ಬೇಸಿಗೆ ದಾಹ ಅತಿಯಾದರೆ ಕೃಷಿ ಪಂಪ್ ಸೆಟ್ಟಿಗೆ ಕಂಟಕ, ವಿಧಾನಸಭೆಯಲ್ಲಿ ಏನಾಯ್ತು?, ಮಾ.13ರಿಂದ ಹಣ ತೆಗೆತಕ್ಕಿಲ್ಲ ನಿರ್ಬಂಧ

ಅತಿಥಿ ಉಪನ್ಯಾಸಕರ ಸೇವಾ ವಿಲೀನ ಮತ್ತು ಸೇವಾ ಭದ್ರತೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಮಂಗಳವಾರ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಡಿಜಿಟಲ್ ಕನ್ನಡ ಟೀಮ್:

ಬೇಸಿಗೆಯಲ್ಲಿ ರೈತರ ಕೊಳವೆ ಬಾವಿ ಸರ್ಕಾರದ ವಶಕ್ಕೆ

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಕೃಷಿ ಪಂಪ್ ಸೆಟ್ ಗಳಿಗೆ ನೀಡಲಾಗುತ್ತಿರುವ ವಿದ್ಯುತ್ ಕಡಿತಗೊಳಿಸಿ, ರೈತರ ಕೊಳವೆ ಬಾವಿಗಳನ್ನು ತಾತ್ಕಾಲಿಕವಾಗಿ ಸರ್ಕಾರ ವಶಪಡಿಸಿಕೊಳ್ಳಲು ನಿರ್ಧರಿಸಿದೆ.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಗೋವಿಂದ ಕಾರಜೋಳ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಪಂಚಾಯತ್ ರಾಜ್ ಸಚಿವ ಹೆಚ್.ಕೆ ಪಾಟೀಲ್, ಈ ವಿಷಯ ತಿಳಿಸಿದರು. ‘ಸತತ ಬರಗಾಲದಿಂದ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಸಮಸ್ಯೆ ಬಗೆಹರಿಸಲು ಸರ್ಕಾರ ಯುದ್ದೋಪಾದಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ, ಕುಡಿಯುವ ನೀರು ಕೊಡಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ನದಿ, ಕಾಲುವೆ, ಕೆರೆ, ಕೊಳವೆ ಬಾವಿಗಳಿಂದಲೂ ಅಲ್ಲಿನ ಸುತ್ತ ಮುತ್ತಲ ಗ್ರಾಮಗಳಿಗೆ ನೀರು ಹರಿಸಲಾಗುವುದು. ಹೀಗಾಗಿ ಆ ವ್ಯಾಪ್ತಿಯ ರೈತರ ಕೃಷಿ ಪಂಪ್ ಸೆಟ್ ಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ.

ವಿಧಾನಸಭೆಯ ಹೈಲೈಟ್ಸ್…

  • ಹಾಸನ ಜಿಲ್ಲಾಧಿಕಾರಿ ಹಾಗೂ ತಾಲೂಕಿನ ತಹಶೀಲ್ದಾರ್ ಅವರ ವಿರುದ್ಧ ಜೆಡಿಎಸ್ ನಾಯಕ ಎಚ್.ಡಿ ರೇವಣ್ಣ ವಿಧಾನ ಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಿದ್ದಾರೆ. ‘ನನ್ನ ಕ್ಷೇತ್ರದ ವ್ಯಾಪ್ತಿಯ ದೇವಹಳ್ಳಿ ಗ್ರಾಮದ ಯೋಧ ಡಿ.ಪಿ ಸಂದೀಪ್ ಕುಮಾರ್ ಜಮ್ಮು ಕಾಶ್ಮೀರದಲ್ಲಿ ದೇಶ ಸೇವೆ ಮಾಡುವಾಗ ಹಿಮಪಾತದಿಂದಾಗಿ ಮರಣ ಹೊಂದಿರುತ್ತಾರೆ. ಇಂತಹ ಯೋಧರ ಕುಟುಂಬಕ್ಕೆ ರಾಜ್ಯ ಸರ್ಕಾರ ₹ 25 ಲಕ್ಷ ಪರಿಹಾರ ಚೆಕ್ ನೀಡುವ ಸಂದರ್ಭದಲ್ಲಿ ನನ್ನನ್ನು ಕಡೆಗಣಿಸಿದ್ದಾರೆ. ಪರಿಹಾರಧನ ನೀಡುವ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಬಿಡಾರ ಹೂಡಿದ್ದರೂ ನನ್ನನ್ನು ಸ್ಥಳೀಯ ಪ್ರತಿನಿಧಿಯಾಗಿ ಪರಿಗಣಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ಅಣತಿಯಂತೆ ಅಧಿಕಾರಿಗಳು ನಡೆದುಕೊಂಡು ಜನಪ್ರತಿನಿಧಿ ಅಧಿಕಾರವನ್ನು ಮೊಟಕುಗೊಳಿಸಿದ್ದಾರೆ’ ಎಂದು ರೇವಣ್ಣ ತಿಳಿಸಿದರು.
  • ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಸಿ.ಟಿ.ರವಿ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ‘13489 ಅತಿಥಿ ಉಪನ್ಯಾಸಕರುಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವರ್ಷದಿಂದ ಇವರನ್ನು ಸ್ನಾತಕೋತ್ತರ ಪದವಿ ಪಡೆದವರಿಗೆ ಮಾಸಿಕ ₹ 9500, ಸ್ನಾತಕೋತ್ತರ ಪದವಿ ಜತೆಗೆ ಪಿಎಚ್ಡಿ, ಎನ್ಇಟಿ ಇಲ್ಲವೇ ಎಸ್ಎಲ್ಟಿ ಹೊಂದಿರುವವರಿಗೆ ₹ 11500 ಗೌರವ ಧನ ನೀಡಲಾಗುವುದು’ ಎಂದರು.
  • ಭಕ್ತಾದಿಗಳ ಅನುಕೂಲಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚುವರಿ ಬಸ್ ಸೇವೆ ಕಲ್ಪಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದರು. ಆರ್. ನರೇಂದ್ರ ಅವರ ಪ್ರಸ್ತಾವಕ್ಕೆ ಉತ್ತರಿಸುತ್ತಾ, ‘ಶ್ರೀಕ್ಷೇತ್ರಕ್ಕೆ ಬೆಂಗಳೂರು, ಮೈಸೂರು, ಕೊಳ್ಳೆಗಾಲ, ಚಾಮರಾಜನಗರ ಸೇರಿದಂತೆ ಇತರ ಪ್ರಮುಖ ಕೇಂದ್ರಗಳಿಂದ ನಿರಂತರ ಬಸ್ ಸವಲತ್ತು ಕಲ್ಪಿಸಲಾಗಿದೆ’ ಎಂದರು.

ಜಾಫರ್ ಶರೀಫ್, ಜನಾರ್ಧನ ಪೂಜಾರಿ, ವಿಶ್ವನಾಥ್ ವಜಾಗೊಳಿಸಲು ಆಗ್ರಹ

ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷವನ್ನು ಪದೇ ಪದೇ ಸಾರ್ವಜನಿಕವಾಗಿ ಟೀಕಿಸುತ್ತಿರುವ ಹಿರಿಯ ನಾಯಕರಾದ ಸಿ.ಕೆ ಜಾಫರ್ ಷರೀಫ್, ಜನಾರ್ದನ ಪೂಜಾರಿ ಹಾಗೂ ಎಚ್.ವಿಶ್ವನಾಥ್ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಆಡಳಿತ ರೂಢ ಕಾಂಗ್ರೆಸ್ ಸದಸ್ಯರು ಇಂದು ವಿಧಾನ ಸೌಧದಲ್ಲಿ ಆಗ್ರಹಿಸಿದರು. ವಿಧಾನ ಸೈಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಬಹುತೇಕ ಶಾಸಕರು, ಈ ನಾಯಕರ ವರ್ತನೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಪಕ್ಷಕ್ಕಾಗುತ್ತಿರುವ ಮುಜುಗರ ತಪ್ಪಿಸಲು ಇವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಾಸಕರ ಒತ್ತಾಯದ ಮೇರೆಗೆ ಈ ಹಿರಿಯ ನಾಯಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ, ಅವರಿಂದ ಉತ್ತರ ಪಡೆಯಲು ಪ್ರದೇಶ ಕಾಂಗ್ರೆಸ್ ನಿರ್ಧರಿಸಿದೆ.

