ಅತಿಥಿಗಳಾಗಿ ಬರುವ ವಿದೇಶಿ ವಿದ್ಯಾರ್ಥಿಗಳಿಗೆ ನೆಲದ ಕಾನೂನಿನ ಅರಿವಿರಬೇಕು… ನಾವು ಪೂರ್ವಾಗ್ರಹಗಳಿಂದ ಹೊರಬರಬೇಕು

author-geetha‘ಕರಿ ಮಾಯೆ ಅಂದ್ರೆ ಏನು? ನಂಗೆ ಅರ್ಥವಾಗಲು ಕೆಲವು ನಿಮಿಷಗಳೇ ಬೇಕಾದವು…’ ಅವರುಗಳು ಅವರ ಕರೀ ಮೈಯ ಮಾಟದಿಂದ ಗಂಡಸರನ್ನು ಆಕರ್ಷಿಸಿ ಮಾಂಸದಂಧೆ ನಡೆಸುತ್ತಾರೆ ಎಂದಾಗ ಇನ್ನೆಂಟು ನಿಮಿಷಗಳು ಬೇಕಾದವು, ವೇಶ್ಯಾವಾಟಿಕೆ ನಡೆಸುತ್ತಾರೆ ಎಂದು ಹೇಳುವ ಪ್ರಯತ್ನವಿದು ಎಂದು…

‘ಈಗ ನೀವು ಏನು ಹೇಳಲು ಪ್ರಯತ್ನಿಸುತ್ತಿದ್ದೀರಿ?’

‘ನಮ್ಮ ಸುದ್ದಿವಾಹಿನಿಗಳ ಭಾಷಾ ಪ್ರಯೋಗ, ಜನಾಂಗೀಯ ನಿಂದನೆ ಮಾಡುವಂಥ ಪದ ಬಳಕೆಯನ್ನು ಖಂಡಿಸುತ್ತಿದ್ದೇನೆ ಎಂದು ಹೇಳುವ ಪ್ರಯತ್ನ ನನ್ನದು…’

‘ಸರಿ ಸರಿ… ನಿನ್ನೆ ಸುದ್ದಿಯಲ್ಲಿ ವರದಿಗಾರರು ಹೇಳುತ್ತಿದ್ದರು… ಅವರು ಆಸ್ಪತ್ರೆಗೆ ಸೇರಿದ್ದಾರೆ… ಏಕೆಂದರೆ ಅವರ ಹೃದಯಕ್ಕೆ accident (!) ಆಗಿದೆ ಎಂದು…’

‘ವಾಕ್ಯಗಳನ್ನು ಪೂರ್ಣಗೊಳಿಸುವುದಿಲ್ಲ… ಸಣ್ಣ ಸಣ್ಣ ವಾಕ್ಯಗಳಲ್ಲಿ ಸುದ್ದಿ ಹೇಳಿದರೂ ಆಗುತ್ತದೆ. ಅದು ಬಿಟ್ಟು ದೊಡ್ಡ ದೊಡ್ಡ ವಾಕ್ಯ ರಚನೆ ಮಾಡಲು ಹೋಗುತ್ತಾರೆ… ಎಡವುತ್ತಾರೆ. ಆಂಗ್ಲ ಭಾಷೆ ಬರುತ್ತದೆ ಎಂದು ತೋರಿಸಿಕೊಳ್ಳಲೋ ಅಥವಾ ಕನ್ನಡದ ಪದ ಅರಿವಿಲ್ಲದೆಯೋ ಆಂಗ್ಲ ಪದಗಳನ್ನು ಬಳಸುತ್ತಾರೆ. ವಾಕ್ಯ ರಚನೆ ಬಿದ್ದು ಹೋಗುತ್ತದೆ. ಅರ್ಥವೇ ಬದಲಾಗುತ್ತದೆ.

‘ಅವರಿಗೆ ತುಂಬಾ feeling ಆಯಿತು’ ಎನ್ನುತ್ತಾರೆ. ‘feeling ಆಯಿತು!?’ ಏನು feeling ಆಯಿತು? ಸಂತಸವೋ? ದುಖಃವೋ? ಬೇಸರವೋ? ಸಂಕಟವೋ? ಅದು ಹೇಳುವುದಿಲ್ಲ…

‘ಈಗ ನೀವು ಏನು ಹೇಳಬೇಕು ಎಂದು ಹೊರಟಿರುವಿರಿ?’

