ಆತ, ಅವಳು ಮತ್ತು ರಾಜ್ಯಪಾಲ: ತಮಿಳುನಾಡಿನಲ್ಲಿ ಭಾನುವಾರವೂ ಯಶಸ್ವಿ ಪ್ರದರ್ಶನ

ಡಿಜಿಟಲ್ ಕನ್ನಡ ಟೀಮ್:

ಟಿಕ್…ಟಿಕ್.. ಟಿಕ್

ಶಶಿಕಲಾ ಪಾಳೆಯದಲ್ಲಿ ಅಸಹನೆ ಹೆಚ್ಚಾಗುತ್ತಿದೆ. ಸಮಯ ಎಳೆದಷ್ಟೂ ತಾನು ಮುಳುಗಿಬಿಡಬಹುದಾದ ಕ್ಷಣಗಳು ಬಂದುಬಿಡಬಹುದು ಎಂಬ ಧಾವಂತ ಶಶಿಯದ್ದು. ಹಾಗೆಂದೇ ‘ನಮ್ಮ ಸಹನೆಗೂ ಒಂದು ಮಿತಿ ಇದೆ. ಬೇರೆಯದೇ ರೀತಿಯಲ್ಲಿ ಪ್ರತಿಭಟನೆ ಮಾಡುತ್ತೇವೆ’ ಎಂಬ ಮಾತುಗಳು ಶಶಿಕಲಾ ಪಾಳೆಯದಿಂದ ಬರುತ್ತಿವೆ. ಆ ಮಾತಿಗೆ ಕಾರಣವಿದ್ದೇ ಇದೆ.

ಭಾನುವಾರದ ಹೊತ್ತಿಗೆಲ್ಲ ಐದು ಸಂಸದರು ಪನ್ನೀರ್ ಸೆಲ್ವಂ ಪಾಳೆಯವನ್ನು ಸೇರಿಕೊಂಡಿದ್ದಾರೆ. ಅಲ್ಲಿಗೆ ಎಐಎಡಿಎಂಕೆಯ 50 ಸಂಸದರ ಪೈಕಿ 10 ಮಂದಿ ಪನ್ನೀರ್ ಪಾಳೆಯದಲ್ಲಿದ್ದಂತಾಯಿತು.

ನಿಜ. ತಮಿಳುನಾಡಿನಲ್ಲಿ ಸರ್ಕಾರ ರಚನೆಯಾಗಬೇಕಿರುವುದು ಶಾಸಕರ ಬೆಂಬಲದ ಮೇಲೆಯೇ ಹೊರತು ಸಂಸದರ ಬೆಂಬಲದಿಂದಲ್ಲ. ಆದರೆ ಇದು ಕೇವಲ ಮುಖ್ಯಮಂತ್ರಿ ಗಾದಿಗಷ್ಟೇ ನಡೆಯುತ್ತಿರುವ ಪೈಪೋಟಿ ಅಲ್ಲವಲ್ಲ. ಜಯಾ ನಂತರ ಎಐಎಡಿಎಂಕೆ ಯಾರಿಗೆ ಸೇರಲಿದೆ ಎಂಬುದರ ನಿರ್ಧಾರಕ್ಕೆ ನಡೆಯುತ್ತಿರುವ ಕದನವಿದು. ಹಾಗೆಂದೇ ವಿಳಂಬವಾದಷ್ಟೂ ಶಶಿಕಲಾಗೆ ಶಾಸಕರನ್ನೆಲ್ಲ ರೆಸಾರ್ಟಿನಲ್ಲಿ ಹಿಡಿದಿಟ್ಟು ಪನ್ನೀರಿನ ರುಚಿ ತಪ್ಪಿಸುವುದು ಕಷ್ಟವಾಗುತ್ತ ಹೋಗುತ್ತದೆ. ಸಂಸದರು ದಾಟುತ್ತಿದ್ದಾರೆ ಎಂದಕೂಡಲೇ ಅದು ಶಾಸಕರಿಗೂ ಪ್ರಭಾವವನ್ನು ಬೀರುತ್ತದೆ. ಅಲ್ಲದೇ ಈಗೇನೋ ಶಶಿಕಲಾರನ್ನು ಬೆಂಬಲಿಸುವುದರಿಂದ ಸರ್ಕಾರ ರಚಿಸಿ ಆರಾಮಾಗಿರಬಹುದು, ಆದರೆ ತಮಿಳುನಾಡಿನ ಜನಬೆಂಬಲ ಮತ್ತು ಅನುಕಂಪಗಳು ಪನ್ನೀರ್ ಸೆಲ್ವಂ ಪರ ಇದ್ದಂತೆ ತೋರುತ್ತಿದೆ. ಹೀಗಿರುವಾಗ ದೀರ್ಘ ಭವಿಷ್ಯವನ್ನೂ ಯೋಚಿಸಬೇಕಲ್ಲವೇ ಎಂಬ ದ್ವಂದ್ವ ಶಾಸಕರನ್ನು ಕಾಡುತ್ತಿದೆ. ಈ ದ್ವಂದ್ವ ತೀವ್ರವಾಗುವುದಕ್ಕೂ ಮೊದಲೇ ಬಹುಮತ ಸಾಬೀತುಪಡಿಸಿ ಗದ್ದುಗೆ ಏರಿಬಿಟ್ಟರೆ ಶಶಿಕಲಾ ಗೆದ್ದಂತೆ. ಹಾಗೆ ಮಾಡುವುದಕ್ಕೆ ಪನ್ನೀರ್ ಸೆಲ್ವಂ ಎಂಬ ವ್ಯಕ್ತಿ ಸವಾಲೇ ಆಗಿರಲಿಲ್ಲ ಶಶಿಕಲಾರಿಗೆ.

