ತಮಿಳುನಾಡಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಿ ಬಿಜೆಪಿ ನೆಲೆ ವಿಸ್ತರಿಸಲು ಮೋದಿ, ಅಮಿತ್ ಶಾ ಒಳತಂತ್ರ!

(ಸಂಗ್ರಹ ಚಿತ್ರ)

author-thyagaraj (1)ದಕ್ಷಿಣ ಭಾರತದಲ್ಲಿ ಪಕ್ಷದ ನೆಲೆ ವಿಸ್ತರಿಸಿಕೊಳ್ಳುವ ಹವಣಿಕೆಯಲ್ಲಿರುವ ಬಿಜೆಪಿ ರಾಷ್ಟ್ರೀಯ ಮುಖಂಡರು ತಮಿಳುನಾಡಿನಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಿ, ಅದರಲ್ಲಿ ಪಕ್ಷದ ಬೇಳೆ ಬೇಯಿಸಿಕೊಳ್ಳಲು ತೆರೆಮರೆಯಿಂದ ಒಂದೊಂದೇ ದಾಳಗಳನ್ನುರುಳುಸುತ್ತಿದ್ದಾರೆ.

ಎಐಎಡಿಎಂಕೆ ಪರಮೋಚ್ಚ ನಾಯಕಿ ಜಯಲಲಿತಾ ನಿಧನ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ತಂದ ಓ. ಪನ್ನೀರ್ ಸೆಲ್ವಂ ಅವರನ್ನು ಕ್ಷಿಪ್ರ ರಾಜಕೀಯ ಕ್ರಾಂತಿಯಲ್ಲಿ ಪಟ್ಟದಿಂದ ಕೆಳಗಿಳಿಸಿ, ಆ ಗದ್ದುಗೆಗೆ ಏರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಶಶಿಕಲಾ ನಟರಾಜನ್ ಅವರ ಹಾದಿಯನ್ನು ಕೇಂದ್ರ ಸರಕಾರದ ಈ ದಾಳಗಳು ದುರ್ಗಮ ಮಾಡಿಟ್ಟಿವೆ. ಪ್ರತಿಪಕ್ಷ ಡಿಎಂಕೆ ಮುಖಂಡ ಸ್ಟಾಲಿನ್, ರಾಜ್ಯಪಾಲ ವಿದ್ಯಾಸಾಗರ್, ಉಸ್ತುವಾರಿ ಸಿಎಂ ಪನ್ನೀರ್ ಸೆಲ್ವಂ ಅಷ್ಟೇ ಅಲ್ಲದೇ ತನ್ನ ನೆರಳಲ್ಲಿರುವ ‘ಸ್ವತಂತ್ರ ಸಂಸ್ಥೆ’ಗಳನ್ನೂ ತನ್ನ ಗುರಿಸಾಧನೆಯ ಗೆರಿಲ್ಲಾ ಸಮರದ ಅಸ್ತ್ರಗಳನ್ನಾಗಿ ಕೇಂದ್ರ ಸರಕಾರವು ಪ್ರಯೋಗಿಸುತ್ತಿದೆ.

ಎಐಎಡಿಎಂಕೆ ಆಂತರಿಕ ಬೆಳವಣಿಗೆಗಳಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಅಲ್ಲಿನ ರಾಜ್ಯಪಾಲರ ಮೇಲೆ ಕೇಂದ್ರ ಸರಕಾರ ಯಾವುದೇ ಒತ್ತಡ ಹೇರಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಹೇಳಿರುವುದು ಸಹಜ ಮತ್ತು ನಿರೀಕ್ಷಿತ. ಮನೆಮುರುಕು, ಪಕ್ಷ ಒಡಕು ಕೆಲಸ ಮಾಡುವ ಯಾರೂ ತಾವದನ್ನೂ ಮಾಡಿದ್ದಾಗಿ ಒಪ್ಪಿಕೊಳ್ಳುವುದಿಲ್ಲ. ಇದೆಲ್ಲ ರಾಜಕೀಯ ತಂತ್ರಗಾರಿಕೆಯ ಒಂದು ಭಾಗ. ಇದಕ್ಕೆ ಯಾವ ಪಕ್ಷವೂ ಹೊರತಲ್ಲ. ಈಗ ಬಿಜೆಪಿ ಸರದಿ ಬಂದಿದೆ. ರಾಜನಾಥ್ ಸಿಂಗ್ ಗಿಳಿಪಾಠ ಒಪ್ಪಿಸಿದ್ದಾರೆ ಅಷ್ಟೇ.

