ಇಡೀ ಖಂಡವನ್ನೇ ನುಂಗಿದ ಹಿಂದೂ ಮಹಾಸಾಗರ, ವಿಜ್ಞಾನಿಗಳಿಗೆ ಈಗ ಸಿಕ್ಕಿದೆ ಆಧಾರ!

author-ananthramuಟೈಟಾನಿಕ್ ಹೆಸರು ಹೇಳಿದರೆ ಈಗಲೂ ಜನ ಬೆಚ್ಚಿಬೀಳುವುದುಂಟು. ಅದು ಬ್ರಿಟಿಷ್ ಹಡಗು. ಸೌತಾಂಪ್ಟನ್‍ನಿಂದ ನ್ಯೂಯಾರ್ಕಿಗೆ ಹೋಗುವ ಮಾರ್ಗದಲ್ಲಿ 1912ರ ಏಪ್ರಿಲ್ 15ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ತೇಲುವ ಹಿಮಗಡ್ಡೆಗೆ ಡಿಕ್ಕಿಹೊಡೆದು ಮುಳುಗಿಹೋಗಿದ್ದು ಇತಿಹಾಸದಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾಗುತ್ತದೆ. ಪ್ರಯಾಣಿಕರಲ್ಲಿ 1500 ಮಂದಿ ಅಸುನೀಗಿದರು, ಕೊನೆಗೆ ಟೈಟಾನಿಕ್, ಸಾಗರ ತಳಸೇರಿತು. ಅದೇ ಹೆಸರಿನ-ಅದೇ ಘಟನೆಯನ್ನಾಧರಿಸಿ ಮಾಡಿದ ಚಲನಚಿತ್ರವಂತೂ ಅತ್ಯಂತ ಜನಪ್ರಿಯವಾಗಿ ಬಾಕ್ಸ್ ಆಫೀಸ್‍ನಲ್ಲಿ ಹಿಟ್ ಆಯ್ತು. ವಾಸ್ತವವಾಗಿ ಸಾಗರಯಾನವನ್ನು ಗಮನಿಸಿದರೆ ಈ ಬಗೆಯ ದುರಂತಗಳು ಒಂದಲ್ಲ ಹತ್ತಾರು ಕಣ್ಣಮುಂದೆ ಬರುತ್ತವೆ. ಮುಳುಗಿಹೋದ ಹಡಗುಗಳು ತಳಸೇರಿದ ಮೇಲೆ ಪಾಚಿಕಟ್ಟಿ ಶಾರ್ಕ್‍ಗಳಿಗೋ, ತಿಮಿಂಗಿಲಗಳಿಗೋ ಆಶ್ರಯತಾಣಗಳೂ ಆಗಿವೆ. ಅದರಲ್ಲೂ ಪ್ರಾಚ್ಯ ವಸ್ತು ತಜ್ಞರಿಗಂತೂ ಸಾಗರ ತಳಕ್ಕಿಳಿದು ಇವುಗಳ ಫೋಟೋ ತೆಗೆದು ಮತ್ತೆ ಸಾರ್ವಜನಿಕರ ಮುಂದಿಡುವುದು ಒಂದು ರೋಚಕ ಶೋಧನೆ.

ಹಡುಗಗಳು ಮುಳುಗುವುದು ವಿಶೇಷವೇನಲ್ಲ. ಆದರೆ ಸಾಗರ ಒಂದು ಖಂಡವನ್ನೇ ಮುಳುಗಿಸಬಲ್ಲದೆ? ಇಂಥ ಘಟನೆಗಳು ಚರಿತ್ರೆಯಲ್ಲಿ ಎಂದಾದರೂ ದಾಖಲೆಯಾಗಿದೆಯೆ? ಯಾರಾದರೂ ಕಣ್ಣಲ್ಲಿ ಕಂಡಿದ್ದರೆ? ಹೀಗೆ ಪ್ರಶ್ನೆ ಎದ್ದೊಡನೆ ನಿಮ್ಮಲ್ಲಿ ಅನೇಕರು ಉತ್ತರಿಸಬಹುದು-ಅಟ್ಲಾಂಟಿಸ್ ಎಂಬ ಖಂಡವೇ ಇತ್ತಲ್ಲ, ಗ್ರೀಕ್ ದಾರ್ಶನಿಕ ಪ್ಲೇಟೋ ತನ್ನ ಬರವಣಿಗೆಗಳಲ್ಲಿ ಇದನ್ನು ದಾಖಲಿಸಿದ್ದಾನಲ್ಲ. ಅಥೆನ್ಸ್ ಮೇಲೆ ಯುದ್ಧಸಾರಲು ಬಂದ ಅಟ್ಲಾಂಟಿಸ್ ಸೈನ್ಯ ದೇವರ ಅವಕೃಪೆಗೆ ಒಳಗಾಗಿ, ಅಟ್ಲಾಂಟಿಕ್ ಸಾಗರದ ಮಧ್ಯದಲ್ಲಿದ್ದದ್ದು ಮುಳುಗಿಹೋಯಿತೆಂಬುದು ಸುಳ್ಳೆ? ಹೀಗೆ ಪ್ರಶ್ನೆಗಳ ಸರಮಾಲೆಯನ್ನೇ ಕೇಳಬಹುದು. ಇದಂತೂ ಭರ್ಜರಿ ಕಥೆ. ಪ್ಲೇಟೋಗೂ ಹಿಂದೆ ಇದ್ದ ಕುಶಲಮತಿಗಳು ಇದೇ ಕಥೆಯನ್ನು ಮುಂದಿನ ತಲೆಮಾರುಗಳಿಗೂ ವರ್ಗಾಯಿಸುತ್ತಲೇ ಹೋದರು.

