ರಾಹುಲ್ ಗಾಂಧಿಯನ್ನು ಗೇಲಿ ಮಾಡಿ, ಖರ್ಗೆಯ ‘ನಾಯಿ’ ಹೇಳಿಕೆಗೆ ಕಟು ಉತ್ತರ ನೀಡಿದ ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ‘ಭೂಕಂಪ’ದ ಹೇಳಿಕೆ, ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ ಸಂಸತ್ತಿನಲ್ಲಿ ‘ನಿಮ್ಮ ಪಕ್ಷದಿಂದ ದೇಶಕ್ಕಾಗಿ ಒಂದೇ ಒಂದು ನಾಯಿಯೂ ಸತ್ತಿಲ್ಲ’ ಎಂಬ ಹೇಳಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ತಿನಲ್ಲಿ ಉತ್ತರ ಕೊಟ್ಟಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷದ ಆರೋಪಗಳಿಗೆ ತಮ್ಮ ತೀಕ್ಷ್ಣ ಹಾಗೂ ಲೇವಡಿಯ ಮಾತುಗಳಿಂದಲೇ ಏಟು ಕೊಟ್ಟರು. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಪ್ರಸ್ತಾಪಿಸಿದ್ದ ಬೇನಾಮಿ ಆಸ್ತಿ ಕಾನೂನನ್ನು ಕಾಂಗ್ರೆಸ್ ಜಾರಿ ಮಾಡದ ಬಗ್ಗೆ ಪ್ರಶ್ನಿಸುವುದರ ಜತೆಗೆ, ಬಿಜೆಪಿ ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಕಾರ್ಯಗಳನ್ನು ಸಮರ್ಥಿಸಿಕೊಂಡರು.

ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದ ಪ್ರಮುಖ ಅಂಶಗಳು ಹೀಗಿವೆ ನೋಡಿ…

‘ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ… ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶ ಕೊಟ್ಟು ಉತ್ತಮ ಸಲಹೆಗಳನ್ನು ನೀಡಿರುವ ಎಲ್ಲ ಸಂಸದರಿಗೂ ಧನ್ಯವಾದ ಅರ್ಪಿಸುತ್ತೇನೆ…

  • ದೇಶದಲ್ಲಿ ಭೂಕಂಪ ಆಗುವುದಾಗಿ ಹೇಳಲಾಗಿತ್ತು, ಆ ಭೂಕಂಪ ಹೇಗೆ ಸಂಭವಿಸುತ್ತದೇ ಎಂದು ಕಾಯುತ್ತಿದ್ದೆ? ಕಡೆಗೂ ನಿನ್ನೆ ರಾತ್ರಿ ಉತ್ತರಾಖಂಡದಲ್ಲಿ ಭೂಕಂಪ ಸಂಭವಿಸಿದೆ. ಅದರ ಅರ್ಥ ಭೂ ತಾಯಿ ನಮ್ಮ ಮೇಲೆ ಕೋಪಗೊಂಡಿದ್ದಾಳೆ. ದೇಶದಲ್ಲಿ ಕೆಲವರು ಹಗರಣಗಳನ್ನು ಜನರ ಸೇವೆ ಎಂದು ಭಾವಿಸಿದ್ದರಿಂದ ಭೂತಾಯಿ ಕೋಪಗೊಂಡಿದ್ದಾಳೆ. ಉತ್ತರಾಖಂಡದಲ್ಲಿ ಭೂಕಂಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ನೆರವು ನೀಡಲು ಸಿದ್ಧವಿದ್ದು, ರಾಜ್ಯ ಸರ್ಕಾರದ ಜತೆಗೆ ನಿರಂತರ ಸಂಪರ್ಕದಲ್ಲಿದೆ.

ಹಿನ್ನೆಲೆ- SCAM ಎಂದರೆ ಸೇವೆ, ಕರೇಜ್, ಆ್ಯಬಿಲಿಟಿ, ಮಾಡೆಸ್ಟಿ ಎಂದೆಲ್ಲ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದರು. ಅದಕ್ಕೂ ಮೊದಲು ಸ್ಕ್ಯಾಮ್ ಎಂದರೆ ಸಮಾಜವಾದಿ, ಕಾಂಗ್ರೆಸ್, ಅಖಿಲೇಶ್, ಮಾಯಾವತಿ ಅಂತ ಮೋದಿ ವ್ಯಾಖ್ಯಾನಿಸಿದ್ದರು.

