ಪನ್ನೀರ್ ವಿಶ್ವಾಸದ್ರೋಹಿ ಎಂದ ಶಶಿಕಲಾ, ವಿಳಂಬವಾಯಿತೇ ಸೆಲ್ವಂ ಬಂಡಾಯ?

ಡಿಜಿಟಲ್ ಕನ್ನಡ ಟೀಮ್:

‘ಪನ್ನೀರ್ ಸೆಲ್ವಂ ಅವರ ತಪ್ಪನ್ನು ತಡೆಯುವುದು ನನ್ನ ಜವಾಬ್ದಾರಿ…’ ಇದು ತನ್ನ ವಿರುದ್ಧ ಬಂಡಾಯ ಎದ್ದಿರುವ ಪನ್ನೀರ್ ಸೆಲ್ವಂ ಕುರಿತಾಗಿ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ ಅವರ ಟೀಕೆ. ಮಂಗಳವಾರ ರಾತ್ರಿಯಿಂದ ತಮಿಳುನಾಡಿನ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದ್ದು, ಈಗ ಪನ್ನೀರ್ ಸೆಲ್ವಂ ವರ್ಸಸ್ ಶಶಿಕಲಾ ಎನ್ನುವ ಹಂತಕ್ಕೆ ಬಂದು ನಿಂತಿದೆ. ಇದೀಗ ಪನ್ನೀರ್ ಸೆಲ್ವಂ ಪ್ರತಿಪಕ್ಷ ಡಿಎಂಕೆ ಜತೆ ಕೈಜೋಡಿಸಿ ಪಕ್ಷ ಒಡೆಯಲು ಹೊರಟಿದ್ದಾರೆ ಎಂದು ಆರೋಪಿಸುವ ಮೂಲಕ ಎಐಎಡಿಎಂಕೆ ಶಾಸಕರೆಲ್ಲ ತನ್ನ ಬೆನ್ನಿಗೆ ನಿಲ್ಲುವಂತೆ ಪ್ರಚೋದಿಸಿದ್ದಾರೆ ಶಶಿಕಲಾ. ಈ ಮೊದಲೇ ಮುಖ್ಯಮಂತ್ರಿ ಹುದ್ದೆಗೆ ಏಕೆ ಆಕಾಂಕ್ಷಿ ಆಗಲಿಲ್ಲ ಎಂಬ ಪ್ರಶ್ನೆಗೂ ಶಶಿಕಲಾರಿಂದ ಉತ್ತರ ಬಂದಿದೆ. ‘ಜಯಾ ಸಾವಿನ ಬಳಿಕ ಎರಡು ತಿಂಗಳು ದುಃಖದಲ್ಲಿದ್ದೆ. ಆಗಲೇ ಕಾರ್ಯಕರ್ತರು ಬಯಸಿದ್ದರೂ ಮುಖ್ಯಮಂತ್ರಿಯಾಗುವ ಬಗ್ಗೆ ಯೋಚಿಸುವ ಮನಸ್ಥಿತಿಯಲ್ಲೇ ನಾನಿರಲಿಲ್ಲ. ಆದರೆ ಪನ್ನೀರ್ ಸೆಲ್ವಂ ಅಮ್ಮ ಆಶಯಕ್ಕೆ ತಕ್ಕದಾಗಿ ನಡೆದುಕೊಳ್ಳುತ್ತಿಲ್ಲವಾದ್ದರಿಂದ ನನ್ನ ಪ್ರವೇಶ ಅನಿವಾರ್ಯ.’

