ಕೊಹ್ಲಿ ಆಟಕ್ಕೆ ಮುರಿಯಿತು ಬ್ರಾಡ್ಮನ್ ದಾಖಲೆ! ಬಾಂಗ್ಲಾ ವಿರುದ್ಧ ಬೃಹತ್ ಮೊತ್ತ ಪೇರಿಸಿತು ಟೀಂ ಇಂಡಿಯಾ

ಡಿಜಿಟಲ್ ಕನ್ನಡ ಟೀಮ್:

ಎದುರಾಳಿ ಯಾರೇ ಆಗಿರಲಿ, ಮಾದರಿ ಯಾವುದೇ ಇರಲಿ, ಪರಿಸ್ಥಿತಿ ಎಷ್ಟೇ ಕಠಿಣವಾಗಿರಲಿ, ಪಿಚ್ ಹೇಗೇ ಇರಲಿ… ನನ್ನನ್ನು ನಿಯಂತ್ರಿಸೋದು ಮಾತ್ರ ಅಸಾಧ್ಯ! ಇದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಬ್ಯಾಟಿಂಗ್ ಮೂಲಕ ವಿಶ್ವಕ್ಕೆ ಸಾರುತ್ತಿರುವ ಸಂದೇಶ.

ಸದ್ಯ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದ್ವಿಶತಕ (204) ಬಾರಿಸಿದ್ದು, ಈ ಇನಿಂಗ್ಸ್ ಮೂಲಕ ಅನೇಕ ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. ಕೊಹ್ಲಿ ಅವರ ದ್ವಿಶತಕದ ನೆರವಿನಿಂದ ಭಾರತ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ್ದು, ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 687 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ನಂತರ ಬ್ಯಾಟಿಂಗ್ ಆರಂಭಿಸಿರುವ ಬಾಂಗ್ಲಾದೇಶ 14 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ. ಭಾರತ ತಂಡ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ತಂಡ ಎಂಬ ದಾಖಲೆ ನಿರ್ಮಿಸಿದೆ.

ಸರಣಿಯಿಂದ ಸರಣಿಗೆ ತಮ್ಮ ಫಾರ್ಮ್ ಅನ್ನು ಹೆಚ್ಚಿಸಿಕೊಳ್ಳುತ್ತಾ, ಬ್ಯಾಟಿಂಗ್ ನಲ್ಲಿ ಮತ್ತಷ್ಟು ಪರಿಪಕ್ವತೆ ಪಡೆಯುತ್ತಾ ರನ್ ಮಷಿನ್ ಆಗಿರುವ ವಿರಾಟ್ ಕೊಹ್ಲಿ ಆಟಕ್ಕೆ, ಕ್ರಿಕೆಟ್ ಇತಿಹಾಸದ ಪುಟಗಳಲ್ಲಿನ ದಾಖಲೆಗಳು ಬದಲಾಗುತ್ತಿವೆ. ಅದು ಎಷ್ಟರ ಮಟ್ಟಿಗೆ ಎಂದರೆ ಕ್ರಿಕೆಟ್ ಇತಿಹಾಸದ ದಿಗ್ಗಜ ಬ್ಯಾಟ್ಸ್ ಮನ್ ಡಾನ್ ಬ್ರಾಡ್ಮನ್ ಬರೆದ ದಾಖಲೆಗಳು ವಿರಾಟ್ ಆಟಕ್ಕೆ ಬದಲಾಗಿವೆ.

ಹೌದು, ಪ್ರಸ್ತುತ ಕ್ರಿಕೆಟ್ ಋತುವಿನಲ್ಲಿ ಅದರಲ್ಲೂ ಟೆಸ್ಟ್ ಮಾದರಿಯಲ್ಲಿ ಕೊಹ್ಲಿಯ ನಾಗಾಲೋಟಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ. ಕಾರಣ, ಕೊಹ್ಲಿ ಆಡಿರುವ ಕಳೆದ ನಾಲ್ಕು ಟೆಸ್ಟ್ ಸರಣಿಗಳಲ್ಲೂ ದ್ವಿಶತಕ ಬಾರಿಸಿದ್ದಾರೆ. ಆ ಮೂಲಕ ಸತತ ನಾಲ್ಕು ಟೆಸ್ಟ್ ಸರಣಿಗಳಲ್ಲಿ ನಾಲ್ಕು ದ್ವಿಶತಕ ದಾಖಲಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮನ್ ಎಂಬ ವಿಶ್ವ ದಾಖಲೆ ಬರೆದಿದ್ದಾರೆ ಕೊಹ್ಲಿ. ಈ ಹಿಂದೆ ಬ್ರಾಡ್ಮನ್ ಹಾಗೂ ಭಾರತದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಸತತ ಮೂರು ಸರಣಿಗಳಲ್ಲಿ ದ್ವಿಶತಕ ಬಾರಿಸಿದ್ದರು. ಈ ಋತುವಿನಲ್ಲಿ ವೆಸ್ಟ್ ಇಂಡೀಸ್ (200), ನ್ಯೂಜಿಲೆಂಡ್ (211), ಇಂಗ್ಲೆಂಡ್ (235) ಹಾಗೂ ಬಾಂಗ್ಲಾದೇಶ (204) ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಕೊಹ್ಲಿ ದ್ವಿಶತಕ ದಾಖಲಿಸಿದ್ದಾರೆ.