ಶಶಿಕಲಾಗೆ ಸಿಎಂ ಆಗುವ ಆಸೆ. ಬಿಜೆಪಿಗೆ ತಮಿಳುನಾಡಿನಲ್ಲಿ ಪಕ್ಷ ಬೆಳೆಸುವಾಸೆ. ಅಂಥ ಸಂದರ್ಭದಲ್ಲಿ ಜಯಲಲಿತಾ ಮರಣರೂಪದಲ್ಲಿ ಬಂದ ಅನಾಯಾಸ ಅವಕಾಶವನ್ನು ಬಿಡಲಾಗುತ್ತದೆಯೇ? ಶಶಿಕಲಾ ಮತ್ತು ಬಿಜೆಪಿ ನಡುವಣ ಈ ಅವಕಾಶ ಬಳಕೆ ಸಮರ ಫಲವೇ ತಮಿಳುನಾಡನಲ್ಲಿ ಈಗ ಸೃಷ್ಟಿ ಆಗಿರುವ ರಾಜಕೀಯ ಅನಿಶ್ಚತೆ. ಕೈಯಲ್ಲಿ ಅಧಿಕಾರ ಇರುವ ಬಿಜೆಪಿ, ಇನ್ನಷ್ಟೇ ಅಧಿಕಾರ ಹಿಡಿಯಬೇಕೆಂದು ಹಪಾಹಪಿಸಿತ್ತಿರುವ ಶಶಿಕಲಾ ನಡುವಣ ಹೋರಾಟದಲ್ಲಿ ‘ಅಧಿಕಾರ ಬಲ’ ಕೆಲಸ ಮಾಡುವುದು ಸಹಜ. ಅದು ತಾತ್ಕಾಲಿಕವೋ, ಶಾಶ್ವತವೋ ಬೇರೆ ಮಾತು. ಹೀಗಾಗಿ ಸಿಎಂ ಗಾದಿಯತ್ತ ಶಶಿಕಲಾ ಇಡುತ್ತಿರುವ ಪ್ರತಿ ಹೆಜ್ಜೆಯನ್ನು ಬಿಜೆಪಿ ಮುಖಂಡರು ಎರಡೆರಡು ಪಟ್ಟು ಹಿಂದಕ್ಕೆ ಸರಿಸುತ್ತಿದ್ದಾರೆ. ತತ್ಪರಿಣಾಮ ಪನ್ನೀರ್ ಸೆಲ್ವಂ ಅವರು ಶಶಿಕಲಾ ವಿರುದ್ಧ ಸೆಡ್ಡು ಹೊಡೆದು ಪಕ್ಷದ ಖಜಾಂಚಿ ಸ್ಥಾನದಿಂದ ವಜಾಗೊಂಡಿದ್ದಾರೆ.

