ಬಡ್ತಿಯಲ್ಲಿ ಮೀಸಲಾತಿಗೆ ತಡೆ: ಸುಪ್ರೀಂ ಆದೇಶ ಮರುಪರಿಶೀಲನೆಗೆ ಮುಮಂ ಇಂಗಿತ, ಬಚ್ಚಲುಮನೆ ಇಣುಕಿನೋಡುವ ಮೋದಿ: ರಾಹುಲ್ ಕುಹಕ, ಉಪ್ರದಲ್ಲಿ ಅಚ್ಛೇದಿನ ತರಬೇಕಾದವರ್ಯಾರು: ಮೋದಿ ಪ್ರಶ್ನೆ

ನಗರದ ಜಯಮಹಲ್ ನಲ್ಲಿರುವ ಮರಗಳನ್ನು ಕಡಿಯುವ ನಿರ್ಧಾರವನ್ನು ವಿರೋಧಿಸಿ ಶನಿವಾರ ಸಿಟಿಜೆನ್ ಫೋರಂ ಸಂಸ್ಥೆ ಸದಸ್ಯರು ‘ಮರ ಕಡಿ ಬೇಡಿ’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಿದರು.

ಡಿಜಿಟಲ್ ಕನ್ನಡ ಟೀಮ್:

ಬಡ್ತಿಯಲ್ಲಿ ಮೀಸಲಾತಿ: ಸುಪ್ರೀಂ ಆದೇಶ ಮರುಪರಿಶೀಲನೆಗೆ ಚಿಂತನೆ

ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗದ ನೌಕರರಿಗೆ ಬಡ್ತಿ ಮೀಸಲಾತಿ ರದ್ದು ಮಾಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲನೆ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದ ಬ್ಯಾಕ್ವೆಟ್ ಹಾಲ್ ನಲ್ಲಿ ನಡೆದ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣೆದಾರರ ಸಂಘಗಳ ಮಹಾಮಂಡಲ ಉದ್ಘಾಟನೆ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದಿಷ್ಟು… ‘ಸುಪ್ರೀಂ ಕೋರ್ಟಿನಲ್ಲಿ ಮರು ಅರ್ಜಿ ಹಾಕುವ ಬಗ್ಗೆ ಅಡ್ವೋಕೆಟ್ ಜನರಲ್ ಮತ್ತು ಕಾನೂನು ತಜ್ಞರೊಟ್ಟಿಗೆ ತಿಳಿಸಿದ್ದೇನೆ. ನ್ಯಾಯಾಲಯದ ಆದೇಶದ ಪೂರ್ಣ ಪ್ರತಿ ದೊರೆತಿಲ್ಲ. ಪೂರ್ಣ ಪ್ರತಿ ಸಿಕ್ಕ ಮೇಲೆ ಕಾನೂನು ತಜ್ಞರೊಟ್ಟಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.’ ಇದೇ ವೇಳೆ ಕುರುಬ ಸಮುದಾಯದವರು ಕುರಿ ಸಾಕಾಣಿಕೆ ವೃತ್ತಿಯನ್ನು ಬಿಡಬೇಡಿ, ಕುರಿ ಸಾಕಾಣೆ ಜತೆಗೆ ಪರ್ಯಾಯ ವೃತ್ತಿಯಲ್ಲೂ ತೊಡಗಿಸಿಕೊಳ್ಳಿ ಎಂದರು.

ಉತ್ತರ ಪ್ರದೇಶ ಚುನಾವಣಾ ಅಖಾಡ

ರಾಷ್ಟ್ರದ ಗಮನ ಸೆಳೆದಿರುವ ಉತ್ತರ ಪ್ರದೇಶ ಚುನಾವಣೆ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಸದ್ಯ ಉತ್ತರ ಪ್ರದೇಶದಲ್ಲಿನ ಚುನಾವಣೆ ಹಾಗೂ ರಾಜಕೀಯದ ವಿದ್ಯಮಾನಗಳು ಗಮನ ಸೆಳೆದಿವೆ. ಇಂದು ಮೊದಲ ಹಂತದ ಚುನಾವಣೆ ನಡೆದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಎರಡನೇ ಹಂತದ ಚುನಾವಣೆ ನಡೆಯುವ ಸ್ಥಳಗಳಲ್ಲಿ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪ ರಂಗೇರಿದೆ.

ಏಳು ಹಂತಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶ ಚುನಾವಣಾ ಸಮರ ಶನಿವಾರ ಆರಂಭವಾಗಿದೆ. ಮೊದಲ ಹಂತದಲ್ಲಿ ಉತ್ತರ ಪ್ರದೇಶದ ಪಶ್ಚಿಮ ಭಾಗದ 73 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಿತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೇ.53.22ರಷ್ಟು ಮತದಾನವಾಗಿದ್ದು, ಸಂಜೆ ವೇಳೆಗೆ ಶೇಕಡಾವಾರು ಮತದಾನ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ಮತ್ತೊಂದೆಡೆ ಲಖನೌನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಎಸ್ಪಿಯ ಅಖಿಲೇಶ್ ಯಾದವ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದರು. ‘ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಬೇರೆಯವರ ಬಚ್ಚಲು ಮನೆಯಲ್ಲಿ ಇಣುಕಿ ನೋಡುವುದು, ಬೇರೆಯವರ ಜಾತಕ ಫಲ ಓದುವುದು ಹಾಗೂ ಗೂಗಲ್ ನಲ್ಲಿ ಸರ್ಚ್ ಮಾಡುವುದನ್ನು ಮಾತ್ರ ತಿಳಿದಿದ್ದಾರೆ. ಪ್ರಧಾನ ಮಂತ್ರಿಯಾಗಿ ಉತ್ತಮ ಆಡಳಿತ ನೀಡಲು ಮೋದಿ ಅವರು ವಿಫಲರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ನೀವು ದೇಶದ ಪ್ರಧಾನಿಯಾಗಿದ್ದೀರಿ, ಕಾಂಗ್ರೆಸ್ ನಾಯಕರ ಜಾತಕವನ್ನು ತೆರೆದಿಡಿ’ ಎಂದು ರಾಹುಲ್ ಪ್ರಧಾನಿಗೆ ಸವಾಲು ಹಾಕಿದರು.