ಪ್ರಧಾನಿ ಮನೆತನದ ಒಂದು ನಾಯಿಯೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಒಂದೇ ವಾಕ್ಯದಲ್ಲಿ ಪ್ರತಿಕ್ರಿಯಿಸಿದ ಮೋದಿ- ನಾವು ಈ ನಾಯಿ ನಿಂದನೆಯ ಸಂಸ್ಕಾರದಿಂದ ಬಂದವರಲ್ಲ ಎಂದರು.

ಕಾಂಗ್ರೆಸ್ ನಿಂದಲೇ ದೇಶದಲ್ಲಿ ಪ್ರಜಾಪ್ರಭುತ್ವ ಹುಟ್ಟಿಕೊಂಡಿರುವುದು ಹಾಗೂ ನಾನು ಪ್ರಧಾನಿಯಾಗಿರುವುದಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದರು. ಆದರೆ ವಾಸ್ತವದ ಸ್ಥಿತಿ ಏನು ಎಂಬುದು ಜನರಿಗೆ ಗೊತ್ತಿದೆ. ದೇಶದ ಇತಿಹಾಸವನ್ನು ಕೇವಲ ಪುಸ್ತಕಗಳಲ್ಲಿ ತಿರುಚಿದರೆ ಆಗುವುದಿಲ್ಲ. ಅದು ಸಮಾಜದ ಮೇಲೆ ಪ್ರಭಾವ ಬೀರುವುದಿಲ್ಲ. ಕಾಂಗ್ರೆಸ್ ಹುಟ್ಟುವುದಕ್ಕೂ ಮುನ್ನವೇ ದೇಶಕ್ಕಾಗಿ ಅನೇಕರು ಪ್ರಾಣ ತೆತ್ತಿದ್ದಾರೆ. ದೇಶದಲ್ಲಿ ಕಮಲ ಆಗಲೂ ಇತ್ತು, ಈಗಲೂ ಇದೆ…. ಸ್ವಾತಂತ್ರ ಹೋರಾಟದಲ್ಲಿ ದೇಶಕ್ಕಾಗಿ ಪ್ರಾಣ ಬಿಡಲು ಸಾಧ್ಯವಾಗದೇ ಇರುವ ನನ್ನಂತಹ ಮಂದಿ ಸಾಕಷ್ಟಿದ್ದಾರೆ. ಆದರೆ ಅವರೆಲ್ಲರೂ ದೇಶಕ್ಕಾಗಿ ಬದುಕುತ್ತಿದ್ದು, ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದವರು ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಕೇವಲ ಒಂದು ಕುಟುಂಬದಿಂದ ಮಾತ್ರ ಎಂದು ಭಾವಿಸಿದ್ದಾರೆ. ಹೀಗಾಗಿ ಅವರು ವೀರ್ ಸಾವರ್ಕರ್ ಅಥವಾ ಭಗತ್ ಸಿಂಗರ ಬಗ್ಗೆ ಮಾತನಾಡುವುದೇ ಇಲ್ಲ. ದೇಶದಲ್ಲಿ ಬಡತನ ನಿರ್ಮೂಲನೆ ಬಗ್ಗೆ ಸರ್ಕಾರದ ಹೋರಾಟವನ್ನು ನಾನು ಈ ಹಿಂದೆಯೇ ವಿವರಿಸಿದ್ದೇನೆ. ದೇಶಕ್ಕೆ ಕೆಟ್ಟದಾಗಲಿ ಎಂದು ಯಾರು ಬಯಸುವುದಿಲ್ಲ. ಬಡವರ ಉದ್ಧಾರವನ್ನು ಎಲ್ಲರೂ ಬಯಸುತ್ತಾರೆ. ಹೀಗಾಗಿ ನಾವು ಅವರ ಶಕ್ತಿಯನ್ನು ಅರಿಯಬೇಕಿದೆ. ಹೀಗಾಗಿ ನನಂತಹ ಸಾಮಾನ್ಯ ಜನ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಬಿಡಲು ಸಾಧ್ಯವೇ ಎಂದು ಕೇಳಿದೆ. 1.2 ಕೋಟಿ ಜನರು ಮುಂದೆ ಬಂದು ತಮ್ಮ ಸಬ್ಸಿಡಿಯನ್ನು ಬಿಟ್ಟುಕೊಟ್ಟರು.

