ಕೃಷಿ ಸಾಲ ಮನ್ನಾ ಇಲ್ಲ- ಹೆಚ್ಚು ರೈತರಿಗೆ ಸಾಲ ನೀಡಲು ಸಿದ್ಧ ಅಂದ್ರು ಸಿಎಂ, ಬಿಡಿಎ ಸೈಟ್ ಖಾಲಿ ಬಿಟ್ಟಿದ್ದರೆ ವಾಪಸ್ ಪಡೆಯುವ ಬಗ್ಗೆ ಚರ್ಚೆ, ಬಾಂಗ್ಲಾ ವಿರುದ್ಧ ವಿಜಯ್- ಕೊಹ್ಲಿ ಶತಕ

ಬಾಂಗ್ಲಾದೇಶ ವಿರುದ್ಧ ಹೈದರಾಬಾದಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಪರ ಶತಕ ದಾಖಲಿಸಿದ ಇಬ್ಬರು ಬ್ಯಾಟ್ಸ್ ಮನ್ ಗಳಾದ ಮುರಳಿ ವಿಜಯ ಹಾಗೂ ವಿರಾಟ್ ಕೊಹ್ಲಿ…

ಡಿಜಿಟಲ್ ಕನ್ನಡ ಟೀಮ್:

ಕೃಷಿ ಸಾಲ ಮನ್ನಾ ಇಲ್ಲ

ಸದ್ಯಕ್ಕೆ ರೈತರ ಕೃಷಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಕೃಷಿ ಚಟುವಟಿಕೆ ಉತ್ತೇಜನ ನೀಡುವ ಉದ್ದೇಶದಿಂದ ಪತ್ತಿನ ಸಹಕಾರಿ ಬ್ಯಾಂಕುಗಳಲ್ಲಿ ನೀಡುತ್ತಿರುವ ಸಾಲದ ಪ್ರಮಾಣ ಹೆಚ್ಚಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಎನ್.ಎಸ್ ಬೋಸ್ ರಾಜ್ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಅವರು, ಈಗ ರಾಜ್ಯದಲ್ಲಿ 23 ಲಕ್ಷ ರೈತರಿಗೆ ಕೃಷಿ ಸಾಲ ವಿತರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಶೇ.10 ರಷ್ಟು ಹೊಸ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವ ಸಾಲದ ಪ್ರಮಾಣ ಹೆಚ್ಚಿಸಲಾಗುವುದು. ಪ್ರತಿ ವರ್ಷ ಸಹಕಾರಿ ಸಂಘಗಳಲ್ಲಿ ಕೃಷಿ ಸಾಲಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಅದರ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನ ಮಾಡಲಾಗುವುದು’ ಎಂದರು.

ಅಧಿವೇಶನದ ಹೈಲೈಟ್ಸ್…

  • ಬಿಡಿಎ ನಿವೇಶನ ಪಡೆದು ಬಹು ವರ್ಷಗಳಿಂದ ಮನೆಕಟ್ಟದೆ ಖಾಲಿ ಉಳಿದಿರುವ ಜಾಗವನ್ನು ವಾಪಸ್ ಪಡೆಯುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಸದನ ಒಪ್ಪಿದರೆ ಕಾನೂನು ಜಾರಿಗೆ ತರಲು ಸಿದ್ಧ ಎಂದರು. ಪ್ರಶ್ನೋತ್ತರ ಕಲಾಪದಲ್ಲಿ ವಿ.ಸೋಮಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಹಳಷ್ಟು ಜನ ಬಿಡಿಎಯಿಂದ ನಿವೇಶನಗಳನ್ನು ಪಡೆದು ಮಾರಾಟಕ್ಕಾಗಿ ಖಾಲಿ ಬಿಟ್ಟಿದ್ದಾರೆ. ಬೇಕಾದವರಿಗೆ ನಿವೇಶನ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. 25 ವರ್ಷಗಳಿಂದ ನಿವೇಶನ ಪಡೆದು ಹಾಗೆ ಖಾಲಿ ಬಿಟ್ಟಿರುವ ಉದಾಹರಣೆಗಳಿವೆ, ಸದನ ಒಪ್ಪಿದರೆ ಮನೆ ಕಟ್ಟದೇ ಇರುವ ಜಾಗವನ್ನು ವಾಪಸ್ ಪಡೆಯುವ ಬಗ್ಗೆ ಪ್ರಯತ್ನಿಸಬಹುದು’ ಎಂದರು.
  • ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಜನತೆ ನೀಡಿದ್ದ ಸುವರ್ಣಾವಕಾಶವನ್ನು ಬಳಸಿಕೊಳ್ಳುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಫಲರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಚರ್ಚೆ ಆರಂಭಿಸಿದ ಅವರು, ‘ಅಧಿಕಾರ ವಹಿಸಿಕೊಂಡ ದಿನದಿಂದಲೂ ಇಲ್ಲಿಯವರೆಗೂ ಆಡಳಿತ ಆಲಸ್ಯದಿಂದ ಹೊರಬರಲೇ ಇಲ್ಲ. ಜಡತ್ವದಿಂದ ಹೊರಬರದ ಮುಖ್ಯಮಂತ್ರಿ ಅವರು ಇನ್ನು ಸ್ಥಿತ ಪ್ರಜ್ಞರಾಗಿ ಆಡಳಿತ ನಡೆಸಿ ಕೈ ತೊಳೆದುಕೊಳ್ಳಲು ಹೊರಟಿದ್ದಾರೆ. ಸಾಧನೆಯ ಗುರಿ ಮುಟ್ಟಿದ್ದೇನೆ. ಇನ್ನೇನು ಬೇಕು ಎಂಬ ಭಾವನೆ ಅವರಲ್ಲಿ ಇದ್ದು, ಅದರಿಂದ ಕರ್ನಾಟಕವನ್ನು ಭ್ರಷ್ಟಾಚಾರ ರಾಜ್ಯವನ್ನಾಗಿ ಪರಿವರ್ತಿಸಿದೆ’ ಎಂದು ಟೀಕಿಸಿದರು.
  • ನಿವೃತ್ತ ಡಿವೈಎಸ್ಪಿ ಅನುಪಮಾ ಶೆಣೈ ಅವರನ್ನು ವರ್ಗಾವಣೆ ಮಾಡಲು ₹ 42 ಲಕ್ಷ ಕೇಳಿದ್ದೆ ಎಂಬುದನ್ನು ದಾಖಲೆ ಸಹಿತ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ಸಾಬೀತು ಪಡಿಸಲು ಆಗದಿದ್ದರೆ ನೀವು ರಾಜಕೀಯ ನಿವೃತ್ತಿ ಪಡಿಯುತ್ತೀರಾ? ಎಂದು ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ವಿಧಾನ ಸಭೆಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಸವಾಲು ಹಾಕಿದರು.
  • ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಜಯಗಳಿಸಿದ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಇಂದು ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.
  • ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ಹತ್ತಿಕ್ಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಕ್ಯಾಪ್ಟನ್ ಗಣೇಶ್ ಕಾರ್ತಿಕ್ ಅವರ ಪ್ರಶ್ನೆಗೆ ಉತ್ತರಿಸುತ್ತಾ, ‘ಕೇವಲ ರಾಜಧಾನಿಯಲ್ಲಷ್ಟೇ ಅಲ್ಲ, ಶಿಕ್ಷಣ ಸಂಸ್ಥೆ ಹಾಗೂ ಕೈಗಾರಿಕಾ ಕೇಂದ್ರಗಳಿರುವ ಪಟ್ಟಣ ಮತ್ತು ನಗರಗಳಲ್ಲಿ ಇದು ಹೆಚ್ಚಾಗಿ ನಡೆಯುತ್ತಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ 128 ಪ್ರಕರಣಗಳಲ್ಲಿ 239 ಆರೋಪಿ ಬಂಧಿಸಿದರೆ ಮಂಗಳೂರಿನಲ್ಲಿ 239 ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.’