ಆತ ಮತ್ತು ಈಕೆ ನಡುವೆ ಇದ್ದಾರೆ ಒಬ್ಬರು ರಾಜ್ಯಪಾಲರು. ಪನ್ನೀರ್ ಸೆಲ್ವಂಗೆ ಬೇಕಾದ ಸಮಯ ಕೊಡುತ್ತಿರುವವರು ಅವರೇ. ವಿದ್ಯಾಧರ ರಾವ್.

ಇಲ್ಲಿ ಕೇಂದ್ರದ ಬಿಜೆಪಿ ನೇತಾರರೂ ಸೇರಿದಂತೆ ಹಲವರ ಮುಸುಕಿನ ದಾಳಗಳಿರುವುದು ಸ್ಪಷ್ಟ. ಜಯಲಲಿತಾ ರೀತಿಯ ಇನ್ನೊಂದು ಅಮ್ಮ ಸೃಷ್ಟಿಯಾಗುವುದು ಕೇಂದ್ರದಲ್ಲಿ ಅಧಿಕಾರ ನಡೆಸುವ ಯಾರಿಗೂ ಬೇಕಾಗಿಲ್ಲ. ಅದು ಬಿಜೆಪಿಯಾಗಿರಬಹುದು, ಕಾಂಗ್ರೆಸ್ಸೇ ಇದ್ದಿರಬಹುದು.

ಆಟ ಆಡುವುದಕ್ಕೆ ಇದೇ ಸಮಯ. ಶಶಿಕಲಾ ಗದ್ದುಗೆ ಏರಿ ರಾಜಕೀಯ ಪರಿಣತಿ ಸಾಧಿಸಿದ ಮೇಲೆ ಯಾರದ್ದೇ ಮಧ್ಯಪ್ರವೇಶ ಕಷ್ಟ. ಈಗ ಪನ್ನೀರ್ ಸೆಲ್ವಂ ಪರ ಜನರ ಅನುಕಂಪವಿರವುದಕ್ಕೂ ಕಾರಣವಿಷ್ಟೆ. ಈ ವ್ಯಕ್ತಿ ಜಯಾ ಫೋಟೊ ಇಟ್ಟುಕೊಂಡು ರಬ್ಬರ್ ಸ್ಟಾಂಪ್ ರೀತಿಯೇ ರಾಜ್ಯಭಾರ ಮಾಡಿದರೂ ಕೆಟ್ಟದ್ದೇನನ್ನೂ ಮಾಡಿಲ್ಲ. ನಾಯಕತ್ವದ ಛಾಪು ತೋರಿಸದಿದ್ದರೂ ತೀರ ಅಸಾಮರ್ಥ್ಯ, ಆಡಳಿತ ಲೋಪಗಳನ್ನು ಜಾಹೀರಾಗಿಸಿಲ್ಲ. ಕಮಲ್ ಹಾಸನ್ ಮಾತಿನಂತೆ- ಸೆಲ್ವಂ ಬದಲಾವಣೆ ಬೇಕಾದರೆ ಅದನ್ನು ನಿರ್ಧರಿಸುವುದಕ್ಕೆ ಚುನಾವಣೆ ಬಂದೇ ಬರುತ್ತದೆ. ಜಯಲಲಿತಾ ಅನುಪಸ್ಥಿತಿಯಲ್ಲಿ ಅಧಿಕಾರ ಪಡೆದಿದ್ದ ಸೆಲ್ವಂ ಅವರನ್ನು ಈಗ ಬದಲಾಯಿಸಿಬಿಡುವ ತುರ್ತೇನೂ ಇಲ್ಲ. ಹಾಗೆಂದೇ ಸೆಲ್ವಂ ಪರ ಅನುಕಂಪದಂಥ ಜನಾಭಿಪ್ರಾಯವೊಂದು ರೂಪುಗೊಂಡಿದೆ. ಸಮಯ ವ್ಯಯಿಸಿದಷ್ಟೂ ಅದು ಹೆಚ್ಚಾಗುತ್ತದೆ ಹಾಗೂ ರೆಸಾರ್ಟಿನಲ್ಲಿ ಶಾಸಕರನ್ನು ಹಿಡಿದಿಟ್ಟಿರುವ ಶಶಿಕಲಾ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುವ ಸಾಧ್ಯತೆಯೂ ಇದೆ.

