ವಿದೇಶಿ ಸಾಲಕ್ಕೆ ದೇಶಿ ಮಸಾಲ!

 

authors-rangaswamyಬಿಸಿ ಬಿಸಿ ಮಸಾಲಾ ಬಾಂಡ್ !

ಈ ಬಾರಿಯ ಬಜೆಟ್ ನಲ್ಲಿ ಮಸಾಲಾ ಬಾಂಡಿಗೆ ಹೆಚ್ಚಿನ ತೆರಿಗೆ ವಿನಾಯತಿ ದೊರೆಯಲಿದೆ ಎಂದು ಓದಿದೆ. ಮಸಾಲಾ ಬಾಂಡ್ ಬಗ್ಗೆ ಒಂದಷ್ಟು ಮಾಹಿತಿ ನೀಡಿ. ಎನ್ನುವ ಮಿಚಂಚೆ ಅನಿವಾಸಿ ಭಾರತೀಯರಿಂದ ಬರಬಹುದು ಎನ್ನುವ ನನ್ನ ಎಣಿಕೆಯ ಸುಳ್ಳು ಮಾಡಿ ಪ್ರಶ್ನೆ ಕೇಳಿದವರು ಮೈಸೂರಿನ ಕೃಷ್ಣಮೂರ್ತಿಯವರು. ಪ್ರಶ್ನೆ ಎಲ್ಲಿಂದಾದರೂ ಬರಲಿ, ಯಾರಾದರೂ ಕೇಳಲಿ ಉತ್ತರ ಹೇಳಲು ಪ್ರಶ್ನೆ ಬೇಕು ಅದು ಬಂದಿದೆ. ಉತ್ತರ ನೋಡಲು ತಡವಿನ್ನೇಕೆ? ಬನ್ನಿ ಮಸಾಲಾ ಬಾಂಡ್ ಸುವಾಸನೆ ಸವಿದೆ ಬಿಡೋಣ!

ಏನಿದು ಮಸಾಲಾ ಬಾಂಡ್? ಮಸಾಲಾ ಹೆಸರೇಕೆ ಈ ಬಾಂಡ್ ಗೆ ಇಟ್ಟರು?

ಮಸಾಲಾ ಬಾಂಡ್ ಎನ್ನುವುದು ರೂಪಾಯಿಯಲ್ಲಿ ಮೌಲ್ಯ ಹೇಳುವ  ಹೊರದೇಶದಲ್ಲಿ ವಿತರಿಸಲು ಹೊರಡಿಸಿದ ಒಂದು ಡೆಟ್ ಬಾಂಡ್. ಅಂದರೆ ಸಾಲಪತ್ರ. ಕಾರ್ಪೊರೇಟ್ ಸಂಸ್ಥೆಗಳು ಸಾಲ ಪಡೆಯಲು ಸಾಮಾನ್ಯವಾಗಿ ಡೆಟ್ ಬಾಂಡ್ ಗಳನ್ನು ವಿತರಿಸುತ್ತವೆ. ಹೂಡಿಕೆದಾರ ಹಣ ಕೊಟ್ಟು ಇಂತಹ ಬಾಂಡ್ ಗಳನ್ನು ಕೊಳ್ಳಬಹುದು. ಆದರೆ ಮಸಾಲಾ ಡೆಟ್ ಬಾಂಡ್ ಸಾಮಾನ್ಯ ಸಾಲ ಪಾತ್ರವಲ್ಲ. ಹೊರದೇಶದ ಮಾರುಕಟ್ಟೆಯಲ್ಲಿ ಮಾತ್ರ ಇವು ಹೂಡಿಕೆಗೆ ಲಭ್ಯ. ಇವುಗಳ ಬೆಲೆಯನ್ನು ರೂಪಾಯಿಯಲ್ಲೇ ನಮೂದಿಸಲಾಗಿರುತ್ತದೆ. ಸಾಮಾನ್ಯವಾಗಿ ಹೊರದೇಶದಲ್ಲಿ ಮಾರಾಟವಾದ ಡೆಟ್ ಬಾಂಡ್ ಅಮೆರಿಕ ಡಾಲರ್ ನಲ್ಲಿ ನಮೂದಿಸಲ್ಪಡುತ್ತದೆ.

