ಸರ್ಕಾರವನ್ನು ಟೀಕಿಸುತ್ತಲೇ ಯಡಿಯೂರಪ್ಪ ಬಗ್ಗೆ ಕುಮಾರಸ್ವಾಮಿ ಕನಿಕರ, ಕಂಬಳ ಪರವಾಗಿ ಮಸೂದೆ ಮಂಡನೆ, ಅಧಿವೇಶನದ ಮುಖ್ಯಾಂಶಗಳು…

ಡಿಜಿಟಲ್ ಕನ್ನಡ ಟೀಮ್:

ವಿಧಾನಸಭೆಯಲ್ಲಿ ಕುಮಾರಸ್ವಾಮಿ ಮಾತು

ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸುವುದರ ಜತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಬಗ್ಗೆ ಕನಿಕರ ವ್ಯಕ್ತಪಡಿಸುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ವಿಧಾನ ಸಭೆಯಲ್ಲಿ ಅಚ್ಚರಿ ಮೂಡಿಸಿದರು.

ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ ಸರ್ಕಾರವನ್ನು ಟೀಕಿಸುತ್ತಾ, ಯಡಿಯೂರಪ್ಪನವರ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದು ಹೀಗೆ…

‘ಸರ್ಕಾರ ರಾಜ್ಯದಲ್ಲಿನ ಅಧಿಕಾರಿಗಳನ್ನು ಗುಲಾಮರಂತೆ ಕಾಣುತ್ತಿದೆ. ಇದರಿಂದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡದೆ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಹೇಳಲಾಗಿದೆ. ಎಲ್ಲಿದೆ ಸಮಪಾಲು, ಸಮಬಾಳು? ರಾಜ್ಯಪಾಲರ ಭಾಷಣದಲ್ಲಿ ಹೇಳಿದಂತೆ ಆಡಳಿತದಲ್ಲಿ ಎಲ್ಲಿದೆ ಪಾರದರ್ಶಕತೆ? ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ. ನರೇಗಾದಿಂದ ಬೆಳೆಪರಿಹಾರದವರೆಗೆ ಎಲ್ಲದರಲ್ಲೂ ಲೂಟಿ ಮಾಡಲಾಗಿದೆ. ಸತ್ತವರಿಗೆ ಕೂಲಿ ನೀಡಿರುವ ಪ್ರಕರಣವೂ ಇದೆ. ಅರಣ್ಯ ಇಲಾಖೆಯಲ್ಲಿ ಸಸಿ ನೆಡುವುದರಲ್ಲಿ, ಇಂದಿರಾ ಅವಾಸ್, ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮ ಹೀಗೆ ಎಲ್ಲದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಹೀಗಿರುವಾಗ ಪಾರದರ್ಶಕತೆ ಎಂಬುದಕ್ಕೆ ಅರ್ಥ ಇದೆಯೇ? ಇಂತಹ ಆಡಳಿತವನ್ನು ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ?’

‘ಯಡಿಯೂರಪ್ಪ ಅವರನ್ನು ಮೂರು ವಾರಗಳ ಕಾಲ ಜೈಲಿಗೆ ಕಳುಹಿಸಿದ ನ್ಯಾಯಮೂರ್ತಿಗಳಿಗೆ ಶಿಕ್ಷೆ ಕೊಡಬೇಕು. ಅನಗತ್ಯವಾಗಿ ರಾಜಕಾರಣಿಗಳ ಮೇಲೆ ಮೊಕದ್ದಮೆ ದಾಖಲಾಗುತ್ತವೆ. ಆ ಪ್ರಕರಣದಲ್ಲಿ ಸತ್ವ ಇದೆಯೇ, ಇಲ್ಲವೇ ಎಂಬುದನ್ನು ನೋಡಿ ಮಾತನಾಡಬೇಕು. ಯಡಿಯೂರಪ್ಪನವರ ಪ್ರಕರಣಗಳಲ್ಲಿ ವಾದ-ಪ್ರತಿವಾದ, ಆರೋಪಪಟ್ಟಿ ಇಲ್ಲದಿದ್ದರೂ ಅವರನ್ನು ಜೈಲಿಗೆ ಕಳುಹಿಸಲಾಯಿತು. ಅವರು ಜೈಲಿಗೆ ಹೋದದ್ದು ನನಗೂ ಬೇಸರವಾಯಿತು. ಈಗ ಯಡಿಯೂರಪ್ಪನವರ ಪ್ರಕರಣ ನ್ಯಾಯಾಲಯದಲ್ಲೇ ಖುಲಾಸೆಯಾಗಿದೆ. ಅವರನ್ನು ಜೈಲಿಗೆ ಕಳುಹಿಸಿದ್ದ ನ್ಯಾಯಾಧೀಶರ ವಿರುದ್ಧ ಕ್ರಮ ಜರುಗಿಸಬೇಕು.’

