ಶಾರುಖ್ ರಾಯೀಸ್ ಸಿನಿಮಾಕ್ಕಿಲ್ಲ ಪಾಕಿಸ್ತಾನದಲ್ಲಿ ಸ್ಥಾನ, ನಿಷೇಧಕ್ಕಿರುವುದು ನಗೆ ಉಕ್ಕಿಸೋ ಕಾರಣ!

ಡಿಜಿಟಲ್ ಕನ್ನಡ ಟೀಮ್:

ಗುರಿ ನಿರ್ದಿಷ್ಟ ದಾಳಿ, ಗಡಿಯಲ್ಲಿನ ಚಕಮಕಿಗಳ ಹಿನ್ನೆಲೆಯಲ್ಲಿ ಭಾರತೀಯ ಚಿತ್ರಗಳಿಗೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿತ್ತು. ಇದೀಗ ಸ್ವಲ್ಪ ಬಿಗು ಬಿಡುತ್ತಲೇ ಪ್ರದರ್ಶನಕ್ಕಿದ್ದ ನಿರ್ಬಂಧ ತೆರವುಗೊಂಡಿದೆ. ಪರಿಣಾಮವಾಗಿ ಹೃತಿಕ್ ರೋಷನ್ ಅಭಿನಯದ ಕಾಬಿಲ್ ಚಿತ್ರ ಪಾಕಿಸ್ತಾನದಲ್ಲಿ ನಿಷೇಧ ಪರ್ವದ ನಂತರ ಪ್ರದರ್ಶನವಾಗುತ್ತಿರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಭಾನುವಾರದಿಂದ ಪ್ರದರ್ಶನಗೊಳ್ಳಬೇಕಿದ್ದ ರಾಯೀಸ್ ಚಿತ್ರಕ್ಕೆ ಅನುಮತಿ ಸಿಕ್ಕಿಲ್ಲ ಹಾಗೂ ಅದು ನೋಡಲು ಯೋಗ್ಯ ಚಿತ್ರವಲ್ಲ ಎಂದು ಪಾಕಿಸ್ತಾನದ ಸೆನ್ಸಾರ್ ಮಂಡಳಿ ತೀರ್ಮಾನಕ್ಕೆ ಬಂದಿರುವುದಾಗಿ ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ.

ಅದೇನೇ ಇರಲಿ. ರಾಯೀಸ್ ಚಿತ್ರ ಪ್ರದರ್ಶನಯೋಗ್ಯವಲ್ಲ ಎಂಬುದಕ್ಕೆ ಪಾಕಿಸ್ತಾನದಿಂದ ಕೇಳಿಬರುತ್ತಿರುವ ಕಾರಣ ಮಾತ್ರ ನಗು ಬರಿಸುವಂಥದ್ದು… ಅಲ್ಲಲ್ಲ, ನಗಬೇಕೋ, ಅಳಬೇಕೋ ತಿಳಿಯದಂಥಾದ್ದು. ಚಿತ್ರದಲ್ಲಿ ಕಥಾನಾಯಕನನ್ನು ನಕಾರಾತ್ಮಕವಾಗಿ ಚಿತ್ರಿಸಲಾಗಿದೆ ಹಾಗೂ ಹಾಗೆ ನಕಾರಾತ್ಮಕವಾಗಿ ಚಿತ್ರಿಸಲ್ಪಟ್ಟಿರುವ ನಾಯಕ ಮುಸ್ಲಿಂ ಆಗಿದ್ದಾನೆ ಎಂಬುದು ಆಕ್ಷೇಪಕ್ಕೆ ಕಾರಣವಂತೆ!

ಇದರಲ್ಲಿ ಮುಖ್ಯ ಪಾತ್ರಧಾರಿ ಶಾರುಖ್ ಚಿತ್ರಣಗೊಂಡಿರುವುದು ಗುಜರಾತಿನ ಕಳ್ಳ ಸಾರಾಯಿದಂಧೆಯಲ್ಲಿರುವ ಮುಸ್ಲಿಂ ವ್ಯಕ್ತಿಯಾಗಿ.