‘ಪತ್ರಿಕೆಗಳಲ್ಲಿ ಬರೆಯುವವರು, ಸುದ್ದಿ ವಾಹಿನಿಗಳಲ್ಲಿ ವಾರ್ತೆಗಳನ್ನು ಓದುವವರು, ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಂದಲೇ ವರದಿ ನೀಡುವವರು… ಕನ್ನಡ ಭಾಷೆ ತಿಳಿದಿರಲಿ… ಸಮಯಕ್ಕೆ, ಸಂದರ್ಭಕ್ಕೆ ತಕ್ಕಂತೆ ಪದಗಳ ಬಳಕೆ ಮಾಡಲಿ. ಅವರಿಗೆಲ್ಲಾ ಒಂದು ತರಭೇತಿ ಏರ್ಪಡಿಸಬೇಕು. ಸಾಹಿತ್ಯಿಕವಾಗಿ ಅಲ್ಲ… ಭಾಷೆಯಾಗಿ… ಕನ್ನಡವನ್ನು ತಿಳಿದರೆ ಸಾಕು ಸಂವಹನ ಸುಸೂತ್ರವಾಗುತ್ತದೆ. ಮಾಂಸದಂಧೆ ಅಂದರೆ ಕುರಿ ಮಾಂಸ, ಕೋಳಿ ಮಾಂಸ ಅಂತೆಲ್ಲಾ ತಲೆಗೆ ಬರುತ್ತದೆ… ಜೊತೆಗೆ ಸುದ್ದಿ ಕೊಡುವವರು ಸುದ್ದಿ ಕೊಡಬೇಕಷ್ಟೇ. ನ್ಯಾಯಾಧೀಶರಂತೆ ಆದೇಶ ಕೊಡಬಾರದು. ಅವರ ಪೂರ್ವಾಗ್ರಹಗಳನ್ನು ನಮ್ಮ ಮೇಲೆ ಹೇರಬಾರದು.’

‘ಯಾಕೆ ಹಾಗಂತೀರಿ?’

‘ಬಿಳಿಯರಿಗೆ ಕರಿ ಚರ್ಮದವರು, ನಮ್ಮಂತೆ ಗೋಧಿ ಮೈಬಣ್ಣದವರನ್ನು ಕಂಡರೆ ಅಸಹನೆ… Racial prejudice… ಗೋಧಿ ಮೈಬಣ್ಣದ ನಾವೇನು ಅದರಿಂದ ಹೊರತಲ್ಲ… ಕರಿಯರನ್ನು ಕಂಡರೆ ಅದೇನೋ ನಿಕೃಷ್ಟ ಭಾವನೆ ನಮ್ಮಲ್ಲಿ… ಬಿಳಿಯರಿಗೆ ನಡೆಹಾಸು ಹಾಸುವ ನಾವು ಕರಿಯರನ್ನು ಅನುಮಾನದಿಂದ ನೋಡುತ್ತೇವೆ. ಓದಲು ಬಂದಿರುವ, ಇಲ್ಲಿ ಕೆಲಸ ಮಾಡುವ ಅವರನ್ನೆಲ್ಲಾ ಅನುಮಾನದಿಂದ ನೋಡುತ್ತೇವೆ. Drug trafficking ನಲ್ಲಿ ಒಬ್ಬ ಕರಿಯ ಸಿಕ್ಕಿಹಾಕಿಕೊಂಡ ಕೂಡಲೇ, ವೀಸಾ ಮುಗಿದ ಮೇಲೂ ಇಲ್ಲೇ ಉಳಿದಿರುವ ಒಬ್ಬ ಕರಿಯ ಸಿಕ್ಕಿ ಹಾಕಿಕೊಂಡ ಕೂಡಲೇ… ಒಬ್ಬಳು ಮೈಮಾರುವ ದಂಧೆ ನಡೆಸುತ್ತಾ ದುಡ್ಡಿನ ವಿಷಯದಲ್ಲಿ ಜಗಳವಾಗಿ ಅವಳ ಕೊಲೆಯಾದರೂ ಆ ಸಾವಿಗೆ ಕೊಂಚವೂ ಖೇದ ವ್ಯಕ್ತಪಡಿಸದೆ… ನಮ್ಮ ಬೆಂಗಳೂರಿನಲ್ಲಿ ಇರುವ ಕರಿಯರೆಲ್ಲಾ ವೀಸಾ ಇಲ್ಲದೆ, ಡ್ರಗ್ ದಂಧೆ ಮಾಡುತ್ತಾ ಇರುವರೇನೋ ಎಂಬಂತೆ ಸುದ್ದಿ ಕೊಡುವುದು ತಪ್ಪಲ್ಲವೇ? ಆ ಹೆಣ್ಣು ಮಕ್ಕಳು ಅವರ ಪಾಕೆಟ್ ಮನಿಗೆ ಮೈಮಾರುವ ಕಾಯಕ ಮಾಡುತ್ತಾರೆ. ಏನಾದರು ಹೆಚ್ಚು ಕಡಿಮೆಯಾದರೆ ಗುಂಪು ಕಟ್ಟಿಕೊಂಡು ಜಗಳಕ್ಕೆ ಇಳಿಯುತ್ತಾರೆ… ಅವರ ದೇಶದಲ್ಲಿ ಬಡತನ… ಇಲ್ಲಿ ಬಂದು ಮಜಾ ಉಡಾಯಿಸುತ್ತಾರೆ ಎಂದು ತಿಳಿದವರಿಗಿಂಥ ಹೆಚ್ಚಾಗಿ ತೀರ್ಮಾನ ನೀಡುತ್ತೇವೆ. ತಪ್ಪಲ್ಲವೇ? ನಮ್ಮ ಮನೆಯಲ್ಲಿ ನಾವು ಹೀಗೆ ಮಾತಾಡಿಕೊಂಡರೆ ತಪ್ಪಾದರೂ ಪರವಾಗಿಲ್ಲ. ಆದರೆ ಒಂದು ಸುದ್ದಿ ವಾಹಿನಿಯಲ್ಲಿ ಕುಳಿತು ಮಾತನಾಡಿದರೆ ತಪ್ಪಾಗುತ್ತದೆ.’