ನಿಜ, 1983 ರಲ್ಲಿ ಅಂದಿನ ಮುಖ್ಯಮಂತ್ರಿ ಎಂಜಿಆರ್ ಅವರು ‘ಪರಮಾಪ್ತೆ’ ಜಯಲಲಿತಾ ಅವರಿಗೆ ಪಕ್ಷದ ಪ್ರಚಾರ ಉಸ್ತುವಾರಿ ವಹಿಸಿದ ದಿನದಿಂದಲೂ ಪತಿ ನಟರಾಜನ್ ಮೂಲಕ ಜಯಾ ಅವರಿಗೆ ಜತೆಯಾದ ಶಶಿಕಲಾ ಮೂರೂವರೇ ದಶಕಗಳ ಒಡನಾಟದಲ್ಲಿ ಅವರ ಒಳ, ಹೊರ ಪಟ್ಟುಗಳನ್ನೆಲ್ಲ ನಿರ್ದೇಶಿಸುವ ಮಟ್ಟಿಗೆ ಬೆಳೆದವರು. ಅಂಥ ಶಶಿಕಲಾ ಒಂದೊಮ್ಮೆ ಸಿಎಂ ಗಾದಿಗೇರಿದರೆ ಎಂಥ ಪ್ರಬಲ ನಾಯಕಿಯಾಗಿ ಬೆಳೆಯಬಲ್ಲರು ಎಂಬ ಕಲ್ಪನೆ ಡಿಎಂಕೆಗಾಗಲಿ, ಬಿಜೆಪಿಗಾಗಲಿ ಇಲ್ಲದೇ ಇಲ್ಲ. ಒಬ್ಬ ಶತ್ರುವನ್ನು ಬೆಳೆದ ಮೇಲೆ ಎದುರಿಸುವುದಕ್ಕಿಂತ ಆತ ಬೆಳೆಯದಂತೇ ನೋಡಿಕೊಳ್ಳುವುದು ರಾಜಕೀಯ ಜಾಣ್ಮೆ ಆಗುತ್ತದೆ. ಅಂತೇಯೆ ಶಶಿಕಲಾ ಅವರನ್ನು ಮೂಲದಲ್ಲೇ ಬಗ್ಗುಬಡಿಯಲು ಬಿಜೆಪಿ ಎಲ್ಲ ತಂತ್ರಗಳನ್ನು ಅನುಸರಿಸುತ್ತಿದೆ.

ಹಿಂದೆ ಅಧಿಕಾರ ತ್ಯಜಿಸುವ ಸಂದರ್ಭ ಬಂದಾಗಲೆಲ್ಲ ಜಯಾ ಜಾಗದಲ್ಲಿ ತಮ್ಮದೇ ತೇವರ್ ಸಮುದಾಯದ ದುರ್ಬಲ ವ್ಯಕ್ತಿ ಪನ್ನೀರ್ ಸೆಲ್ವಂ ಅವರನ್ನು ಪ್ರತಿಷ್ಠಾಪನೆ ಮಾಡಿದ್ದರ ಹಿಂದೆಯೂ ಶಶಿಕಲಾ ಅವರ ಮುಂದೊಂದು ದಿನ ತಾವೇ ಸಿಎಂ ಕನಸು ಕೆಲಸ ಮಾಡಿತ್ತು. ಹೀಗಾಗಿ ಜಯಾ ನಿಧನ ನಂತರ ಶಶಿಕಲಾ ನಿರ್ದೇಶನದ ಮೇರೆಗೇ ಸಿಎಂ ಆದ ಪನ್ನೀರ್ ಸೆಲ್ವಂ ಅವರ ದುರ್ಬಲ ನಾಯಕತ್ವವನ್ನೇ ಬಿಜೆಪಿ ಬೆಳವಣಿಗೆಯ ಗೊಬ್ಬರ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಯತ್ನಿಸಿದರು. ಮೊದಲ ಹಂತದಲ್ಲಿ ಪನ್ನೀರ್ ಸೆಲ್ವಂ ಬೇನಾಮಿ ಎನ್ನಲಾದ ತಿರುಮಲ ತಿರುಪತಿ ಟ್ರಸ್ಟಿಗಳಲ್ಲಿ ಒಬ್ಬರಾದ ಶೇಖರರೆಡ್ಡಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಯಿತು. ಇಲ್ಲಿ ಸಿಕ್ಕ ದಾಖಲೆಗಳಿಗೆ ಪಕ್ಕಾಗಿ ಪೆಚ್ಚು ಮೋರೆ ಹಾಕಿಕೊಂಡು ದಿಲ್ಲಿಗೆ ಹೋದ ಪನ್ನೀರ್ ಸೆಲ್ವಂ ತಮಿಳುನಾಡಿಗೆ ಮರಳುವಷ್ಟರಲ್ಲಿ ‘ಬಿಜೆಪಿ ಮರುಳ’ರಾಗಿದ್ದರು. ಅಲ್ಲಿಂದ ಬಂದವರೇ ಇಪ್ಪತ್ತು ವರ್ಷಗಳಿಂದ ಅವಕಾಶ ಸಿಗದಿದ್ದ ಆರೆಸ್ಸೆಸ್ ಪಥಸಂಚಲನಕ್ಕೆ ಅನುವು ಮಾಡಿಕೊಟ್ಟರು. ಹಾಗಿತ್ತು ದಿಲ್ಲಿಯ ಗಾಳ!

