ಯಾರು ಉತ್ತಮರು ಆಮೀರ್ ಮತ್ತು ಶಾರುಖ್ ನಡುವೆ? ಪರಿಚಯದ 25 ವರ್ಷಗಳ ನಂತರದ ಈ ಒಟ್ಟು ಚಿತ್ರ ಏನು ಹೇಳುತ್ತಿದೆ?

ಚೈತನ್ಯ ಹೆಗಡೆ

’25 ವರ್ಷಗಳಿಂದ ನಾವಿಬ್ಬರೂ ಪರಿಚಿತರು. ಇಬ್ಬರೂ ಒಟ್ಟಿಗೆ ನಿಂತು ನಾವು ತೆಗೆದುಕೊಳ್ಳುತ್ತಿರುವ ಮೊದಲ ಫೋಟೊ ಇದು. ಮಜದ ಸಂಜೆಯಾಗಿತ್ತಿದು’ ಅಂತ ಆಮೀರ್ ಖಾನ್ ಪಕ್ಕ ನಿಂತು ಶಾರುಖ್ ಖಾನ್ ಫೋಟೊ ತೆಗೆಸಿಕೊಂಡು ಟ್ವೀಟಿಸಿರುವುದು ವಾರಾಂತ್ಯಕ್ಕೊಂದು ಸ್ವಾರಸ್ಯವನ್ನು ಕಟ್ಟಿಕೊಟ್ಟಿದೆ.

ಬಾಲಿವುಡ್ ಎಂದು ಕರೆಸಿಕೊಳ್ಳುತ್ತಿರುವ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಗಳು ಇವರಿಬ್ಬರು. ಇಬ್ಬರಿಗೂ ಅಭಿಮಾನಿಗಳಿದ್ದಾರೆ, ಟೀಕಾಕಾರರಿದ್ದಾರೆ. ಆದರೆ ಎರಡು ದಶಕಕ್ಕೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ಚಮಕ್ ಅನ್ನು ಉಳಿಸಿಕೊಂಡು ಬರುವುದು ನಿಜವಾದ ಸ್ಟಾರ್ ಗಿರಿಯೇ. ಇದು ಇವರನ್ನು ಒಪ್ಪುವ-ವಿರೋಧಿಸುವ ಎಲ್ಲರೂ ನಿರ್ಲಕ್ಷಿಸಲಾಗದ ಸಂಗತಿ.

ತತ್ವ ಹೇಳಬೇಕು, ಬದುಕನ್ನು ಬಿಂಬಿಸಬೇಕು ಅಂತ ಏನೆಲ್ಲ ಗುಣಗಳನ್ನು ಸಿನಿಮಾಗಳಿಗೆ ಆರೋಪಿಸಬಹುದಾದರೂ ಮೂಲತಃ ಅವು ಮನರಂಜನೆಯ ಭೋಜನ. ಸಾಮಾನ್ಯನ ಹೃದಯದಲ್ಲಿ ಭ್ರಾಮಕ ಆನಂದವೊಂದನ್ನು ಎಷ್ಟರಮಟ್ಟಿಗೆ ಕಟ್ಟಿಕೊಡುತ್ತಾನೋ ಅಷ್ಟರಮಟ್ಟಿಗೆ ನಟ/ನಟಿಯ ತಾರಾಮೆರಗು ಹೊಳೆಯುತ್ತದೆ.

