ಟಾಟಾದ ಮಿಸ್ತ್ರಿ ಹಾದಿಯನ್ನೇ ತುಳಿಯುಬೇಕಾಗುತ್ತಾ ಇನ್ಫೋಸಿಸ್ ನ ವಿಶಾಲ್ ಸಿಕ್ಕಾ? ಸ್ಥಾಪಕರ ಹೊರತಾಗಿ ಮುಂದೆ ಸಾಗದಾದವೇ ಬೃಹತ್ ಉದ್ದಿಮೆಗಳು?

ಡಿಜಿಟಲ್ ಕನ್ನಡ ಟೀಮ್:

ಸದ್ಯ ದೇಶದ ಬೃಹತ್ ಉದ್ಯಮಗಳು ತಮ್ಮ ಸಂಸ್ಥಾಪಕರ ಹೊರತಾಗಿ ಯಶಸ್ಸಿನ ಹಾದಿಯಲ್ಲಿ ಸಾಗುವಲ್ಲಿ ಎಡವುತ್ತಿವೆಯೇ? ಟಾಟಾ ಕಂಪನಿಯ ಸಂಸ್ಥಾಪಕ ರತನ್ ಟಾಟಾ ಅವರ ನಂತರ ಕಂಪನಿಯ ಮುಖ್ಯಸ್ಥ ಸ್ಥಾನ ಅಲಂಕರಿಸಿದ್ದ ಸೈರಸ್ ಮಿಸ್ತ್ರಿ ವೈಫಲ್ಯ ಕಂಡಿದ್ದರ ಬೆನ್ನಲ್ಲೇ ಈಗ ಇನ್ಫೋಸಿಸ್ ನ ವಿಶಾಲ್ ಸಿಕ್ಕಾ ವಿಫಲವಾಗುತ್ತಿರುವುದು ಈ ಮಾತಿಗೆ ಹೆಚ್ಚಿನ ಪುಷ್ಟಿ ನೀಡುತ್ತಿದೆ.