ತಾನು ಡಿಎಂಕೆ ಜತೆಗೂ ಇಲ್ಲ, ಬಿಜೆಪಿ ಸಹಾಯವನ್ನೂ ಪಡೆದಿಲ್ಲ ಎಂದು ಆರೋಪಗಳನ್ನೆಲ್ಲ ನಿರಾಕರಿಸಿರುವ ಸೆಲ್ವಂ, ಜಯಾ ಸಾವಿನ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಬ್ಬರ್ ಸ್ಟ್ಯಾಂಪ್ ಎಂದುಕೊಂಡಿದ್ದ ಪನ್ನೀರ್ ಸೆಲ್ವಂ ಗಟ್ಟಿ ದನಿಯಲ್ಲಿ ಮಾತಾಡಿರುವುದರಿಂದಲೋ ಏನೋ, ಒಂದಿಷ್ಟು ಜನಮೆಚ್ಚುಗೆಯೂ ಪಾತ್ರವಾಗಿದೆ. ಆದರೆ ಇದು ಶಶಿಕಲಾ ಮುಖ್ಯಮಂತ್ರಿಯಾಗುವುದನ್ನು ತಡೆಯುವಷ್ಟು ಶಕ್ತವೇನೂ ಅಲ್ಲ. ಏಕೆಂದರೆ ಹೆಚ್ಚಿನ ಶಾಸಕರು ಶಶಿಕಲಾ ಬಳಿ ಇದ್ದಾರೆ. ಸಂಪನ್ಮೂಲವೆಲ್ಲ ಕ್ರೊಡೀಕರಣಗೊಂಡಿರುವುದು ಶಶಿಕಲಾ ಬಳಿ ಆದ್ದರಿಂದ ಅದಕ್ಕೆ ವಿರುದ್ಧವಾಗಿ ಪಕ್ಷವನ್ನು ಹಿಡಿದಿಡುವ ಶಕ್ತಿ ಸೆಲ್ಂ ಬಳಿ ಸದ್ಯಕ್ಕಂತೂ ಕಾಣುತ್ತಿಲ್ಲ.

ಈ ನಿಟ್ಟಿನಲ್ಲಿ, ಜಯಾ ಮತ್ತು ಶಶಿಕಲಾ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿ ಸುಪ್ರೀಂಕೋರ್ಟಿನಲ್ಲೂ ಕಾದಾಡಿರುವ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯೆ ಆಸಕ್ತಿಕರವಾಗಿದೆ- ‘ಪನ್ನೀರ್ ಸೆಲ್ವಂ ಬಂಡಾಯ ವಿಳಂಬದ್ದು. ತಾನೇ ರಾಜ್ಯಪಾಲರಿಗೆ ರಾಜಿನಾಮೆ ಸಲ್ಲಿಸಿದ ಮೇಲೆ, ಅದರ ಬೆನ್ನಲ್ಲೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಶಶಿಕಲಾರನ್ನು ಬೆಂಬಲಿಸಿದ ನಂತರ ಈಗ ಅನ್ಯಾಯವಾಗಿದೆ ಎಂದರೆ ಅರ್ಥವಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ನೋಡಿದಾಗ ಶಶಿಕಲಾ ಪ್ರಮಾಣವಚನಕ್ಕೆ ಯಾವ ಅಡ್ಡಿಯೂ ಇಲ್ಲ. ಆಕೆ ವಿರುದ್ಧದ ಪ್ರಕರಣಗಳಲ್ಲಿ ತೀರ್ಪು ಬಂದಾಗ ನೋಡಿಕೊಳ್ಳಬಹುದಷ್ಟೆ. ಎಐಎಡಿಎಂಕೆ ಶಾಸಕರೆಲ್ಲ ಶಶಿಕಲಾರನ್ನು ಚುನಾಯಿಸಿದ ನಂತರ ಅವರನ್ನು ಕಾನೂನಾತ್ಮಕವಾಗಿ ತಡೆಯುವಂತಿಲ್ಲ’ ಎಂದೇ ಸ್ವಾಮಿ ಪ್ರತಿಪಾದಿಸಿದ್ದಾರೆ.

