ಹೈಕಮಾಂಡಿಗೆ ಕಪ್ಪ ಒಪ್ಪಿಸುವಲ್ಲಿ ಚತುರರ್ಯಾರು ಬಿಜೆಪಿ-ಕಾಂಗ್ರೆಸ್ ನಡುವೆ? ಅನಂತ್-ಬಿಎಸ್ವೈ ಸಿಡಿಯಲ್ಲಿ ಅಂಥದ್ದೇನಿದೆ?

 

ಪ್ರಾತಿನಿಧಿಕ ಚಿತ್ರ- ಸೋಮವಾರ ಖಾಸಗಿ ಹೊಟೇಲ್ ನಲ್ಲಿ ನಡೆದ ಬಿಜೆಪಿಯ ಕಾರ್ಯಕ್ರಮದಲ್ಲಿ ಬಿಎಸ್ವೈ-ಅನಂತಕುಮಾರ್ 

ಡಿಜಿಟಲ್ ಕನ್ನಡ ವಿಶೇಷ:

ಹೈಕಮಾಂಡಿಗೆ ಕಪ್ಪ ಸಲ್ಲಿಸುವ ವಿಚಾರದಲ್ಲೀಗ ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವೆ ಆರೋಪ ಸಮರ ತೀವ್ರವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಹೈಕಮಾಂಡಿಗೆ ಸಾವಿರ ಕೋಟಿ ರು. ಹಣ ಸಂಗ್ರಹಿಸಿ ಕಳುಹಿಸಿದೆ ಎಂಬುದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಆಪಾದನೆಯಾಗಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್ ನಡುವಿನ ಸಂಭಾಷಣೆಯ ಸಿಡಿ ಬಿಡುಗಡೆ ಮಾಡಿರುವ ಕಾಂಗ್ರೆಸ್, ಇವರು ಅಧಿಕಾರದಲ್ಲಿದ್ದಾಗ ಕಪ್ಪ ಕಳುಹಿಸಿದ್ದರು ಎಂಬುದಕ್ಕೆ ಇದೇ ಆಧಾರ ನೋಡಿ ಎಂದಿದೆ.

ಈ ಪ್ರಕರಣವನ್ನು ಪರಾಮರ್ಶಿಸಿ ನೋಡುವುದಕ್ಕೆ ಹೋದರೆ, ಕಾಂಗ್ರೆಸ್ ಸಾವಿರ ಕೋಟಿ ರುಪಾಯಿಗಳನ್ನು ತನ್ನ ಹೈಕಮಾಂಡಿಗೆ ಕಳುಹಿಸಿದೆ ಎಂಬ ಯಡಿಯೂರಪ್ಪ ಆರೋಪಕ್ಕೂ ಸಾಕ್ಷ್ಯ- ಪುರಾವೆಗಳೇನಿಲ್ಲ. ಅದಕ್ಕೆ ಪ್ರತಿಯಾಗಿ ಈಗ ಕಾಂಗ್ರೆಸ್ ಬಿಡುಗಡೆ ಮಾಡಿರುವ ಸಂಭಾಷಣೆ ಸಿಡಿಯೂ ಈ ಹಿಂದೆ ಬಿಜೆಪಿ ತನ್ನ ಹೈಕಮಾಂಡಿಗೆ ಹಣ ಸಂಗ್ರಹಿಸಿ ಕಳುಹಿಸಿತ್ತು ಎಂಬುದಕ್ಕೆ ಆಧಾರವಾಗುವುದಿಲ್ಲ. ಏಕೆಂದರೆ, ಇಲ್ಲೆಲ್ಲೂ ತಾವೂ ಕಳುಹಿಸಿದ್ದು ಹೌದು ಅಂತ ಬಿಜೆಪಿ ಒಪ್ಪಿಕೊಂಡಿರುವ ಮಾತುಗಳಿಲ್ಲ.

ಹಾಗಾದರೆ ಸಿಡಿಯಲ್ಲೇನಿದೆ ಎಂಬುದನ್ನು ನೀವಿಲ್ಲಿ ನೋಡಬಹುದು.