ಅಯ್ಯೋ ಪಾಕಿಸ್ತಾನವೇ! ಇವರ ವ್ಯಾಪ್ತಿಯಲ್ಲೇ ಭಾರತದ ಹಿಂದುಗಳೆಲ್ಲ ಯೋಚಿಸಲುತೊಡಗಿಬಿಟ್ಟಿದ್ದರೆ ವಿಲನ್ ಪಾತ್ರಗಳಲ್ಲಿ ಹಿಂದು ಹೆಸರನ್ನು ಇಡುವಂತೆಯೇ ಇರಲಿಲ್ಲ. ಹಾಗಿದ್ದಲ್ಲಿ ಅವೆಷ್ಟೋ ಸಿನಿಮಾಗಳು ಬರುತ್ತಲೇ ಇರಲಿಲ್ಲ. ಪಾಕಿಸ್ತಾನ ಇಳಿದಿರುವ ಸಂಕುಚಿತ ಪಾತಾಳ ಮತ್ತು ಯೋಚನಾರಹಿತ ವಾತಾವರಣಕ್ಕೆ ಕನ್ನಡಿಯಂತಿದೆ ಇದು.

ನಗೆ ತರಿಸುವ ಇನ್ನೊಂದು ವಿಷಯವೆಂದರೆ ರಾಯೀಸ್ ಚಿತ್ರ ನಿರ್ಮಾಪಕರ ಲೆಕ್ಕಾಚಾರ ತಲೆಕೆಳಗಾದ ರೀತಿ. ಮಹೀರಾ ಖಾನ್ ಎಂಬ ಪಾಕಿಸ್ತಾನಿ ನಟಿಯನ್ನೇ ಹಿರೋಯಿನ್ ಆಗಿಸಿದ್ದರಲ್ಲಿ, ಶಾರುಖ್ ಪ್ರಭೆಯೊಂದಿಗೆ ಪಾಕಿಸ್ತಾನ ಮಾರುಕಟ್ಟೆಯನ್ನು ಬಾಚಿಕೊಳ್ಳುವ ನಿಖರ ಲೆಕ್ಕಾಚಾರಗಳಿದ್ದವು. ಆದರೇನು ಮಾಡೋದು… ಬ್ಯಾಡ್ಲಕ್ ಶಾರುಖ್…

ಇನ್ನೂ ಮಜದ, ನಗೆ ತರಿಸುವ ವಿಷಯ ಎಂದರೆ ಭಾರತದಲ್ಲೇನಾದರೂ ಯಾವುದಾದರೂ ಕಾರಣಗಳಿಂದ ಚಿತ್ರ ಪ್ರದರ್ಶನಕ್ಕೆ ಅಡ್ಡಿಯಾದರೆ ದೇಶವೇ ಅಸಹಿಷ್ಣುತೆಗೆ ಸಿಲುಕಿದೆ ಎಂದು ಬೊಬ್ಬಿರಿಯುವ, ಅದನ್ನು ಮೋದಿ ಸರ್ಕಾರಕ್ಕೆ ತಳುಕು ಹಾಕುವ ಬಾಲಿವುಡ್ ಮಂದಿ ಇಲ್ಲಿ ತುಟಿ ಪಿಟಕ್ಕೆನ್ನದೇ ಇದ್ದಾರೆ. ಸ್ವತಃ ರಾಯೀಸ್ ಚಿತ್ರ ನಿರ್ಮಾಪಕರೂ ಈ ಬಗ್ಗೆ ಏನೂ ಮಾತನಾಡಿಲ್ಲ.

ಇದೊಂದು ವಿದ್ಯಮಾನ ಕೇವಲ ಪಾಕಿಸ್ತಾನವಷ್ಟೇ ಅಲ್ಲದೇ ಬಾಲಿವುಡ್ ನ ಟೊಳ್ಳುತನವನ್ನೂ ಚೆನ್ನಾಗಿಯೇ ಜಾಹೀರಾಗಿಸಿದೆ.

Leave a Reply