ನಕ್ಷತ್ರಗಳು ಚೆಂದ ಕಾಣುತ್ತವೆ. ದೂರ ನಿಂತು ಹಲವು ಕೌತುಕಗಳನ್ನು ಹುಟ್ಟಿಸುತ್ತವೆ. ಇದಕ್ಕೆ ತರ್ಕ ಹಚ್ಚುವುದಕ್ಕೆ ಹೋಗಿ- ನಕ್ಷತ್ರ ಎಂದರೆ ಮತ್ತೇನಲ್ಲ ಉರಿಯುವ ಬುಗ್ಗೆ. ಅಲ್ಲಿ ಅನಿಲಗಳು ರಾಸಾಯನಿಕ ಪದಾರ್ಥಗಳು ಕೊತ ಕೊತ ಕುದಿಯುತ್ತಿರುವುದು ಬಿಟ್ಟರೆ ಮತ್ಯಾವ ಮಿನುಗುವ ವಾಸ್ತವವೂ ಇಲ್ಲ ಅಂತೆಲ್ಲ ವೈಜ್ಞಾನಿಕ ಬುದ್ಧಿಮತ್ತೆಯನ್ನು ಪ್ರದರ್ಶಿಸಿಬಿಡಬಹುದು. ಅವೆಲ್ಲ ನಿಜವೇ ಆದರೂ ರಾತ್ರಿ ನಕ್ಷತ್ರಗಳಿಗೆ ಮುಖ ಹಚ್ಚಿ ಕುಳಿತಾಗ ಈ ಶುಷ್ಕ ವಾದಸರಣಿ ಏನನ್ನೂ ಕಟ್ಟಿಕೊಡದು. ಸತ್ತವರು ಅಲ್ಲಿ ಮಿನುಗುತ್ತಿದ್ದಾರೆ ಎಂಬ ಭಾವುಕತೆ, ಅದು ಎಷ್ಟೇ ಅಪಕ್ವವಾದರೂ ಆನಂದಕ್ಕಾಗಿ ಅದನ್ನು ಆ ಕ್ಷಣ ಆಶ್ರಯಿಸಬೇಕಾಗುತ್ತದೆ. ಮರುದಿನ ನಕ್ಷತ್ರದ ಒಡಲಲ್ಲಿರುವ ಪದಾರ್ಥಗಳು, ಅವುಗಳ ಆಯಸ್ಸು ಎಂದೆಲ್ಲ ಮಾಹಿತಿ ಆಧಾರದ ಲೆಕ್ಕಾಚಾರದಲ್ಲಿ ಮುಳುಗುವುದು ಇದ್ದೇ ಇದೆ.

ಚಿತ್ರರಂಗದ ತಾರೆಗಳನ್ನೂ ನೋಡಬೇಕಾಗಿದ್ದು ಹೀಗೆಯೇ. ಅವರು ಮಾದರಿಯಾಗಬೇಕಿಲ್ಲ, ನಿಜಹೀರೋಗಳಾಗಬೇಕಿಲ್ಲ, ಬದುಕನ್ನೆಲ್ಲ ಆಕ್ರಮಿಸಬೇಕಿಲ್ಲ. ದಿನದ ಬಿಸಿಲು ಮರೆಯಾದಾಗಿನ ತಂಪಿನಲ್ಲಿ ತರ್ಕ ಮರೆಯುವ ಆಸ್ವಾದಕ್ಕೊಂದು ಸಲಕರಣೆಗಳು ಸಿನಿಮಾ ತಾರೆಗಳು. ಅವರನ್ನು ಅಷ್ಟಕ್ಕೇ ನೋಡಬೇಕು ಹಾಗೂ ಹಾಗೆ ನೋಡುವಾಗ ಮನದುಂಬಿ ನೋಡಬೇಕು. ಕತೆಯಲ್ಲಿ ಜೀಕಬೇಕು. ಹಾಗಿಲ್ಲದಿದ್ದರೆ ನೋಡುವ ಉಸಾಬರಿಗೇ ಹೋಗಬಾರದು.

ಇದಿಷ್ಟು ವ್ಯಾಪ್ತಿ ಅರ್ಥ ಮಾಡಿಕೊಂಡು ಸವಿಯಲುಹೋದಾಗ ಸ್ಟಾರ್ ಗಳು, ಕತೆಗಳು ನಮಗೆ ಖುಷಿ ಕೊಡುತ್ತವೆ. ವ್ಯಕ್ತಿಪೂಜೆ, ಪರ-ವಿರೋಧ ಇವೆಲ್ಲ ಕತೆಯ ಚೌಕಟ್ಟಿನಾಚೆಗಿನ ಕಾಲಕ್ಷೇಪಗಳು.