ದಿಲ್ಲಿಯಿಂದ ಬಂದ ನಂತರ ಪನ್ನೀರ್ ಸೆಲ್ವಂ ವರ್ತನೆಯಲ್ಲಿ ಸೂಕ್ಷ್ಮ ಬದಲಾವಣೆ ಕಂಡ ಶಶಿಕಲಾ ಇನ್ನು ತಡಮಾಡಿದರೆ ಸರಿಯಿಲ್ಲ ಎಂಬ ತೀರ್ಮಾನಕ್ಕೆ ಬಂದವರೇ ಪಕ್ಷದೊಳಗೇ  ಕ್ಷಿಪ್ರ ಕ್ರಾಂತಿ ನಡೆಸಿ, ಸೆಲ್ವಂ ಅವರಿಂದ ಸಿಎಂ ಗಾದಿಗೆ ರಾಜೀನಾಮೆ ಕೊಡಿಸಿ, ತಾವೇ ಶಾಸಕಾಂಗ ಪಕ್ಷದ ನಾಯಕರಾಗುವಂತೆ ನೋಡಿಕೊಂಡರು. ಹಾಗೆಂದು ಶಶಿಕಲಾ ಅವರಿಗೆ ಸಿಎಂ ಆಗುವ ಆಸೆ ಇದ್ದಕ್ಕಿದ್ದಂತೆ ಬಂದದ್ದೇನೂ ಅಲ್ಲ. ಜಯಲಲಿತಾ ಅವರು ಬದುಕ್ಕಿದ್ದಾಗಲೇ ಇತ್ತು. ಅವರು ಬದುಕಿದ್ದಾಗಲೇ ಪ್ರಯತ್ನಿಸಿ, ಜಯಾ ಅವರಿಂದ ಮೂರು ಬಾರಿ ಮನೆಯಿಂದ ಹೊರಹಾಕಿಸಿಕೊಂಡು ಅಷ್ಟೇ ವೇಗವಾಗಿ ಗೋಡೆಗೆ ಬಡಿದು ವಾಪಸು ಪುಟಿದು ಬರುವ ಚೆಂಡಿನಂತೆ ಜಯಾ ಅಂಗಳದಲ್ಲಿ ವಿರಾಜಮಾನರಾಗಿದ್ದರು. ಜಯಾ ನಿಧನದ ಕೆಲ ದಿನಗಳಲ್ಲಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾದಾಗ ಮಾಜಿ ಸಚಿವ ಸೇಂಗೋಟಿಯನ್, ಸಿ. ಪೊನ್ನಯನ್, ಪನ್ರುಟ್ಟಿ ರಾಮಚಂದ್ರನ್ ಸೇರಿದಂತೆ ಹಲವರು ‘ನಿರುದ್ಯೋಗಿ ನಾಯಕರು’ ವಿರೋಧ ವ್ಯಕ್ತಪಡಿಸಿದ್ದರು. ಜಯಲಲಿತಾ ಸಂಸ್ಥೆಗಳು, ಆಸ್ತಿ-ಪಾಸ್ತಿಯಲ್ಲಿ ಸಮಪಾಲು ಹೊಂದಿದ್ದು ಸಂಪತ್ತು, ಪಕ್ಷದ ಮೇಲಿನ ಹಿಡಿತ, ಅಧಿಕಾರ, ರಾಜಕೀಯ ತಂತ್ರಗಾರಿಕೆ ಎಲ್ಲವನ್ನೂ ಚಲಾಯಿಸಿ ಅವರನ್ನು ‘ಸರಿ’ ಮಾಡಿಕೊಂಡರು. ವಿರೋಧ ವ್ಯಕ್ತಪಡಿಸಿದ ಮೂವರು ನಾಯಕರು ಪಕ್ಷದ ಸಂಘಟನಾ ಕಾರ್ಯದರ್ಶಿಗಳಾಗುವ ಮೂಲಕ ನಿರುದ್ಯೋಗ ನಿವಾರಿಸಿಕೊಂಡರು. ಈಗ ಶಶಿಕಲಾ ಸಿಎಂ ಆಗಬಾರದೆಂದು ಧ್ವನಿ ಎತ್ತಿರುವ ಮಾಜಿ ಸಂಸದ ಮನೋಜ್ ಪಾಂಡಿಯೆನ್, ಮಾಜಿ ಸ್ಪೀಕರ್ ಪಿ.ಎಚ್. ಪಾಂಡಿಯೆನ್, ಮಾಜಿ ಸಚಿವ ಮುನಿಸ್ವಾಮಿ ಕೂಡ ಉದ್ಯೋಗ ಅನ್ವೇಷಣೆಯಲ್ಲಿದ್ದಾರೆ. ಅದು ಎಐಎಡಿಎಂಕೆಯಲ್ಲೋ, ಡಿಎಂಕೆಯಲ್ಲೋ, ಬಿಜೆಪಿಯಲ್ಲೋ ನೋಡಬೇಕು.

ಮೊದಲೇ ಹೇಳಿದಂತೆ ಅಧಿಕಾರ ರಾಜಕೀಯದಲ್ಲಿ ತಂತ್ರ, ಪ್ರತಿತಂತ್ರ, ಕುತಂತ್ರ ಇದ್ದದ್ದೇ. ಇದಕ್ಕೆ ಶಶಿಕಲಾ ಆಗಲಿ, ಪನ್ನೀರ್ ಸೆಲ್ವಂ ಆಗಲಿ, ಬಿಜೆಪಿಯಾಗಲಿ, ಡಿಎಂಕೆ ಆಗಲಿ ಅಥವಾ ಮತ್ತಾವುದೇ ಪಕ್ಷ, ವ್ಯಕ್ತಿಯಾಗಲಿ ಹೊರತಲ್ಲ. ಆದರೆ ಆ ಸಂದರ್ಭದ ಬೆಳವಣಿಗೆಗಳು ದಾಖಲಾಗುತ್ತಾ ಹೋಗುತ್ತವೆ ಅಷ್ಟೇ. ತಮಿಳುನಾಡು ಉಸ್ತುವಾರಿ ಹೊತ್ತಿರುವ ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ಅವರಿಗೆ ಶಶಿಕಲಾ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಬಾಕಿ ಇರುವುದು ಪನ್ನೀರ್ ಸೆಲ್ವಂ ರಾಜೀನಾಮೆ ಅಂಗೀಕಾರ ಮಾಡಿದಾಗ ಆಗದಿರುವುದು ಸೋಜಿಗದ ಸಂಗತಿ. ಇದೀಗ ಶಶಿಕಲಾ ಸಿಎಂ ಪದಗ್ರಹಣ ವಿಳಂಬಕ್ಕೆ ತೀರ್ಪು ಬಾಕಿ ನೆಪ ಮಾಡಿರುವಂತೆ ಸೆಲ್ವಂ ರಾಜೀನಾಮೆ ಅಂಗೀಕಾರಕ್ಕೂ ಅನ್ವಯಿಸಿ ಅದನ್ನು ಹಾಗೆ ಬಾಕಿ ಇಡಬಹುದಿತ್ತು. ತಮಿಳುನಾಡಿನಲ್ಲಿ ಇಷ್ಟೆಲ್ಲ ರಾಜಕೀಯ ಅಲ್ಲೋಲ ಕಲ್ಲೋಲ ಉಂಟಾಗಿರುವಾಗ ಆ ರಾಜ್ಯಕ್ಕೆ ಕಾಲಿಡದೆ ತಲೆ ಮರೆಸಿಕೊಂಡು ಓಡಾಡುವ ಅಗತ್ಯವೇನಿತ್ತು? ದಿಲ್ಲಿಯಲ್ಲಿ ರಾಜನಾಥಸಿಂಗ್ ಅವರನ್ನು ಭೇಟಿ ಮಾಡಿದುದರ ಔಚಿತ್ಯವಾದರೂ ಏನು? ಅದರಲ್ಲೂ ಸಿಎಂ ಪದಗ್ರಹಣಕ್ಕೆ ಶಶಿಕಲಾ ಇನ್ನೂ ರಾಜ್ಯಪಾಲರಿಗೆ ಕ್ಲೇಮು ಸಲ್ಲಿಸದೇ ಇರುವಾಗ. ಒಂದೊಮ್ಮೆ ಅವರು ಚೆನ್ನೈಗೆ ಬಂದಿದ್ದರೆ ರಾಜ್ಯಪಾಲರನ್ನು ಶಾಸಕರು ಅಪಹರಣ ಮಾಡಿ ಶಶಿಕಲಾ ಅವರಿಗೆ ಪ್ರಮಾಣ ಬೋಧಿಸುವಂತೆ ಒತ್ತಡ ಹಾಕಲು ಸಾಧ್ಯವಿತ್ತೇ?! ಬಂದು ಶಾಸಕರಿಗೆ ಇರುವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬಹುದಿತ್ತಲ್ಲ. ಅದನ್ನು ಬಿಟ್ಟು ಎಐಎಡಿಎಂಕೆ ಆಂತರಿಕ ವಿದ್ಯಮಾನ ಕುರಿತು ರಾಜನಾಥಸಿಂಗರ ಬಳಿ ಚರ್ಚೆ ನಡೆಸುವುದೇನಿತ್ತು? ಅದೂ ಎಐಎಡಿಎಂಕೆ ಬೆಳವಣಿಗೆಗಳಿಗೂ ತಮಗೂ ಸಂಬಂಧ ಇಲ್ಲ ಎಂದು ರಾಜನಾಥಸಿಂಗರೇ ಹೇಳಿರುವಾಗ!

ಪನ್ನೀರು ಸೆಲ್ವಂ ಬಂಡಾಯದ ಹಿಂದೆಯೂ ಕಾಣದ ಕೈಗಳ ಕೈವಾಡವಿದೆ. ಆ ಕೈಗಳು ದಿಲ್ಲಿಯಲ್ಲೇ ಇರುವುದು ಕಾಕತಾಳೀಯವೇನಲ್ಲ. ಹಾಗೊಮ್ಮೆ ಪನ್ನೀರ್ ಸೆಲ್ವಂಗೆ ರಾಜೀನಾಮೆ ಕೊಡುವುದು ಇಷ್ಟವಿಲ್ಲದಿದ್ದರೆ ರಾಜೀನಾಮೆ ಕೊಡದೇ ಇರಬಹುದಿತ್ತು. ಬಲವಂತವಾಗಿ ರಾಜೀನಾಮೆ ಪಡೆಯಲಾಯಿತು