ಸೆಲ್ವಂ- ಶಶಿಕಲಾ ಇಬ್ಬರಿಗೂ ರಾಜ್ಯಪಾಲರ ದರ್ಶನ, ಉತ್ತರಕ್ಕೆ ಇನ್ನೂ ಕಾಯಬೇಕು…

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನ ಮುಖ್ಯಮಂತ್ರಿ ಕುರ್ಚಿಯನ್ನು ಅಲಂಕರಿಸಲು ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಅವರ ನಡುವಣ ಪೈಪೋಟಿ ಗುರುವಾರವೂ ರೋಚಕತೆಯಿಂದ ಕೂಡಿತ್ತು. ತಮಿಳುನಾಡಿನಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರ ಮಟ್ಟದಲ್ಲಿದ್ದರೂ ನಾಪತ್ತೆಯಾಗಿದ್ದ ರಾಜ್ಯಪಾಲರಾದ ವಿದ್ಯಾಸಾಗರ್ ರಾವ್ ಕಡೆಗೂ ತಮಿಳುನಾಡಿನಲ್ಲಿ ಪ್ರತ್ಯಕ್ಷರಾದರು. ನಂತರ ಈ ಇಬ್ಬರು ನಾಯಕರನ್ನು ಭೇಟಿ ಮಾಡಿ ಮನವಿಯನ್ನು ಆಲಿಸಿದರಾದರೂ ತಮ್ಮ ನಿರ್ಧಾರ ಏನೆಂಬುದನ್ನು ಇಬ್ಬರಿಗೂ ತಿಳಿಸದೇ ಕೂತೂಹಲ ಹುಟ್ಟಿಸಿದ್ದಾರೆ.

ಗುರುವಾರ ಮಧ್ಯಾಹ್ನ ವಿದ್ಯಾಸಾಗರ್ ರಾವ್ ಅವರು ಆಗಮಿಸಿದ ನಂತರ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳು ಹೀಗಿದ್ದವು…

ಸಂಜೆ 5 ಗಂಟೆಗೆ ಪನ್ನೀರ್ ಸೆಲ್ವಂ ತಮ್ಮ ಬೆಂಬಲಿತ ನಾಲ್ವರು ನಾಯಕರ ಜತೆ ರಾಜಭವನಕ್ಕೆ ಭೇಟಿ ನೀಡಿದರು. ಅಲ್ಲಿ ಕೇವಲ 5 ರಿಂದ 10 ನಿಮಿಷಗಳ ಕಾಲ ಚರ್ಚೆ ನಡೆಸಿ ಹೊರಬಂದರು. ರಾಜ್ಯಪಾಲರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಪನ್ನೀರ್ ಸೆಲ್ವಂ, ‘ನನ್ನಿಂದ ಬಲವಂತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡಿಸಲಾಗಿದೆ. ಹೀಗಾಗಿ ನಾನು ನನ್ನ ರಾಜಿನಾಮೆ ಪತ್ರವನ್ನು ಹಿಂಪಡೆಯಲು ಬಯಸುತ್ತೇನೆ. ಇದಕ್ಕೆ ಅವಕಾಶ ಮಾಡಿಕೊಡಬೇಕು. ಶಶಿಕಲಾ ಅವರ ಆಯ್ಕೆ ಒಂದು ಷಡ್ಯಂತ್ರವಾಗಿದ್ದು, ಅವರಿಗೆ ಅವಕಾಶ ನೀಡಬಾರದು. ರಾಜ್ಯದಲ್ಲಿ ಈ ರಾಜಕೀಯ ವಿದ್ಯಮಾನಗಳಿಂದ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ.’ ಎಂದು ಮನವಿ ಮಾಡಿಕೊಂಡರು.

