ಪದ್ಮಶ್ರೀ ಹೆಮ್ಮೆ-7: ರಸ್ತೆ ಅಪಘಾತಕ್ಕೆ ಸಿಲುಕಿದವರ ನೆರವಿಗೆ ನಿಂತ ಸುಬ್ರೊತೊ ದಾಸ್, 108 ವೈದ್ಯಕೀಯ ಸೇವೆ ಆರಂಭಕ್ಕೆ ದಾರಿಯಾದ ಸಾಧಕ

ಡಿಜಿಟಲ್ ಕನ್ನಡ ಟೀಮ್:

ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸದೇ ಇರುವ ಪ್ರಕರಣಗಳು ದಿನೇ ದಿನೇ ನಮ್ಮನ್ನು ಕಾಡುತ್ತಿರುವ ಸಂದರ್ಭದಲ್ಲಿ ಇಡೀ ಸಮಾಜಕ್ಕೆ ಸ್ಫೂರ್ತಿಯಾಗಿ ನಿಲ್ಲುವ ವ್ಯಕ್ತಿ ಎಂದರೆ ಅದು ಗುಜರಾತಿನ ವೈದ್ಯ ಸುಬ್ರೊತೊ ದಾಸ್. ಕಾರಣ ಸುಬ್ರೊತೊ ದಾಸ್ ಗುಜರಾತಿನ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ಸಿಲುಕಿದವರಿಗೆ ವೈದ್ಯಕೀಯ ಸೇವೆ ನೀಡುವ ಮೂಲಕ, ಇಂದು 26 ರಾಜ್ಯಗಳಲ್ಲಿ 108 ಸೇವೆ ಆರಂಭವಾಗುವಂತೆ ಮಾಡಿರುವ ಸಾಧಕ. ಈವರೆಗೂ ಇವರ ಸೇವೆಯಿಂದ ಅಪಘಾತದಲ್ಲಿ ಸಿಲುಕಿದ 1200ಕ್ಕೂ ಹೆಚ್ಚು ಮಂದಿ ನೆರವು ಪಡೆದಿದ್ದಾರೆ. ಇವರ ಈ ಸಾಧನೆ ಪರಿಗಣಿಸಿರುವ ಕೇಂದ್ರ ಸರ್ಕಾರ ಕಳೆದ ತಿಂಗಳು ಪದ್ಮಶ್ರೀ ಪುರಸ್ಕಾರ ನೀಡಿ ಗೌರವ ಸಲ್ಲಿಸಿದೆ.

ಕಳೆದ ವಾರವಷ್ಟೇ ಕೊಪ್ಪಳ ಹಾಗೂ ಮೈಸೂರಿನಲ್ಲಿನ ಅಪಘಾತದ ಪ್ರಕರಣದಲ್ಲಿ ಗಾಯಾಳುಗಳ ರಕ್ಷಣೆಗೆ ಜನ ಮುಂದೆ ಬಾರದೇ ಮೂಕಪ್ರೇಕ್ಷಕರಾಗಿದ್ದ ಪ್ರಕರಣಗಳು ತಲೆತಗ್ಗಿಸುವಂತೆ ಮಾಡಿದ್ದವು. ಇಂತಹ ಪ್ರಕರಣಗಳು ಪದೇ ಪದೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಾವಿರಾರು ಗಾಯಾಳುಗಳ ನೆರವಿಗೆ ಧಾವಿಸಿರುವ ಸುಬ್ರೊತೊ ದಾಸ್ ನಿಜಕ್ಕೂ ನಮಗೆ ಮಾದರಿಯಲ್ಲವೇ?