ಕಂಬಳಕ್ಕೆ ಮಸೂದೆ

ರಾಜ್ಯದ ಜನರ ಬೇಡಿಕೆಯಂತೆ ಕಂಬಳ ಕ್ರೀಡೆಗೆ ಅಧಿಕೃತ ಮಾನ್ಯತೆ ನೀಡಲು ಮುಂದಾಗಿರುವ ಸರ್ಕಾರ, ಇದಕ್ಕೆ ಪೂರಕವಾಗಿ ಕರ್ನಾಟಕ ಪ್ರಾಣಿ ಹಿಂಸಾಚಾರ ತಡೆ ಕಾಯ್ದೆಯಿಂದ ಕಂಬಳ ಸೇರಿದಂತೆ ಮೂರು ಬಗೆಯ ಕ್ರೀಡೆಗಳಿಗೆ ವಿನಾಯ್ತಿ ನೀಡಿ ತಿದ್ದುಪಡಿ ಮಸೂದೆ ರೂಪಿಸಿದೆ. ವಿಧಾನಸಭೆಯಲ್ಲಿ ಪಶುಸಂಗೋಪನಾ ಸಚಿವ ಎ.ಮಂಜು ಪ್ರಾಣಿ ಹಿಂಸಾಚಾರ ತಡೆ ತಿದ್ದುಪಡಿ ಕಾಯ್ದೆಯನ್ನು ಮಂಡಿಸುವುದರ ಜತೆಗೆ ಅನುಮೋದನೆಗೆ ಕೋರಿದರು. ಕಂಬಳದ ಜತೆಗೆ ಎತ್ತಿನ ಓಟ, ಎತ್ತಿನ ಗಾಡಿ ಓಟ, ಕೋಣ ಹಾಗೂ ಎತ್ತುಗಳ ಮೇಲೆ ನೊಗ ಹೊರಿಸಿ ಓಡಿಸುವ ಸ್ಪರ್ಧೆಗಳಿಗೂ ವಿನಾಯ್ತಿ ನೀಡಲಾಯಿತು.

ಅಧಿವೇಶನದಲ್ಲಿನ ಇತರೆ ಪ್ರಮುಖ ಅಂಶಗಳು…

  • ಕನಿಷ್ಠ ಕೂಲಿ ನೀಡದೆ ಸತಾಯಿಸುವ ಮಾಲೀಕರಿಗೆ ₹ 10 ಸಾವಿರ ದಂಡ ಮತ್ತು 6 ತಿಂಗಳ ಶಿಕ್ಷೆ ವಿಧಿಸುವ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಕನಿಷ್ಠ ಮಜೂರಿಗಳ ತಿದ್ದುಪಡಿ ವಿಧೇಯಕ 2017 ಅನ್ನು ಮಂಡಿಸಿದರು.
  • ನ್ಯಾಯಾಲಯಗಳ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಚುನಾಯಿತ ಪ್ರತಿನಿಧಿಗಳ ಜತೆ ವೇದಿಕೆ ಹಂಚಿಕೊಳ್ಳಬಾರದು ಎಂಬ ಹೈಕೋರ್ಟಿನ ಸುತ್ತೋಲೆಯ ವಿರುದ್ಧ ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಲಾಯಿತು. ಬಿಜೆಪಿ ಶಾಸಕ ಸಿ.ಟಿ ರವಿ, ಎಂ.ಟಿ ಕೃಷ್ಣಪ್ಪ, ಜೆಡಿಎಸ್ ಉಪನಾಯಕ ವೈ.ಎಸ್.ವಿ ದತ್ತಾ, ಚೆಲುವರಾಯಸ್ವಾಮಿ, ಸಾ.ರಾ ಮಹೇಶ್ ಸೇರಿದಂತೆ ಹಲವರು ಈ ಸುತ್ತೋಲೆಯಿಂದ ಸದನದ ಹಕ್ಕಿಗೆ ಚ್ಯುತಿ ಉಂಟಾಗಿದೆ ಎಂದು ಆರೋಪಿಸಿದರು.

Leave a Reply