‘ಅದು ಹೇಗೆ?’

‘ನಾವು ನೀವು ಹೀಗೆ ಕಾಫಿ ಕುಡಿಯುತ್ತಾ ಮಾತನಾಡಬಹುದು… ಆದರೆ ವಾಹಿನಿಯೊಂದರಲ್ಲಿ ಸುದ್ದಿ ಪ್ರಸಾರ ಮಾಡುವಾಗ ಜವಾಬ್ದಾರಿ ಇರಬೇಕಲ್ಲವೇ?’

‘ನಿಜವೇ… ವಾಹಿನಿಯೊಂದರಲ್ಲಿ ಒಬ್ಬರು ಏರು ದನಿಯಲ್ಲಿ ಹೇಳುತ್ತಿದ್ದರು. ಸ್ಟೂಡೆಂಟ್ ವೀಸಾದಲ್ಲಿ ನಮ್ಮ ದೇಶಕ್ಕೆ ಬರುವವರಿಗೆ ಇಲ್ಲಿಯ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ತಿಳುವಳಿಕೆ ಕೊಡಬೇಕು’ ಎಂದು.

‘ಹೌದೇ?’

‘ಅಷ್ಟೇ ಅಲ್ಲ… ಅತಿಥಿ ದೇವೋಭವ ಎಂದು ಅತಿಥಿಗಳನ್ನು ಗೌರವಿಸೋ ನಾವು ತುಂಬಾ ಸಂಸ್ಕಾರವಂತರು.. ಆದರೆ ನಮ್ಮ ದೇಶಕ್ಕೆ ಬಂದು ಅರೆಬರೆ ಬಟ್ಟೆ ತೊಟ್ಟು ಓಡಾಡುವ ಇವರುಗಳು ನಮ್ಮ ಮಕ್ಕಳನ್ನು ಕೆಡಿಸುತ್ತಾರೆ… ಮೈಮಾಟ ತೋರಿಸಿ ಅಡ್ಡದಾರಿ ಹಿಡಿಸುತ್ತಾರೆ… ಅದಕ್ಕೆ ವೀಸಾ ಕೊಡುವುದಕ್ಕೆ ಮುಂಚೆ ನಮ್ಮ ಸಂಸ್ಕೃತಿಯ ಪರಿಚಯ ಅವರಿಗೆ ಮಾಡಿಸಬೇಕು. ರೀತಿ ನೀತಿ ತಿಳಿಸಬೇಕು…’