ರಾಹುಲ್ ಜತೆಗೆ ಧ್ವನಿಗೂಡಿಸಿದ ಅಖಿಲೇಶ್ ಯಾದವ್, ತಾವು ಹಾಗೂ ರಾಹುಲ್ ಗಾಂಧಿಯವರು ಯುವಕರಾಗಿದ್ದು, ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಆ ಮೂಲಕ ತಮ್ಮನ್ನು ಯುವ ನಾಯಕನಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದರು.

ಇತ್ತ ಬದೌನ್ ಜಿಲ್ಲೆಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಾಯಾವತಿ, ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ‘ಉತ್ತರ ಪ್ರದೇಶದಲ್ಲಿ ಇನ್ನು ಅಚ್ಛೇ ದಿನ್ ಬಂದಿಲ್ಲಾ ಎಂದು ಅಖಿಲೇಶ್ ಯಾದವ್ ಹೇಳುತ್ತಾರೆ. ಉತ್ತರ ಪ್ರದೇಶದ ಜನರಿಗೆ ಅಚ್ಛೇ ದಿನ್ ಬಂದಿಲ್ಲವಾದರೆ, ಕಳೆದ ಐದು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಅಖಿಲೇಶ್ ಅವರೇ ಕಾರಣವಾಗುತ್ತಾರೆ. ಇಷ್ಟು ವರ್ಷಗಳ ಕಾಲ ಕಾಂಗ್ರೆಸ್, ಬಿಎಸ್ಪಿ ಹಾಗೂ ಎಸ್ಪಿ ಈ ರಾಜ್ಯವನ್ನು ಆಳಿವೆ. ಮಾಯಾವತಿ ಸರ್ಕಾರವನ್ನು ಭ್ರಷ್ಟಾಚಾರ ಸರ್ಕಾರ ಎಂದು ಬಣ್ಣಿಸಿ, ಅಧಿಕಾರಕ್ಕೆ ಬಂದ ಅಖಿಲೇಶ್ ಅವರು ತಪ್ಪಿತಸ್ಥರಿಗೆ ಶಿಕ್ಷೆ ಕೊಟ್ಟರೇ? ಸಮಾಜವಾದಿ ಪಕ್ಷದ ಶಾಸಕರೇ ಅದೇ ಪಕ್ಷದ ಸಂಸದರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದಾಗ ಅವರ ವಿರುದ್ಧ ಕ್ರಮ ಕೈಗೊಂಡರೆ? ಇತ್ತಿಚೆಗೆ ನಡೆದ ವಿಧಾನ ಪರಿಷತ್ ಮೂರು ಸ್ಥಾನಗಳ ಚುನಾವಣೆಯಲ್ಲಿ ಜನರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಅದರೊಂದಿಗೆ ಕಾಲ ಬದಲಾಗುತ್ತಿರುವ ಮುನ್ಸೂಚನೆ ಸಿಕ್ಕಿದ್ದು, ಮುಂದಿನ ಒಂದು ತಿಂಗಳಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದರು.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಮುಂದಿನ ಶೈಕ್ಷಣಿಕ ವರ್ಷದಿಂದ ಮಾರುಕಟ್ಟೆಯಲ್ಲಿ ಪಠ್ಯ ಪುಸ್ತಕ ಲಭ್ಯತೆ, ಆನ್ ಲೈನ್ ನಲ್ಲಿ ಪಠ್ಯಪುಸ್ತಕ ಅಳವಡಿಕೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ದುಬಾರಿ ಬೆಲೆಗೆ ಪುಸ್ತಕ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
  • ಹೈದರಾಬಾದಿನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಆತಿಥೇಯ ಭಾರತ ತಂಡಕ್ಕೆ ಪ್ರತಿರೋಧ ನೀಡುವ ಪ್ರಯತ್ನ ನಡೆಸುತ್ತಿದೆ. ಭಾರತದ 687 ರನ್ ಗಳಿಗೆ ಪ್ರತಿಯಾಗಿ ಬಾಂಗ್ಲಾದೇಶ 6 ವಿಕೆಟ್ ಕಳೆದುಕೊಂಡು 322 ರನ್ ಗಳಿಸಿದೆ. ಆ ಮೂಲಕ ಇನ್ನು 365 ರನ್ ಗಳ ಹಿನ್ನಡೆಯಲ್ಲಿದ್ದು, ಪಂದ್ಯದಲ್ಲಿ ಪ್ರವಾಸಿ ತಂಡ ಇನ್ನು ಸಾಕಷ್ಟು ಪ್ರತಿರೋಧ ತೋರಬೇಕಿದೆ. ಬಾಂಗ್ಲಾದೇಶದ ಪರ ಶಕಿಬ್ 82, ಮುಶ್ಫಿಕುರ್ ಅಜೇಯ 81, ಮೆಹೆದಿ ಅಜೇಯ 51 ರನ್ ದಾಖಲಿಸಿದ್ದಾರೆ. ಭಾರತದ ಪರ ಉಮೇಶ್ ಯಾದವ್ 2, ಇಶಾಂತ್, ಅಶ್ವಿನ್ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.

Leave a Reply