ಶಶಿಕಲಾ ವಿರುದ್ಧ ತಿರುಗಿ ಬಿದ್ದ ಪನ್ನೀರ್ ಸೆಲ್ವಂ ಹೇಳಿದ್ದೇನು? ಚುನಾವಣಾ ಆಯೋಗ ಕೊಟ್ಟ ಶಾಕ್ ಏನು?

ಡಿಜಿಟಲ್ ಕನ್ನಡ ಟೀಮ್:

ನಿನ್ನೆ ರಾತ್ರಿಯ ನಂತರ ತಮಿಳುನಾಡಿನ ರಾಜಕಾರಣದ ವಿದ್ಯಮಾನಗಳು ಭಿನ್ನ ರೂಪ ತಾಳಿವೆ. ಜಯಲಲಿತಾ ಅವರ ಆಪ್ತರಾಗಿದ್ದ ಓ.ಪನ್ನೀರ್ ಸೆಲ್ವಂ, ನಿನ್ನೆ ರಾತ್ರಿ ಜಯಾ ಅವರ ಸಮಾಧಿ ಬಳಿ ಸುದೀರ್ಘ 30 ನಿಮಿಷಗಳ ಕಾಲ ಕೂತು ಧ್ಯಾನ ಮಾಡಿದ ನಂತರ ತಮ್ಮ ಮೌನವನ್ನು ಮುರಿದಿದ್ದು, ತಮಿಳುನಾಡು ರಾಜಕೀಯದಲ್ಲಿ ಬಿಗಿ ಹಿಡಿತ ಸಾಧಿಸಲು ಮುಂದಾಗಿರುವ ಶಶಿಕಲಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ನಿನ್ನೆ ರಾತ್ರಿ ಜಯ ಅವರ ಸಮಾಧಿ ಬಳಿ ಅರ್ಧ ಗಂಟೆ ಏಕಾಂಗಿಯಾಗಿ ಕಾಲ ಕಳೆದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಪನ್ನೀರ್ ಸೆಲ್ವಂ, ‘ಇನ್ನು ಮುಂದೆ ನಾನು ಮೌನವಾಗಿರುವುದಿಲ್ಲ. ತಮಿಳುನಾಡಿನ ಜನತೆ ಹಾಗೂ ಎಐಡಿಎಂಕೆ ಕಾರ್ಯಕರ್ತರಿಗೆ ಮಹತ್ವದ ವಿಷಯವನ್ನು ಹೇಳುವುದಿದೆ’ ಎಂದು ಅಚ್ಚರಿ ಮೂಡಿಸಿದ್ದರು. ಅದೇ ರೀತಿಯಲ್ಲಿ ಇಂದು ಮೌನ ಮುರಿದಿರುವ ಪನ್ನೀರ್ ಸೆಲ್ವಂ ಹೇಳಿದಿಷ್ಟು…

‘ಅಪೋಲೊ ಆಸ್ಪತ್ರೆಯಲ್ಲಿ ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನನ್ನು ಭೇಟಿ ಮಾಡಲು ಅವಕಾಶವನ್ನೇ ನೀಡಲಿಲ್ಲ. ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ನನ್ನ ಮೇಲೆ ಒತ್ತಡ ಹಾಕಲಾಯಿತು. ರಾಜಿನಾಮೆ ನೀಡದಿದ್ದರೆ, ಶೀಘ್ರದಲ್ಲೇ ಪಕ್ಷದ ಸದಸ್ಯತ್ವದಿಂದ ಕಿತ್ತು ಹಾಕುವುದಾಗಿ ಬೆದರಿಕೆ ಹಾಕಿದರು. ನಾನು ಜಯಲಲಿತಾ ಅವರ ಸಾವಿನ ಪ್ರಕರಣವನ್ನು ನ್ಯಾಯಾಂಗದ ತನಿಖೆಗೆ ಒಪ್ಪಿಸುತ್ತೇನೆ.’

‘ಅವಕಾಶ ಕೊಟ್ಟರೆ ರಾಜಿನಾಮೆಯನ್ನು ವಾಪಸ್ ಪಡೆಯುತ್ತೇನೆ. ವಿಧಾನಸಭೆಯಲ್ಲಿ ನನ್ನ ಸಾಮರ್ಥ್ಯ ಏನು ಎಂಬುದನ್ನು ತೋರಿಸುತ್ತೇನೆ. ನಾನು ದಿವಂಗತ ಜಯಲಲಿತಾ ಅವರ ಹಿಂಬಾಲಕ. ಎಂದಿಗೂ ಅವರ ಮಾತನ್ನು ಮೀರಿಲ್ಲ, ಅವರ ವಿರುದ್ಧವಾಗಿ ಯಾವುದೇ ಕೆಲಸ ಮಾಡಿಲ್ಲ. ಈ ಎಲ್ಲ ವಿದ್ಯಮಾನಗಳ ಹಿಂದೆ ಬಿಜೆಪಿ ಕೈವಾಡ ಇರುವುದು ಸುಳ್ಳು.’