ಸದನದಲ್ಲಿ ಕೇವಲ ಗಾಂಧಿ ಅವರ ಹೆಸರನ್ನು ಬಳಸುವ ಬದಲು ಸದನದಲ್ಲಿ ಸ್ವಚ್ಛತೆಯ ಬಗ್ಗೆ ಚರ್ಚಿಸಬಹುದಲ್ಲವೇ. ಸ್ವಚ್ಛತೆಯ ವಿಷಯದಲ್ಲೂ ರಾಜಕೀಯ ಮಾಡಲು ಸಾಧ್ಯವೇ? ಇವೆಲ್ಲವನ್ನು ಬದಿಗಿಟ್ಟು ಗಾಂಧಿ ಅವರ ಕನಸನ್ನು ನನಸು ಮಾಡುವತ್ತ ಹೆಜ್ಜೆ ಹಾಕಬೇಕಲ್ಲವೇ?

ದೇಶದ ಆರ್ಥಿಕ ಚಟುವಟಿಕೆ ರೈತರನ್ನು ಅವಲಂಬಿಸಿದೆ. ರೈತರು ಜೂನ್ ತಿಂಗಳಲ್ಲಿ ಮಳೆ ಬಂದ ನಂತರ ಕೃಷಿ ಚಟುವಟಿಕೆ ಆರಂಭಿಸುತ್ತಾರೆ. ಹೀಗಾಗಿ ಬಜೆಟ್ ನಲ್ಲಿ ಮಂಡಿಸಿದ ಯೋಜನೆಗಳನ್ನು ಜಾರಿಗೊಳಿಸಲು ಸಮಯದ ಕೊರತೆ ಎದುರಾಗುವುದರಿಂದ ಬಜೆಟ್ ಅನ್ನು ಮುಂಚಿತವಾಗಿಯೇ ಮಂಡಿಸಲಾಗಿದೆ. ಈ ಹಿಂದೆ ಇದ್ದ ಸಾರಿಗೆ ವ್ಯವಸ್ಥೆಯೇ ಬೇರೆ ಈಗಿನ ವ್ಯವಸ್ಥೆಯೇ ಬೇರೆಯಾಗಿದೆ. ಹೀಗಾಗಿ ರೈಲ್ವೇ ಬಜೆಟ್ ಅನ್ನು ಸಾಮಾನ್ಯ ಬಜೆಟ್ ಜತೆ ಸೇರಿಸಲಾಯಿತು.

1988 ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿಯಾದಾಗ ಕಾಂಗ್ರೆಸ್ ಬಹುಮತ ಪಡೆದಿತ್ತು. ಆಗ ಬೇನಾಮಿ ಆಸ್ತಿಯ ಬಗ್ಗೆ ಒಂದು ಕಾನೂನು ರೂಪಿಸಿದಿರಿ. ಆದರೆ ಅದನ್ನು ಪರಿಗಣಿಸಲು ನಿಮಗೆ 24 ವರ್ಷ ಸಮಯ ಬೇಕಾಗಿದ್ದು ಏಕೆ? ಈ ಸದನದ ಮೂಲಕ ನಾನು ಎಲ್ಲರಿಗೂ ಹೇಳಲು ಇಚ್ಛಿಸುತ್ತೇನೆ. ನೀವು ಎಷ್ಟೇ ದೊಡ್ಡ ವ್ಯಕ್ತಿಯಾಗಿರಿ, ಬಡವರ ಹಕ್ಕನ್ನು ನೀವು ವಾಪಸ್ ನೀಡಲೇ ಬೇಕು. ನಾವು ಚುನಾವಣೆ ಬಗ್ಗೆ ಚಿಂತಿಸುವುದಿಲ್ಲ, ದೇಶದ ಬಗ್ಗೆ ಚಿಂತಿಸುತ್ತೇವೆ. ಆದರೆ ಕಾಂಗ್ರೆಸ್ ಕೇವಲ ಚುನಾವಣೆ ಬಗ್ಗೆ ಮಾತ್ರ ಚಿಂತಿಸುತ್ತದೆ.