ಫೋಟೊದಲ್ಲಿರುವ ಇಬ್ಬರು ಸ್ಟಾರುಗಳ ಜತೆಗೂ ಗ್ರಹಿಸಬಹುದಾದ ಕತೆಯೊಂದು ಬೆಸಗೊಂಡಿದೆ.

ಶಾರುಖ್ ಎಂದರೆ ಮಸಾಲಾ, ಆಮೀರ್ ಎಂದರೆ ಮನರಂಜನೆ ಜತೆ ಜತೆಗಿನ ಸತ್ವ. ಶಾರುಖ್ ಎಂದರೆ ತಾನೇ ತಾನಾಗಿ ಮೆರೆಯುವ ಗರ್ವ, ಆಮೀರ್ ಖಾನ್ ಎಂದರೆ ವಿವಾದಗಳ ಹೊರತಾಗಿಯೂ ವಿನಮ್ರ. ಶಾರುಖ್ ಎಂದರೆ ಆ ಕ್ಷಣದ ನೆಗೆತ, ಆಮೀರ್ ಎಂದರೆ ವರ್ಷಗಳವರೆಗಿನ ಅಳೆದು ತೂಗಿದ ಲೆಕ್ಕಾಚಾರ…

ಇಬ್ಬರ ಸುತ್ತಲಿನ ಇಮೇಜುಗಳು ಇವು. ಇದು ಅವರೇ ನಾಜೂಕಿನಿಂದ ಕಟ್ಟಿಕೊಂಡಿರುವ ವರ್ಚಸ್ಸಿನಂತೆಯೂ ಕಾಣುತ್ತದೆ.

ಶಾರುಖ್- ಆಮೀರ್ ಯಾರು ಉತ್ತಮರು ಇಬ್ಬರೊಳಗೆ? ಬಾಕ್ಸಾಫಿಸಿನ ಗಳಿಕೆಯಲ್ಲಿ ಲೆಕ್ಕ ಹಾಕಬೇಕೇ, ಪ್ರಯೋಗಶೀಲತೆಯಲ್ಲೇ, ವರ್ತನೆಗಳಲ್ಲೇ..?

ಲಾಗಾಯ್ತಿನ ಈ ಪ್ರಶ್ನೆ ಮತ್ತು ಅಭಿಮಾನಿಗಳ ಜಟಾಪಟಿ ಯಾವತ್ತಿಗೂ ರೋಚಕವೇ. ಆದರೆ ಒಬ್ಬ ವ್ಯಕ್ತಿ ಯಾಕಾಗಿ ಹಾಗೆ, ಅವನ ಜಾಗದಲ್ಲಿ ಇರುವುದೇಕೆ ಅಂತ ವಿಶ್ಲೇಷಿಸಿದರೆ ಅದೂ ಒಂದು ರೋಚಕ ಕತೆಯೇ.

ಸಂದರ್ಶನವೊಂದರಲ್ಲಿ ಆಮೀರ್ ಗೆ ನೀವು ಸ್ಟಾರ್ ಆಗಿ ಮಿಸ್ ಮಾಡಿಕೊಳ್ಳುತ್ತಿರೋದೇನು ಅಂತ ಕೇಳಿದರೆ- ನಾನು ಮತ್ತು ಕಿರಣ್ ಹೀಗೇ ಬೀದಿಯಲ್ಲಿ ವಿಹಾರ ಹೋಗಿ ಪಾನಿಪೂರಿ ತಿನ್ನಬೇಕು ಅಂತೇನೋ ರೊಮ್ಯಾಂಟಿಕ್ ಆಗಿ ಹೇಳಿ, ಸ್ಟಾರ್ ಆಗಿರೋದ್ರಿಂದ ಅದನ್ನು ಮಾಡಲಾಗದು ಎಂಬ ಭಾವ ಹೊರಹಾಕಿದ್ದರು.

