ಪನ್ನೀರ್ ಪಾಳೆಯಕ್ಕೆ ಜಿಗಿತ ಹೆಚ್ಚುತ್ತಲೇ ತೀವ್ರವಾಯಿತಿಲ್ಲಿ ಶಶಿಕಲಾ ಧಾವಂತ, ಶನಿವಾರದ ಬೆಳವಣಿಗೆಗಳಿವು

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನ ಮುಖ್ಯಮಂತ್ರಿ ಅಧಿಕಾರ ಪಡೆಯಲು ಎಐಎಡಿಎಂಕೆ ಪಕ್ಷದ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ಅವರ ನಡುವಣ ರಾಜಕೀಯ ಸಮರಕ್ಕೆ ಸದ್ಯಕ್ಕೆ ತೆರೆ ಬೀಳದಿದ್ದರೂ ದಿನನಿತ್ಯದ ವಿದ್ಯಮಾನಗಳಂತೂ ಸಾಕಷ್ಟು ರೋಚಕವಾಗಿವೆ.

ಶುಕ್ರವಾರ ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಇ.ಮಧುಸುಧನ್ ಅವರನ್ನು ಪಕ್ಷದಿಂದ ವಜಾಗೊಳಿಸಿದ್ದು, ನಂತರ ಮಧುಸುಧನ್ ಅವರು ತಾವು ಶಶಿಕಲಾ ಅವರನ್ನು ಈ ಹಿಂದೆಯೇ ವಜಾಗೊಳಿಸಿದ್ದೇನೆ ಎಂದಿರುವುದು, ಶಾಸಕರನ್ನು ರೆಸಾರ್ಟ್ ನಲ್ಲಿಟ್ಟಿರುವ ಬಗ್ಗೆ ಕೋರ್ಟ್ ಸರ್ಕಾರಕ್ಕೆ ವರದಿ ಕೇಳಿದ್ದು… ಪ್ರಮುಖ ಬೆಳವಣಿಗೆಗಳಾಗಿದ್ದವು. ಇದೇ ರೀತಿ ಶನಿವಾರವೂ ಸಹ ತಮಿಳುನಾಡಿನ ರಾಜಕೀಯದಲ್ಲಿ ಕೆಲವು ಬೆಳವಣಿಗೆಗಳು ಮಹತ್ವ ಪಡೆದುಕೊಂಡಿವೆ. ಆ ಪೈಕಿ ಪ್ರಮುಖ ವಿದ್ಯಮಾನಗಳು ಹೀಗಿವೆ…

ಶಶಿಕಲಾ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಎಐಎಡಿಎಂಕೆ ಪಕ್ಷದ ಕೆ.ಪಂಡಿಯರಾಜನ್ ಶನಿವಾರ ಪನ್ನೀರ್ ಸೆಲ್ವಂ ಪಾಳಯಕ್ಕೆ ಜಿಗಿದಿದ್ದಾರೆ. ನಿನ್ನೆಯವರೆಗೂ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಾ, ಡಿಎಂಕೆ ಪಕ್ಷ ಎಐಎಡಿಎಂಕೆಯನ್ನು ಒಡೆಯುವ ಪ್ರಯತ್ನ ನಡೆಸುತ್ತಿದೆ ಎನ್ನುತ್ತಾ ಪನ್ನೀರ್ ಸೆಲ್ವಂ ವಿರುದ್ಧ ಮಾತನಾಡುತ್ತಿದ್ದ ಶಾಲಾ ಶಿಕ್ಷಣ ಸಚಿವ ಪಂಡಿಯರಾಜನ್, ಶನಿವಾರ ತಾವು ಪನ್ನೀರ್ ಸೆಲ್ವಂ ಅವರಿಗೆ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ‘ನನ್ನ ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿ, ಅಮ್ಮಾ ಅವರ ಗೌರವಕ್ಕೆ ಧಕ್ಕೆ ಬಾರದಂತೆ ಎಐಎಡಿಎಂಕೆ ಪಕ್ಷದ ಒಗ್ಗಟ್ಟು ಕಾಪಾಡುವನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಪಂಡಿಯರಾಜನ್ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಶಶಿಕಲಾ ಬಣದಲ್ಲಿನ ಶಾಸಕರ ಸಂಖ್ಯೆ ಕುಸಿಯುತ್ತಿದ್ದು, ಶಶಿಕಲಾ ತೀವ್ರ ಒತ್ತಡಕ್ಕೆ ಸಿಲುಕುವಂತಾಗಿದೆ. ಪಂಡಿಯರಾಜನ್ ಜತೆಗೆ ಇಬ್ಬರು ಲೋಕಸಭಾ ಸದಸ್ಯರಾದ ಅಶೋಕ್ ಕುಮಾರ್ ಹಾಗೂ ಸುಂದರಮ್ ತಮ್ಮ ಬೆಂಬಲವನ್ನು ಪನ್ನೀರ್ ಸೆಲ್ವಂ ಅವರಿಗೆ ನೀಡಿದ್ದಾರೆ.