ಈಗ ಹಿಂದೂ ಮಹಾಸಾಗರ ಒಂದು ಖಂಡವನ್ನೇ ಗುಳುಂ ಮಾಡಿದೆಯೆಂದು ಹೇಳುತ್ತಿರುವವರು ಇತಿಹಾಸಕಾರರಲ್ಲ, ಸೈನ್ಸ್ ಫಿಕ್ಷನ್ ಬರೆಯುವವರೂ ಅಲ್ಲ, ಅವರು ನಿಜವಾದ ವಿಜ್ಞಾನಿಗಳು. ಮಾರಿಷಸ್ ದ್ವೀಪ ನಿಂತಿರುವುದೇ ತುಂಡಾದ ಖಂಡದ ಮೇಲೆ ಎಂಬುದು ದಕ್ಷಿಣ ಆಫ್ರಿಕದ ವಿಟ್ ವಾಟರ್ ಸ್ರಾಂಡ್ ವಿಶ್ವವಿದ್ಯಾಲಯದ ಲೆವಿಸ್ ಆಶ್ವಾಲ್‍ನ ಶೋಧ. ಒಂದಂತೂ ಸಮಾಧಾನಕರ ಅಂಶ. ಆ ಖಂಡ ಮುಳುಗಿದ್ದು ಇತಿಹಾಸ ಕಾಲದಲ್ಲಲ್ಲ, ಆಗ ಹೂಬಿಡುವ ಸಸ್ಯಗಳಿರಲಿಲ್ಲ, ಜಿರಾಫ್, ಆನೆ ಹುಟ್ಟಿರಲಿಲ್ಲ, ಮನುಷ್ಯ ಬಿಡಿ-ಹುಟ್ಟುವ ಸೂಚನೆಗಳೂ ಇರಲಿಲ್ಲ. ಆದರೆ ಈ ಖಂಡವಿದ್ದ ಕಾಲದಲ್ಲಿ ಡೈನೋಸಾರ್‍ಗಳು ಜಗತ್ತಿನ ತುಂಬ ಅಡ್ಡಾಡಿದ್ದವು, ಎಲ್ಲ ಪ್ರಾಣಿಗಳನ್ನೂ ಮೆಟ್ಟುತ್ತ, ಕುಟ್ಟುತ್ತ ಅಟ್ಟಹಾಸಗೈದಿದ್ದವು. ನಿಮಗೆ ವಿಸ್ಮಯ ಎನ್ನಿಸಬಹುದು. ಆಗ ಇಂಡಿಯಾ, ಅಂಟಾರ್ಕ್‍ಟಿಕಾ, ದಕ್ಷಿಣ ಆಮೆರಿಕ, ಆಫ್ರಿಕಾ ಖಂಡಗಳು ಪ್ರತ್ಯೇಕವಾಗಿ ಇರಲೇ ಇಲ್ಲ. ಅದನ್ನು ವಿಜ್ಞಾನಿಗಳು `ಗೊಂಡ್ವಾನ ಸೂಪರ್ ಕಾಂಟಿನೆಂಟ್’ ಎಂದರು. ಅನಂತರ ಅವು ಮೆಲ್ಲನೆ ಸರಿಯಲು ಪ್ರಾರಂಭಿಸಿ ಒಂದೊಂದೂ ಪ್ರತ್ಯೇಕ ಖಂಡಗಳಾದವು, ಅವಿಭಕ್ತ ಕುಟುಂಬಗಳು ಬೇರೆ ಬೇರೆಯಾದ ಹಾಗೆ. ಭೂಮಿಯ ಅಂತರಾಳದಲ್ಲಿ ಏರಿಳಿಯುತ್ತಿದ್ದ ಉಷ್ಣ ಪ್ರವಾಹಗಳೇ ಖಂಡಗಳನ್ನು ದೂಡಿವೆ ಎಂಬುದು ವಿಜ್ಞಾನಿಗಳ ಸಕಾರಣ ಊಹೆ. ಹೀಗೆ ಸರಿಯುವಾಗ 85 ಮಿಲಿಯನ್ ವರ್ಷಗಳ ಹಿಂದೆ ಮಾರಿಷಸ್ ಮತ್ತು ಭಾರತದ ನಡುವೆ ಇದ್ದ ಖಂಡ ಜಗ್ಗಾಟದಲ್ಲಿ ಸಿಕ್ಕಿ ಕೊನೆಗೆ ಸಾಗರ ತಳ ಸೇರಿತು ಎಂಬುದು ತೀರ ಈಚಿನ ವೈಜ್ಞಾನಿಕ ಸಿದ್ಧಾಂತ. ನೀವು ಯಾವುದೇ ದ್ವೀಪವನ್ನು ಗಮನಿಸಿ, ಅವೆಲ್ಲವೂ ಜ್ವಾಲಾಮುಖಿಯ ಲಾವಾರಸ ಹೆಪ್ಪುಗಟ್ಟಿ ಬಂಡೆಯಾಗಿ ದ್ವೀಪವಾಗಿವೆ. ಜನವಸತಿಗೆ, ಜೀವಸಂಕುಲದ ನೆಲೆಗೆ ಅವು ಆಧಾರವಾಗಿವೆ.