ಇನ್ನು, ಬುಧವಾರ ಸುದ್ದಿಗೋಷ್ಠಿ ನಡೆಸಿ ಪನ್ನೀರ್ ಸೆಲ್ವಂ ಅವರು ಶಶಿಕಲಾ ವಿರುದ್ಧ ಟೀಕಾ ಪ್ರಹಾರ ನಡೆಸಿದ ಬೆನ್ನಲ್ಲೇ, ಪಕ್ಷದ ಮುಖ್ಯ ಕಚೇರಿಯಲ್ಲಿ ಶಾಸಕರ ಸಭೆ ನಡೆಸಿದ ಶಶಿಕಲಾ ಎಲ್ಲರು ಒಟ್ಟಾಗಿರುವಂತೆ ಸಂದೇಶ ರವಾನಿಸಿದ್ದರು. ಈ ಸಭೆ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕಲಾ, ಪನ್ನೀರ್ ಸೆಲ್ವಂರನ್ನು ‘ವಿಶ್ವಾಸದ್ರೋಹಿ’ ಎಂದು ಕರೆದು ಅವರ ವಿರುದ್ಧ ಆರೋಪಗಳ ಸುರಿಮಳೆಗೈದರು. ಶಶಿಕಲಾ ಅವರು ಪನ್ನೀರ್ ಸೆಲ್ವಂ ವಿರುದ್ಧ ಮಾಡಿದ ಆರೋಪಗಳು ಹೀಗಿವೆ…

‘ನಮ್ಮ ಇತಿಹಾಸವನ್ನೊಮ್ಮೆ ನೋಡಿದರೆ ವಿಶ್ವಾಸದ್ರೋಹಿಗಳು ಎಂದಿಗೂ ಜಯ ಸಾಧಿಸಿಲ್ಲ. ಅಮ್ಮ ಅವರ ಸತ್ಯದ ಹಾದಿ ಯಾವುದು ಎಂಬುದನ್ನು ಈ ದ್ರೋಹಿಗಳಿಗೆ ತೋರಿಸಬೇಕಿದೆ. ತಪ್ಪು ದಾರಿ ತುಳಿದಿರುವ ಪನ್ನೀರ್ ಸೆಲ್ವಂ ಅವರನ್ನು ತಡೆಯುವುದು ನನ್ನ ಜವಾಬ್ದಾರಿಯಾಗಿದೆ.

ಎಐಎಡಿಎಂಕೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದಿಗೂ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಹೆಜ್ಜೆ ಇಡುವುದಿಲ್ಲ. ಯಾರೊಬ್ಬರು ನಮ್ಮ ಒಗ್ಗಟ್ಟನ್ನು ಒಡೆಯಲು ಸಾಧ್ಯವಿಲ್ಲ. ಅಮ್ಮ ಅವರು ನಿಧನರಾದ ನಂತರ ಪಕ್ಷದ ಬೆಂಬಲಿಗರು ನಾನು ಅಧಿಕಾರ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಒತ್ತಡಗಳಿಗೆಲ್ಲ ಎಐಎಡಿಎಂಕೆ ಪಕ್ಷವಾಗಲಿ ಅಥವಾ ನಾನಾಗಲಿ ಹಿಂದೆ ಸರಿಯುವುದಿಲ್ಲ.

ಇಷ್ಟು ವರ್ಷಗಳ ಕಾಲ ಅಮ್ಮ ಹೋರಾಟ ನಡೆಸಿದ್ದ ಪಕ್ಷದ ಜತೆ ಸೇರಿಕೊಂಡು ಪನ್ನೀರ್ ಸೆಲ್ವಂ ಸಂಚು ರೂಪಿಸುತ್ತಿದ್ದಾರೆ. ವಿರೋಧ ಪಕ್ಷಗಳು ಇಂದಿನ ಎಲ್ಲಾ ಬೆಳವಣಿಗೆಗಳ ಲಾಭ ಪಡೆಯಲು ಮುಂದಾಗಿವೆ. ಪನ್ನೀರ್ ಸೆಲ್ವಂ ಅವರ ಹಿಂದೆಯಿಂದ ಡಿಎಂಕೆ ಪಕ್ಷದವರು ಕುಮ್ಮಕ್ಕು ನೀಡುತ್ತಿದ್ದಾರೆ. ಅಧಿವೇಶನದಲ್ಲಿ ಅವರು ಒಬ್ಬರನ್ನೊಬ್ಬರು ನೋಡಿ ಮಂದಹಾಸ ಬೀರುತ್ತಿದ್ದರು. ನಮ್ಮ ಪಕ್ಷದಲ್ಲಿ ಯಾವುದೇ ಒಡಕು ಅಥವಾ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ.’

Leave a Reply