ರಂಗೇರಿರುವ ತಮಿಳುನಾಡು ರಾಜಕೀಯ ರಣರಂಗದಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ಕಾದಾಟ?

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಶಶಿಕಲಾ ನಟರಾಜನ್ ಅವರು ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆಯಾಜ್ಞೆ ನೀಡಬೇಕೆಂಬ ಸಾರ್ವಜನಿಕ ಹಿತಾಸಕ್ತಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ಮಧ್ಯೆ ತಮಿಳುನಾಡಿನ ರಾಜಕೀಯ ರಣರಂಗದಲ್ಲಿ ಪನ್ನೀರ್ ಸೆಲ್ವಂ ವರ್ಸಸ್ ಶಶಿಕಲಾ ನಡುವಣ ಯುದ್ಧ ಈಗ ಬಿಜೆಪಿ ವರ್ಸಸ್ ಕಾಂಗ್ರೆಸ್ ನ ಯುದ್ಧವಾಗಿ ಮಾರ್ಪಾಡಾಗುತ್ತಿದೆ.

ಫೆ.7ರಂದು ಶಶಿಕಲಾ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ವೇಳೆ ಶಶಿಕಲಾ ಅವರು ಮುಖ್ಯಮಂತ್ರಿಯಾದರೆ ಮತ್ತೆ ತಮಿಳುನಾಡಿನಲ್ಲಿ ಪ್ರತಿಭಟನೆ ಆರಂಭವಾಗಿ ಜನಜೀವನ ಅಸ್ತವ್ಯಸ್ಥವಾಗಲಿದೆ ಎಂಬ ಕಾರಣ ಕೊಟ್ಟು ಶಶಿಕಲಾ ಮುಖ್ಯಮಂತ್ರಿಯಾಗುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಫೆ.6ರಂದೇ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಯಿತು. ಈ ವಿಚಾರಣೆಯನ್ನು ಬೇಗ ನಡೆಸಬೇಕು ಎಂದು ಸಹ ಕೋರಲಾಗಿತ್ತು. ಆದರೆ ಅಕ್ರಮ ಆಸ್ತಿ ಪ್ರಕರಣದಲ್ಲಿ ತನ್ನ ತೀರ್ಪು ಹೊರ ಬರುವವರೆಗೂ ಈ ಅರ್ಜಿಯ ವಿಚಾರಣೆಯನ್ನು ನಡೆಸದಿರಲು ಸುಪ್ರೀಂ ಕೋರ್ಟ್ ನಿರ್ಧರಿಸಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ತ್ವರಿತವಾಗಿ ನಡೆಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಈ ಎಲ್ಲ ರಾಜಕೀಯ ಗೊಂದಲದ ಪರಿಸ್ಥಿತಿ, ಮುಂದಿನ ದಿನಗಳಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ನಡುವಣ ಸಮರವಾಗಿ ಪರಿವರ್ತನೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸದ್ಯ ಶಶಿಕಲಾ ಅವರ ವಶದಲ್ಲಿರುವ 130 ಶಾಸಕರ ಪೈಕಿ ಕೆಲವರು ಒಬ್ಬೊಬ್ಬರಾಗಿಯೇ ಪನ್ನೀರ್ ಸೆಲ್ವಂ ಬಣಕ್ಕೆ ಹಾರುತ್ತಿದ್ದಾರೆ. ಇನ್ನು ರೆಸಾರ್ಟ್ ನಲ್ಲಿರುವ ಶಾಸಕರು ಹೊರ ಬಂದ ಮೇಲೆ ಪನ್ನೀರ್ ಸೆಲ್ವಂ ಪಾಳಯದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಎಲ್ಲ ಕಾರಣಗಳಿಂದಾಗಿ ಶಶಿಕಲಾ ತಮ್ಮ ಶಾಸಕರ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾರೆ ಎಂಬ ವರದಿಗಳು ಬಂದಿವೆ. ಇದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ಹೈ ಕಮಾಂಡ್ ಸಹ ತಮಿಳುನಾಡಿನ ಕಾಂಗ್ರೆಸ್ ಮುಖ್ಯಸ್ಥ ಎಸ್.ತಿರುನವುಕ್ಕರಸಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಕೆ.ರಾಮಸ್ವಾಮಿ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದೆ.

