ವಿಧಾನ ಪರಿಷತ್ತಿಗೆ ಜೆಡಿಎಸ್ ನ ರಮೇಶ್ ಬಾಬು, ರಾಜ್ಯದಲ್ಲಿ 900 ಹೊಸ ಮದ್ಯದಂಗಡಿಗೆ ಅನುಮತಿ ಅಂದ್ರು ಸಿಎಂ- ಅಧಿವೇಶನದ ಹೈಲೈಟ್ಸ್, ರಂಗೇರಿದ ತಮಿಳುನಾಡು ರಾಜಕೀಯ, ಸತ್ಯಾರ್ಥಿ ಮನೆಗೆ ಕನ್ನ- ನೋಬೆಲ್ ಪ್ರಶಸ್ತಿ ಕಳವು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಬೆಂಗಳೂರಿನ ಟೌನ್ ಹಾಲ್ ಮುಂದೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಸದಸ್ಯೆಯರು ಪ್ರತಿಭಟನೆ ನಡೆಸಿದರು.

ಡಿಜಿಟಲ್ ಕನ್ನಡ ಟೀಮ್:

ವಿಧಾನ ಪರಿಷತ್ತಿಗೆ ರಮೇಶ್ ಬಾಬು

ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಆಯ್ಕೆಯಾಗಿದ್ದಾರೆ. ಬಿಜೆಪಿಯ ಪ್ರತಿಸ್ಪರ್ಧಿ ಬಸವರಾಜು ಅವರಿಗಿಂತ 2203 ಮತಗಳ ಅಂತರದಲ್ಲಿ ರಮೇಶ್ ಬಾಬು ಜಯಗಳಿಸಿದ್ದಾರೆ. ಸೋಮವಾರ ರಾತ್ರಿ ಫಲಿತಾಂಶ ಬಿಡುಗಡೆಯಾಗಿದ್ದು, ರಮೇಶ್ ಬಾಬು 10,014 ಮತಗಳನ್ನು ಪಡೆದರೆ, ರಮೇಶ್ ಬಾಬು 6199 ಮತಗಳನ್ನು ಪಡೆದಿದ್ದಾರೆ. ಇನ್ನು ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿ ಟಿ.ಎಸ್ ನಿರಂಜನ್ ಠೇವಣಿ ಕಳೆದುಕೊಂಡಿದ್ದಾರೆ. ಜೆಡಿಎಸ್ ನಿಂದ ಬಂಡಾಯ ಅಭ್ಯರ್ಥಿ ಕಣಕ್ಕಿಳಿದರೂ ರಮೇಶ್ ಬಾಬು ಅವರ ಜಯ ಗಳಿಸಿರುವುದು ಜೆಡಿಎಸ್ ವಲಯದಲ್ಲಿ ಹೊಸ ಉತ್ಸಾಹವನ್ನು ತುಂಬಿದೆ.

900 ಹೊಸ ಮದ್ಯದಂಗಡಿಗೆ ಅನುಮತಿ

ರಾಜ್ಯದದಲ್ಲಿ ಹೊಸದಾಗಿ 900 ಮದ್ಯದ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಹೆಚ್.ಡಿ ರೇವಣ್ಣ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು ಎಂ.ಎಸ್.ಐ.ಎಲ್ ವತಿಯಿಂದ (ಸಿಎಲ್-2) ಮದ್ಯದ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ನಕಲಿ ಮದ್ಯ ತಡೆಯುವುದು ಗ್ರಾಮೀಣ ಭಾಗದ ಜನರಿಗೆ ಉತ್ತಮ ಮದ್ಯ ಸರಬರಾಜು ಮಾಡುವ ಉದ್ದೇಶದಿಂದ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಮಾಹಿತಿ ಕೊಟ್ಟರು.

