ರಿಲಾಯನ್ಸ್ ಜಿಯೋ ಮತ್ತು ಪೇಟಿಎಂಗೆ ಕೇಂದ್ರ ಸರ್ಕಾರ ನೋಟೀಸ್ ನೀಡಿದ್ದೇಕೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ದೇಶದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ರಿಲಾಯನ್ಸ್ ಜಿಯೋ ಹಾಗೂ ಪೇಟಿಎಂಗಳ ವಿರುದ್ಧ ಕೇಂದ್ರ ಸರ್ಕಾರ ನೋಟೀಸ್ ಜಾರಿಮಾಡಿದೆ. ಕಾರಣ ಏನಂದ್ರೆ, ಈ ಎರಡು ಕಂಪನಿಗಳು ತಮ್ಮ ಜಾಹೀರಾತಿನ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಬಳಸಿಕೊಂಡಿದ್ದು, ಪ್ರಧಾನಿ ಅವರ ಚಿತ್ರ ಬಳಸುವ ಬಗ್ಗೆ ಈ ಕಂಪನಿಗಳು ಅನುಮತಿ ಪಡೆದಿದ್ದವೇ? ಎಂಬ ಸ್ಪಷ್ಟನೆ ಕೇಳಿ ಸರ್ಕಾರ ನೋಟೀಸ್ ಜಾರಿ ಮಾಡಿದೆ.

1950ರ ಹೆಸರು ಹಾಗೂ ಚಿಹ್ನೆ ಕಾಯ್ದೆ (ದುರ್ಬಳಕೆ ತಡೆಯಲು)ಯ ಪ್ರಕಾರ ಸರ್ಕಾರದ ಚಿಹ್ನೆ ಅಥವಾ ಸರ್ಕಾರದಲ್ಲಿರುವ ವ್ಯಕ್ತಿಗಳ ಹೆಸರನ್ನು ತಮ್ಮ ಉತ್ಪನ್ನಗಳ ಮಾರಾಟದ ಜಾಹೀರಾತಿನಲ್ಲಿ ಬಳಸಿಕೊಳ್ಳುವ ಮುನ್ನ ಸೂಕ್ತ ಅನುಮತಿ ಪಡೆಯಬೇಕಿದೆ ಎಂದು ಕೇಂದ್ರ ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಕೇಂದ್ರ ವಾರ್ತಾ ಮತ್ತು ಪ್ರಸರಣ ಇಲಾಖೆಗೆ ಪತ್ರ ಬರೆದಿದೆ. ಈ ಕುರಿತ ಬೆಳವಣಿಗೆಗಳನ್ನು ಎರಡೂ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಕಳೆದ ಸೆಪ್ಟೆಂಬರ್ ನಲ್ಲಿ ರಿಲಾಯನ್ಸ್ ಜಿಯೋ ಕಂಪನಿ ತನ್ನ ಸೇವೆಯನ್ನು ಆರಂಭಿಸಿದಾಗ ಪತ್ರಿಕೆಗಳ ಮುಖಪುಟದಲ್ಲಿ ನೀಡಿದ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಬಳಸಿಕೊಂಡಿತ್ತು. ಇನ್ನು ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೋಟು ಅಮಾನ್ಯದ ನಿರ್ಧಾರವನ್ನು ಪ್ರಕಟಿಸಿದ ಮರುದಿನ ಅಂದರೆ ನವೆಂಬರ್ 9ರ ಪತ್ರಿಕೆಗಳಲ್ಲಿ ತಮ್ಮ ಡಿಜಿಟಲ್ ವ್ಯವಹಾರದ ಆ್ಯಪ್ ಬಳಕೆಗೆ ನೀಡಲಾದ ಜಾಹೀರಾತಿನಲ್ಲೂ ಪ್ರಧಾನಿಯವರ ಚಿತ್ರ ಬಳಸಲಾಗಿತ್ತು. ಹೀಗಾಗಿ ಈ ಎರಡು ಕಂಪನಿಗಳು ಕಾನೂನು ಉಲ್ಲಂಘಿಸಿದ್ದರೆ ಮುಂದಿನ ದಿನಗಳಲ್ಲಿ ಸೂಕ್ತ ದಂಡ ಕಟ್ಟಬೇಕಾಗುವ ಪರಿಸ್ಥಿತಿ ಎದುರಾಗಲಿದೆ.

Leave a Reply