1966ರಲ್ಲಿ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಪಿ.ವಿ ನರಸಿಂಹ ರಾವ್ ಅವರು ಡಿಎಂಕೆ ಪಕ್ಷಕ್ಕೆ ಹೆಚ್ಚು ಬೆಂಬಲ ಇದ್ದರೂ ಜಯಲಲಿತಾ ಅವರ ಜತೆ ಕೈ ಜೋಡಿಸಲು ಮುಂದಾಗಿದ್ದರು. ಆನಂತರ ಕಾಂಗ್ರೆಸ್ ಕೈ ಸುಟ್ಟುಕೊಂಡಿದ್ದು ಈಗ ಇತಿಹಾಸ. ಇದರ ಜತೆಗೆ ಪಿ.ಚಿದಂಬರಂ ‘ಶಶಿಕಲಾ ಅವರು ಮುಖ್ಯಮಂತ್ರಿಯಾಗಲು ಅರ್ಹತೆ ಇದೆಯೇ ಎಂದು ಪ್ರಶ್ನಿಸುವುದು ಜನರ ಹಕ್ಕು’ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ಟಿಎನ್ ಸಿಸಿ ಮುಖ್ಯಸ್ಥ ‘ಇದು ಎಐಎಡಿಎಂಕೆ ಪಕ್ಷದ ಆಂತರಿಕ ವಿಚಾರವಾಗಿದ್ದು, ಶಾಸಕರೇ ಶಶಿಕಲಾ ಅವರ ನಾಯಕತ್ವಕ್ಕೆ ಮನಸ್ಸು ಮಾಡಿರುವಾಗ ಕೇಂದ್ರ ಸರ್ಕಾರ ಈ ರೀತಿಯಾಗಿ ಪಿತೂರಿ ಮಾಡುವುದು ಸರಿಯಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಈ ಹೇಳಿಕೆ ಸಹಜವಾಗಿಯೇ ಶಶಿಕಲಾ ಅವರ ಪರ ಬ್ಯಾಟಿಂಗ್ ಮಾಡುವಂತಿದೆ. ಈಗ ಸದ್ಯಕ್ಕೆ ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳ ಮೈತ್ರಿ ಗಟ್ಟಿಯಾಗಿದ್ದರೂ, ಶಶಿಕಲಾ ಬೆನ್ನಿಗೆ ನಿಲ್ಲುವ ಸಾಧ್ಯತೆಗಳ ಬಗ್ಗೆ ಕಾಂಗ್ರೆಸ್ ಎಲ್ಲ ರೀತಿಯ ಚಿಂತನೆ ನಡೆಸುತ್ತಿರುವುದು ಸ್ಪಷ್ಟ.

ಇತ್ತ ಬಿಜೆಪಿ ರಾಜ್ಯಪಾಲರನ್ನು ಬಳಸಿಕೊಂಡು ಈಗಾಗಲೇ ತಮಿಳುನಾಡಿನ ರಾಜಕೀಯ ಅಖಾಡಕ್ಕೆ ಪರೋಕ್ಷವಾಗಿ ಇಳಿದಿದೆ. ಈ ಎಲ್ಲ ಬೆಳವಣಿಗೆಗಳು ಮುಂದೆ ತಮಿಳನಾಡಿನ ರಾಜಕೀಯ ಅಖಾಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಪರೋಕ್ಷ ತಿಕ್ಕಾಟಕ್ಕೆ ವೇದಿಕೆಯಾಗುವುದು ಖಚಿತವಾಗುತ್ತಿದೆ.

ಶಶಿಕಲಾ ಅವರ ಬಣದಿಂದ ಗುರುವಾರ ಪನ್ನೀರ್ ಸೆಲ್ವಂ ಅವರ ಬಣಕ್ಕೆ ಹೋಗಿದ್ದ ಎಐಎಡಿಎಂಕೆ ಪಕ್ಷದ ಇ.ಮಧುಸುಧನ್ ಅವರನ್ನು ಪಕ್ಷದ ಮುಖ್ಯಸ್ಥ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತುಹಾಕಲಾಗಿದೆ. ತಮ್ಮನ್ನು ಪಕ್ಷದಿಂದ ಕಿತ್ತು ಹಾಕಿದ ನಂತರ ಪ್ರತಿಕ್ರಿಯೆ ನೀಡಿದ ಮಧುಸುಧನ್ ಅವರು ತಮ್ಮ ನಡೆ ಏನೆಂಬುದನ್ನು ‘ಕಾದು ನೋಡಿ’ ಎಂದು ತಿಳಿಸಿದ್ದಾರೆ.

Leave a Reply