ಇನ್ಫೋಸಿಸ್ ಕಂಪನಿಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಆ ಸಂಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿವೆ. ಇನ್ಫೋಸಿಸ್ ಆಡಳಿತ ಮಂಡಳಿಯ ಬಗೆಗಿನ ಅಸಮಾಧಾನ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ, ಕಂಪನಿಯ ಆಡಳಿತ ಮಂಡಳಿಯ ಕಾರ್ಯ ವೈಖರಿ ಬಗ್ಗೆ ನಾರಾಯಣ ಮೂರ್ತಿ ಅವರೇ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ನಾರಾಯಣ ಮೂರ್ತಿಯವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ‘ಸಂಸ್ಥೆಯನ್ನು ಕಟ್ಟಲಾರಂಭಿಸಿದ ಮೊದಲ ದಿನದಿಂದ ನಾವು ಕಠಿಣ ಪರಿಶ್ರಮ ಹಾಕಿ, ಕಂಪನಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಅತ್ಯುತ್ತಮ ಆಡಳಿತಕ್ಕಾಗಿ ವಿಶ್ವದಾದ್ಯಂತ ಹಲವಾರು ಪ್ರಶಸ್ತಿಗಳನ್ನು ಇನ್ಫೋಸಿಸ್ ಸಂಸ್ಥೆ ಪಡೆದುಕೊಂಡಿದೆ. ನಾವು ಅಧಿಕಾರದಿಂದ ಕೆಳಗಿಳಿದ ನಂತರ 2015ರ ಜನವರಿ 1ರಿಂದ ಸಂಸ್ಥೆಯ ಆಡಳಿತ ಗುಣಮಟ್ಟ ಕುಸಿಯುತ್ತಲೇ ಬಂದಿದೆ. ಇದನ್ನು ಉದಾಹರಣೆ ಮೂಲಕ ಹೇಳುವುದಾದರೆ, ಸದ್ಯ ಕಂಪನಿಯ ಆಡಳಿತ ಮಂಡಳಿಯು ಸಂಸ್ಥೆಯಿಂದ ಹೊರಹೋಗುತ್ತಿರುವ ನೌಕರರಿಗೆ (ಮಾಜಿ ಸಿಎಫ್ಒ ರಾಜೀವ್ ಬನ್ಸಾಲ್) ಪರಿಹಾರ ಧನದ ರೂಪದಲ್ಲಿ ಅತಿ ಹೆಚ್ಚಿನ ಹಣವನ್ನು ನೀಡುತ್ತಿದೆ. ಅದೇ ಸಮಯದಲ್ಲಿ ಕಂಪನಿಯಲ್ಲಿ ದುಡಿಯುತ್ತಿರುವ ಸಿಬ್ಬಂದಿಯನ್ನು ಕಡೆಗಣಿಸಲಾಗಿದೆ. ಇದು ಕಾರ್ಪೋರೇಟ್ ಆಡಳಿತದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಾದ ಅಂಶ. ಈ ರೀತಿಯಾಗಿ ದೊಡ್ಡ ಮೊತ್ತವನ್ನು ನೀಡುವುದರ ಹಿಂದಿನ ಉದ್ದೇಶವೇನು? ಈ ರೀತಿ ಹೆಚ್ಚು ಹಣವನ್ನು ಕೊಟ್ಟು, ಏನನ್ನಾದರೂ ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆಯೇ?’ ಎಂದು ಆಡಳಿತ ಮಂಡಳಿಯ ಕಾರ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಹಿಂದಿನ ಕಾರಣ ಏನು ಎಂಬುದರ ಬಗ್ಗೆ ವಿಶ್ಲೇಷಕರು ಹೇಳುವುದು ಹೀಗೆ… ಸಂಸ್ಥೆಯಲ್ಲಿ ಹಾಗೆ ಉಳಿದು ಬಂದಿರುವ ದೊಡ್ಡಮೊತ್ತದ ಹಣಕ್ಕಾಗಿ ಈ ಎಲ್ಲ ಬೆಳವಣಿಗೆಗಳಾಗುತ್ತಿವೆ. ಇನ್ಫೋಸಿಸ್ ಕಂಪನಿಯಲ್ಲಿ ₹36 ಸಾವಿರ ಕೋಟಿಯಷ್ಟು ದುಬಾರಿ ಹಣ ಖರ್ಚಾಗದೇ ಉಳಿದಿದೆ. ಹೀಗಾಗಿ ಆಡಳಿತ ಮಂಡಳಿಯು ಮನಸೋ ಇಚ್ಛೆ ಹಣವನ್ನು ನೀಡುತ್ತಾ ಪ್ರತಿಷ್ಠೆ ಮೆರೆಯುತ್ತಿದೆ. ಅತಿಯಾಗಿ ಹಣ ಸಂಪಾದನೆ ಮಾಡಿದವರು ಹೇಗೆ ಸಾರ್ವಜನಿಕವಾಗಿ ಮೈತುಂಬಾ ಬೆಲೆಬಾಳುವ ಚಿನ್ನ, ಪ್ಲಾಟಿನಂ, ವಜ್ರದ ಆಭರಣಗಳನ್ನು ಹಾಕಿಕೊಂಡು ತಮ್ಮ ವೈಭವವನ್ನು ಪ್ರದರ್ಶಿಸುತ್ತಾರೋ ಅದೇ ರೀತಿ ಇನ್ಫೋಸಿಸ್ ಆಡಳಿತ ಮಂಡಳಿ ದುಂದು ವೆಚ್ಚ ಮಾಡುತ್ತಿದೆ.