ನೀವು ಹಾಕಿರುವ ಹಣ ಕಳುಹಿಸುವಿಕೆ ಬಾಂಬು ಕೆಲಸ ಮಾಡಿದಂತಿದೆ ಎಂದು ಅನಂತಕುಮಾರ್ ತಮ್ಮ ಪಕ್ಕ ಕುಳಿತಿರುವ ಯಡಿಯೂರಪ್ಪ ಅವರನ್ನು ಖುಷಿಪಡಿಸುತ್ತಿರುವಂತಿದೆ. ‘ನೀವು ನಿಮ್ಮ ಅವಧಿಯಲ್ಲಿ ಕೊಟ್ಟಿರ್ಲಿಲ್ವೇ’ ಅಂತ ಕೇಳುವ ಮೂಲಕ ಪರೋಕ್ಷವಾಗಿ ತಾವು ಕೊಡುತ್ತಿರುವುದನ್ನು ಒಪ್ಪಿಕೊಂಡಂತಿದೆ. ಜನರೂ ಇದನ್ನೇ ನಂಬುತ್ತಾರೆ. ಹೀಗಾಗಿ ಚುನಾವಣೆವರೆಗೂ ಇದನ್ನು ಅಲ್ಲಗಳೆಯುವ ಕೆಲಸವೇ ಕಾಂಗ್ರೆಸ್ಸಿಗೆ ಆಗಿಹೋಗುತ್ತದೆ ಅಂತೆಲ್ಲ ಅನಂತಕುಮಾರ್ ಮಾತಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಏನಾದರೂ, ‘ಹೌದು, ನಾನೂ ಕೊಟ್ಟಿದ್ದೆ’ ಎಂದೇನಾದರೂ ಹೇಳಿದ್ದರೆ ಈ ಸಿಡಿ ನಿಜಕ್ಕೂ ಸ್ಫೋಟಕ ಎನಿಸುತ್ತಿತ್ತು. ‘ಸಾಕ್ಷ್ಯ’ ಸಿಗುತ್ತಿತ್ತು. ಅಂಥದ್ದೇನೂ ಇಲ್ಲಿಲ್ಲ. ‘ಕೊಟ್ಟಿರ್ತಾರೆ. ಅದನ್ನೇನು ಬರ್ಕೊಂಡಿರ್ತಾರಾ’ ಅಂತ ನಗೆ ಹಾಯಿಸಿದ್ದಾರೆ ಯಡಿಯೂರಪ್ಪ.

ಹೀಗಾಗಿ ಇನ್ನೊಂದೆರಡು ದಿನ ಅವರು ಇವರನ್ನು ಮತ್ತು ಇವರು ಅವರನ್ನು ಬಯ್ದಾಡಿಕೊಂಡು ತಿರುಗುವುದಕ್ಕೊಂದಿಷ್ಟು ಆಹಾರ ಎಂಬುದು ಬಿಟ್ಟರೆ, ಪ್ರಾರಂಭದಲ್ಲಿ ಯಡಿಯೂರಪ್ಪ ಆರೋಪಿಸಿರುವುದು ಸಾಕ್ಷ್ಯದ ಬಲ ಹೊಂದಿರುವಂಥದ್ದಲ್ಲ ಈಗ ಕಾಂಗ್ರೆಸ್ ಸಿಡಿಗೂ ಸಾಕ್ಷ್ಯದ ಬಲವಿಲ್ಲ.

ಆದರೆ ಕಾಂಗ್ರೆಸ್ ಈ ಬಾರಿ ಬಿಎಸ್ವೈ ಆರೋಪದ ಲೆವೆಲ್ಲಿಗೇ ಇಳಿದು ಸದ್ದೆಬ್ಬಿಸುವಲ್ಲಿ ಯಶಸ್ವಿಯಾಗಿದೆ ಎಂಬುದು ಒಪ್ಪಬಹುದಾದ ಮಾತು.

