ಉಗ್ರ ಮಸೂದ್ ಅಜರ್ ವಿಷಯದಲ್ಲಿ ಪಾಕ್ ವಿರುದ್ಧ ತಾಳ್ಮೆ ಕಳೆದುಕೊಂಡಿತೇ ಚೀನಾ? ಹೌದು.. ಎನ್ನುತ್ತಿವೆ ಪಾಕ್ ಮಾಧ್ಯಮಗಳ ವರದಿ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಪರಿಗಣಿಸಬೇಕು ಎಂಬ ವಿಶ್ವಸಂಸ್ಥೆಯಲ್ಲಿನ ಪ್ರಸ್ತಾಪವನ್ನು ತಡೆಯುತ್ತಿದ್ದ ಚೀನಾ, ಈಗ ಬೇಸತ್ತಿದೆಯೇ? ಸದ್ಯಕ್ಕೆ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಗಮನಿಸಿದರೆ ಹೀಗೊಂದು ಪ್ರಶ್ನೆ ಉದ್ಭವವಾಗುತ್ತಿದೆ. ಉಗ್ರನ ರಕ್ಷಣೆಗಾಗಿ ಪ್ರತಿ ಬಾರಿಯೂ ಚೀನಾ ತನ್ನ ವೆಟೊ ಅಧಿಕಾರವನ್ನು ಬಳಸುತ್ತಾ ಬೇಸತ್ತು ಹೋಗಿದೆ ಎಂಬ ಅಂಶ ಕಂಡುಬಂದಿದೆ. ಪಾಕಿಸ್ತಾನ ತನ್ನ ವೆಟೊ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಚೀನಾ ಅಧಿಕಾರಿಗಳು ಇಸ್ಲಾಮಾಬಾದಿಗೆ ಸಂದೇಶ ರವಾನಿಸಿರುವ ಬಗ್ಗೆ ಪಾಕಿಸ್ತಾನ ಮಾಧ್ಯಮಗಳೇ ವರದಿ ಮಾಡಿರುವುದು ಈ ಪ್ರಶ್ನೆಗೆ ಪುಷ್ಠಿ ನೀಡುತ್ತಿದೆ.

ಅಂದಹಾಗೆ ಚೀನಾ ಇನ್ನು ಕೂಡ ಈ ವಿಚಾರದಲ್ಲಿ ಪಾಕಿಸ್ತಾನದ ಜತೆ ನಂಟು ಕಡಿದುಕೊಂಡಿಲ್ಲ. ಮಂಗಳವಾರವಷ್ಟೇ ಅಮೆರಿಕ ವಿಶ್ವ ಸಂಸ್ಥೆಯಲ್ಲಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಪರಿಗಣಿಸಬೇಕೆಂಬ ಪ್ರಸ್ತಾಪವನ್ನು ಸಲ್ಲಿಸಿತ್ತು. ಈ ಬಾರಿಯೂ ಚೀನಾ ತನ್ನ ವೆಟೊ ಅಧಿಕಾರದಿಂದ ಅದನ್ನು ತಡೆದಿದೆ.

ಈ ರೀತಿಯಾಗಿ ವಿಶ್ವಸಂಸ್ಥೆಯಲ್ಲಿ ಪದೇ ಪದೇ ಭಾರತ ಹಾಗೂ ಅಮೆರಿಕದ ಪ್ರಸ್ತಾಪ ತಡೆಯಲು ಪಾಕಿಸ್ತಾನ ದೇಶವು ಚೀನಾದ ವೆಟೊ ಅಧಿಕಾರವನ್ನು ಪರೋಕ್ಷವಾಗಿ ಬಳಸಿಕೊಳ್ಳುತ್ತಿದೆ. ಇಷ್ಟು ದಿನಗಳ ಕಾಲ ಭಯೋತ್ಪಾದನೆ ಹಾಗೂ ಉಗ್ರರ ದಾಳಿಯ ಬಿಸಿ ಏನು ಎಂಬುದನ್ನು ತಿಳಿಯದ ಚೀನಾ ಸಹ ಪಾಕಿಸ್ತಾನದ ತಾಳಕ್ಕೆ ಹೆಜ್ಜೆ ಹಾಕುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕ್ಸಿಂಜಿಯಾಂಗ್, ಉಯ್ಗುರ್ ಪ್ರದೇಶಗಳಲ್ಲಿ ಭಯೋತ್ಪಾದನಾ ಕೃತ್ಯಗಳು ಹೆಚ್ಚುತ್ತಿರುವುದು ಚೀನಾಗೆ ಚುರುಕು ಮುಟ್ಟಿಸಿದೆ. ಆ ಮೂಲಕ ಭಯೋತ್ಪಾದನೆ ವಿರುದ್ಧ ತನ್ನ ಬಿಗಿ ನಿಲುವು ತಾಳಬೇಕಾದ ಪರಿಸ್ಥಿತಿ ಎದುರಾಗಿದೆ.

