ಭಾರತದಲ್ಲಿ ರೈಲ್ವೇ ವಿಧ್ವಂಸಕ್ಕೆ ಸಂಚು ರೂಪಿಸಿದ್ದ ಐಎಸ್ಐ ಬೆಂಬಲಿತ ಶಂಸುಲ್ ಹೂಡಾ ಬಂಧನ

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ರೈಲ್ವೇ ಹಳಿಗಳಲ್ಲಿ ಐಇಡಿ ಬಾಂಬ್ ಅಳವಡಿಸಿ ಅಪಘಾತ ಹಾಗೂ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐಎಸ್ಐ ಉಗ್ರ ಸಂಘಟನೆ ಬೆಂಬಲಿತ ಮಾಸ್ಟರ್ ಮೈಂಡ್ ಶಂಸುಲ್ ಹೂಡಾನನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ.

ದುಬೈನಿಂದ ಗಡಿಪಾರು ಮಾಡಿದ ನಂತರ ನೇಪಾಳಕ್ಕೆ ತೆರಳಿದ್ದ ಶಂಸುಲ್ ನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಈತನ ಬಂಧನದ ವಿಷಯವನ್ನು ರಾಷ್ಟ್ರೀಯ ತನಿಖಾ ದಳ ಖಚಿತಪಡಿಸಿದ್ದು, ಈತನ ಬಂಧನದಿಂದ ಮೂರು ಪ್ರಮುಖ ಪ್ರಕರಣಗಳ ವಿಚಾರಣೆಯಲ್ಲಿ ಮಹತ್ವದ ಮೇಲುಗೈ ಸಾಧಿಸಿದಂತಾಗಿದೆ. ಇತ್ತೀಚೆಗೆ ಈಸ್ಟ್ ಚಂಪಾರನ್ ನಲ್ಲಿ ರಲ್ವೇ ಹಳಿಗಳಲ್ಲಿ ಐಇಡಿ ಬಾಂಬ್ ಅಳವಡಿಸುವ ವಿಫಲ ಪ್ರಯತ್ನ, ಕಾನ್ಪುರದಲ್ಲಿನ ಇಂಧೋರ್ ಪಾಟ್ನಾ ಎಕ್ಸ್ ಪ್ರೆಸ್ ರೈಲ್ವೇ ಅಪಘಾತ ಹಾಗೂ ಕೊನೆರು ರೈಲ್ವೇ ಅಪಘಾತದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ. ಈಗಾಗಲೇ ನೇಪಾಳ ಪೊಲೀಸರ ಜತೆ ಸಂಪರ್ಕ ಸಾಧಿಸಿರುವ ಎನ್ಐಎ ಅಧಿಕಾರಿಗಳು ಶಂಸುಲ್ ನನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿದ್ದಾರೆ. ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಈತನಿಗೆ ಐಎಸ್ಐ ಉಗ್ರ ಸಂಘಟನೆ ಬೆಂಬಲ ನೀಡುತ್ತಿತ್ತು ಎಂಬ ಮಾಹಿತಿಯೂ ದೊರೆತಿದೆ.

ಇನ್ನು ಘೊರಸಹನ್ ಟ್ರ್ಯಾಕ್ ಸ್ಫೋಟ ಮಾಡುವ ಪ್ರಯತ್ನದಲ್ಲಿ ವಿಫಲವಾಗಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೊತಿಲಾಲ್ ಪಾಸ್ವಾನ್, ಉಮಾಶಂಕರ್ ಪಟೇಲ್ ಮತ್ತು ಮುಖೇಶ್ ಯಾದವ್ ಅವರನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈ ಎಲ್ಲ ಪ್ರಕರಣಗಳಲ್ಲೂ ಒಂದೇ ರೀತಿಯ ಸಂಚು ರೂಪಿತವಾಗಿರುವುದರಲ್ಲಿ ಅನುಮಾನವಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇನ್ನು ಈ ದಾಳಿಗಳಲ್ಲಿ ಭಾಗಿಯಾಗಿದ್ದ ನೇಪಾಳದ ಬ್ರಿಜ್ ಕಿಶೋರ್ ಗಿರಿ ಹಾಗೂ ಇತರೆ ಇಬ್ಬರು ಆರೋಪಿಗಳನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಇನ್ನು ಬಿಹಾರ ಪೊಲೀಸರು ಬಂಧಿಸಿದ್ದ ಉಮಾಶಂಕರ್, ದುಬೈನಲ್ಲಿದ್ದ ಶಂಸುಲ್ ಹಾಗೂ ಕರಾಚಿ ಮೂಲದ ಐಎಸ್ಐ ವ್ಯಕ್ತಿ ಶಫಿ ಶೇಖ್ ಜತೆ ದೂರವಾಣಿ ಸಂಪರ್ಕದಲ್ಲಿದ್ದ. ಈ ಇಬ್ಬರು ನೇಪಾಳದಲ್ಲಿದ್ದ  ಕಿಶೋರ್ ಗಿರಿ ಜತೆ ಸಂಪರ್ಕ ಹೊಂದಿದ್ದರು.

‘ಬಿಹಾರ ಪೊಲೀಸರ ವಿಚಾರಣೆ, ಕೇಂದ್ರ ತನಿಖಾ ದಳದ ವಿಚಾರಣೆಯಲ್ಲಿ ತಿಳಿದು ಬಂದಿರುವ ಮಾಹಿತಿಗಳು ಒಂದೇ ರೀತಿ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಬಂಧಿತರಾಗಿರುವ ಮೂವರು ಆರೋಪಿಗಳು ಮತ್ತು ನೇಪಾಳದಿಂದ ಈ ಸಂಚು ನಿರ್ವಹಿಸುತ್ತಿದ್ದ ಬ್ರಿಜ್ ಕಿಶೋರ್ ಗಿರಿ ಹಾಗೂ ಶಂಸುಲ್ ಹೂಡಾ ಹಾಗೂ ಶಫಿ ಶೇಖ್ ಅವರು ಸಂಪರ್ಕ ಸಾಧಿಸಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದ್ದು, ಇದರಲ್ಲಿ ಐಎಸ್ಐನ ಪಾತ್ರವಿರುವುದು ಗೊತ್ತಾಗುತ್ತದೆ. ಇವರು ಐಇಡಿ ಬಾಂಬ್ಗಳನ್ನು ಬಳಸಿ ರೈಲ್ವೇ ಅಪಘಾತವಾಗುವಂತೆ ಮಾಡಲು ಸಂಚು ರೂಪಿಸುವ ಬಗ್ಗೆ ಚರ್ಚೆ ಮಾಡಿದ್ದರು. ಇವರು ಈ ಅಪಘಾತದ ಬಗ್ಗೆ ಚರ್ಚೆ ನಡೆಸಿದ್ದು, ಘೊರಸಹನ್ ಹಾಗೂ ಕಾನ್ಪುರದ ರೈಲ್ವೇ ಅಪಘಾತದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ’ ಎಂದು ಗೃಹ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply