ಪ್ರಣಯ ರಾಜ ಶ್ರೀನಾಥ್ ವೃತ್ತಿ ಜೀವನದ ಸಾರ್ಥಕ ಅರ್ಧ ಶತಕ

author-ssreedhra-murthyಚಿತ್ರರಂಗ ಅನ್ನೋದು ಒಂದು ತರಹ ಹರಿಯುತಿರುವ ನದಿಯ ತರಹ. ಇಲ್ಲಿ ಇವತ್ತು ಹೊಸದು ಅನ್ನಿಸಿದ್ದು ನಾಳೆಗೆ ಹಳೆಯದು ಆಗಿ ಬಿಡುತ್ತೆ. ಅಂತಹದರಲ್ಲಿ ಚಿತ್ರರಂಗದಲ್ಲಿ ಐವತ್ತು ವರ್ಷ ಪೂರೈಸಿ ಇನ್ನೂ ಸಕ್ರಿಯವಾಗಿರುವ ವಿರಳರ ಸಾಲಿಗೆ ಕನ್ನಡ ಚಿತ್ರರಂಗದ ‘ಪ್ರಣಯ ರಾಜ’ ಶ್ರೀನಾಥ್ ಸೇರಿಕೊಳ್ತಾ ಇದ್ದಾರೆ. ಹಾಗೆ ನೋಡಿದರೆ ಶ್ರೀನಾಥ್ ಯಾವತ್ತೂ ನಂಬರ್ ಗೇಮ್‍ನಲ್ಲಿ ಸೂಪರ್ ಸ್ಟಾರ್ ಎನ್ನಿಸಿಕೊಂಡವರಲ್ಲ. ನಿಬ್ಬೆರಗಾಗಿಸೋ ಹಿಟ್‍ಗಳನ್ನು ಕೊಟ್ಟವರಲ್ಲ. ನಾಟಕದ ನಂಟಿದ್ದರೂ ಅಣ್ಣ ಸಿ.ಆರ್.ಸಿಂಹ ಅವರಂತೇನು ಶ್ರೀನಾಥ್ ರಂಗಭೂಮಿಯಲ್ಲಿ ದೊಡ್ಡ ಹೆಸರು  ಮಾಡಿದವರಲ್ಲ. ಐವತ್ತು ವರ್ಷದ ಕೆಳಗೆ ಲಗ್ನಪತ್ರಿಕೆ (1967) ಚಿತ್ರದ ಮನ್ಮಥನ ಚಿಕ್ಕ ಪಾತ್ರದ ಮೂಲಕ ಬೆಳ್ಳಿತೆರಗೆ ಬಂದ ಅವರಿಗೆ ಅವಕಾಶಗಳು ಸಿಕ್ಕಿದ್ದೂ ವಿರಳವಾಗಿಯೇ.

ಬೆಳ್ಳಿತೆರೆಗೆ ಬಂದ ಎರಡು ವರ್ಷದ ನಂತರ ಎಸ್.ಕೆ.ಎ.ಚಾರಿಯವರ ‘ಮಧುರ ಮಿಲನ’ ಚಿತ್ರದ ಮೂಲಕ ನಾಯಕರಾದರು. ನಾರಾಯಣ ಸ್ವಾಮಿ, ಶ್ರೀನಾಥ್ ಆಗಿದ್ದೂ ಈ ಚಿತ್ರದ ಮೂಲಕವೇ. ಅದೇನು ಬಿಗ್ ಹಿಟ್ ಅನ್ನಿಸಿಕೊಳ್ಳಲಿಲ್ಲ. ಕಲ್ಪನಾ ನಾಯಕಿಯಾಗಿದ್ದ ‘ಅನಿರೀಕ್ಷಿತ’ ಬಿಟ್ಟರೆ ಅವರ ಆರಂಭದ ದಿನಗಳಲ್ಲಿ ದೊರೆತ ಗೆಲುವು ಕಡಿಮೆಯೇ. ಒಂದಲ್ಲ ಎರಡಲ್ಲ ಮೂವತ್ತೆರಡು ಚಿತ್ರಗಳನ್ನು ಕಳೆದ ಮೇಲೆ ‘ಶುಭ ಮಂಗಳ’ ಅವರಿಗೆ ನಿಜವಾದ ಬ್ರೇಕಿಂಗ್ ತಂದು ಕೊಟ್ಟಿತು. ಆಗ ಮಧ್ಯಮ ವರ್ಗ ರೂಪುಗೊಳ್ತಾ ಇತ್ತು. ಸಾಕ್ಷರತಾ ಚಳುವಳಿ ಯಶಸ್ವಿಯಾಗಿ ಪಾಶ್ಚಾತ್ಯರ ‘ಲವ್‍’ ಅನ್ನೋ ಪರಿಕಲ್ಪನೆಯನ್ನು