ಎಂದು ಈಗ ಹೇಳುವುದಕ್ಕಿಂಥ ರಾಜೀನಾಮೆ ಕೊಡದೇ, ‘ಬಲವಂತ ಮಾಡುತ್ತಿದ್ದಾರೆ’ ಎಂದು ಆಗಲೂ ಹೇಳಬಹುದಿತ್ತು. ಸಿಎಂ ಆಗಿ ಶಾಸಕರನ್ನು ಜತೆಗಿಟ್ಟುಕೊಂಡೇ ಚಿಕ್ಕಮ್ಮನಿಗೆ ಮಣ್ಣು ಮುಕ್ಕಿಸಬಹುದಿತ್ತು. ಆದರೆ ಅದನ್ನು ಮಾಡಲಾಗಲಿಲ್ಲ. ಏಕೆಂದರೆ ಪಕ್ಷದ ಶಾಸಕರನ್ನು ಜತೆಗಿಟ್ಟುಕೊಳ್ಳುವಷ್ಟು ಸಾಮರ್ಥ್ಯ ಬೇಕಲ್ಲಾ? ಸೆಲ್ವಂಗೆ ಅಷ್ಟೆಲ್ಲ ತಾಕತ್ತಿದ್ದಿದ್ದರೆ ಶಶಿಕಲಾ ಅವರನ್ನು ಈ ಹಿಂದೆ ಮುಖ್ಯಮಂತ್ರಿಯನ್ನಾಗಿಯೇ ಮಾಡುತ್ತಿರಲಿಲ್ಲ. ಯಾವುದೇ ನಾಯಕರು ಪ್ರಬಲ ಪ್ರತಿಸ್ಪರ್ಧಿಯನ್ನು ಗೊತ್ತಿದ್ದೂ ಗೊತ್ತಿದ್ದೂ ಉತ್ತರಾಧಿಕಾರಿ ಅಥವಾ ಪೂರ್ವಾಧಿಕಾರಿ ಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡುವುದಿಲ್ಲ ಎಂಬುದು ರಾಜಕೀಯ ಒಳನಿಯಮ. ಹೀಗಾಗಿ ಪನ್ನೀರ್ ಸೆಲ್ವಂ ಅವರಲ್ಲಿ ಈಗ ಇದ್ದಕ್ಕಿದ್ದಂತೆ ‘ಪೌರುಷಸಿಂಹ’ ಅವಿರ್ಭವಿಸಿರುವುದರ ಹಿಂದೆಯೂ ದಿಲ್ಲಿಯಲ್ಲಿ ಹಿಂದೆ ಅವರನ್ನು ತಣ್ಣಗೆ ಮಾಡಿದ್ದ ಶಕ್ತಿಗಳ ಯುಕ್ತಿಯಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಯಾವಾಗ ಬೇಕಾದರೂ ನಾಯಕರಾಗಬಹುದು, ಯಾವಾಗ ಬೇಕಾದರೂ ನಾಯಕನಿಗೆ ಜ್ಞಾನೋದಯ ಆಗಬಹುದು, ಆ ನಾಯಕ ತನ್ನ ನಾಯಕನ ವಿರುದ್ಧ ಬಂಡಾಯ ಏಳಬಹುದು ಎಂಬುದನ್ನು ಇಲ್ಲಿ ಕಾಕತಾಳೀಯ ಎನ್ನಲಾಗದು.