ಆಗ ತಮ್ಮ ನಿರ್ಧಾರ ಹೇಳದ ರಾಜ್ಯಪಾಲರು, ಶಶಿಕಲಾ ಅವರನ್ನು ಭೇಟಿ ಮಾಡಿ ಅವರ ವಾದವನ್ನು ಪರಿಗಣಿಸಿದ ನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದು ಪನ್ನೀರ್ ಸೆಲ್ವಂ ಅವರಿಗೆ ಹೇಳಿದರು.

ರಾಜ್ಯಪಾಲರನ್ನು ಭೇಟಿ ಮಾಡಿ ಹೊರ ಬಂದ ಪನ್ನೀರ್ ಸೆಲ್ವಂ, ‘ಎಲ್ಲ ಒಳ್ಳೆಯದೇ ಆಗಲಿದೆ. ಧರ್ಮ ಉಳಿಯಲಿದೆ. ಸತ್ಯಕ್ಕೆ ಜಯ ಸಿಗಲಿದೆ. ನನಗೆ ಬೆಂಬಲ ನೀಡುತ್ತಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು’ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟರು.

ಇದಾದ ನಂತರ ಸಂಜೆ 6.50 ರ ಸುಮಾರಿಗೆ ಶಶಿಕಲಾ ಎಐಎಡಿಎಂಕೆ ಪಕ್ಷದ ಐವರು ಸಚಿವರೊಂದಿಗೆ ಮರಿನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿದರು. ಈ ವೇಳೆ ಲಕೋಟೆಯೊಂದನ್ನು ತಮ್ಮ ಬಳಿ ಇಟ್ಟುಕೊಂಡಿದ್ದ ಶಶಿಕಲಾ ಅದನ್ನು ಜಯಲಲಿತಾ ಅವರ ಸಮಾಧಿ ಮುಂದೆ ಇಟ್ಟು, ನಂತರ ಅದನ್ನು ರಾಜಭವನಕ್ಕೆ ತೆಗೆದುಕೊಂಡು ಹೋದರು. ರಾತ್ರಿ 7.30ರ ಸುಮಾರಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಶಶಿಕಲಾ ಸುಮಾರು ಅರ್ಧ ತಾಸಿನ ನಂತರ ರಾಜಭವನದಿಂದ ಹೊರ ನಡೆದರು. ತಮ್ಮ ಭೇಟಿಯ ವೇಳೆ ತಮ್ಮ ಬೆಂಬಲಕ್ಕೆ ಇರುವ ಶಾಸಕರ ಪಟ್ಟಿಯನ್ನು ನೀಡಿ, ಸರ್ಕಾರ ರಚಿಸಲು ಅವಕಾಶ ಕೋರಿದರು ಶಶಿಕಲಾ ರಾಜ್ಯಪಾಲರ ಬಳಿ ಮನವಿ ಮಾಡಿದರು ಎಂದು ವರದಿಗಳು ಬಂದಿವೆ.

ಮುಂದೇನು….?

ಈ ಇಬ್ಬರು ನಾಯಕರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿರುವ ರಾಜ್ಯಪಾಲ ವಿದ್ಯಾಸಾಗರ್ ರಾವ್ ಈ ಬಗ್ಗೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ತಮ್ಮ ಮುಂದಿನ ನಡೆಗಳ ಬಗ್ಗೆ ಕಾನೂನು ತಜ್ಞರನ್ನು ಸಂಪರ್ಕಿಸಲಿದ್ದಾರೆ. ಆ ನಂತರ ಸರ್ಕಾರವನ್ನು ರಚಿಸಲು ಪನ್ನೀರ್ ಸೆಲ್ವಂ ಅವರಿಗೆ ಅವಕಾಶ ಕೊಡಬೇಕೋ ಅಥವಾ ಶಶಿಕಲಾ ಅವರಿಗೆ ನೀಡಬೇಕೋ ಎಂಬುದರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಇನ್ನು ಅಕ್ರಮ ಆಸ್ತಿ ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟಿನ ತೀರ್ಪು ನಾಳೆಯ ಬದಲಾಗಿ ಸೋಮವಾರ ಬರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಮ್ಮ ನಿರ್ಧಾರವನ್ನು ಸುಪ್ರೀಂ ಕೋರ್ಟಿನ ತೀರ್ಪಿನ ಆಧಾರದ ಮೇಲೆ ತೆಗೆದುಕೊಳ್ಳಲು ರಾಜ್ಯಪಾಲರು ಇಚ್ಛಿಸಿರುವುದರಿಂದ, ಈ ತೀರ್ಪು ಮುಂದಿನ ವಾರಕ್ಕೆ ಹೋದರೆ, ಇನ್ನು ಮೂರು ದಿನಗಳ ಕಾಲ ತಮಿಳುನಾಡಿನಲ್ಲಿ ರಾಜಕೀಯ ನಾಟಕ ಹೀಗೆ ಮುಂದುವರಿಯುವುದು ಖಚಿತ.