ಚಿತ್ರರಂಗಕ್ಕೆ ಅಳವಡಿಸೊ ಪ್ರಯತ್ನ ನಡೀತಾ ಇತ್ತು. ಹಿಂದಿಯಲ್ಲಿ ಆಗಲೇ ರಾಜೇಶ್ ಖನ್ನಾ ರೋಮ್ಯಾಂಟಿಕ್ ಹೀರೋ ಎನ್ನಿಸಿಕೊಂಡಿದ್ದರು. ಇಂತಹ ಸೂಕ್ಷ್ಮಗಳನ್ನು ಕನ್ನಡಿಗರಿಗೆ ನೀಡಿದ ಶ್ರೀನಾಥ್ ಅವರನ್ನು 1976ರಲ್ಲೇ ಅಭಿಮಾನಿಗಳು ‘ಪ್ರಣಯ ರಾಜ’ ಎಂದು ಕರೆದರು. ಇಲ್ಲೂ ಅತಿರೇಕಕ್ಕೆ ಹೋಗದ ಅಶ್ಲೀಲತೆ ಇಲ್ಲದ ಆದರ್ಶವೂ ಇಲ್ಲದ ಜನ ಸಾಮಾನ್ಯರು ತಮ್ಮನ್ನು ಗುರುತಿಸಿಕೊಳ್ಳಬಲ್ಲ ‘ಲವ್‍’ ನ ಪರಿಕಲ್ಪನೆಯನ್ನು ಶ್ರೀನಾಥ್ ಅವರ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ನೀಡಿದವು. ಅಲ್ಲಿ ಮೈಸೂರಿನ ಮಲ್ಲಿಗೆಯ ಪರಂಪರೆಯ ಕಂಪಿತ್ತು, ಬೆಳದಿಂಗಳಿನ ನೊರೆ ಹಾಲನ್ನು ಕೊಡದಲಿ ತುಂಬಿ ತರುವ ಚಮತ್ಕಾರವಿತ್ತು.

ಈ ಹಂತದಲ್ಲಿ ಹೇಳಲೇ ಬೇಕಾಗಿದ್ದು ಮಂಜುಳಾ ಮತ್ತು ಶ್ರೀನಾಥ್ ಜೋಡಿಯ ಬಗ್ಗೆ ರಾಜ್ ಕುಮಾರ್ ಮತ್ತು ಭಾರತಿಯವರ ನಂತರ ಅತಿ ಹೆಚ್ಚು ಚಿತ್ರಗಳಲ್ಲಿ (35 ಚಿತ್ರ) ಜೋಡಿಯಾಗಿ ಅಭಿನಯಿಸಿದ ಹೆಗ್ಗಳಿಕೆ ಇವರದು. ‘ನಿನಗಾಗಿ ನಾನು’ ಯಿಂದ ‘ಸ್ನೇಹ ಸಂಕೋಲೆ’ ಯವರಿಗೆ ಸಾಗಿ ಬಂದ ಈ ಪಯಣದಲ್ಲಿ ಬೆಸುಗೆ, ಹುಡುಗಾಟದ ಹುಡುಗಿ, ಧನಲಕ್ಷ್ಮಿ, ಪಾಯಿಂಟ್ ಪರಿಮಳ, ಮಂಜಿನ ತೆರೆ, ಮಿಥುನ, ಪಟ್ಟಣಕ್ಕೆ ಬಂದ ಪತ್ನಿ, ಶಿಕಾರಿ ಹೀಗೆ ಹಲವಾರು ಸೂಪರ್ ಹಿಟ್ ಚಿತ್ರಗಳಿದ್ದವು. ಅಲ್ಲಿಯವರೆಗಿನ ನಾಯಕ-ನಾಯಕಿಯರ ನಡುವೆ ಒಂದು ಅಂತರವಿತ್ತು. ನಾಯಕಿ ಎಂದಿಗೂ ನಾಯಕ ವಿರುದ್ಧ ಎತ್ತಿದ ಧ್ವನಿಯಲ್ಲಿ ಮಾತಾಡ್ತಾ ಇರಲಿಲ್ಲ. ತಗ್ಗಿದ ಧ್ವನಿಯಲ್ಲಿ, ತಲೆ ತಗ್ಗಿಸಿ, ಹೆಬ್ಬರಳಿನಿಂದ ನೆಲವನ್ನು ಕೆರೆಯುತ್ತಾ ಉಗುಳು ನುಂಗುತ್ತಾ ಮಾತಾಡ್ತಾ ಇದ್ದಳು. ನಾಯಕನೋ ಸಕಲಕಲಾ ಸಂಪನ್ನನೂ ನಾಯಕಿಯನ್ನು ಉದ್ದಾರ ಮಾಡಲೇ ಅವತಾರ ಎತ್ತಿದವನೂ ಆಗಿರುತ್ತಾ ಇದ್ದ. ಮಂಜುಳಾ-ಶ್ರೀನಾಥ್ ಅವರ ಚಿತ್ರಗಳಲ್ಲಿ ಎಲ್ಲಾ ಬದಲಾಯಿತು. ಅನೇಕ ಚಿತ್ರಗಳಲ್ಲಿ ನಾಯಕಿನೇ ಘಟವಾಣಿ ಆಗಿರುತ್ತಿದ್ದಳು, ನಾಯಕನೇ ಹೆದರುತ್ತಾ ಇದ್ದ. ಇಬ್ಬರೂ ಏಕ ವಚನದಲ್ಲಿ ಪರಸ್ಪರ ಸಲಿಗೆಯಿಂದ ಮಾತಾಡುತ್ತಾ ಇದ್ದರು. ಎದುರಿಸುತ್ತಾ ಇದ್ದಿದ್ದಲ್ಲಾ ಮಧ್ಯಮ ವರ್ಗದವರು ಎದುರಿಸುವ ಸಮಸ್ಯೆಗಳನ್ನೇ. ಹೀಗಾಗಿ ಬಹುಬೇಗ ಜನ ಸಾಮಾನ್ಯರು ಈ ಜೋಡಿಯಲ್ಲಿ ತಮ್ಮನ್ನು ಗುರುತಿಸಿಕೊಂಡರು.

ಶ್ರೀನಾಥ್ ಏರಿಳಿತಗಳಲ್ಲದೆ ಒಂದೊಂದೇ ಹೆಜ್ಜೆಯನ್ನು ಇಡುತ್ತಾ  ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿಗೆ ಸಾರಿದರು. ಡಾ.ರಾಜ್ ಕುಮಾರ್ ಅವರ ನಂತರ ಶತ ಚಿತ್ರ ಪೂರೈಸಿದ ಎರಡನೇ ನಾಯಕ ನಟ ಎನ್ನಿಸಿಕೊಂಡರು. ಅವರ ಪಯಣದಲ್ಲಿ ಧರ್ಮಸೆರೆ, ಗರುಡರೇಖೆ, ಕಿಲಾಡಿ ಜೋಡಿ, ಎರಡು ರೇಖೆಗಳು, ಶ್ರೀ ರಾಘವೇಂದ್ರ ವೈಭವ ಹೀಗೆ ವೈವಿಧ್ಯಮಯ ಚಿತ್ರಗಳಿದ್ದವು. ಶುಭ ಮಂಗಳ ಚಿತ್ರದ ಮೂಲಕ ತಮಗೆ ಬ್ರೇಕ್ ನೀಡಿದ ಪುಟ್ಟಣ್ಣ ಕಣಗಾಲ್ ಅವರು ಕುಸಿದು ಕುಳಿತಾಗ ಮಾನಸ ಸರೋವರ, ಧರಣಿ ಮಂಡಳ ಮಧ್ಯದೊಳಗೆ ಚಿತ್ರಗಳನ್ನು ನಿರ್ಮಿಸಿ ಅವರ ಎರಡನೇ ಇನ್ನಿಂಗ್ಸ್ ಗೆ ಕಾರಣರಾದವರು ಶ್ರೀನಾಥ್ ಅವರೇ. ಇದಲ್ಲದೆ ಶಿಕಾರಿ, ದಿಗ್ವಿಜಯ, ಬಾಳೊಂದು ಭಾವಗೀತೆ ಮತ್ತು ಕಳೆದ ವರ್ಷವಷ್ಟೇ ಸುಳಿ ಎನ್ನುವ ಚಿತ್ರಗಳನ್ನು ಶ್ರೀನಾಥ್ ನಿರ್ಮಿಸಿ ನಿರ್ಮಾಪಕರಾಗಿ ಕೂಡ ತಮ್ಮ ಕಾಣಿಕೆಯನ್ನು ಚಿತ್ರರಂಗಕ್ಕೆ ಸಲ್ಲಿಸಿದ್ದಾರೆ. ‘ನಾರಾಯಣ ಸ್ವಾಮಿ’ ಎನ್ನುವ ತಮ್ಮ ನಿಜನಾಮಧೇಯವನ್ನು ಇಟ್ಟು ಕೊಂಡು ಅವರ ನಿರ್ಮಿಸಿದ ಕಿರುಚಿತ್ರ ಬಹಳ ವಿಶಿಷ್ಟವಾದ ಪ್ರಯೋಗವಾಗಿದೆ.