‘ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿರುವ ಚೀನಾ, ಪ್ರತಿಬಾರಿಯೂ ವಿಶ್ವ ಸಂಸ್ಥೆಯಲ್ಲಿ ಮಸೂದ್ ಅಜರ್ ವಿರುದ್ಧದ ಪ್ರಸ್ತಾಪವನ್ನು ತಡೆಯುವ ಬಗ್ಗೆಯೇ ಚಿಂತಿಸಲು ಸಾಧ್ಯವಿಲ್ಲ. ಈ ವಿಚಾರವಾಗಿ ಪಾಕಿಸ್ತಾನ ತನ್ನದೇ ಆದ ಉತ್ತರವನ್ನು ಕಂಡುಕೊಳ್ಳುವ ಅಗತ್ಯ ಇದೆ. ಪಾಕಿಸ್ತಾನ ಕಂಡುಕೊಳ್ಳುವ ಉತ್ತರ ಇಡೀ ಜಗತ್ತಿಗೆ ತೃಪ್ತಿದಾಯಕವಾಗಿರಬೇಕು’ ಎಂದು ಚೀನಾದ ರಾಯಭಾರಿಗಳು ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

‘ಮಸೂಸ್ ಅಜರ್ ನನ್ನು ಉಗ್ರರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನವನ್ನು ತಡೆಯುವ ನಿರ್ಧಾರವನ್ನು ಚೀನಾ ಸರ್ಕಾರ ಮರುಪರಿಶೀಲನೆ ಮಾಡಬೇಕಿದೆ’ ಎಂದು ಕೋಲ್ಕತಾದಲ್ಲಿರುವ ಚೀನಾದ ಮಾಜಿ ಸಮಿತಿ ಸದಸ್ಯ ಮಾವ್ ಸಿವೈ, ತಮ್ಮ ಬ್ಲಾಗ್ ನಲ್ಲಿ ಬರೆದುಕೊಳ್ಳುವ ಮೂಲಕ ಚೀನಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ಡಿಎನ್ಎ ವರದಿ ಮಾಡಿದೆ.

ಕಳೆದ ಡಿಸೆಂಬರ್ ನಲ್ಲಿ ಅಜರ್ ನನ್ನು ಉಗ್ರ ಎಂದು ಪರಿಣಿಸಬೇಕೆಂದು ಭಾರತ  ವಿಶ್ವ ಸಂಸ್ಥೆಯಲ್ಲಿ ಪ್ರಸ್ತಾಪವನ್ನು ಸಲ್ಲಿಸಿತ್ತು. ಆಗ ಚೀನಾ ವೆಟೊ ಮೂಲಕ ಅದನ್ನು ತಡೆ ಹಿಡಿದಿತ್ತು. ಇದಾದ ಕೆಲವೇ ವಾರಗಳಲ್ಲಿ ಅಮೆರಿಕ ಭಾರತದ ನೆರವಿಗೆ ಬಂದು ಈ ಪ್ರಸ್ತಾಪವನ್ನು ಮತ್ತೆ ವಿಶ್ವ ಸಂಸ್ಥೆಯ ಮುಂದಿಟ್ಟಿತು. ಈ ಬಾರಿಯೂ ಚೀನಾ ಅದಕ್ಕೆ ಅಡ್ಡಗಾಲು ಹಾಕಿದೆ. ಮತ್ತೊಂದೆಡೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ವಿಶ್ವ ಸಂಸ್ಥೆ ಭದ್ರತಾ ಸಮಿತಿಯ ನಿಯಮ ತಿದ್ದುಪಡಿಗೆ ಮುಂದಾಗಿದ್ದು, ಆ ಮೂಲಕ ಚೀನಾ ಅನುಭವಿಸುತ್ತಿರುವ ಅಧಿಕಾರಕ್ಕೆ ನಿಯಂತ್ರಣ ಹಾಕುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಒಟ್ಟಿನಲ್ಲಿ ಅಜರ್ ವಿಷಯದಲ್ಲಿ ಸತತವಾಗಿ ಪಾಕಿಸ್ತಾನದ ನೆರವಿಗೆ ನಿಲ್ಲುತ್ತಿರುವ ಚೀನಾ ದಿನೇ ದಿನೇ ತಾಳ್ಮೆ ಕಳೆದುಕೊಳ್ಳುತ್ತಿರುವುದಂತೂ ಸ್ಪಷ್ಟವಾಗಿದೆ. ಚೀನಾ ಮೇಲೆ ಇತರೆ ಒತ್ತಡಗಳು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಚೀನಾ, ಪಾಕಿಸ್ತಾನಕ್ಕೆ ನೀಡುತ್ತಿರುವ ಬೆಂಬಲವನ್ನು ತಾನಾಗಿಯೇ ಹಿಂಪಡೆಯುವ ಸಂದರ್ಭ ಎದುರಾದರೆ ಅಚ್ಚರಿ ಇಲ್ಲ.

Leave a Reply