ನೋಟು ಅಮಾನ್ಯ ಮಾಡಲು ಇದು ಸೂಕ್ತ ಸಮಯ. ಗಂಭೀರ ಕಾಯಿಲೆ ಬಂದರೆ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡುತ್ತಾರೆ. ಶಸ್ತ್ರ ಚಿಕಿತ್ಸೆಗೂ ಮೊದಲು ಅದನ್ನು ತಾಳಿಕೊಳ್ಳುವುದಕ್ಕೆ ದೇಹದ ಸ್ಥಿತಿ ಉತ್ತಮವಾಗಿರಬೇಕಾಗುತ್ತದೆ. ಹೀಗಾಗಿ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವಾಗಲೇ ನೋಟು ಅಮಾನ್ಯ ನಿರ್ಧಾರ ಸೂಕ್ತವಾಗಿದೆ. ಈಗ ಎಲ್ಲ ಹಣವೂ ದಾಖಲೆಯಲ್ಲಿರುತ್ತದೆ. ತೆರಿಗೆ ಅಧಿಕಾರಿಗಳು ಎಲ್ಲಿಯೂ ಹೋಗಬೇಕಾಗಿಲ್ಲ.

ಇನ್ನು ಖರ್ಗೆಯವರು ಹೇಳುತ್ತಿದ್ದಾರೆ- ಕಾಳಧನದ ಹೆಚ್ಚಿ ಪ್ರಮಾಣವಿರುವುದು ಬೇನಾಮಿ ಆಸ್ತಿ, ಬಂಗಾರ, ಬೆಳ್ಳಿ ಇತ್ಯಾದಿಗಳಲ್ಲಿ… ಬರೀ ನಗದಿನಲ್ಲಿ ಅಲ್ಲ ಅಂತ. ಖರ್ಗೆಯವರಿಗೆ ಈ ಜ್ಞಾನೋದಯವಾಗಿದ್ದು ಯಾವಾಗ? ಏಕೆಂದರೆ ಪಂಚಾಯ್ತಿಯಿಂದ ಕೇಂದ್ರದವರೆಗೆ ಕಾಂಗ್ರೆಸ್ಸೇ ಅಧಿಕಾರದಲ್ಲಿದ್ದ ದಿನಗಳಲ್ಲಿ ಇವೆಲ್ಲ ತಮಗೆ ಗೊತ್ತಿರಲಿಲ್ಲವೇ? ನಿಯಂತ್ರಣಕ್ಕೆ ಏನು ಮಾಡಿದಿರಿ?  ನಾವು ಬೇನಾಮಿ ಆಸ್ತಿ ಮತ್ತಿತರ ಸಂಪತ್ತುಗಳಲ್ಲಿರುವ ಕಾಳಧನವನ್ನೂ ಹೊರತೆಗೆಯುವುದಕ್ಕೆ ಮುಂದಾಗಿದ್ದೇವೆ.

  • ರಾಜೀವ್ ಗಾಂಧಿ ಅವರು ದೇಶವನ್ನು ಕಂಪ್ಯೂಟರೀಕರಣ ಹಾಗೂ ಮೊಬೈಲ್ ಫೋನುಗಳನ್ನು ತಂದರು ಎಂದು ಕಾಂಗ್ರೆಸ್ ಪಕ್ಷದವರು ಎಲ್ಲ ಸಮಾವೇಶಗಳಲ್ಲೂ ಹೇಳಿಕೊಳ್ಳುತ್ತಾರೆ. ಈಗ ನಾನು ಅದೇ ಮೊಬೈಲ್ ಗಳಿಂದ ಬ್ಯಾಂಕ್ ವ್ಯವಹಾರಗಳನ್ನು ಮಾಡಿ ಎಂದು ಹೇಳಿದರೆ, ಜನರ ಬಳಿ ಮೊಬೈಲ್ ಫೋನುಗಳಿಲ್ಲ ಎಂದು ವಾದಿಸುತ್ತೀರಿ. ದೇಶದಲ್ಲಿ ಕೇವಲ ಶೇ.40 ರಷ್ಟು ಮಂದಿ ಮೊಬೈಲ್ ಫೋನು ಹೊಂದಿದ್ದರೂ ಅವರು ಮೊಬೈಲ್ ಬ್ಯಾಂಕಿಂಗ್ ಮಾಡಬಹುದಲ್ಲವೇ?