ಇದೇ ವೇಳೆ ಹೆದ್ದಾರಿಗಳಲ್ಲಿ ಮದ್ಯದಂಗಡಿ ತೆರವುಗೊಳಿಸಲು ಸುಪ್ರೀಂ ಆದೇಶದ ಕುರಿತು ಎಸ್.ಎನ್ ಸುಬ್ಬಾರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸುಪ್ರೀಂ ಕೋರ್ಟ್ ಆದೇಶಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಅರ್ಜಿ ನಿರ್ಣಯಗೊಳ್ಳುವವರೆಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಲು ಮುಂದಾಗುವುದಿಲ್ಲ. ಎಂದರು.

ಇನ್ನುಳಿದಂತೆ ವಿಧಾನಸಭೆ ಅಧಿವೇಶನದ ಹೈಲೈಟ್ಸ್…

  • ಕೆ ಆರ್ ಎಸ್ ಜಲಾಶಯ ಸೇರಿದಂತೆ ರಾಜ್ಯದ ಕಾವೇರಿ ಜಲಾನಯನದ ಭಾಗದಲ್ಲಿರುವ ಅಣೆಕಟ್ಟುಗಳಿಂದ ಬೆಂಗಳೂರಿಗೆ ಮೇ ತಿಂಗಳ ಅಂತ್ಯದವರೆಗೂ ಕುಡಿಯುವ ನೀರು ಪೂರೈಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೇತ್ತರ ವೇಳೆಯಲ್ಲಿ ಕೆ.ಗೋಪಾಲಯ್ಯ ಅವರ ಪ್ರಸ್ತಾವಕ್ಕೆ ಉತ್ತರಿಸುತ್ತಾ, ‘ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಿಂದ ದಿನನಿತ್ಯ 1380 ದಶಲಕ್ಷ ಲೀಟರ್ ಸರಬರಾಜು ಮಾಡಲಾಗುವುದು.ಬೆಂಗಳೂರಿಗೆ 1400 ದಶಲಕ್ಷ ಲೀಟರ್ ಅಗತ್ಯವಿದ್ದು, ಉಳಿದ ನೀರನ್ನು ನಗರ ಜಲ ಮಂಡಳಿಯ ವ್ಯಾರ್ತಿಗೆ ಬರುವ 7932 ಕೊಳವೆ ಬಾವಿಹಾಗೂ 1925 ನೀರಿನ ಟ್ಯಾಂಕ್ ಗಳಿಗೆ ಪೂರೈಸಲಾಗುವುದು’ ಎಂದರು.
  • ಮಹಿಳೆಯರ ಮೇಲೆ ಅತ್ಯಾಚಾರ ಎಸಗುವ ಅಥವಾ ಯತ್ನಿಸುವವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಪ್ರಕಟಿಸಿದರು. ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣ ತಡೆಯಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಈ ರೀತಿಯಾದ ತಪ್ಪು ಎಸಗುವವರಿಗೆ ಕಠಿಣ ಶಿಕ್ಷೆ ಕಲ್ಪಿಸುವ ಉದ್ದೇಶದಿಂದಲೇ ಗೂಂಡಾ ಕಾಯ್ದೆ ಜಾರಿಗೆ ತರಲಾಗುವುದು ಎಂದರು. ಪೊಲೀಸ್ ಇಲಾಖೆಯಲ್ಲಿರುವ ಶೇ.5ರಷ್ಟು ಮಹಿಳಾ ಸಿಬ್ಬಂದಿ ಪ್ರಮಾಣವನ್ನು ಶೇ.20ಕ್ಕೆ ಏರಿಸಲು ನಿರ್ಧರಿಸಲಾಗಿದೆ. 35 ಹೊಸ ಮಹಿಳಾ ಪೊಲೀಸ್ ಠಾಣೆ ತೆಗೆಯಲಾಗುವುದು ಎಂದರು.
  • ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ಜನಜೀವನ ಅಸ್ತವ್ಯಾಸ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಕಾಂಗ್ರೆಸ್ ಸದಸ್ಯರೇ ವಿಧಾನಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಎನ್.ಎ ಹ್ಯಾರೀಸ್ ಈ ವಿಷಯ ಪ್ರಸ್ತಾಪಿಸಿದರು. ವಾಣಿಜ್ಯ ಚಟುವಟಿಕೆಯಿಂದ ಜನ ನೆಮ್ಮದಿಯಿಂದ ವಾಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