ಶಾರುಖ್ ಇಂಥ ಪ್ರಶ್ನೆಯನ್ನೇ ಸಾರಾಸಗಟಾಗಿ ತಳ್ಳಿಹಾಕ್ತಾರೆ- ಇಲ್ಲಾರೀ ನಂಗೆ ಬೀದೀಲಿ ವಡಾಪಾವ್ ತಿನ್ಬೇಕು ಅಂತ ಕ್ಷಣಕ್ಕೂ ಅನ್ನಿಸಲ್ಲ. ನಾನು ಬಯಸಿ ಬಯಸಿ, ದಿನಕ್ಕೆ 18 ಗಂಟೆ ದುಡಿದು ಸಂಪಾದಿಸಿರುವ ಸ್ಟಾರ್ಗಿರಿಯ ಬಗ್ಗೆ ನನಗೆ ಒಂದಿಷ್ಟೂ ವಿಷಾದವಿಲ್ಲ. ಜನ ನನ್ನನ್ನು ಕೂಗುವುದನ್ನು, ಮುತ್ತುವುದನ್ನೂ ಇಷ್ಟಪಡುತ್ತೇನೆ. ಸಮುದ್ರ ತೀರದಲ್ಲಿ ಅಪರಿಚಿತ ಸಾಮಾನ್ಯನಂತೆ ನಡೆದುಹೋಗಬೇಕು ಅಂತ ನಾನ್ಯಾಕೆ ಕನಸು ಕಾಣಲಿ? ಹಾಗೆ ಹೋಗುವುದಿದ್ದರೆ ನಾನು ದ್ವೀಪವನ್ನೇ ಖರೀದಿ ಮಾಡುತ್ತೇನೆ.

ಶಾರುಖ್ ಉತ್ತರ ಅಹಂಕಾರವೇ? ಆಮೀರ್ ಉತ್ತರ ಪರ್ಫೆಕ್ಟೇ?

ಶಾರುಖ್ ಖಾನ್ ಹಿಂದಿ ಚಿತ್ರರಂಗದ ಹಿರಿತಲೆಗಳ ತಲೆ ಕಾಯುವ ಯಾವ ಸಂಪರ್ಕಗಳಿಲ್ಲದೇ ಬಂದು ಬೆಳೆದಾತ. ಅವನ ಪರವಾಗಿ ಜನರ ಪ್ರತಿ ಉನ್ಮಾದವೂ ಆತ ಗಳಿಸಿಕೊಂಡಿದ್ದು. ಆಮೀರ್ ಸಿನಿಮಾ ನಿರ್ಮಾಣ ಕುಟುಂಬದಲ್ಲೇ ಹುಟ್ಟಿದವ. ಅದೇ ಪರಿಸರದಲ್ಲಿ ಬೆಳೆಯುತ್ತ, ಎಲ್ಲವನ್ನೂ ಹತ್ತಿರದಿಂದ ನೋಡುವ ಒಳಗೊಳ್ಳುವ ಅವಕಾಶದಲ್ಲಿ ಬೆಳೆದಾತ. ಆತ ಪರ್ಫೆಕ್ಷನಿಸ್ಟ್ ಅನ್ನಿಸಿರುವುದು ಸಾಧನೆ ನಿಜ. ಆದರೆ ಬದುಕು ಆತನಿಗೆ ಹುಟ್ಟುತ್ತಲೇ ಕೊಟ್ಟ ಪ್ರೋಟೀನುಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಆತ ಹಾಗೆ ಬೆಳೆಯಲೇಬೇಕು. ಆತನಲ್ಲದಿದ್ದರೆ ಇನ್ಯಾರು?