‘ಅವರನ್ನು, ಅದೇ ನಮ್ಮ ಮಕ್ಕಳನ್ನು ಕೆಡಿಸುತ್ತಾರೆ ಎಂದು ಹೇಳಿದವರನ್ನು ಪರಿಚಯ ಮಾಡಿಕೊಡಿ. ಅರೆಬರೆ ಬಟ್ಟೆ ತೊಟ್ಟ ಹೆಣ್ಣನ್ನು ನೋಡಿ ಕೆಡುವ ನಮ್ಮ ದೇಶದ ಮಕ್ಕಳ ಸಂಸ್ಕಾರವೇನು ಎಂದು ತಿಳಿದುಕೊಳ್ಳಬೇಕು. ನಮ್ಮ ಹುಡುಗಿಯರು ತಮಗೆ ಬೇಕಾದಂಥ ಬಟ್ಟೆ ಧರಿಸುತ್ತಾರೆ. ಅರೆಯೋ ಬರೆಯೋ… ಅಸಭ್ಯವಲ್ಲದಿದ್ದರೆ ಆಯಿತು. ಸಭ್ಯತೆ ಇರಬೇಕಾಗಿರುವುದು ಗಂಡಸರ ದೃಷ್ಟಿಯಲ್ಲಿ, ಸಂಸ್ಕೃತಿ ಇರಬೇಕಿರುವುದು ಅವರ ಮನದಲ್ಲಿ.’

‘ಇದೇ ವಿಷಯವಾಗಿ ಬರೀರಿ ಮೇಡಂ… ನಮ್ಮ ದೇಶಕ್ಕೆ ಬಂದವರು ನಮ್ಮ ಅತಿಥಿಗಳು. ಆದರೆ ಇಲ್ಲಿಯ ಕಾನೂನನ್ನು ಅವರು ಗೌರವಿಸಬೇಕು.’

ಮಾತಿನಲ್ಲೇ ಲೇಖನದ ವಿಷಯಗಳೆಲ್ಲಾ ಬಂದಿದ್ದವು. ಬಂದಿದ್ದವರು ಹೊರಟು ಹೊದರು. ಅವರ ಕೊನೆಯ ಮಾತುಗಳು ನನ್ನ ಕಾಡಿದವು.

ನಮ್ಮ ದೇಶಕ್ಕೆ ಬರುವ ವಿದ್ಯಾರ್ಥಿಗಳು, ಪ್ರವಾಸಿಗರು ನಮ್ಮ ಅತಿಥಿಗಳು. ನಿಜ, ಆದರೆ ನಮ್ಮ ಕಾನೂನನ್ನು ಅವರು ಗೌರವಿಸಬೇಕು. ಗೌರವಿಸಬೇಕು ಅಂದರೆ ಅದರ ಅರಿವು, ಪಾಲಿಸದಿದ್ದರೆ ಆಗುವ ಶಿಕ್ಷೆಯ ಬಗ್ಗೆ ಹೆದರಿಕೆ ಇರಬೇಕು.

ವೀಸಾದ ಅವಧಿ ಮುಗಿದ ಮೇಲೆ ಇದ್ದರೆ ಡಿಪೋರ್ಟೇಷನ್ ಹೆದರಿಕೆ ಇರಬೇಕು. ಯಾವುದೋ ಸಣ್ಣ ಪುಟ್ಟ ಕೇಸ್ ಹಾಕಿಸಿಕೊಂಡು ಜೈಲು ಸೇರಿ, ಜಾಮೀನು ಪಡೆದು ಹೊರಬಂದು ಇಲ್ಲೇ ಇರಬಹುದು ಎಂಬ ಭರವಸೆ ಇದೆ. ಅಂತಹವರಿಗೆ ಹಾಗಾಗುವುದಿಲ್ಲ ಎಂದು ತೋರಿಸಿಕೊಟ್ಟು, ಶಿಕ್ಷೆಯನ್ನು ಕೊಟ್ಟು, ದೇಶದಿಂದ ಹೊರಕಳಿಸಬೇಕು. ಡ್ರಗ್ಸ್ ನಲ್ಲಿ ಡೀಲ್ ಮಾಡುವವರಿಗೆ ಶಿಕ್ಷೆಯ ಭೀತಿಯೇ ಇಲ್ಲ… ನಮ್ಮ ದೇಶದ ಕಾನೂನು ನಮ್ಮ ದೇಶದಲ್ಲಿ ಸರ್ವರಿಗೂ ಅನ್ವಯವಾಗುತ್ತದೆ… ದೇಶದ ನಾಗರಿಕರು ಅತಿಥಿಗಳು… ಯಾರೇ ಆಗಿದ್ದರೂ ಕಾನೂನು ಒಂದೇ.