  • ಅಕ್ರಮ ಮರಳು ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲಾದರೆ ಅಂತಹವರನ್ನು ಸೇವೆಯಿಂದಲೇ ವಜಾ ಮಾಡುವುದಾಗಿ ಗೃಹ ಸಚಿವ ಪರಮೇಶ್ವರ್ ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಶೂನ್ಯ ವೇಳೆಯಲ್ಲಿ ಜಗದೀಶ್ ಶೆಟ್ಟರ್ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ‘ಅಕ್ರಮ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದರು.
  • ಜನಸಾಮಾನ್ಯರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕಂಬಳ ಕ್ರೀಡೆ ನಡೆಸಲು ಪೂರಕವಾದ ಕಾಯ್ದೆಯನ್ನು ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
  • ರಾಜ್ಯದಲ್ಲಿರುವ ಬಹುತೇಕ ಕ್ಲಬ್ ಗಳು ತಮ್ಮ ಮೂಲ ಉದ್ದೇಶವನ್ನು ಬಿಟ್ಟು ಲಾಭದಾಸೆಯಿಂದ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿವೆ ಎಂದು ಎನ್.ಎ ಹ್ಯಾರೀಸ್ ನೋತೃತ್ವದ ಸದನ ಸಮಿತಿ ಆರೋಪಿಸಿದೆ. ಈ ಸಮಿತಿ ವಿಧಾನಸಭೆಯಲ್ಲಿ ತನ್ನ ವರದಿ ಮಂಡಿಸಿದ್ದು, ಕ್ಲಬ್ ಗಳನ್ನು ನಿಯಂತ್ರಣಕ್ಕೆ ತರಲು ಅಗತ್ಯ ಕಾನೂನು ರೂಪಿಸಲು 11 ಶಿಫಾರಸ್ಸುಗಳನ್ನು ನೀಡಲಾಗಿದೆ.
  • ಬೆಂಗಳೂರು- ಮೈಸೂರು ನಡುವೆ ನಿರ್ಮಾಣ ಮಾಡಲು ಉದ್ದೇಶಿಸಿರುವ ದೋಶದ ಮೊದಲ ‘ಹೈಬ್ರೀಡ್ ಆ್ಯನ್ಯುಟಿ’ ದಶಪಥ ರಸ್ತೆ ನಿರ್ಮಾಣ ಕಾಮಗಾರಿ ಮೇ ತಿಂಗಳಲ್ಲಿ ಆರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಸಿ ಮಹದೇವಪ್ಪ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಬಿ.ಜೆ ಪುಟ್ಟಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಈಗಾಗಲೇ ಶೇ.85ರಷ್ಟು ಸಮೀಕ್ಷೆ ಹಾಗೂ ಭೂ ಸ್ವಾಧೀನ ಕಾರ್ಯ ಮುಗಿದಿದೆ ಎಂದರು.

ರೈತರ ಸಾಲ ಮನ್ನಾಕ್ಕೆ ಶೆಟ್ಟರ್ ಆಗ್ರಹ

ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. ನಿಯಮ 69ರ ಅಡಿಯಲ್ಲಿ ಬರ ಪರಿಸ್ಥಿತಿ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರ ಶೇ.50ರಷ್ಟು ಸಾಲ ಮನ್ನಾ ಮಾಡಿದರೆ, ರಾಜ್ಯ ಸರ್ಕಾರ ರೈತರ ಸಾಲ ಮನ್ನಾಕ್ಕೆ ಮುಂದಾಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಶೇ.50 ರಷ್ಟು ರೈತರ ಸಾಲ ಮನ್ನಾ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರವನ್ನೇ ಬರೆದಿಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.