ತಂತ್ರಜ್ಞಾನದ ಬಳಕೆಯಿಂದ ಸಾಕಷ್ಟು ಬದಲಾವಣೆ ಕಾಣಬಹುದು. ಹೀಗಾಗಿ ನಾವು ರೈಲ್ವೇಗಳಲ್ಲಿ ಡ್ರೋನ್ ಬಳಸಿದ್ದೇವೆ. ನಿಮ್ಮ ಸರ್ಕಾರದ ಅವಧಿಯಲ್ಲಿ 10,83,000 ಮನೆಗಳನ್ನು ನಿರ್ಮಾಣಮಾಡಲಾಗಿತ್ತು. ಆದರೆ ನಮ್ಮ ಸರ್ಕಾರದಲ್ಲಿ ಒಂದೇ ವರ್ಷದಲ್ಲಿ 22,27,000 ಮನೆಗಳನ್ನು ನಿರ್ಮಿಸಿದ್ದೇವೆ. ನಾವು ಎಲ್ಇಡಿ ಬಲ್ಬ್ ತಂದಿದ್ದೇವೆ ಎಂದು ಹೇಳುವುದಿಲ್ಲ. ಆದರೆ ನಾವು ಕಡಿಮೆ ಅವಧಿಯಲ್ಲಿ 21 ಕೋಟಿ ಎಲ್ಇಡಿ ಬಲ್ಬ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದರಿಂದ ಕುಟುಂಬಗಳು 11 ಸಾವಿರ ಕೋಟಿಯಷ್ಟು ವಿದ್ಯುತ್ ಬಿಲ್ ನಲ್ಲಿ ಉಳಿತಾಯ ಮಾಡಿವೆ.

  • ಈ ಹಿಂದೆ ದೇಶದಲ್ಲಿ ರೈತರಿಗೆ ಯೂರಿಯಾ ಗೊಬ್ಬರ ಕೊರತೆ ಇದೆ ಎಂದು ಎಲ್ಲ ರಾಜ್ಯಗಳು ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದವು. ಆದರೆ, ಈಗ ಒಂದೇ ಒಂದು ರಾಜ್ಯವೂ ಯೂರಿಯಾ ಕೊರತೆ ಬಗ್ಗೆ ಒಂದು ಪತ್ರವನ್ನು ಬರೆಯುತ್ತಿಲ್ಲ. ಹಾಗಂತ ಬೇವು ಲೇಪಿತ ಯೂರಿಯಾದಿಂದ ಅನ್ಯಕಾರ್ಯಕ್ಕೆ ಅದರ ಬಳಕೆ ತಡೆಯಬಹುದೆಂಬ ಜ್ಞಾನ ನಿಮಗೂ ಇತ್ತು. ಆದರೆ ಕಾರ್ಯಪ್ರವೃತ್ತರಾಗಲಿಲ್ಲ. ಕೊನೆಗೆ ಯೂರಿಯಾಗೆ ಶೇ.35 ರಷ್ಟು ಬೇವು ಲೇಪನಕ್ಕೆ ನಿರ್ಧರಿಸಿದ್ದಿರಿ, ಯೂರಿಯಾ ಕಾರ್ಖಾನೆಗಳಿಂದ ರೈತರಿಗೆ ಸೇರುವ ಬದಲು ಬೇರೆಡೆಗೆ ಹೋಗುತ್ತಿತ್ತು. ನಾವು ಬಂದ ಮೇಲೆ ಶೇ.100 ರಷ್ಟು ಬೇವು ಲೇಪಿತ ಯೂರಿಯಾಗೆ ಮುಂದಾಗಿ ಸಮಸ್ದ್ದೇಯೆ ಬಗೆಹರಿಸಿದ್ದೇವೆ.

ಗುರಿ ನಿರ್ದಿಷ್ಟ ದಾಳಿ ನಿಮ್ಮನ್ನು ಆಂತರಿಕವಾಗಿ ಕಾಡುತ್ತಿದೆ. ನಮ್ಮ ಸೇನೆ ಸಮರ್ಥವಾಗಿ ನಮ್ಮನ್ನು ಕಾಯುತ್ತಿದೆ ಎಂದು ಒಪ್ಪಿಕೊಂಡಿದ್ದೀರಿ. ನಮ್ಮ ದೇಶದ ಸೈನಿಕರ ಸೇವೆಯನ್ನು ನಾವು ಎಷ್ಟು ಕೊಂಡಾಡಿದರೂ ಕಡಿಮೆಯೇ.’

Leave a Reply