ಈ ಮಧ್ಯೆ ರಾಜ್ಯಪಾಲರಾದ ವಿದ್ಯಾಸಾಗರ್ ರಾವ್ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿರುವ ಶಶಿಕಲಾ ಪತ್ರವನ್ನು ಬರೆದಿದ್ದು, ಸರ್ಕಾರವನ್ನು ರಚಿಸಲು ಬಹುಮತ ಸಾಬೀತುಪಡಿಸಲು ಅವಕಾಶ ಕೋರಿದ್ದಾರೆ. ‘ನನ್ನ ಬಳಿ ಶಾಸಕರ ಬಹುಮತವಿದೆ. ಹೀಗಾಗಿ ತಕ್ಷಣವೇ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಗೆ ಸ್ಪಂದಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಈ ಕೂಡಲೇ ಕ್ರಮ ಕೈಗೊಂಡು ಸರ್ಕಾರ ರಚಿಸಲು ಅವಕಾಶ ಮಾಡಿಕೊಡಬೇಕು’ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕಲಾ, ‘ಪಕ್ಷ ಹಾಗೂ ಸರ್ಕಾರವನ್ನು ಮುನ್ನಡೆಸುವುದು ನನ್ನ ಕರ್ತವ್ಯ. ಅಮ್ಮಾ ನನಗಾಗಿ 1.5 ಕೋಟಿ ಕಾರ್ಯಕರ್ತರನ್ನು ಬಿಟ್ಟು ಹೋಗಿದ್ದಾರೆ. ನಾನು ಪಕ್ಷ ಹಾಗೂ ಸರ್ಕಾರವನ್ನು ಉಳಿಸಿಕೊಳ್ಳುವ ವಿಷಯದಲ್ಲಿ ಅಮ್ಮಾ ನನ್ನ ಮೇಲೆ ವಿಶ್ವಾಸ ಹೊಂದಿದ್ದರು. ತಮಿಳುನಾಡಿನ ಜನತೆಯ ಹಿತಾಸಕ್ತಿ ಬಗ್ಗೆ ಯೋಚಿಸುವವರು ನನ್ನ ಬೆಂಬಲಕ್ಕೆ ನಿಲ್ಲಲಿದ್ದಾರೆ. ಅಮ್ಮಾ ಅವರ ಆತ್ಮ ನಮ್ಮನ್ನು ಮುನ್ನಡೆಸುತ್ತಿದ್ದು, ಸತ್ಯಕ್ಕೆ ಜಯ ಸಿಗಲಿದೆ’ ಎಂದು ಹೇಳಿದ್ದಾರೆ.

ಮಹಾಬಲಿಪುರಂ ನಲ್ಲಿರುವ ಐಷಾರಾಮಿ ರೆಸಾರ್ಟ್ ನಲ್ಲಿರುವ ಎಐಎಡಿಎಂಕೆ ಪಕ್ಷದ ಶಾಸಕರನ್ನು ಇಂದು ವಿಚಾರಣೆಗೆ ಒಳಪಡಿಸಲಾಯಿತು. ಪೊಲೀಸ್ ಹಾಗೂ ಆದಾಯ ಇಲಾಖೆಯ ಅಧಿಕಾರಿಗಳ ತಂಡ ಶನಿವಾರ ಬೆಳಗ್ಗೆ ರೆಸಾರ್ಟಿಗೆ ಭೇಟಿ ನೀಡಿ, ಶಾಸಕರು ತಾವಾಗಿಯೇ ಈ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೋ ಅಥವಾ ಬಲವಂತಕ್ಕೆ ಸಿಲುಕಿ ಅಲ್ಲಿದ್ದಾರೋ ಎಂಬದರ ಬಗ್ಗೆ ಪ್ರಶ್ನೆ ಮಾಡಲಾಯಿತು. ಅಲ್ಲದೆ ಈ ಬಗ್ಗೆ ಲಿಖಿತ ರೂಪದಲ್ಲಿ ಅಧಿಕೃತ ಹೇಳಿಕೆ ಪಡೆಯಲಾಗಿದೆ. ವರದಿಗಳ ಪ್ರಕಾರ, ರೆಸಾರ್ಟಿನಲ್ಲಿರುವ ಶಾಸಕ ರಾಮಲಿಂಗಂ, ‘ತಾವು ಸ್ವಇಚ್ಛೆಯಿಂದ ಇಲ್ಲಿ ತಂಗಿದ್ದು, ಯಾರೂ ನಮ್ಮನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ. ಹೊರಗಡೆ ಇದ್ದರೆ ನಮಗೆ ಪನ್ನೀರ್ ಸೆಲ್ವಂ ಅವರ ಕಡೆಯಿಂದ ಪ್ರಾಣ ಬೆದರಿಕೆ ಎದುರಾಗಿತ್ತು. ಹೀಗಾಗಿ ನಾವೆಲ್ಲರೂ ಒಟ್ಟಿಗೆ ಇಲ್ಲಿ ಉಳಿಯಲು ನಿರ್ಧರಿಸಿದ್ದೇವೆ’ ಎಂದು ಹೇಳಿಕೆ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಾಲ್ಯದ ಸ್ನೇಹಿತೆಯಾಗಿರುವ ಶ್ರೀಮತಿ ಐಯ್ಯಾಂಗಾರ್, ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಅವರಲ್ಲಿ ತಾವು ಪನ್ನೀರ್ ಸೆಲ್ವಂ ಅವರನ್ನು ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ. ‘ಪನ್ನೀರ್ ಸೆಲ್ವಂ ಅವರ ಮೇಲೆ ನಂಬಿಕೆ ಇದ್ದ ಕಾರಣಕ್ಕಾಗಿಯೇ ಜಯಲಲಿತಾ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು’ ಎಂದು ಹೇಳಿದ್ದಾರೆ. ಆ ಮೂಲಕ ಪನ್ನೀರ್ ಸೆಲ್ವಂ ಅವರಿಗೆ ಎಲ್ಲ ರೀತಿಯಲ್ಲೂ ಬೆಂಬಲ ದೊರೆಯುತ್ತಿರುವುದು ಸ್ಪಷ್ಟವಾಗಿದೆ.

ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಾಜ್ಯಪಾಲ ವಿದ್ಯಾಸಾಗರ್ ರಾವ್, ಸುಪ್ರೀಂ ಕೋರ್ಟಿನ ತೀರ್ಪನ್ನು ಪರಿಶೀಲಿಸಿದ ನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

Leave a Reply