ಮಾ.13ರ ನಂತರ ಹಣ ಪಡೆಯಲು ನಿರ್ಬಂಧವಿಲ್ಲ

ಮುಂದಿನ ತಿಂಗಳು 13ರಿಂದ ನೀವು ನಿಮ್ಮ ಖಾತೆಯಿಂದ ಎಷ್ಟು ಹಣ ಬೇಕಾದರೂ ಡ್ರಾ ಮಾಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಲಿದೆ. ಈ ಬಗ್ಗೆ ಮಾಹಿತಿ ನೀಡಿದ ಆರ್ಬಿಐ ಮಾ.13ರಿಂದ ಹಣ ಡ್ರಾ ಮಾಡುವುದರ ಮೇಲೆ ಹೇರಲಾಗಿರುವ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕುವುದಾಗಿ ತಿಳಿಸಿದೆ. ಎರಡು ಹಂತದಲ್ಲಿ ಈ ನಿರ್ಬಂಧ ತೆರವುಗೊಳಿಸುತ್ತಿದ್ದು, ಮೊದಲ ಹಂತದಲ್ಲಿ ಫೆಬ್ರವರಿ 20ರಿಂದ ಪ್ರತಿವಾರಕ್ಕೆ ಹಣ ಡ್ರಾ ಮಾಡಿಕೊಳ್ಳಲು ಇದ್ದ ಮಿತಿಯನ್ನು ₹ 24 ಸಾವಿರದಷ್ಟಿದ್ದ ಮಿತಿಯನ್ನು ₹ 50 ಸಾವಿರಕ್ಕೆ ಹೆಚ್ಚಿಸಲಿದೆ. ಎರಡನೇ ಹಂತದಲ್ಲಿ ಮಾ.13 ರಿಂದ ಈ ಮಿತಿಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗುವುದು ಎಂದು ಆರ್ಬಿಐ ತಿಳಿಸಿದೆ.

ಹೈಕೋರ್ಟ್ ಜಡ್ಜ್ ಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ

ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಕರ್ತವ್ಯದಲ್ಲಿರುವ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರಿಗೆ ನೋಟೀಸ್ ಜಾರಿ ಮಾಡಿದೆ. ಮಾಜಿ ಹಾಗೂ ಹಾಲಿ ನ್ಯಾಯಮೂರ್ತಿಗಳ ವಿರುದ್ಧ ಅನೇಕ ಆರೋಪ ಕೇಳಿಬರುತ್ತಿದ್ದರೂ ಅವುಗಳನ್ನು ಮಟ್ಟ ಹಾಕುತ್ತಿರುವ ಆರೋಪದ ಮೇಲೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೆಹೆರ್ ಅವರ ನೇತೃತ್ವದ ಏಳು ಸದಸ್ಯರ ಪೀಠ ಈ ನೋಟೀಸ್ ಜಾರಿ ಮಾಡಿದೆ.

ಮಸೂದ್ ವಿಚಾರದಲ್ಲಿ ಪಾಕ್ ವಿರುದ್ಧ ಚೀನಾ ಅತೃಪ್ತಿ?

ಪಾಕಿಸ್ತಾನದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಪರಿಗಣಿಸಬೇಕು ಎಂಬ ವಿಶ್ವಸಂಸ್ಥೆಯಲ್ಲಿನ ಪ್ರಸ್ತಾಪವನ್ನು ತಡೆಯುತ್ತಿದ್ದ ಚೀನಾ, ಈಗ ಬೇಸತ್ತಿದೆಯೇ? ಸದ್ಯಕ್ಕೆ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಗಮನಿಸಿದರೆ ಹೀಗೊಂದು ಪ್ರಶ್ನೆ ಉದ್ಭವವಾಗುತ್ತಿದೆ. ಉಗ್ರನ ರಕ್ಷಣೆಗಾಗಿ ಪ್ರತಿ ಬಾರಿಯೂ ಚೀನಾ ತನ್ನ ವೆಟೊ ಅಧಿಕಾರವನ್ನು ಬಳಸುತ್ತಾ ಬೇಸತ್ತು ಹೋಗಿದೆ ಎಂಬ ಅಂಶ ಕಂಡುಬಂದಿದೆ. ಪಾಕಿಸ್ತಾನ ತನ್ನ ವೆಟೊ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಚೀನಾ ಅಧಿಕಾರಿಗಳು ಇಸ್ಲಾಮಾಬಾದಿಗೆ ಸಂದೇಶ ರವಾನಿಸಿರುವ ಬಗ್ಗೆ ಪಾಕಿಸ್ತಾನ ಮಾಧ್ಯಮಗಳೇ ವರದಿ ಮಾಡಿರುವುದು ಈ ಪ್ರಶ್ನೆಗೆ ಪುಷ್ಠಿ ನೀಡುತ್ತಿದೆ. ಈ ಕುರಿತ ಸಂಪೂರ್ಣ ವರದಿಯನ್ನು ಇಲ್ಲಿ ಓದಬಹುದು.

Leave a Reply