‘ಗಂಗಾ ನದಿಯ ಒಂದು ಹನಿಯೂ ಸ್ವಚ್ಛವಾಗಿಲ್ಲ…’ ಸರ್ಕಾರಿ ಸಂಸ್ಥೆ ಹಾಗೂ ಕೈಗಾರಿಕೆಗಳ ವಿರುದ್ಧ ಹಸಿರು ನ್ಯಾಯಾಧಿಕರಣ ಕಿಡಿ

ಡಿಜಿಟಲ್ ಕನ್ನಡ ಟೀಮ್:

‘ಇದುವರೆಗೂ ಗಂಗಾ ನದಿಯ ಒಂದೇ ಒಂದು ಹನಿಯನ್ನೂ ಸ್ವಚ್ಛ ಮಾಡಿಲ್ಲ… ಸರ್ಕಾರಿ ಸಂಸ್ಥೆಗಳು ಕೇವಲ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿವೆ…’ ಇದು ಗಂಗಾ ನದಿ ಸ್ವಚ್ಛತೆಯ ವಿಷಯವಾಗಿ ಹಸಿರು ನ್ಯಾಯಾಧಿಕರಣ ಆಕ್ರೋಶ ವ್ಯಕ್ತಪಡಿಸಿದ ಪರಿ.

ಗಂಗಾ ನದಿಯನ್ನು ಸ್ವಚ್ಛಗೊಳಿಸುವ ‘ನಮಾಮಿ ಗಂಗಾ’ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಅವರು ಕನಸು. ಈ ನದಿ ಸ್ವಚ್ಛತಾ ಯೋಜನೆಯನ್ನು ಸರ್ಕಾರಿ ಸಂಸ್ಥೆಗಳು ಯಾವ ರೀತಿ ಜಾರಿಗೆ ತರಲಿವೆ ಎಂಬುದರ ಬಗ್ಗೆ ವಿವರಣೆ ಕೇಳಿದ್ದ ಹಸಿರು ನ್ಯಾಯಾಧಿಕರಣ, ಯೋಜನೆಯ ಪ್ರಗತಿ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಗಂಗಾ ನದಿ ಸ್ವಚ್ಛತೆಗಾಗಿ ಈ ಯೋಜನೆ ಮೂಲಕ ₹ 2 ಸಾವಿರ ಕೋಟಿ ಹಣವನ್ನು ಮೀಸಲಿಟ್ಟಿದೆ.

‘ಈ ಯೋಜನೆ ಹಿಂದೆ ಉಳಿಯಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹಾಗೂ ಇತರೆ ಸರ್ಕಾರಿ ಸಂಸ್ಥೆಗಳೇ ಕಾರಣ. ಈ ಸಂಸ್ಥೆಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ನೀವು (ಅಧಿಕಾರಿಗಳು) ಸರಿಯಾದ ರೀತಿಯಲ್ಲಿ ನಿಮ್ಮ ಕೆಲಸ ಮಾಡಿದ್ದರೆ, ಇಂದು ನ್ಯಾಯಾಲಯದ ಮುಂದೆ ಬಂದು ನಿಲ್ಲುವ ಪ್ರಮೆಯವೇ ಇರುತ್ತಿರಲಿಲ್ಲ. ಸಾರ್ವಜನಿಕರ ಹಣವನ್ನು ಪೋಲು ಮಾಡುವುದನ್ನು ಬಿಟ್ಟರೆ ನೀವು ಇನ್ನೇನನ್ನು ಮಾಡಿಲ್ಲ. ಎಲ್ಲರೂ ಗಂಗಾ ನದಿ ಸ್ವಚ್ಛವಾಗುತ್ತಿದೆ ಎಂದು ಮಾತನಾಡುತ್ತಿದ್ದಾರೆ. ಆದರೆ, ಗಂಗಾ ನದಿಯ ಒಂದೇ ಒಂದು ಹನಿಯೂ ಸ್ವಚ್ಛವಾಗಿಲ್ಲ. ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರ ನಡುವಣ ಹಗ್ಗಜಗ್ಗಾಟ ನಿಲ್ಲಬೇಕು. ಈ ಯೋಜನೆಯತ್ತ ಗಮನಹರಿಸಬೇಕು. ಈ ಎರಡು ಸರ್ಕಾರಗಳ ವಿರುದ್ಧದ ದೂರು ನೀಡುವ ನಾಟಕ ನಿಲ್ಲಿಸಿ. ನಮಾಮಿ ಗಂಗಾ ಯೋಜನೆಯನ್ನು ಯಾವ ರೀತಿಯಲ್ಲಿ ಜಾರಿ ಮಾಡಲು ನಿರ್ಧರಿಸಿದ್ದೀರಿ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿ. ಪ್ರಧಾನಿ ಅವರು ನಿಮಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದು, ಇದನ್ನು ರಾಷ್ಟ್ರ ಮಟ್ಟದ ಯೋಜನೆ ಎಂದು ಪರಿಗಣಿಸಿ.’ ಎಂದು ನ್ಯಾಯಾಧಿಕರಣ ತರಾಟೆಗೆ ತೆಗೆದುಕೊಂಡಿತು.

ಇನ್ನು ಗಂಗಾ ನದಿಯ ದಡದಲ್ಲಿ ಬಿಜ್ನೋರ್ ಮತ್ತು ಅಮ್ರೊಹ ಜಿಲ್ಲೆಯಲ್ಲಿದ್ದು ತ್ಯಾಜ್ಯವನ್ನು ಹೊರಹಾಕುತ್ತಿರುವ 14 ಕೈಗಾರಿಕೆಗಳ ವಿರುದ್ಧವೂ ಹಸಿರು ನ್ಯಾಯಾಧಿಕರಣ ಕಿಡಿ ಕಾರಿತು. ‘ಎಲ್ಲ ಕೈಗಾರಿಕೆಗಳೂ ನದಿಗೆ ತ್ಯಾಜ್ಯವನ್ನು ಬಿಡುತ್ತಿಲ್ಲ ಎಂದು ಸಮರ್ಥನೆ ನೀಡುತ್ತಿವೆ. ನಿಮಗೆ ನಾಲ್ಕು ದಿನಗಳ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ಈ ವಿಷಯದ ಕುರಿತು ನಿಮ್ಮ ಪ್ರತಿಕ್ರಿಯೆಗಳನ್ನು ನೀಡಿ. ಇಲ್ಲವಾದರೆ ನಿಮ್ಮ ಕೈಗಾರಿಕೆಗಳಿಗೆ ನೇರವಾಗಿ ಬೀಗ ಹಾಕಿಸಬೇಕಾಗುತ್ತದೆ’ ಎಂದು ನ್ಯಾಯಾಧಿಕರಣದ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಸೂಚಿಸಿದ್ದಾರೆ.

Leave a Reply