ಟೀಂ ಇಂಡಿಯಾಗೆ ವಿಜಯ್, ಕೊಹ್ಲಿ ಶತಕದ ಬಲ

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾಗೆ ಆರಂಭಿಕ ಮುರಳಿ ವಿಜಯ (106) ಹಾಗೂ ನಾಯಕ ವಿರಾಟ್ ಕೊಹ್ಲಿ (ಅಜೇಯ 111) ಅವರ ಶತಕಗಳು ಬಲ ತುಂಬಿವೆ.

ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನ ಭಾರತ 90 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 356 ರನ್ ಕಲೆ ಹಾಕಿದೆ. ಆ ಮೂಲಕ ಮೊದಲ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತ ಪೇರಿಸುವತ್ತ ದಾಪುಗಾಲು ಇಟ್ಟಿದೆ. ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್ ರಾಹುಲ್(2) ಮೊದಲ ಓವರ್ ನಲ್ಲೇ ನಿರ್ಗಮಿಸಿದರು. ಆರಂಭಿಕ ಆಘಾತ ಎದುರಿಸಿದ್ದ ಟೀಂ ಇಂಡಿಯಾಗೆ ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ (83) ಅವರ 178 ರನ್ ಗಳ ಜತೆಯಾಟ ಚೇತರಿಕೆ ತಂದುಕೊಟ್ಟಿತು. ಪೂಜಾರ ವಿಕೆಟ್ ಹೋದ ನಂತರ ಬಂದ ವಿರಾಟ್ ಕೊಹ್ಲಿ ಸುಲಭವಾಗಿ ಬಾಂಗ್ಲಾ ಬೌಲರ್ ಗಳನ್ನು ಎದುರಿಸಿದರು. ಈ ವೇಳೆ ಶತಕ ಸಿಡಿಸಿದ ನಂತರ ವಿಜಯ್ ಔಟಾದರು. ಆಗ ಅಜಿಂಕ್ಯ ರಹಾನೆ (ಅಜೇಯ 45) ನಾಯಕನ ಜತೆ ಸೇರಿ ಇನಿಂಗ್ಸ್ ಕಟ್ಟಿದರು. ಕೊಹ್ಲಿ ಹಾಗೂ ರಹಾನೆ ಕ್ರೀಸ್ ನಲ್ಲಿದ್ದು, ನಾಳೆ ಆಟ ಮುಂದುವರಿಸಲಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್: 356ಕ್ಕೆ 3 (90 ಓವರ್)

ಕೊಹ್ಲಿ ಅಜೇಯ 111, ವಿಜಯ್ 108, ಪೂಜಾರ 83, ತೈಜುಲ್ 50ಕ್ಕೆ 1, ಮೆಹೆದಿ 93ಕ್ಕೆ 1, ತಸ್ಕಿನ್ 58ಕ್ಕೆ 1

Leave a Reply