ಕಾನೂನಿನ ಹೆದರಿಕೆ ಇರಬೇಕು ಅಂದರೆ ಕಾನೂನು ಪಾಲಕರ ಹೆದರಿಕೆ ಇರಬೇಕು. ಕಾನೂನು ಪಾಲಕರು ಅಂದರೆ ಪೊಲೀಸರು. ಪೊಲೀಸರ ಹೆದರಿಕೆ ಇರಬೇಕು ಅಂದರೆ ನಮ್ಮ ಪೊಲೀಸರು ಕಟ್ಟುನಿಟ್ಟಾಗಿ ಇರಬೇಕು. ಭ್ರಷ್ಟರಾಗಿ ಇರಬಾರದು. ಅದಕ್ಕಿಂಥ ಮುಖ್ಯವಾಗಿ ರಾಜಕೀಯ ವ್ಯಕ್ತಿಗಳ ಪ್ರಭಾವ ಇರಬಾರದು.

ವಿದೇಶಿಯರ ಮೇಲೆ ಹಲ್ಲೆ ನಡೆದರೆ ಅವರನ್ನು ಬಂಧಿಸಿದರೆ, ನಮ್ಮ ದೇಶದ ಹೆಸರು ಕೆಡುತ್ತದೆ ಎಂಬ ಭೀತಿಯಿರಬಾರದು. ದೇಶದ ಹೆಸರು ಕೆಡುವುದು ಕಾನೂನು ವ್ಯವಸ್ಥಿತವಾಗಿ ಇರದಿದ್ದರೆ ಅಷ್ಟೇ.

ವೀಸಾ ಪಡೆದು ನಮ್ಮ ದೇಶಕ್ಕೆ ಬಂದವರ ಸುರಕ್ಷೆ ನಮ್ಮ ಜವಾಬ್ದಾರಿ. ನಮ್ಮ ದೇಶದ ಕಾನೂನು ಪಾಲಿಸುವುದು ಅವರ ಜವಾಬ್ದಾರಿ.

ಜನಾಂಗೀಯ ನಿಂದನೆ, ಹಾಗೂ ಒಬ್ಬರ ತಪ್ಪಿಗೆ ಇಡೀ ಜನಾಂಗವನ್ನು ದೂರುವುದು ತಪ್ಪು. ನಮ್ಮ ಕಾಲೇಜಿಗೆ donation ಬಂದರೆ ಸಾಕು ಎಂದು ಪೂರ್ವಾಪರ ವಿಚಾರಿಸದೆ ಸೀಟು ಕೊಡುವ ಕಾಲೇಜು, ಬಾಡಿಗೆ ದುಪ್ಪಟ್ಟು ಬಂದರೆ ಸಾಕು ಎಂದು ದುಡ್ಡು ಏಣಿಸಿಕೊಂಡು, ಬಾಡಿಗೆದಾರರು ಏನು ಮಾಡುತ್ತಿದ್ದಾರೆ ಎಂದು ಗಮನಿಸಿಯೂ ಗಮನಿಸದಂತೆ ಇರುವ ಮನೆ ಮಾಲೀಕರು, ಸಣ್ಣ ಪುಟ್ಟ ಜಗಳ, ಕಿತ್ತಾಟ, ಕಾನೂನು ಉಲ್ಲಂಘನೆಯನ್ನು ಗಮನಿಸದಂತೆ (ಕೈ ಬೆಚ್ಚಗೆ ಮಾಡಿದರೆ) ಇರುವ ಪೊಲೀಸ್ ಇಲಾಖೆ… ಎಲ್ಲರೂ ಜವಾಬ್ದಾರಿ ಹೊರಬೇಕು. ನಾವು ನಮ್ಮ ಪೂರ್ವಾಗ್ರಹಗಳಿಂದ ಹೊರಬರಬೇಕು.

Leave a Reply