ಯಡಿಯೂರಪ್ಪನವರ ಆರೋಪವನ್ನು ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಲಿ, ಸಾಕ್ಷ್ಯವಿಲ್ಲದೇ ಬಾಯಿಗೆ ಬಂದಿದ್ದು ಹೇಳಿದರಾಯಿತೇ ಎನ್ನುವುದು ಕಾಂಗ್ರೆಸ್ಸಿಗರ ಆಕ್ರೋಶ. ‘ನಾನು ಹೇಳಿದ್ದು ಸುಳ್ಳಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂಬುದು ಸಂಬಂಧವೇ ಇಲ್ಲದಂತೆ ಯಡಿಯೂರಪ್ಪ ಪ್ರದರ್ಶಿಸುತ್ತಿರುವ ವೀರಾವೇಶ. ‘ಅಲ್ಲಾ ಆಣೆಗೂ ಬಿಜೆಪಿಗೆ ಮರಳುವುದಿಲ್ಲ’ ಅಂತ ಕೆಜೆಪಿಯಲ್ಲಿ ನಿಂತು ಆಡಿದ ನಾಲಗೆಯ ಮಾತುಗಳಿವು. ಇಂಥವೆಲ್ಲ ಕರ್ನಾಟಕಕ್ಕೆ ಹೊಸದೇ?

ಇನ್ನು ಇವರಿಬ್ಬರ ಆರೋಪ-ಪ್ರತ್ಯಾರೋಪಗಳಿಂದ ಜನರಲ್ಲಿ ಯಾವ ಅಭಿಪ್ರಾಯ ಮೂಡಬಹುದು ಎಂಬ ಪ್ರಶ್ನೆ. ಅದು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಹೈಕಮಾಂಡಿಗೆ ಬದ್ಧವಾಗಿಯೇ ಕಾರ್ಯನಿರ್ವಹಿಸುತ್ತದೆ ಎನ್ನುವುದು ಜನ ಯಾವತ್ತೋ ಅರ್ಥ ಮಾಡಿಕೊಂಡಿರುವ ಸತ್ಯ. ಮೇಲಿನವರಿಗೆ ಹಣ ಕಳುಹಿಸಬೇಕಾದ ಕರ್ಮ ಇಬ್ಬರಿಗೂ ಇದೆ ಎಂಬುದೂ ಸಾಮಾನ್ಯ ಮತದಾರನಿಗೆ ಗೊತ್ತು. ಇದು ಸಾರಾಸಗಟಾಗಿ ಸಾಕ್ಷ್ಯ ಸಿಕ್ಕಿರದ ನಂಬಿಕೆ!

ಹೀಗಾಗಿ ಇವನ್ನೆಲ್ಲ ಇಟ್ಟುಕೊಂಡು ಜನ ಬಿಜೆಪಿ ಒಳ್ಳೆಯದೋ- ಕಾಂಗ್ರೆಸ್ ಒಳ್ಳೆಯದೋ ಎಂದು ನಿರ್ಧರಿಸುತ್ತಾರೆ ಅಂದುಕೊಳ್ಳುವುದೇ ಮೂರ್ಖತನ. ಹಂಗೇನಿಲ್ಲಾರೀ… ಸಿಡಿ ಸಖತ್ ಸುದ್ದಿ ಆಗ್ತಿದೆ, ಫೇಸ್ಬುಕ್-ಟಿವೀಲೆಲ್ಲ ಚರ್ಚೆಯಾಗ್ತಿದೆ ಅಂದಿರಾ?

ಬಿಗ್ಬಾಸ್ ಸೀಜನ್ ಸದ್ಯಕ್ಕೆ ಮುಗಿದಿರೋದ್ರಿಂದ ಜನರಿಗೆ ಮಜಾ ತೆಗೆದುಕೊಳ್ಳೋಕೊಂದು ವಿಷಯ ಬೇಕು. ಅದಾಗ್ತಿದೆ. ಅದರಾಚೆಗೆ ಏನೂ ಇಲ್ಲ.

Leave a Reply