ಪು ಶಶಿಕಲಾ ಅವರ ಪರವಾಗಿ ಬಂದು ಆರೋಪ ಮುಕ್ತರಾದರೆ, ನಂತರ ಎದುರಾಗುವ ಚುನಾವಣೆಯಲ್ಲಿ ಜಯಲಲಿತಾ ಅವರ ಸಾವಿನ ಅನುಕಂಪವನ್ನು ತಮ್ಮ ಪರವಾಗಿಯಾದರೂ ಬಳಸಿಕೊಂಡು ಗೆಲ್ಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಶಶಿಕಲಾ ಅವರಿಗೆ ಈ ಕಾನೂನಿನ ಸವಾಲು ಮಹತ್ತರವಾಗಿದ್ದು, ಇದರಿಂದ ಪಾರಾದರೆ ದೊಡ್ಡ ಗಂಡಾಂತರ ಕಳೆದಂತಾಗಲಿದೆ.
  • ಪ್ರತಿಸ್ಪರ್ಧಿಯಾಗಿ ಜಯ ಸೋದರ ಸಂಬಂಧಿ ದೀಪಾ ಜಯಕುಮಾರ್: ಜಯಲಲಿತಾ ಅವರ ನಿಧನದ ನಂತರ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಈಗ ಸದ್ಯಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ರಾಜಕೀಯವಾಗಿ ಉತ್ತರಾಧಿಕಾರಿಯಾಗಲು ಶಶಿಕಲಾ ಪ್ರಯತ್ನಿಸುತ್ತಿದ್ದರೂ ರಕ್ತ ಸಂಬಂಧದಲ್ಲಿ ನಾನು ಜಯಾ ಅವರ ಉತ್ತರಾಧಿಕಾರಿ ಎಂದು ದೀಪಾ ಜಯಕುಮಾರ್ ಸಾರ್ವಜನಿಕವಾಗಿ ಘೋಷಿಸಿದ್ದಾರೆ. ದೀಪಾ ಜಯಕುಮಾರ್ ಈ ಹಿಂದೆಯೇ ಶಶಿಕಲಾ ಅವರ ವಿರುದ್ಧ ಮಾತನಾಡಿರುವ ಬಗ್ಗೆ ಡಿಜಿಟಲ್ ಕನ್ನಡ ವರದಿ ಮಾಡಿತ್ತು. ‘ಕೇವಲ ಎಐಡಿಎಂಕೆ ಪಕ್ಷದ ದೃಷ್ಟಿಯಿಂದ ಮಾತ್ರವಲ್ಲದೇ, ಜನರ ದೃಷ್ಟಿಯಲ್ಲೂ ಜಯಾ ಅವರ ಉತ್ತರಾಧಿಕಾರಿ ನಾನೇ’ ಎಂದು ಹೇಳಿಕೊಂಡಿದ್ದ ದೀಪಾ, ಇತ್ತೀಚೆಗಷ್ಟೇ ತಾವು ರಾಜಕೀಯ ಪ್ರವೇಶ ಮಾಡುವುದಾಗಿ ಅಧಿಕೃತ ಘೋಷಣೆ ನೀಡಿದ್ದರು. ಹೀಗಾಗಿ ಮುಂದೆ ಒಂದಲ್ಲ ಒಂದು ರೀತಿ ದೀಪಾ ಜಯಕುಮಾರ್ ಅವರು ಶಶಿಕಲಾ ಅವರ ರಾಜಕೀಯ ಹಾದಿಗೆ ಅಡ್ಡಗೋಡೆಯಾಗಿ ನಿಲ್ಲುವ ಸಾಧ್ಯತೆ ಇದ್ದೇ ಇದೆ.

Leave a Reply