ತವರಿನಲ್ಲಿ ಒಂದು ಟೆಸ್ಟ್ ಋತುವಿನಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. 2016-17ನೇ ಸಾಲಿನಲ್ಲಿ ಕೊಹ್ಲಿ, ಆಡಿರುವ 15 ಇನಿಂಗ್ಸ್ ಗಳಲ್ಲಿ 1168 ರನ್ ದಾಖಲಿಸಿದ್ದಾರೆ. ಆ ಮೂಲಕ ಈ ಹಿಂದೆ 2004-05 ನೇ ಸಾಲಿನಲ್ಲಿ ಭಾರತದ ವೀರೇಂದ್ರ ಸೆಹ್ವಾಗ್ (1105) ಅವರ ದಾಖಲೆಯನ್ನು ಮುರಿದಿದ್ದಾರೆ. ಈ ದಾಖಲೆಯ ಪಟ್ಟಿಯಲ್ಲಿ ಸೆಹ್ವಾಗ್ ನಂತರ ಇಂಗ್ಲೆಂಡಿನ ಗೂಚ್ 1990 ರಲ್ಲಿ 1058 ರನ್, ಸುನೀಲ್ ಗವಾಸ್ಕರ್ 1979-80ನೇ ಸಾಲಿನಲ್ಲಿ 1027 ರನ್ ದಾಖಲಿಸಿದ್ದು, ಗರಿಷ್ಠ ದಾಖಲೆಯಾಗಿದ್ದವು.

ಟೆಸ್ಟ್ ತಂಡದ ನಾಯಕನಾಗಿ ಒಂದು ಋತುವಿನಲ್ಲಿ 3 ದ್ವಿಶತಕ ದಾಖಲಿಸಿದ ಮೊದಲ ಬ್ಯಾಟ್ಸ್ ಮನ್ ಆಗಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಈವರೆಗೂ ಆರು ಬಾರಿ ವಿಶ್ವದ ಇತರೆ ತಂಡದ ನಾಯಕರು ಒಂದು ಟೆಸ್ಟ್ ಋತುವಿನಲ್ಲಿ ಎರಡು ಬಾರಿ ದ್ವಿಶತಕ ದಾಖಲಿಸಿದ್ದು, ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಆ ಪೈಕಿ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ (1936-37), ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ (2003), ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ (2003-04), ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ (2011-12) ಹಾಗೂ (2012-13), ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಂ (2013-14) ಎರಡು ದ್ವಿಶತಕ ದಾಖಲಿಸಿದ್ದ ಸಾಧನೆ ಮಾಡಿದ್ದರು.

ಒಟ್ಟಿನಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಆಧುನಿಕ ಕ್ರಿಕೆಟ್ ಯುಗದಲ್ಲಿ ಸಾರ್ವಭೌಮನಾಗಿ ಮೆರೆಯುತ್ತಿರುವ ವಿರಾಟ್ ಕೊಹ್ಲಿ, ಈ ದಾಖಲೆಗಳನ್ನು ಮತ್ತಷ್ಟು ವಿಸ್ತರಿಸುವ ಅವಕಾಶವಿದೆ. ಕಾರಣ ಇದೇ ತಿಂಗಳು ಆಸ್ಟ್ರೇಲಿಯಾ ತಂಡ 4 ಟೆಸ್ಟ್ ಪಂದ್ಯಗಳ ಸರಣಿಗಾಗಿ ಭಾರತಕ್ಕೆ ಆಗಮಿಸಲಿದ್ದು, ಕೊಹ್ಲಿ ಇದೇ ರೀತಿ ಅಬ್ಬರಿಸಿದರೆ, ಈ ದಾಖಲೆಗಳೆಲ್ಲ ವಿಸ್ತಾರಗೊಳ್ಳುವುದರ ಜತೆಗೆ ಇನ್ನಷ್ಟು ದಾಖಲೆಗಳು ಧೂಳಿಪಟವಾಗಲಿದೆ.

1928 ರಿಂದ 1948ರವರೆಗೂ ಡಾನ್ ಬ್ರಾಡ್ ಮನ್ ವಿಶ್ವ ಕ್ರಿಕೆಟ್ ಅನ್ನು ಆಳಿದ ರೀತಿಯನ್ನು ಕೇಳಿದ್ದ ಪ್ರಸ್ತುತ ತಲೆಮಾರಿನ ಕ್ರಿಕೆಟ್ ಅಭಿಮಾನಿಗಳು, ಕೊಹ್ಲಿ ಆಟವನ್ನು ಕಾಣುತ್ತಲೇ ಆ ಗತವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಿಲ್ಲ.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್: 687ಕ್ಕೆ 6 (166 ಓವರ್)

ಕೊಹ್ಲಿ 204, ವಿಜಯ್ 108, ಸಾಹ ಅಜೇಯ 106, ರಹಾನೆ 82, (ತೈಜುಲ್ 156ಕ್ಕೆ 3, ಮಹೆದಿ 165ಕ್ಕೆ 2, ತಸ್ಕಿನ್ 127ಕ್ಕೆ 1)

ಬಾಂಗ್ಲಾದೇಶ ಮೊದಲ ಇನಿಂಗ್ಸ್: 41ಕ್ಕೆ 1 (14 ಓವರ್)

ತಮಿಮ್ ಇಕ್ಬಾಲ್ ಅಜೇಯ 24, ಸೌಮ್ಯ ಸರ್ಕಾರ್ 15, ಮೊಮಿನುಲ್ ಅಜೇಯ 1, (ಉಮೇಶ್ 2ಕ್ಕೆ 1)

Leave a Reply