‘ಕಾನೂನಿನ ಪ್ರಕಾರ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನು ತನ್ನ ಆಂತರಿಕ ಚುನಾವಣೆ ಮೂಲಕ ನಡೆಸಬೇಕು. ತೀರಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಹಂಗಾಮಿ ಪ್ರಧಾನ ಕಾರ್ಯದರ್ಶಿಯನ್ನು ನೇರವಾಗಿ ಆಯ್ಕೆ ಮಾಡಬಹುದಾಗಿದೆ. ಹೀಗಾಗಿ ಪಕ್ಷದ ಕಾರ್ಯಕಾರಿ ಸಭೆಯನ್ನು ನಡೆಸಿ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗುವುದು.’

‘ನಾನು ಜನರನ್ನು ನೇರಾ ನೇರ ಭೇಟಿ ಮಾಡುತ್ತೇನೆ. ಅಗತ್ಯ ಬಿದ್ದರೆ ಜಯಾ ಅವರ ಸೋದರ ಸಂಬಂಧಿ ದೀಪಾ ಜಯಕುಮಾರ್ ಅವರ ಬೆಂಬಲವನ್ನು ಪಡೆಯುತ್ತೇನೆ. ಅಲ್ಲದೆ ರಾಜ್ಯಪಾಲರು ಹಾಗೂ ಸ್ಪೀಕರ್ ಅವರನ್ನು ಭೇಟಿ ಮಾಡಿ ವಿಧಾನ ಮಂಡಲ ಕಲಾಪ ನಡೆಸುವಂತೆ ಕೋರುತ್ತೇನೆ. ಜನರ ಭಾವನೆ ಮತ್ತು ನಂಬಿಕೆಯನ್ನು ಪರಿಗಣಿಸಿ ಎಲ್ಲರೂ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ ಎಂದು ಎಐಡಿಎಂಕೆ ಪಕ್ಷದ ಪ್ರತಿಯೊಬ್ಬ ಶಾಸಕರನ್ನು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ.’

ಇತ್ತ ಎಐಎಡಿಎಂಕೆ ಪಕ್ಷದ ಮುಖ್ಯ ಕಚೇರಿಯಲ್ಲಿ ಶಶಿಕಲಾ ಹಾಗೂ ಶಾಸಕರು ಸಭೆ ನಡೆಸಿದ್ದು, 135 ಶಾಸಕರ ಪೈಕಿ 130 ಶಾಸಕರು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಶಿಕಲಾ ತನ್ನ ಶಾಸಕರ ಬಲವನ್ನು ಸಾಬೀತು ಪಡಿಸಲು ಈ ಸಭೆ ಕರೆದಿದ್ದರು. ಈ ಸಭೆಯಲ್ಲಿ ಶಶಿಕಲಾ ನಟರಾಜನ್, ‘ಕಳೆದ 48 ಗಂಟೆಗಳಲ್ಲಿನ ವಿದ್ಯಮಾನಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಹಿತವನ್ನು ಕಾಪಾಡಬೇಕು’ ಎಂದು ಹೇಳುತ್ತಾ, ಎಂಜಿಆರ್ ಅವರ ಸಿನಿಮಾದ ಹಾಡನ್ನು ಹೇಳಿದ್ದಾಗಿ ವರದಿಗಳು ಬಂದಿವೆ.

ಮತ್ತೊಂದೆಡೆ ಚುನಾವಣಾ ಆಯೋಗವೂ ಶಶಿಕಲಾಗೆ ಶಾಕ್ ನೀಡಿದ್ದು, ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅವರ ನೇಮಕವನ್ನು ಪ್ರಶ್ನಿಸಿದೆ. ‘ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಕಾನೂನನ್ನು ಅನುಸರಿಸಿಲ್ಲ’ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದರೊಂದಿಗೆ ಪನ್ನೀರ್ ಸೆಲ್ವಂ ತಿರುಗಿ ಬೀಳುತ್ತಿದ್ದಂತೆ  ಶಶಿಕಲಾ ಅವರ ಮುಖ್ಯಮಂತ್ರಿಯಾಗುವ ಕನಸು ಕಷ್ಟವಾಗುತ್ತಾ ಸಾಗುತ್ತಿದೆ.

ಈ ಎಲ್ಲ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ‘ಇದು ಎಐಎಡಿಎಂಕೆ ಪಕ್ಷದ ಆಂತರಿಕ ವಿಷಯವಾಗಿದ್ದು, ಆ ಪಕ್ಷದ ಆಂತರಿಕ ಬಿಕ್ಕಟ್ಟಿಗೆ ಬಿಜೆಪಿ ಯಾವುದೇ ರೀತಿಯಲ್ಲಿ ಕಾರಣವಲ್ಲ. ರಾಜ್ಯಪಾಲರ ಮೇಲೆ ಒತ್ತಡ ಹಾಕುವುದಾಗಲಿ, ಪಕ್ಷದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ರಾಜ್ಯಪಾಲರು ನಿರ್ಧರಿಸಲಿದ್ದಾರೆ’ ಎಂದು ಇಂಡಿಯಾ ಟುಡೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

Leave a Reply