ರಾಜ್ಯಪಾಲರು ಆಟ ಆಡುತ್ತಿರುವುದೂ ಗೊತ್ತೇ ಇದೆ. ಆದರೂ ಈ ಬಗ್ಗೆ ತೀರ ಆಕ್ರೋಶವೇನೂ ರೂಪುಗೊಂಡಿಲ್ಲ. ಸೋಲಿ ಸೊರಾಬ್ಜಿಯಂಥ ಹಿರಿಯ ನ್ಯಾಯವಾದಿಗಳೂ ಟಿವಿ ವಾಹಿನಿಗಳಿಗೆ ಪ್ರತಿಕ್ರಿಯೆ ನೀಡುವಾಗ ನಾಜೂಕಿನಿಂದ ಮಾತನಾಡುತ್ತ, ‘ಸಂಖ್ಯಾಬಲ ಇರುವವರಿಗೆ ದಾರಿ ಮಾಡಿಕೊಡದೇ ರಾಜ್ಯಪಾಲರಿಗೆ ಬೇರೆ ದಾರಿ ಇಲ್ಲ. ಆದರೆ ಈ ಪ್ರಕರಣದಲ್ಲಿ ಒಂದು ವಿಶೇಷ ಅಂಶವಿದೆ. ಸುಪ್ರೀಂಕೋರ್ಟಿನಲ್ಲಿ ಶಶಿಕಲಾ ವಿರುದ್ಧ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಸದ್ಯದಲ್ಲೇ ಬರಲಿದೆ. ಈ ಹಿನ್ನೆಲೆಯಲ್ಲಿ ತುಸು ವಿಳಂಬಿಸುವ ರಾಜ್ಯಪಾಲರ ವಿವೇಚನೆ ಒಪ್ಪಲಾಗದ್ದೇನೂ ಅಲ್ಲ. ಆದರೆ ವಿಳಂಬಿಸಬಹುದೇ ಹೊರತು, ಬಹುಮತ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದರಿಂದ ಅವರು ಹಿಂದೆ ಸರಿಯುವಂತಿಲ್ಲ.’

ಹಾಗೆಂದೇ ತಮಿಳುನಾಡಿನ ವಿದ್ಯಮಾನಗಳ ಬಗ್ಗೆ ಬೆಳಗ್ಗೆಯಿಂದ ಸಂಜೆಯವರೆಗೂ ಟಿವಿಗೆ ಕಣ್ಣು ಕೀಲಿಸಿಕೊಂಡು ಕುಳಿತರೂ, ರೆಸಾರ್ಟಿನಿಂದ ಒಳ-ಹೊರ ಬರುವ ಕಾರುಗಳನ್ನು ನೋಡುತ್ತಲೇ ಕುಳಿತರೂ… ಕಥಾಸಾರಾಂಶ ಇಷ್ಟೆ. ಅವರು-ಇವರು ಮತ್ತು ರಾಜ್ಯಪಾಲರು.

Leave a Reply