ಮಸಾಲಾ ಬಾಂಡ್ ಗಳು ಬರುವುದಕ್ಕೆ ಮುಂಚೆ ವಿದೇಶಿ ಮಾರುಕಟ್ಟೆಯಿಂದ ಸಾಲದ ಪತ್ರದ ಮೂಲಕ ಹಣ ಪಡೆಯಲು ಎಕ್ಸ್ಟರ್ನಲ್ ಕಮರ್ಷಿಯಲ್ ಬೊರೋಯಿಂಗ್ (ECB ) ಮಾರ್ಗವನ್ನು ಅನುಸರಿಸಬೇಕಾಗಿತ್ತು. ಈ ದಾರಿಯಲ್ಲಿ ಸಾಲ ಪಡೆದ ಸಂಸ್ಥೆ ವಿದೇಶಿ ವಿನಿಮಯ ಏರುಪೇರಿಗೆ ಜವಾಬ್ದಾರನಾಗಿತ್ತು. ಮಸಾಲಾ ಬಾಂಡ್ ಗಳಲ್ಲಿ ಈ ತೊಂದೆರೆಯಿಲ್ಲ. ಉದಾಹರಣೆ ನೋಡೋಣ… ಇತರೆ ಸಾಲ ಪತ್ರಗಳಲ್ಲಿ ಮುಖಬೆಲೆ ಡಾಲರಿನಲ್ಲಿ ನಮೂದಿಸಿರುತ್ತದೆ. ಕೊಂಡಾಗ ಡಾಲರ್ ಬೆಲೆ 58 ರೂಪಾಯಿ ಪ್ರತಿ ಡಾಲರಿಗೆ ಎಂದು ಕೊಳ್ಳಿ, ವಾಪಸ್ಸು ಕೊಡುವಾಗ ಡಾಲರ್ ಬೆಲೆ 62 ರೂಪಾಯಿ ಆಗಿದ್ದರೆ ಪ್ರತಿ ಡಾಲರಿಗೆ ಬಡ್ಡಿಯಲ್ಲದೆ 4 ರೂಪಾಯಿ ಹೆಚ್ಚಿನ ಹಣ ವ್ಯಯವಾಗುತ್ತದೆ ಸಾಲ ಪಡೆದ ಸಂಸ್ಥೆಗೆ. ಮಸಾಲಾ ಬಾಂಡ್ ನಲ್ಲಿ ಇಂತಹ ವಿನಿಮಯ ಏರುಪೇರು ಹೂಡಿಕೆದಾರ ಭರಿಸಬೇಕು. ಅಂದರೆ ಮುಖಬೆಲೆ ಹತ್ತು ಸಾವಿರ ರೂಪಾಯಿ. ಕೊಡುವಾಗ ಹತ್ತು ಸಾವಿರ ಮತ್ತು ಬಡ್ಡಿ ಕೊಡಲಾಗುತ್ತದೆ. ವಿನಿಮಯದ ಲಾಭ ಅಥವಾ ನಷ್ಟ ಹೂಡಿಕೆದಾರನಿಗೆ ಸೇರಿದ್ದು.