ಸುಬ್ರೊತೊ ದಾಸ್ ಅವರ ಈ ಅಮೂಲ್ಯ ಸೇವೆ ಆರಂಭವಾಗಿದ್ದು ಹೇಗೆ? ಅವರ ಸೇವೆ ಎಷ್ಟರ ಮಟ್ಟಿಗೆ ಪ್ರಯೋಜನವಾಗಿದೆ? ಅದು ಹೇಗೆ ಇತರೆ ರಾಜ್ಯಗಳಲ್ಲೂ 108 ಸೇವೆ ಆರಂಭವಾಗಲು ನೆರವಾಯಿತು? ಎಂಬ ಹಾದಿಯನ್ನು ನೋಡೋಣ ಬನ್ನಿ…

ಅದು 1999ನೇ ಇಸವಿ ಹೆದ್ದಾರಿಯಲ್ಲಿ ಸುಬ್ರೊತೊ ದಾಸ್ ಪತ್ನಿ ಹಾಗೂ ಸ್ನೇಹಿತನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರಿಗೂ ತುಂಬಾ ಗಾಯಗಳಾದವು. ಕಾರಿನಿಂದ ಹೊರಬರುಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ನೂರಾರು ವಾಹನಗಳಿಗೆ ಕೈಬೀಸಿ ನೆರವು ಕೇಳಿದರು. ಆದರೂ ಯಾರೊಬ್ಬರು ಇವರ ನೆರವಿಗೆ ಬರಲಿಲ್ಲ. ಹೀಗೆ ಸುದೀರ್ಘ 7 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಯಾರ ನೆರವು ಸಿಗದೇ ಪರದಾಟ ನಡೆಸಿದ ಸುಬ್ರೊತೊ ಅವರಿಗೆ ಎತ್ತಿನಗಾಡಿಯಲ್ಲಿ ಬಂದ ಒಬ್ಬ ವ್ಯಕ್ತಿ ಆಸರೆಯಾದ. ಆತ ಇವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದ.

ಈ ಘಟನೆಯ ನಂತರ ‘ನನಗೆ ಬಂದ ಸ್ಥಿತಿ ಮತ್ತೆ ಯಾರಿಗೂ ಬರಬಾರದೆಂದು’ ಎಂದು ನಿರ್ಧರಿಸಿದ ಸುಬ್ರೊತೊ ದಾಸ್ ಲೈಫ್ ಲೈನ್ ಫೌಂಡೇಶನ್ ಎಂಬ ಎನ್ಜಿಒ ಸ್ಥಾಪಿಸಿ, ಅಹ್ಮದಾಬಾದ್ ಹಾಗೂ ಸೂರತ್ ಹೆದ್ದಾರಿಯಲ್ಲಿ ವೈದ್ಯಕೀಯ ಸೇವೆಯ ವ್ಯವಸ್ಥೆ ಕಲ್ಪಿಸಿದರು, ಈ ಹೆದ್ದಾರಿಯಲ್ಲಿ ಯಾರೇ ರಸ್ತೆ ಅಪಘಾತದಲ್ಲಿ ಸಿಲುಕಿದರು ಇವರ ಸಹಾಯವಾಣಿಗೆ (9825026000) ಕರೆ ಮಾಡಿದರೆ ಸಾಕು, 40 ನಿಮಿಷಗಳ ಒಳಗಾಗಿ ಆ್ಯಂಬುಲೆನ್ಸ್ ಗಾಯಾಳುಗಳ ನೆರವಿಗೆ ಧಾವಿಸಿ ಅಗತ್ಯ ಚಿಕಿತ್ಸೆ ನೀಡುತ್ತಿತ್ತು. ಈ ಕಾರ್ಯಕ್ಕಾಗಿಯೇ ನುರಿತರ ತಂಡವನ್ನು ಕಟ್ಟಿದ್ದರು ಸುಬ್ರೊತೊ ದಾಸ್. ಆರಂಭದಲ್ಲಿ ಕೇವಲ ಅಹಮದಾಬಾದ್ ಹೆದ್ದಾರಿಗೆ ಮಾತ್ರ ಸೀಮಿತವಾಗಿದ್ದ ಇವರ ಈ ಸೇವೆ ನಂತರ ಮಹಾರಾಷ್ಟ್ರ, ಕೇರಳ, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಮಾರು 4 ಸಾವಿರ ಕಿ.ಮಿ ಉದ್ದಕ್ಕೂ ವಿಸ್ತರಿಸಿತ್ತು.