ಸಿನಿಮಾ ತೋರಿಸುತ್ತೇನೆ ಅಂತ ಮಕ್ಕಳನ್ನು ಕರೆದೊಯ್ಯುತ್ತಿದ್ದ ಅಪ್ಪ, ದುಡ್ಡು ಸಾಲದೇ ಐಸ್ಕ್ರೀಮ್ ಮಾತ್ರ ಕೊಡಿಸಿಕೊಂಡು ಬರುತ್ತಿದ್ದ ಬಾಲ್ಯ ಶಾರುಖ್ ಖಾನ್ ಪಾಲಿನದ್ದು. ಹಾಗಿರುವಾಗ ತಾನು ದೊಡ್ಡವನಾಗಿ ತನ್ನ ಮಕ್ಕಳನ್ನು ಸಿನಿಮಾಕ್ಕೆಂದರೆ ಸಿನಿಮಾಕ್ಕೇ ಹಾಗೂ ಶಾಪಿಂಗ್ ಎಂದರೆ ನೇರವಾಗಿ ಅಲ್ಲಿಗೇ ಕರೆದುಕೊಂಡುಹೋಗಬೇಕಾಗಲೀ ಬೇರೆಯದಕ್ಕಲ್ಲ ಅಂದುಕೊಂಡು ಹಾಗೆ ಬೆಳೆದರೆ, ಆ ಬಗ್ಗೆ ಅಭಿಮಾನವಿಟ್ಟುಕೊಂಡರೆ ಅದು ಆತನ ಬದುಕಿನ ಅನುಭವದಿಂದ ಅರಳಿದ್ದು. ‘ಹಣವೇ ಎಲ್ಲದೂ ಅಲ್ಲ, ವೈಭವ ಬೇಕಾಗಿಲ್ಲ’ ಎಂಬ ಮಾತುಗಳು ಆಮೀರ್ ಬಾಯಲ್ಲಿ ಚೆಂದ ಕಾಣಬಹುದೇ ಹೊರತು, ಶಾರುಖ್ ಆ ಮಾತು ಹೇಳಿ ವಿನಮ್ರತೆ ಪಟ್ಟ ಗಿಟ್ಟಿಸಿಕೊಳ್ಳಬಹುದಾದರೂ ಅದು ಮನದ ಮಾತಾಗುವುದಿಲ್ಲ.

ಹಾಡು ಕುಣಿತ ಪ್ರೀತಿಯ ಸೂತ್ರದಿಂದ ಲಗಾನ್ ನಂಥ ಪ್ರಾಯೋಗಿಕತೆಗೆ ತಿರುಗಿದ ಆಮೀರ್ ಪ್ರಯತ್ನವನ್ನು ಆತನ ಅಭಿಮಾನಿ ವರ್ಗ ಎದೆಮೇಲಿಟ್ಟುಕೊಂಡಿತು. ಶಾರುಖ್ ಸ್ವದೇಶ್ ದತ್ತ ತೊಡಗಿಸಿಕೊಂಡಿದ್ದು ವಿಮರ್ಶಕರಿಗೆ ಇಷ್ಟವಾಗಿರಬಹುದಾಗಲೀ ಆತನ ಅಭಿಮಾನಿಗಳಿಗೇನೂ ಹುಚ್ಚೆಬ್ಬಿಸಲಿಲ್ಲ. ಈ ಅನುಭವವವೇ ಇಬ್ಬರೂ ತಾರೆಗಳನ್ನು ಅವರವರ ಪಥದಲ್ಲಿ ಮುನ್ನುಗ್ಗಿಸಿತು. ಹೀಗಾಗಿಯೇ, 25 ವರ್ಷಗಳ ನಂತರ, ದುಬೈನ ಉದ್ಯಮಿ ಸ್ನೇಹಿತನ ಹುಟ್ಟುಹಬ್ಬದಲ್ಲಿ ಅಕ್ಕಪಕ್ಕ ನಿಂತು ಇವರೇ ತೆಗೆದುಕೊಂಡ ಚಿತ್ರ ಕೊನೆಗೂ ಹೇಳುತ್ತಿರೋದು- ಅವರವರ ಜಾಗದಲ್ಲಿ ಅವರವರು ಸರಿಯಾಗಿಯೇ ಇದ್ದಾರೆ.

Leave a Reply