ಇಂಟರ್ ನ್ಯಾಷನಲ್ ಫೈನಾನ್ಸಿಯಲ್ ಕಾರ್ಪೋರೇಶನ್ ಎನ್ನುವ ಸಂಸ್ಥೆ ಮೊದಲ ಬಾರಿಗೆ ರುಪೀ ಡಿನೊಮಿನೇಟೆಡ್ ಬಾಂಡ್ ಅನ್ನು 2013 ರಲ್ಲಿ ಬಿಡುಗಡೆ ಮಾಡಿದೆ. ಲಂಡನ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ನೊಂದಾವಣಿಗೊಂಡ ರುಪಾಯಿಯಲ್ಲಿ ನಮೂದಿತ ಪ್ರಥಮ ಬಾಂಡ್ ಎನ್ನುವ ಹೆಗ್ಗಳಿಕೆ ಮಸಾಲಾ ಬಾಂಡ್ ಗೆ ಸಿಕ್ಕಿದೆ. ಭಾರತ ಚರಿತ್ರೆಯಲ್ಲಿ ಮಸಾಲೆ ಪದಾರ್ಥಕ್ಕೆ ಹೆಚ್ಚು ಹೆಸರುವಾಸಿಯಾಗಿತ್ತು ಹೀಗಾಗಿ ಈ ಬಾಂಡ್ ಭಾರತದ್ದು ಎಂದು ಹೂಡಿಕೆದಾರರಿಗೆ ಸುಲಭವಾಗಿ ತಿಳಿಯಲಿ ಎನ್ನುವ ಉದ್ದೇಶದಿಂದ ಮಸಾಲಾ ಬಾಂಡ್ ಎಂದು ಹೆಸರಿಸಿದ್ದಾರೆ. ಈ ಬಾಂಡ್ ಗೂ ಮಸಾಲೇ ಪದಾರ್ಥಕ್ಕೂ ಏನೂ ಸಂಬಂಧವಿಲ್ಲ. ಈ ರೀತಿ ಆಯಾ ದೇಶದ ಸಂಸ್ಕೃತಿ ಅಥವಾ ಚರಿತ್ರೆ ಬಿಂಬಿಸುವ ಹೆಸರಿಟ್ಟಿರುವುದು ಇದೆ ಮೊದಲೇನಲ್ಲ. ‘ಡಿಮ್ ಸುಮ್’ ಎನ್ನುವುದು ಚೀನಾ ದೇಶದ ಒಂದು ಪ್ರಸಿದ್ಧ ಖಾದ್ಯ. ಇದರ ಹೆಸರಿನ ಡಿಮ್ ಸುಮ್ ಬಾಂಡ್ ಗಳು ಮಾರಾಟಕ್ಕಿವೆ. ಹಾಗೆಯೇ ಜಪಾನಿನ ಯೋಧನ ಸಮುರಾಯ್ ಹೆಸರಿನ ಬಾಂಡ್ ಗಳು ಕೂಡ ಮಾರುಕಟ್ಟೆಯಲ್ಲಿ ಹೂಡಿಕೆಗೆ ಲಭ್ಯವಿದೆ.

hana class

ಬಜೆಟ್ ನಲ್ಲಿ Masala bonds to get more tax benefits ಎಂದಿದ್ದಾರೆ. ಹೌದು, ಈ ರೀತಿಯ ತೆರಿಗೆಯಲ್ಲಿ ಕಡಿತ ಮಾಡಿರುವುದು ಮಸಾಲಾ ಬಾಂಡ್ ಅನ್ನು ಇನ್ನೂ ಹೆಚ್ಚು ಆಕರ್ಷಕ ಡೆಟ್ ಬಾಂಡ್ ಮಾಡುವಲ್ಲಿ ಸಫಲವಾಗುತ್ತದೆ. ಹಿಂದೆ ಹೂಡಿಕೆದಾರ ಮಸಾಲಾ ಬಾಂಡ್ ಮೇಲೆ ಹೂಡಿದ ಹಣದ ಮೇಲೆ ಗಳಿಸಿದ ಬಡ್ಡಿ ಹಣಕ್ಕೆ ಶೇ.20 ರಷ್ಟು ತೆರಿಗೆ ಕಟ್ಟಬೇಕಾಗಿತ್ತು. ಅದನ್ನು ಈಗ ಶೇ.5 ಕ್ಕೆ ಇಳಿಸಲಾಗಿದೆ. ಈ ಹೇಳಿಕೆ ಹೊರಬಿದದ್ದು ಫೆಬ್ರವರಿ 1, 2017, ಆದರೆ ತೆರಿಗೆಯಲ್ಲಿ ಕಡಿತ 1 ಏಪ್ರಿಲ್ 2016 ರಿಂದ ಜಾರಿಗೆ ಬರುವಂತೆ ಸೂಚನೆ ಹೊರಡಿಸಲಾಗಿದೆ.  ಅಷ್ಟೇ ಅಲ್ಲದೆ ಈ ರೀತಿಯ ಸೌಲಭ್ಯ ಜೂನ್ 2017 ರ ವರೆಗೆ ಮಾತ್ರ ಲಭ್ಯವಿತ್ತು. ಅದನ್ನು ಜೂನ್ 2020 ವರೆಗೆ ಮುಂದುವರಿಸುವುದಾಗಿ ಕೂಡ ಈ ಬಜೆಟ್ ನಲ್ಲಿ ಘೋಷಿಸಲಾಗಿದೆ.