ಆರಂಭದಲ್ಲಿ ಆ್ಯಂಬುಲೆನ್ಸ್ ಮೂಲಕ ಸೇವೆ ಒದಗಿಸುತ್ತಿದ್ದ ಸುಬ್ರೊತೊ ದಾಸ್ 2002ರಲ್ಲಿ ತಮ್ಮ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಆ್ಯಬುಲೆನ್ಸ ಜತೆಗೆ ಅಗ್ನಿಶಾಮಕ ದಳ ಹಾಗೂ ಕ್ರೇನ್ ಗಳ ಸಂಪರ್ಕವನ್ನು ಸಾಧಿಸಿ ದೊಡ್ಡ ಅಪಘಾತವಾದರೂ ನೆರವಿಗೆ ಧಾವಿಸಲು ನಿರ್ಧರಿಸಿದರು. ನಂತರ ಎಲ್ಲಾ ರಾಜ್ಯಗಳಿಗೂ ತಮ್ಮ ಸೇವೆ ವಿಸ್ತರಿಸಬೇಕು ಹಾಗೂ ಎಲ್ಲ ಕಡೆಗೂ ಒಂದೇ ಸಹಾಯವಾಣಿ ಸಂಖ್ಯೆ ಹೊಂಬೇಕೆಂಬ ಗುರಿ ಇಟ್ಟುಕೊಂಡರು. ಈ ವೇಳೆ ಕಾರ್ಪೊರೇಟ್ ಸಂಸ್ಥೆಗಳು ಸರ್ಕಾರಿ ಅಧಿಕಾರಿಗಳು ಇವರ ಈ ಸೇವೆಗೆ ಕೈ ಜೋಡಿಸಿದರು. ಪರಿಣಾಮವಾಗಿ 2007ರಲ್ಲಿ ಗುಜರಾತಿನಲ್ಲಿ ತುರ್ತು ವೈದ್ಯಕೀಯ ಸೇವೆ ಕಾಯ್ದೆ ಜಾರಿಗೆ ತರಲಾಯಿತು. ಆ ಮೂಲಕ ಗುಜರಾತಿನಲ್ಲಿ 108 ಸಹಾಯವಾಣಿ ಆರಂಭಿಸಿ ತುರ್ತು ವೈದ್ಯಕೀಯ ಸೇವೆ ಆರಂಭಿಸಲಾಯಿತು. ಈ ಸೇವೆ ಇತರೆ ರಾಜ್ಯಗಳಲ್ಲೂ ಜಾರಿಯಾಗಬೇಕು ಎಂಬ ಉದ್ದೇಶದಿಂದ ಆಯಾ ರಾಜ್ಯಗಳ ಸರ್ಕಾರದ ಜತೆ ಮಾತನಾಡಿದರು. ಅದರ ಪರಿಣಾಮವಾಗಿ ಇಂದು ದೇಶದ 26 ರಾಜ್ಯಗಳಲ್ಲಿ 108 ಸೇವೆ ಜಾರಿಯಲ್ಲಿದೆ.

ಹೀಗೆ ರಸ್ತೆ ಅಪಘಾತದಲ್ಲಿ ಸಿಲುಕಿದವರ ನೆರವಿಗಾಗಿ ಸುದೀರ್ಘ ಶ್ರಮವಹಿಸಿದ ಸುಬ್ರೊತೊ ರಾವ್ ನಮ್ಮ ಮುಂದೆ ನಿಜವಾದ ಹಿರೋ ಆಗಿ ನಿಲ್ಲುತ್ತಾರೆ.

Leave a Reply