ಇತ್ತ ಶಶಿಕಲಾ ಎಐಎಡಿಎಂಕೆ ಪಕ್ಷದ 130 ಶಾಸಕರನ್ನು ಅಜ್ಞಾತ ಸ್ಥಳಗಳಲ್ಲಿ ಬಲವಂತವಾಗಿ ಇರಿಸಿದ್ದಾರೆ ಎಂದು ಪನ್ನೀರ್ ಸೆಲ್ವಂ ಪಾಳಯ ಆರೋಪ ಮಾಡುತ್ತಿದೆ. ಗುರುವಾರ ನಡೆದ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಪಕ್ಷದ ಹಿರಿಯ ಹಾಗೂ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಮಧುಸುಧನ್, ಶಶಿಕಲಾ ಅವರ ಬಣದಿಂದ ಹೊರ ಬಂದು ಪನ್ನೀರ್ ಸೆಲ್ವಂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ತೀರ್ಪು ತಡವಾಗಿ, ರಾಜ್ಯಪಾಲರು ತಕ್ಷಣವೇ ಒಂದು ತೀರ್ಮಾನ ತೆಗೆದುಕೊಳ್ಳದಿದ್ದರೆ ಮುಂದಿನ ಮೂರು ದಿನಗಳಲ್ಲಿ ತಮಿಳುನಾಡಿನ ರಾಜಕೀಯ ಮತ್ತಷ್ಟು ತಿರುವು ಪಡೆಯಲಿದೆ.

ಒಂದುವೇಳೆ ರಾಜ್ಯಪಾಲರು ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯದೇ ತ್ವರಿತವಾಗಿ ತೀರ್ಮಾನ ತೆಗೆದುಕೊಳ್ಳುವುದಾದರೆ, ಅವರ ಮುಂದೆ ಎರಡು ಅವಕಾಶಗಳಿವೆ. ಆ ಪೈಕಿ ಮೊದಲನೆಯದು ಪನ್ನೀರ್ ಸೆಲ್ವಂ ತಮ್ಮ ರಾಜಿನಾಮೆಯನ್ನು ವಾಪಸ್ ಪಡೆಯಲು ಅವಕಾಶ ನೀಡುವುದು. ಇಲ್ಲವೆ, ಶಶಿಕಲಾ ಅವರು ವಿಧಾನಸಭೆಯಲ್ಲಿ ತಮ್ಮ ಶಾಸಕರ ಬಲವನ್ನು ಸಾಬೀತುಪಡಿಸಿ ಸರ್ಕಾರ ರಚಿಸಲು ಅವಕಾಶ ಕೊಡುವುದು. ಆದರೆ ಈ ಎರಡರಲ್ಲಿ ಯಾವುದು ಉತ್ತಮ ಎಂಬುದು ಕಾನೂನು ತಜ್ಞರ ಜತೆಗಿನ ಚರ್ಚೆಯ ನಂತರವಷ್ಟೇ ಗೊತ್ತಾಗಲಿದೆ.

Leave a Reply