ಶಶಿಕಲಾ ವಿರುದ್ಧ ನಿಂತ ದೀಪಾ

ತಮಿಳುನಾಡಿನ ರಾಜ್ಯಕೀಯ ವಿದ್ಯಮಾನಗಳು ದಿನದಿಂದ ದಿನಕ್ಕೆ ಕಾವು ಪಡೆಯುತ್ತಾ ಸಾಗುತ್ತಿದೆ. ಪನ್ನೀರ್ ಸೆಲ್ವಂ ರಾಜಿನಾಮೆ ನೀಡಿದ ನಂತರ ಶಶಿಕಲಾ ನಟರಾಜನ್ ಅವರು ಸಿಎಂ ಕುರ್ಚಿ ಮೇಲೆ ಕೂರಲು ಸಜ್ಜಾಗುತ್ತಿರುವ ಸಂದರ್ಭದಲ್ಲೇ, ಎಐಡಿಎಂಕೆ ಪಕ್ಷದ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಜಯಲಲಿತಾ ಅವರ ಸೋದರ ಸಂಬಂಧಿ ದೀಪಾ ಜಯಕುಮಾರ್ ಸಹ ಶಶಿಕಲಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್ನು ಜಯಲಲಿತಾ ಅವರ ನಿಧನ ಪ್ರಕರಣದ ಬಗ್ಗೆ ತನಿಖೆ ನಡೆಯಬೇಕು ಹಾಗೂ ಶಶಿಕಲಾ ವಿಚಾರಣೆಗೆ ಒಳಪಡಬೇಕ. ಅಲ್ಲಿಯವರೆಗೂ ಅವರು ಸಿಎಂ ಸ್ಥಾನದಲ್ಲಿ ಕೂರುವಂತಿಲ್ಲ ಎಂದು ಎಐಡಿಎಂಕೆ ಪಕ್ಷದ ಕೆ.ಸಿ ಪಳನಿಸಾಮಿ ಆಗ್ರಹಿಸಿದ್ದಾರೆ. ಇನ್ನು ಶಶಿಕಲಾ ಅವರು ಮುಖ್ಯಮಂತ್ರಿಯಾಗುತ್ತಿರುವುದನ್ನು ವಿರೋಧಿಸಿ ಎಐಡಿಎಂಕೆ ನಾಯಕಿ ಶಶಿಕಲಾ ಪುಷ್ಪಾ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ಎಲ್ಲದರ ನಡುವೆ ಜಯಲಲಿತಾ ಅವರ ಮತ್ತೊಬ್ಬ ಆಪ್ತರನ್ನು ಮನೆಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಜಯಲಲಿತಾ ಅವರ ಸಲಹೆಗಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿ ಶಾಂತ ಶೀಲ ನಾಯರ್ ಸಹ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಸತ್ಯಾರ್ಥಿ ನೊಬೆಲ್ ಪ್ರಶಸ್ತಿ ಕಳವು

ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಅವರು ಪಡೆದಿದ್ದ ನೋಬೆಲ್ ಪ್ರಶಸ್ತಿ ಹಾಗೂ ಸ್ಮರಣಿಕೆ ಜತೆಗೆ ಇತರೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಸದ್ಯ ಸತ್ಯಾರ್ಥಿ ಅವರು ಅಮೆರಿಕದಲ್ಲಿದ್ದು, ಕಲ್ಕಜಿಯಲ್ಲಿರುವ ಮನೆಯಿಂದ ಅವರ ಆಪ್ತ ಸಹಾಯಕ ಕಾರನ್ನು ತರಲು ಹೋದಾಗ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹಸ್ತರೇಖೆ ಗುರುತುಗಳನ್ನು ಸಂಗ್ರಹಿಸಿದ್ದಾರೆ.

Leave a Reply