mauritius

ಮಾರಿಷಸ್ ದ್ವೀಪವೂ ಅಷ್ಟೇ. ಈಗಲೂ ಅದು ಪ್ರವಾಸಿಗಳಿಗೆ ಮೆಚ್ಚಿನ ತಾಣ. ಲೇಖಕ ಮಾರ್ಕ್ ಟ್ವೈನ್ ಒಂದು ಸಂದರ್ಭದಲ್ಲಿ ಹೇಳಿದ ಮಾತು- `ಮೊದಲು ದೇವರು ಮಾರಿಷಸ್ ದ್ವೀಪ ರಚನೆಮಾಡಿದ. ಅದನ್ನು ಕಾಪಿ ಮಾಡಿ ಸ್ವರ್ಗ ಸ್ಥಾಪಿಸಲಾಯಿತು’ ಎಂದು. ಮಾರಿಷಸ್ ದ್ವೀಪದ ಬೀಚ್‍ಗಳ ಸೌಂದರ್ಯಕ್ಕೆ ಮಾರುಹೋಗಿ ಈಗಲೂ ಲಕ್ಷ ಲಕ್ಷ ಪ್ರವಾಸಿಗರು ಪ್ರತಿವರ್ಷವೂ ಅಲ್ಲಿಗೆ ಹೋಗುತ್ತಾರೆ. ಭೂವಿಜ್ಞಾನಿಗಳು ಹೇಳುವ ಪ್ರಕಾರ ಇಡೀ ದ್ವೀಪದ ಯಾವ ಶಿಲೆಯೂ ಈಗ 90 ಲಕ್ಷ ವರ್ಷಕ್ಕಿಂತ ಹಳೆಯವಲ್ಲ. ಪರಿಸ್ಥಿತಿ ಹೀಗಿರುವಾಗ ಮುಳುಗಿಹೋದ ಖಂಡವನ್ನು ಗುರುತಿಸಿದ್ದು ಹೇಗೆ? ಸಾಗರ ತಳವೆಂದರೆ ಈಗ ಅದು ಜ್ವಾಲಾಮುಖಿಗಳ ಆಡುಂಬೊಲ. ಹಿಮಾಲಯ ಪರ್ವತವನ್ನು ಮೀರಿಸುವ ಪರ್ವತಶ್ರೇಣಿಗಳು ಸಾಗರ ತಳದಲ್ಲಿವೆ. ಸಾಗರಗಳ ಹಿಂದಿದ್ದ ತಳವೆಲ್ಲ ಬಹುತೇಕ ನವೀಕರಣವಾಗಿವೆ. ಅಂದರೆ ಲಾವಾರಸದಿಂದ ತುಂಬಿವೆ. ಹಳೆಯ ಹಂಡೆಗೆ ಹೊಸ ತಳ ಕಟ್ಟಿದಂತೆ. ಆದರೆ ಕೆಲವೆಡೆ ಒಂದಷ್ಟು ಹಿಂದಿನ ಶಿಲೆಗಳನ್ನು ಉಳಿಸಿದೆ ಎನ್ನುವುದು ಇತ್ತೀಚೆಗೆ ಗಮನಕ್ಕೆ ಬಂದಿರುವ ಅಂಶ.