ಅದೇ ರೀತಿ ಡಿಎಂಕೆ ನಾಯಕ ಸ್ಟಾಲಿನ್ ಅವರು, ‘ಜಯಲಲಿತಾ ಸಿಎಂ ಆಗುವುದಕ್ಕೆ ಜನಾದೇಶ ಇತ್ತೇ ವಿನಃ ಅವರ ಮನೆಕೆಲಸದವಳು (ಶಶಿಕಲಾ) ಆಗಲಿ ಎಂದಲ್ಲ. ತಾವು ದಿಲ್ಲಿಗೆ ಹೋಗಿ ಇದನ್ನು ತಡೆಯುತ್ತೇನೆ’ ಎಂದು ಘರ್ಜಿಸಿದ್ದಾರೆ. ಹಾಗಾದರೆ ಜಯಾ ಜೈಲಿಗೆ ಹೋದಾಗ ಪನ್ನೀರ್ ಸೆಲ್ವಂ ಸಿಎಂ ಗಾದಿಯಲ್ಲಿ ಕೂತಾಗ ಇದೇ ಸ್ಟಾಲಿನ್ ಸುಮ್ಮನಿದ್ದರಲ್ಲಾ ಆಗೇಕೆ ಸೆಲ್ವಂ ಸಿಎಂ ಆಗಲು ಜನಾದೇಶ ಇಲ್ಲ ಎಂಬುದು ಇವರಿಗೆ ನೆನಪಾಗಲಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮನೆಗೆಲಸದವರು, ಬೀದಿಯಲ್ಲಿ ಕಸ ಗುಡಿಸುವವರು, ಎಳನೀರು ಕೊಚ್ಚುವವರು, ಚಹಾ ಮಾರುವವರು ಯಾರು ಬೇಕಾದರೂ ಸಿಎಂ ಆಗಬಹುದು. ಅದೇ ಭಾರತ ಪ್ರಜಾತಂತ್ರ ವ್ಯವಸ್ಥೆಯ ಸೌಂದರ್ಯ, ಬಲ ಮತ್ತು ರಕ್ಷೆ. ತಮಿಳುನಾಡು ರಾಜ್ಯವನ್ನಾಳಿದ ಅಲ್ಪ ಜನಸಂಖ್ಯೆ ಸಮುದಾಯಗಳಲ್ಲಿ ಒಂದನ್ನು ಪ್ರತಿನಿಧಿಸುವ ಸ್ಟಾಲಿನ್ ತಮ್ಮ ತಂದೆ ಕರುಣಾನಿಧಿ ಕೂಡ ಆ ಸ್ಥಾನವನ್ನು ಅಲಂಕರಿಸಿದ್ದರು, ತಾವು ಕೂಡ ಅದರ ಆಕಾಂಕ್ಷಿ ಎಂಬುದನ್ನು ಈ ಸಂದರ್ಭದಲ್ಲಿ ಮರೆತು ಹೋದದ್ದು ಅವರ ರಾಜಕೀಯ ಆಜ್ಞಾನದ ಸಂಕೇತ. ಬಹುಶಃ ಜಯಲಲಿತಾ ಅವರನ್ನು ಅರಗಿಸಿಕೊಳ್ಳಲಾಗದೆ ಹೈರಾಣಾಗಿ ಹೋಗಿರುವ ಡಿಎಂಕೆಗೆ ಜಯಾ ಅವರನ್ನೇ ನಿಯಂತ್ರಿಸುತ್ತಿದ್ದ ಶಶಿಕಲಾ ಒಂದೊಮ್ಮೆ ಸಿಎಂ ಆಗಿಬಿಟ್ಟರೆ ಗತಿ ಏನು ಎಂಬ ಭಯ ಇನ್ನಿಲ್ಲದಂತೆ ಕಾಡುತ್ತಿರಬೇಕು. ಎಲ್ಲಕ್ಕಿಂತ ಮಿಗಿಲಾಗಿ ದಿಲ್ಲಿಯಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕುತ್ತೇನೆ ಎಂದು ಸ್ಟಾನಿಲ್ ಹೇಳಿದ್ದು ಕೂಡ ತಮಿಳುನಾಡಿನ ರಾಜಕೀಯ ಬೆಳವಣಿಗೆಯಲ್ಲಿ ಯಾರ್ಯಾರ ಕೈವಾಡವಿದೆ ಎಂಬುದರ ಧ್ಯೋತಕ.

ಸದ್ಯಕ್ಕೆ ಕೇಂದ್ರ ಸರಕಾರದ ಪರಮಾಪ್ತರಾಗಿರುವ ಸುಬ್ರಹ್ಮಣ್ಯಂಸ್ವಾಮಿ, ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ವರ್ತನೆ ಸಂವಿಧಾನಬಾಹಿರ ಎಂದು ಹೇಳಿರುವುದು ಇಡೀ ಪ್ರಹಸನದ ತಿರುಳನ್ನು ಬಿಂಬಿಸುತ್ತಿದೆ.

Leave a Reply