190 ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ ಶ್ರೀನಾಥ್ ಕ್ರಮೇಣ ಪೋಷಕ ಪಾತ್ರಗಳಿಗೆ ಬಂದರು. ಇಲ್ಲಿ ಕೂಡ ತಮ್ಮ ಸ್ವಂತಿಕೆಯನ್ನು ಅವರು ಉಳಿಸಿಕೊಂಡರು. ಅಶ್ವತ್ಥ್ ತಂದೆಯ ಪಾತ್ರಕ್ಕೆ ಘನತೆ ಗೌರವಗಳನ್ನು ತಂದು ಕೊಟ್ಟಿದ್ದರೆ ಶ್ರೀನಾಥ್ ಅದಕ್ಕೆ ಆಧುನಿಕತೆಯ ಲೇಪವನ್ನು ನೀಡಿದ ವಾತ್ಸಲ್ಯ ತುಂಬಿದ ಸಲಿಗೆಯನ್ನು ನೀಡಿದರು. ಪೋಷಕ ನಟರಾಗಿ ಕೂಡ 120 ಚಿತ್ರಗಳನ್ನು ಅವರು ಈಗಾಗಲೇ ಪೂರೈಸಿದ್ದಾರೆ. ಕಿರುತೆರೆಯ ಮಹತ್ವ ಅರಿತು ಆರಂಭಿಕ ದಿನಗಳಲ್ಲೇ ಆ ಕ್ಷೇತ್ರದಲ್ಲಿ ಸಕ್ರಿಯರಾದ ವಿರಳರಲ್ಲಿ ಶ್ರೀನಾಥ್ ಅಗ್ರಗಣ್ಯರು. ಅವರು ರೂಪಿಸಿ ನಿರ್ವಹಿಸಿದ ‘ಆದರ್ಶ ದಂಪತಿಗಳು’ ‘ಜನುಮದ ಜೋಡಿ’ ಕಾರ್ಯಕ್ರಮಗಳು ಬಹು ಜನಪ್ರಿಯವೂ ಆದವು. ಚಿತ್ರರಂಗದಲ್ಲಿ ಸ್ಟಾರ್‍ಗಳು ಹಿಟ್‍ಗಳ ಮೂಲಕ ಚಿತ್ರರಂಗದ ವೈಭವವನ್ನು ಹೆಚ್ಚಿಸುತ್ತಾರೆ. ಶ್ರೀನಾಥ್ ಅವರಂತಹ ನಟರು ನಿರಂತರತೆಯ ಮೂಲಕ ಚಿತ್ರರಂಗದ ವಿಸ್ತಾರವನ್ನು ಹೆಚ್ಚಿಸಿರುತ್ತಾರೆ. ಸ್ಟಾರ್‍ಗಳ ಕುರಿತು ಫೋಕಸ್ ಇರುತ್ತೆ. ಆದರೆ ಇಂತಹವರು ಮರೆಯಲ್ಲೇ ಉಳಿದು ಬಿಡುತ್ತಾರೆ. ಚಿತ್ರರಂಗದ ನಿಜವಾದ ಇತಿಹಾಸ ಅರಿಯಲು ಶ್ರೀನಾಥ್ ಅವರಂತಹ ಕಲಾವಿದರ ಕುರಿತೂ ಅಧ್ಯಯನಗಳು ನಡೆಯಬೇಕು. ವೃತ್ತಿ ಜೀವನಕ್ಕೆ ಐವತ್ತು ತುಂಬಿರುವ ಈ ಘಳಿಗೆಗಿಂತ ಬೇರೆ ಯಾವ ಮಹೂರ್ತ ಅದಕ್ಕೆ ಬೇಕು!

Leave a Reply