ಈ ರೀತಿಯ ಬಾಂಡ್ ವಿದೇಶಿ ಮಾರುಕಟ್ಟೆಯಲ್ಲಿ ಯಾರು ಬೇಕಾದರೂ ಕೊಳ್ಳಬಹದು. ಆದರೆ ಇಂತಹ ಬಾಂಡ್ ಅನ್ನು ಅನಿವಾಸಿ ಭಾರತೀಯನಿಗೆ ವರ್ಗಾಯಿಸಿದರೆ ಅಂತಹ ವರ್ಗಾವಣೆ ಮೇಲಿನ ಲಾಭಕ್ಕೆ ತೆರಿಗೆ ವಿನಾಯ್ತಿ ನೀಡಲು ನಿರ್ಧರಿಸಿದೆ. ಅಲ್ಲದೆ ಒಬ್ಬ ಅನಿವಾಸಿ ಭಾರತೀಯನಿಂದ ಇನ್ನೊಬ್ಬ ಅನಿವಾಸಿ ಭಾರತೀಯನಿಗೆ ವರ್ಗಾವಣೆ ಆದರೆ ಅದನ್ನು ವರ್ಗಾವಣೆ ಎಂದು ಪರಿಗಣಿಸದಿರಲು ಕೂಡ ನಿರ್ಧರಿಸಲಾಗಿದೆ ಆದರೆ ಇದು 1 ಏಪ್ರಿಲ್ 2018 ರಿಂದ ಜಾರಿಗೆ ಬರಲಿದೆ.

ಮಸಾಲ ಬಾಂಡ್ ಮಾರಿ ಪಡೆಯುವ ಹಣ (ಸಾಲ) ಸಂಸ್ಥೆಯೊಂದು ವರ್ಷಕ್ಕೆ 750 ಮಿಲಿಯನ್ ಅಮೆರಿಕನ್ ಡಾಲರ್ ಮೀರಬಾರದು. ಇಂತಹ ಬಾಂಡ್ ಗಳು ಐದು ವರ್ಷದ ಅವಧಿಗೆ ವಿತರಿಸಲ್ಪಡುತ್ತವೆ.

ಮಸಾಲಾ ಬಾಂಡ್ ವಿತರಿಸುವದರಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ವಿನಿಮಯ ಏರುಪೇರಿನ ತೊಂದರೆಯಿಲ್ಲದೆ ಸಾಲ ಸಿಕ್ಕುವುದಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿಯನ್ನು ಬೇರೆ ಹಣಕ್ಕೆ ಪರಿವರ್ತಿಸಿ ಮೌಲ್ಯ ಹೇಳದೆ ರೂಪಾಯಿಯಲ್ಲೇ ವ್ಯವಹರಿಸಲು ಮತ್ತು ರೂಪಾಯಿ ಒಂದು ಅಂತರರಾಷ್ತ್ರೀಯ ಸಮುದಾಯ ಒಪ್ಪುವ ಹಣ ಎಂದು ಬಿಂಬಿಸಲು ಇಟ್ಟ ಹೆಜ್ಜೆ ಕೂಡ ಆಗಿದೆ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಅದೇಕೆ ಒಂದು ರುಪಾಯಿಗೆ ಒಂದು ಡಾಲರ್ ಸಮವಲ್ಲ? ಸರ್ಕಾರಗಳಿಗೆ ಹಣದ ಕೊರತೆಯಾದರೆ ಹೆಚ್ಚು ನೋಟುಗಳನ್ನು ಮುದ್ರಿಸಿದರಾಗದೇ? .. ಈ ಮಾದರಿಯ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಕೇಳುವುದಕ್ಕೆ ಮುಜುಗರವೂ ಆಗಿದ್ದಿರಬಹುದು. ಅಂಥ ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply