ಪನ್ನೀರ್ ಅಮ್ಮಾ ಸ್ಮಾರಕ ಬಾಂಬ್, ಶಶಿಕಲಾ ರೆಸಾರ್ಟ್ ರಾಜಕೀಯ, ಇವೆಲ್ಲಕ್ಕೆ ಬೆರೆತಿದೆ ಕಮಲ ಹಾಸನ್ ಡೈಲಾಗ್!

 

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡು ರಾಜಕೀಯ ರಣಾಂಗಣವಾಗಿ ದೇಶದ ಗಮನ ಸೆಳೆಯುವುದನ್ನು ಮುಂದುವರಿಸಿದೆ. ‘ಮಹಿಳೆಯರು ಬಂದೊಡನೆ ಸೀಟು ಬಿಟ್ಟು ಕೊಡಬೇಕಾದ ಮನುಷ್ಯ’ ಎಂದು ಗೇಲಿಗೊಳಗಾಗಿದ್ದ ಪನ್ನೀರ್ ಸೆಲ್ವಂ ಎಂಥೆಂಥದೋ ಸಮೀಕರಣಗಳ ಶಕ್ತಿ ಪಡೆದು ತಿರುಗಿಬಿದ್ದಿರುವುದು ರಾಜಕೀಯ ಥಿಯೇಟರಿನ ರೋಚಕತೆಯನ್ನು ಹೆಚ್ಚಿಸಿದೆ.

ಪನ್ನೀರ್ ಸೆಲ್ವಂರಿಗೆ 35ಕ್ಕಿಂತ ಹೆಚ್ಚಿನ ಶಾಸಕರ ಬೆಂಬಲವಿದೆ ಅಂತ ಯಾವ ರಾಜಕೀಯ ವಿಶ್ಲೇಷಕರಿಗೂ ಅನ್ನಿಸುತ್ತಿಲ್ಲ. ಆದರೆ ಅವರು ಆಟದಿಂದ ಹೊರಹೋಗಿಲ್ಲ. ರಾಜ್ಯವು ರಾಜಕೀಯ ನಾಯಕತ್ವದ ಚುಕ್ಕಾಣಿಯ ಜ್ವಲಂತ ಪ್ರಶ್ನೆ ಎದುರಿಸುತ್ತಿರಬೇಕಾದರೆ ರಾಜ್ಯಪಾಲ ಸಿ. ವಿದ್ಯಾಸಾಗರ್ ತಮ್ಮ ಉಪಸ್ಥಿತಿ ತಪ್ಪಿಸಿಕೊಂಡು ಪರೋಕ್ಷವಾಗಿ ಹೀಗೊಂದು ಹೊಡೆದಾಟ ಸೃಷ್ಟಿಯಾಗುವುದಕ್ಕೆ ಕಾರಣರಾಗಿದ್ದಾರೆ. ಗುರುವಾರ ಸಂಜೆಯ ಹೊತ್ತಿಗೆಲ್ಲ ರಾಜ್ಯಪಾಲರನ್ನು ಭೇಟಿಯಾಗಲಿರುವ ಶಶಿಕಲಾ, ಶಾಸಕರನ್ನೆಲ್ಲ ರೆಸಾರ್ಟಿನಲ್ಲಿ ಕೂಡಿಟ್ಟಿದ್ದಾರೆ. ಇತ್ತ ಪನ್ನೀರ್ ಸೆಲ್ವಂ ತಾವು ಜಯಾ ನಿವಾಸ ಪೋಸ್ ಗಾರ್ಡನ್ ಅನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಬೆದರಿಕೆ ಒಡ್ಡಿದ್ದಾರೆ. ಅದನ್ನು ಜಯಲಲಿತಾ ಸ್ಮಾರಕವಾಗಿಸುತ್ತೇವೆ ಎಂಬುದು ಅವರ ಕಾರ್ಯತಂತ್ರ. ಏಕೆಂದರೆ ಅಮ್ಮನ ನೆನಪಲ್ಲಿ ಯಾವುದೇ ಕಾರ್ಯಸಿದ್ಧಿ ಮಾಡಿಕೊಳ್ಳಬಹುದು ಎಂಬುದನ್ನು ಸೆಲ್ವಂ ಅರ್ಥಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮನ್ನು ಪಕ್ಷದ ಖಚಾಂಚಿ ಸ್ಥಾನದಿಂದ ತೆಗೆದುಹಾಕಿರುವುದು ಕಾಯ್ದೆಬದ್ಧವಲ್ಲವಾದ್ದರಿಂದ, ತಮ್ಮ ಸಹಿ ಇಲ್ಲದೇ ಪಕ್ಷದ ಯಾವುದೇ ಹಣಕಾಸು ವ್ಯವಹಾರ ಮಾಡಬಾರದು ಎಂದೂ ಹೇಳಿದ್ದಾರೆ. ಇಲ್ಲಿ ಗುರಿ ಸ್ಪಷ್ಟ. ಶಶಿಕಲಾ ಹಿಂದೆ ಶಾಸಕರೆಲ್ಲ ಇರುವುದು ಅಲ್ಲಿಯೇ ಪಕ್ಷದ ಸಂಪನ್ಮೂಲ ಕೇಂದ್ರೀಕೃತವಾಗಿದೆ ಎಂಬ ಕಾರಣಕ್ಕೆ. ತಾನು ಆ ಸಂಪನ್ಮೂಲವನ್ನು ಅಲುಗಾಡಿಸಲು ಹೊರಟಿದ್ದೇನೆ ಎಂಬ ಸಂದೇಶ ನೀಡುತ್ತಿದ್ದಾರೆ ಪನ್ನೀರ್ ಸೆಲ್ವಂ.

ಜನರ ಅನುಕಂಪವು ಸೆಲ್ವಂ ಕಡೆಗಿದೆ ಎಂಬುದು ಮಾಧ್ಯಮಗಳ ವಿಶ್ಲೇಷಣೆ. ಸಾಮಾಜಿಕ ಮಾಧ್ಯಮದಲ್ಲಿ ಸಹ ಶಶಿಕಲಾಗಿರುವ ರಾಜಕೀಯ ಅನುಭವವಾದರೂ ಏನು ಎಂದು ಪ್ರಶ್ನಿಸಲಾಗುತ್ತಿದೆ.

ಆದರೆ ದೀರ್ಘಾವಧಿಯಲ್ಲಿ ಇವ್ಯಾವವೂ ಲೆಕ್ಕಕ್ಕೆ ಬರುವುದಿಲ್ಲ. ನಂಬರ್ ಗೇಮಿನಲ್ಲಿ ಗೆದ್ದವರಿಗೆ ಮುಕುಟ. ಸದ್ಯಕ್ಕಂತೂ ಸಂಖ್ಯಾಬಲ ಶಶಿಕಲಾ ಪರವಾಗಿದೆ. ಹೀಗಾಗಿ ಶಶಿಕಲಾ ಮುಖ್ಯಮಂತ್ರಿ ಆಗುವುದನ್ನು ತಡೆಯುವುದು ಅನುಮಾನವೇ. ಆದರೆ ಇದು ಸಮರದ ಆರಂಭವಷ್ಟೇ ಎಂದುಕೊಂಡರೆ, ಮುಂದೆಯೂ ಶಶಿಕಲಾ ಮತ್ತು ಪನ್ನೀರ್ ಬಣಗಳ ತಿಕ್ಕಾಟ ಮುಂದುವರಿಯಲಿದೆ ಎಂಬುದು ಸ್ಪಷ್ಟ. ಅತ್ತಿತ್ತ ಜಿಗಿದಾಟಗಳು, ಬಂಡಾಯಗಳು ತಮಿಳುನಾಡು ರಾಜಕೀಯವನ್ನು ಬಹುಕಾಲದವರೆಗೆ ಕಾಡಲಿವೆ. ಈ ಹೊಯ್ ಕೈ ಆಟದಲ್ಲಿ ಪನ್ನೀರ್ ಸೆಲ್ವಂ ನಿಜ ನಾಯಕರಾಗಿ ಹೊರಹೊಮ್ಮುತ್ತಾರೆಯೇ ಎನ್ನುವುದೇ ಶಶಿಕಲಾ ಇನ್ನೊಂದು ಜಯಲಲಿತಾ ಆಗಿ ಬೆಳೆಯುತ್ತಾರೋ ಇಲ್ಲವೋ ಎಂಬುದನ್ನು ನಿರ್ಧರಿಸಲಿದೆ.

ಇತ್ತೀಚೆಗೆ ರಾಜಕೀಯ ಚರ್ಚೆಗಳಲ್ಲಿ ಸಕ್ರಿಯವಾಗಿರುವ ನಟ ಕಮಲ ಹಾಸನ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಶಶಿಕಲಾ ಅರ್ಹತೆಯೇನು ಎಂಬ ಬಗ್ಗೆ ನನಗಾಗಲೀ ಜನರಿಗಾಗಲೀ ಗೊತ್ತಿಲ್ಲ. ಜಯಲಲಿತಾ ಜತೆ ತುಂಬ ವರ್ಷದಿಂದ ಇದ್ದರು ಎಂಬುದೇ ಮುಖ್ಯಮಂತ್ರಿಯಾಗುವುದಕ್ಕೆ ಯೋಗ್ಯತೆ ಆಗುವುದಿಲ್ಲ’ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ‘ಸದ್ಯಕ್ಕೆ ಪನ್ನೀರ್ ಸೆಲ್ವಂ ಅಸಮರ್ಥ ಮುಖ್ಯಮಂತ್ರಿ ಎಂದೇನೂ ಆಗಿಲ್ಲ. ಅವರಿಗಿಂತ ಉತ್ತಮರು ಸಿಗಬಹುದು. ಅದನ್ನು ಚುನಾವಣೆ ಬಂದಾಗ ನಿರ್ಧರಿಸುತ್ತಾರೆ. ಸೆಲ್ವಂ ಮತ್ತು ಶಶಿಕಲಾ ಇಬ್ಬರ ಬಗ್ಗೆಯೂ ನನಗೆ ಆಕ್ಷೇಪಗಳಿವೆ. ಆದರೆ ಸೆಲ್ವಂ ಅವರನ್ನು ಬದಲಿಸುವುದಕ್ಕೆ ಕಾರಣವೇನಿದೆ’ ಎಂಬ ಅಭಿಪ್ರಾಯ ಕಮಲ ಹಾಸನ್ ಅವರದ್ದು.

ಇಂಥ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡಾಗ, ಈಗಿರುವ ಸೆಲ್ವಂ ವರ್ಸಸ್ ಶಶಿಕಲಾ ಕದನಕ್ಕೆ ಸಂಖ್ಯಾಬಲದ ನೆಲೆಯಲ್ಲಿ ತಾತ್ಕಾಲಿಕ ಉತ್ತರ ಸಿಕ್ಕರೂ ಸಮರ ಮುಂದುವರಿಯುವುದೆಂಬ ಸೂಚನೆಗಳೇ ದಟ್ಟವಾಗಿವೆ.

Leave a Reply