ಹೀಗೆ ಅನಗತ್ಯವಾಗಿ ಆಡಳಿತ ಮಂಡಳಿ ಹಣವನ್ನು ಪೋಲು ಮಾಡುತ್ತಿರುವುದರಿಂದ ಕಂಪನಿಯ ಏಳಿಗೆಗಾಗಿ ಶ್ರಮಿಸಿದ ಮೊಹನ್ ದಾಸ್ ಪೈ (ಮಾಜಿ ಸಿಎಫ್ಒ), ಡಿ.ಎನ್ ಪ್ರಹ್ಲಾದ್ (ಮಾಜಿ ಸಿಬ್ಬಂದಿ, ಪ್ರಸ್ತುತ ಸ್ವಾಯತ್ತ ನಿರ್ದೇಶಕ), ವಿ.ಬಾಲಕೃಷ್ಣನ್ (ಮಾಜಿ ಸಿಎಫ್ಒ) ರಂತಹ ಹಿರಿಯ ವ್ಯಕ್ತಿಗಳ ಜತೆಗೆ ಈಗ ಕಂಪನಿಯಯಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ಬೇಸರ ಮೂಡಿಸಿದೆ.

ವಿಶಾಲ್ ಸಿಕ್ಕಾ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡಾಗಲೇ ಈ ಮೂವರು ಹಿರಿಯರು ವಿರೋಧ ವ್ಯಕ್ತಪಡಿಸಿ, ಕಂಪನಿ ತನ್ನ ಷೇರನ್ನು ಖರೀದಿಸಲು ಸ್ವತಃ ಕಂಪನಿಯೇ ಮುಂದಾಗಬೇಕು. ಇದರಿಂದ ಆಡಳಿತ ಮಂಡಳಿ ಹಾಗೂ ಬಂಡವಾಳ ಹೂಡಿಕೆದಾರರ ನಡುವೆ ಮಾಹಿತಿಯ ಹರಿವು ಉತ್ತಮವಾಗಿರುತ್ತದೆ ಎಂದು ಮಂಡಳಿಗೆ ಪತ್ರ ಬರೆದಿದ್ದರು.

ಸ್ವತಃ ಮೋಹನ್ ದಾಸ್ ಪೈ ಈ ಬೆಳವಣಿಗೆಗಳ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದು, ‘2014ರಲ್ಲಿ ನಾವು ಬರೆದ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ವಿಚಾರವಾಗಿ ಷೇರುದಾರರು ಕೆಲವು ಪ್ರಶ್ನೆ ಎತ್ತಿದ್ದು, ಅದನ್ನು ಮಂಡಳಿ ಪರಿಗಣಿಸುವುದಾಗಿ ಸಂಸ್ಥೆಯ ವಕ್ತಾರರು ಹೇಳಿದ್ದರು. ಅದರ ಹೊರತಾಗಿ ಯಾವುದೇ ಬದಲಾವಣೆ ಆಗಲಿಲ್ಲ. ಸಂಸ್ಥೆಯಲ್ಲಿ ಷೇರುದಾರರ ಅಭಿಪ್ರಾಯಗಳಿಗೆ ಬೆಲೆ ಸಿಗುತ್ತಿಲ್ಲ. ಬಂಡವಾಳ ಹಂಚಿಕೆ ಮಾದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು. ಇದರಿಂದ ಹೂಡಿಕೆದಾರರ ಹಿತಾಸಕ್ತಿಗೆ ಧಕ್ಕೆಯಾಗಿದೆ’ ಎಂದು ಮೋಹನ್ ದಾಸ್ ಅಸಮಾಧಾನ ಹೊರಹಾಕಿದ್ದಾರೆ.

ಈ ಎಲ್ಲ ಬೆಳವಣಿಗೆಗಳು ಇನ್ಫೋಸಿಸ್ ಕಂಪನಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಸಾಕ್ಷಿಯಾಗಿದ್ದು, ಇನ್ಫೋಸಿಸ್ ಕೂಡ ಟಾಟಾ ಸಂಸ್ಥೆಯ ಮಾದರಿಯಲ್ಲೇ ಆಡಳಿತ ಮಂಡಳಿಯ ವೈಫಲ್ಯ ಅನುಭವಿಸುತ್ತಿದೆಯೇ? ಎಂಬ ಶಂಕೆ ಮೂಡುತ್ತಿದೆ.