ಮಾರಿಷಸ್ ದ್ವೀಪದ ಸುತ್ತ ಸಾಗರ ತಳದಲ್ಲಿ ಇರುವ ಶಿಲೆಗಳ ವಯೋಮಾನ ನಿರ್ಧರಿಸುವಾಗ ಲೆವಿಸ್ ಆಶ್ವಾಲ್‍ಗೆ ವಿಶೇಷ ಖನಿಜವೊಂದು ಪತ್ತೆಯಾಯಿತು. ಅದರ ಹೆಸರು `ಜಿಂರ್ಕಾನ್’. ಇದು ವಿಕಿರಣ ಸೂಸಿ ಬೇರೆಯ ಧಾತುವಾಗುತ್ತದೆ. ಇದಕ್ಕೆ ಕೋಟ್ಯಂತರ ವರ್ಷಗಳು ತಗಲುತ್ತವೆ. ಸಾಮಾನ್ಯವಾಗಿ ಈ ಬಗೆಯ ಖನಿಜ ನಮ್ಮ ರಾಮನಗರ, ಶಿವಗಂಗೆ, ಮಧುಗಿರಿ ಈ ಪಟ್ಟಿಯಲ್ಲಿ ಸಾಗುವ ಗ್ರನೈಟ್ ಶಿಲೆಗಳಲ್ಲಿ ಲಭ್ಯ. ಆದರೆ ಇಲ್ಲಿ ಅದು ಸಿಕ್ಕಿದ್ದು ಜ್ವಾಲಾಮುಖಿಯ ಶಿಲೆಯಲ್ಲಿ. ಅಂದರೆ ಈ ಖನಿಜ ಅತಿಥಿಯಾಗಿ ಬಂದದ್ದು. ಸರಳವಾಗಿ ಹೇಳುವುದಾದರೆ ನಿಮ್ಮ ವಾರ್ಡ್‍ರೋಬಿನಲ್ಲಿ ನಿಮ್ಮ ಉಡುಪುಗಳ ಮಧ್ಯೆ ನಿಮ್ಮ ತಂದೆಯ ಕೋಟು ಕಂಡರೆ ನಿಮ್ಮ ತಕ್ಷಣದ ಅನಿಸಿಕೆ ಏನು? ಇಲ್ಲೂ ಹಾಗೆಯೇ. ಅಂದರೆ ಮಾರಿಷಸ್ ದ್ವೀಪವೇ ಮುಳುಗಿಹೋದ ಖಂಡದ ಮೇಲೆ ತಲೆ ಎತ್ತಿರುವ ದ್ವೀಪ. ಇನ್ನೂ ಒಂದು ಸಂಗತಿಯನ್ನು ಇದಕ್ಕೆ ಪೂರಕವಾಗಿ ವಿಜ್ಞಾನಿಗಳು ಬೊಟ್ಟುಮಾಡಿ ತೋರಿಸುತ್ತಿದ್ದಾರೆ. ಮಾರಿಷಸ್ ಮತ್ತು ಭಾರತದ ಮಧ್ಯದ ಹಿಂದೂ ಮಹಾಸಾಗರ ಭಾಗದಲ್ಲಿ ಗುರುತ್ವ ಹೆಚ್ಚೆಂದು ಅಳೆದು ನೋಡಿದ್ದಾರೆ. ಆ ಭಾಗದ ಸಾಗರ ತಳದಲ್ಲಿ ಶಿಲೆಗಳ ಮಂದವೂ ಜಾಸ್ತಿ. ಜ್ವಾಲಾಮುಖಿ ಲಾವಾರಸ ಕಾರುವಾಗ ಬಹುಶಃ ಮುಳುಗಿದ ಖಂಡದ ಶಿಲೆಗಳನ್ನೆಲ್ಲ ತೂರಿ ಹೊರಕ್ಕೆ ಹಾಕಿದಾಗ ಈ ಖನಿಜವೂ ಬಂದಿದೆ ಎಂಬ ಊಹೆ ವಿಜ್ಞಾನಿಗಳದ್ದು.

ಜೇನು ಗೊಡಾಲ್, ಚಿಂಪಾಂಜಿಯ ಭಾಷೆ, ವರ್ತನೆಯನ್ನು ಅರ್ಥಮಾಡಿಕೊಂಡಂತೆ, ಶಿಲೆಗಳೊಂದಿಗೆ ಒಡನಾಡುವ ಭೂವಿಜ್ಞಾನಿಗಳು ಸಾಕ್ಷಿಗಳ ಮೂಲಕವೇ ಸಂವಾದ ಮಾಡಬೇಕು. ಭೂವಿಜ್ಞಾನದ ಇತಿಹಾಸ ಬರೆಯಬೇಕಾದರೆ ಭೂಮಿ ನಮಗೆ ಒದಗಿಸಿರುವ ಒಂದೊಂದು ಸಾಕ್ಷಿಯನ್ನು ತಪಶೀಲಾಗಿ ಪರಿಶೀಲಿಸಬೇಕು. ಇದೊಂದು ಮೌನ ಸಂವಾದ.

Leave a Reply