ನರಹಂತಕ, ಸಾವಿನ ವ್ಯಾಪಾರಿ ಎಂದೆಲ್ಲ ಜರೆದವರಿಗೆ ಮೋದಿಯ ‘ರೈನ್ಕೋಟ್’ ಕುಟುಕು ನಿಂದನೆಯಾಗಿ ಕಂಡಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಇಂದು ಸಂಸತ್ತಿನ ಕಲಾಪವೆಲ್ಲ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಪ್ರತಿಭಟನೆಗೇ ಸೀಮಿತವಾಯ್ತು. ಪರಿಣಾಮ ಉಭಯ ಸದನಗಳ ಕಲಾಪ ಮುಂದೂಡಲ್ಪಟ್ಟಿತು. ನಿನ್ನೆ ರಾಜ್ಯ ಸಭೆಯಲ್ಲಿ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರನ್ನು ಉಲ್ಲೇಖಿಸಿ ‘ರೈನ್ ಕೋಟ್’ ಉದಾಹರಣೆ ಮೂಲಕ ಮೋದಿ ಮಾಡಿದ ಹಾಸ್ಯವನ್ನು ಪ್ರತಿಪಕ್ಷ ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಿದೆ.

ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತಂತೆ ಮಾಡಿರುವ ಹಾಸ್ಯಕ್ಕೆ ಕ್ಷಮೆ ಕೋರಬೇಕು ಎಂದು ಲೋಕ ಸಭೆ ಹಾಗೂ ರಾಜ್ಯ ಸಭೆಗಳಲ್ಲಿ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

‘ಹಲವಾರು ವರ್ಷಗಳಿಂದ ಭಾರತದ ಆರ್ಥಿಕತೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಅವರ ಆಡಳಿತದ ಕಾಲದಲ್ಲಿ ಎಷ್ಟೆಲ್ಲಾ ಹಗರಣಗಳು ಬಂದರೂ ಒಂದೇ ಒಂದು ಕಪ್ಪು ಚುಕ್ಕೆಯೂ ಮನಮೋಹನ್ ಸಿಂಗ್ ಅವರ ಮೈಗೆ ತಾಗಲಿಲ್ಲ. ಕಾರಣ, ಅವರಿಗೆ ಬಚ್ಚಲು ಮನೆಯಲ್ಲಿ ರೈನ್ ಕೋಟ್ ಧರಿಸಿ ಸ್ನಾನ ಮಾಡುವ ಕಲೆ ಗೊತ್ತಿದೆ. ಅದನ್ನು ನೋಡಿ ಇತರೆ ರಾಜಕಾರಣಿಗಳು ಕಲಿಯಬೇಕು’ ಎಂದು ಹಾಸ್ಯ ಮಾಡುತ್ತಾ ನೋಟು ಅಮಾನ್ಯದ ಬಗ್ಗೆ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದ ಮನಮೋಹನ್ ಸಿಂಗ್ ಅವರಿಗೆ ನಿನ್ನೆ ರಾಜ್ಯಸಭೆಯಲ್ಲಿ ಮೋದಿ ತಿರುಗೇಟು ನೀಡಿದ್ದರು.

ಮೋದಿ ಅವರ ಈ ಹಾಸ್ಯವನ್ನು ಸಹಿಸಲಾಗದೇ ನಿನ್ನೆಯೇ ಕಾಂಗ್ರೆಸ್ ಮುಖಂಡರು ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದಿದ್ದರು. ಗುರುವಾರವೂ ಇದೇ ವಿಚಾರವಾಗಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿತು. ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಮೋದಿ ಅವರ ಹೇಳಿಕೆಯನ್ನು ‘ನಾಚಿಕೆಗೇಡು’ ಎಂದು ಟೀಕಿಸಿದ್ದಾರೆ.

‘ಮೋದಿ ಅವರು ಮನಮೋಹನ್ ಸಿಂಗ್ ಅವರ ಕುರಿತ ಹೇಳಿಕೆಗೆ ಕ್ಷಮೆ ಕೇಳದ ಹೊರತು ರಾಜ್ಯ ಸಭೆ ಕಲಾಪಕ್ಕೆ ಅವಕಾಶ ಮಾಡಿಕೊಡುವುದಿಲ್ಲ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ. ರಾಹುಲ್ ಗಾಂಧಿ ಅವರ ಜತೆಗೆ ಹಿರಿಯ ಮುಖಂಡರಾದ ಪಿ.ಚಿದಂಬರಂ ಹಾಗೂ ಕಪಿಲ್ ಸಿಬಲ್ ಸಹ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಸಂಸತ್ತಿನಲ್ಲಿ ಪ್ರಧಾನಿ ವಿರುದ್ಧದ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ಇತರೆ ಪಕ್ಷಗಳಾದ ಸಿಪಿಐ-ಎಂ, ಎಐಎಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್ ಕೈ ಜೋಡಿಸಿವೆ. ಈ ಎಲ್ಲ ಪಕ್ಷಗಳು ರಾಜ್ಯಸಭೆಯಲ್ಲಿ ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದವು. ಆ ಮೂಲಕ ಚಳಿಗಾಲದ ಅಧಿವೇಶನದಲ್ಲಿ ನೋಟು ಅಮಾನ್ಯದ ವಿಚಾರವಾಗಿ ಪ್ರತಿಭಟನೆ ಹೆಸರಲ್ಲಿ ಸಂಸತ್ತಿನ ಸಮಯ ಹಾಳು ಮಾಡಿದಂತೆ, ಈ ಬಾರಿ ಮೋದಿ ಅವರ ಹಾಸ್ಯವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪ್ರತಿಭಟನೆ ಮಾಡುತ್ತಾ ಕಾಲಹರಣ ಮಾಡಲಿವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಮತ್ತೊಂದೆಡೆ ವಿರೋಧ ಪಕ್ಷಗಳು ಪ್ರಧಾನಿ ಅವರ ಗೌರವಕ್ಕೆ ಧಕ್ಕೆ ತಂದಿದ್ದಾರೆ, ಹೀಗಾಗಿ ಕಾಂಗ್ರೆಸ್ ಮೋದಿ ಅವರ ಬಳಿ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದರು. ಹೀಗೆ ಸರ್ಕಾರ ಹಾಗೂ ವಿರೋಧ ಪಕ್ಷಗಳು ಪರಸ್ಪರ ಮಾತಿನ ಚಕಮಕಿಗೆ ಇಳಿದಿದ್ದು ಈ ಕ್ಷಮೆ ಕೇಳುವ ಸಮರ ಎಷ್ಟು ದಿನಗಳ ಕಾಲ ಮುಂದುವರಿಯಲಿದೆ ಎಂಬುದನ್ನು ಕಾದು ನೋಡಬೇಕು.

ಒಂದು ಕಾಲದಲ್ಲಿ ಮೋದಿಯನ್ನು ಸಾಮೂಹಿಕ ಹಂತಕ, ನರಹಂತಕ, ಸಾವಿನ ವ್ಯಾಪಾರಿ ಎಂದೆಲ್ಲಾ ಕರೆದಿದ್ದ ಕಾಂಗ್ರೆಸಿಗರು ಮನಮೋಹನ್ ಸಿಂಗ್ ಅವರ ಮೇಲಿನ ಹಾಸ್ಯವನ್ನು ಅರಗಿಸಿಕೊಳ್ಳಲಾಗದೇ ಕೂಗಾಡುತ್ತಿರುವುದು ಸೋಜಿಗ.

ಜತೆಗೆ ಹಾಸ್ಯ ಚಟಾಕಿಗಳನ್ನು ಅರಗಿಸಿಕೊಳ್ಳಲಾಗದ, ಆ ಮಾದರಿಯನ್ನೇ ಅನುಸರಿಸಲಾಗದೇ ತಾನೇ ಹಾಸ್ಯವಾಗುತ್ತಿರುವ ಪಾಡು ಕಾಂಗ್ರೆಸ್ಸಿನದ್ದು. ಉದಾಹರಣೆಗೆ SCAM ಎಂದರೆ ಸಮಾಜವಾದಿ, ಕಾಂಗ್ರೆಸ್, ಅಖಿಲೇಶ್, ಮುಲಾಯಂ ಅಂತ ಪ್ರಧಾನಿ ಮೋದಿ ಉತ್ತರ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರಷ್ಟೆ. ಒಂದೋ ಇದನ್ನು ಸಿಲ್ಲಿ ಎಂದು ಅಲಕ್ಷಿಸಬೇಕು, ಇಲ್ಲವೇ ಅದೇ ಮಾದರಿಯಲ್ಲಿ ಹಾಸ್ಯದ ತಿರುಗೇಟು ಕೊಡಬೇಕು. ಅಖಿಲೇಶ್ ಯಾದವ್ ಆ ಕೆಲಸವನ್ನು ಯಶಸ್ವಿಯಾಗಿ ಮಾಡಿದರು. SCAM ಅಂದ್ರೆ ಸೇವಿಂಗ್ ಕಂಟ್ರಿ ಫ್ರಮ್ ಅಮಿತ್ ಶಾ ಮೋದಿ (ಅಮಿತ್ ಶಾ ಮತ್ತು ಮೋದಿಯವರಿಂದ ಭಾರತವನ್ನು ರಕ್ಷಿಸುವುದು) ಅಂತ ತಿರುಗಿ ಕುಟುಕಿದರು. ಆದರೆ ಪಾಪ ಈ ರಾಹುಲ್ ಗಾಂಧಿಗೆ ಅದ್ಯಾರು ಭಾಷಣ ಬರೆದುಕೊಡುತ್ತಾರೋ… SCAM ಅಂದ್ರೆ ಸೇವಾ, ಕರೇಜ್ (ಧೈರ್ಯ), ಅಬಿಲಿಟಿ (ಸಾಮರ್ಥ್ಯ), ಮಾಡೆಸ್ಟಿ (ವಿನಮ್ರತೆ) ಅಂದುಬಿಟ್ಟರು ರಾಹುಲ್. ಓಹೋ ಹಿಂಗಂದುಕೊಂಡೇ ನಿಮ್ಮ ಅವಧಿಯಲ್ಲಿ ಹಗರಣಗಳನ್ನು ಮಾಡಿದಿರಾ ಅಂತ ಜನ ನಗಾಡುವಂತಾಯಿತು.

ಈಗಿನ ಮಳೆಬಟ್ಟೆಯ ಮಾತಿಗೂ ಕಾಂಗ್ರೆಸ್ ಪೆದ್ದಾಗಿಯೇ ಪ್ರತಿಕ್ರಿಯಿಸುತ್ತಿದೆ.

Leave a Reply