ಹಿಂದು ರಾಜ್ಯವೆಂಬ ಕಾಂಗ್ರೆಸ್ ಪ್ರಚೋದನೆ ಬಗ್ಗೆ ಸೊಲ್ಲೆತ್ತದೇ ಸಚಿವ ರಿಜಿಜು ಹೇಳಿಕೆಯನ್ನಷ್ಟೇ ಟೀಕಿಸುತ್ತಿರುವುದರ ಮರ್ಮವೇನು?

ಪ್ರವೀಣ ಕುಮಾರ್

‘ಭಾರತದಲ್ಲಿ ಹಿಂದು ಜನಸಂಖ್ಯೆ ಕ್ಷೀಣಿಸುತ್ತಿದೆ. ಕಾರಣ ಹಿಂದುಗಳು ಇತರರನ್ನು ಮತಾಂತರ ಮಾಡುವುದಿಲ್ಲ. ನಮ್ಮ ಸುತ್ತಲಿರುವ ಬೇರೆ ದೇಶಗಳಂತಲ್ಲದೇ ನಮ್ಮಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ವೃದ್ಧಿಸುತ್ತಿದೆ.’

ಇದು ಕೇಂದ್ರದ ಗೃಹಖಾತೆ ಸಹಾಯಕ ಸಚಿವ ಕಿರಣ್ ರಿಜಿಜು ಅವರ ಟ್ವೀಟ್.

rijiju1

ಸರಿ. ಕೆಲವು ರಾಷ್ಟ್ರೀಯ ವಾಹಿನಿಗಳಲ್ಲಿ ಜೋರು ಚರ್ಚೆ. ಕೇಂದ್ರದ ಸಚಿವರಾಗಿದ್ದುಕೊಂಡು ಹೀಗೆ ಹೇಳುವುದು ಸರಿಯೇ? ಎಲ್ಲರನ್ನೂ ಸಮಾನವಾಗಿ ನೋಡಬೇಕಲ್ಲವೇ? ಘನತೆಗಿದು ತರವೇ… ಇತ್ಯಾದಿ, ಇತ್ಯಾದಿ.

ಇದು ಹೇಗಿದೆ ಎಂದರೆ…ತಮಿಳುನಾಡಿನ ಗಲಾಟೆ ಬೇಜಾರಾಗುತ್ತ ಬಂತು, ಮತ್ತೇನಾದರೂ ಚರ್ಚೆ ಮಾಡಬೇಕಲ್ಲ ಅಂತ ರಿಜಿಜು ಹೇಳಿಕೆಗೆ ವಿವಾದಾತ್ಮಕ ಅಂತ ಠಸ್ಸೆ ಒತ್ತಿ ಕಾಲಕ್ಷೇಪಕ್ಕೆ ಕುಂತಂತಿದೆ. ಅದಿಲ್ಲದಿದ್ದರೆ ಮೇಲಿನ ಹೇಳಿಕೆಯಲ್ಲಿ ತಪ್ಪು ಏನಿದೆ? ಬೇರೆ ಕೋಮುಗಳಿಗೆ ಹೋಲಿಸಿದಾಗ ಹಿಂದುಗಳ ಜನಸಂಖ್ಯಾವೃದ್ಧಿ ನಿಧಾನಗತಿ ಪಡೆದುಕೊಂಡಿರುವುದು ಹೌದು. ಇಲ್ಲಿ ಮತಾಂತರ ಮಾಡಿಕೊಳ್ಳುವ ಕಲ್ಪನೆ ಇರದಿರೋದು ಹೌದು. ಪಕ್ಕದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತರೆನಿಸಿಕೊಂಡಿರುವ ಹಿಂದು-ಸಿಖ್- ಕ್ರೈಸ್ತರ ದಯನೀಯ ಸ್ಥಿತಿಗೆ ಹೋಲಿಸಿದಾಗ ಭಾರತದಲ್ಲಿ ಅಲ್ಪಸಂಖ್ಯಾತರೆನಿಸಿಕೊಂಡಿರುವವರು ಉತ್ತಮ ಸ್ಥಿತಿಯಲ್ಲಿರೋದೂ ಹೌದು.

ಇದರಲ್ಲಿ ವಿವಾದಾತ್ಮಕತೆ ಏನು ಬಂತು? ಈ ಟ್ವೀಟಿಗೆ ಇನ್ನೊಂದು ಸಾಲು ಸೇರಿಸಿ- ಹಿಂದುಗಳು ಸಿಡಿದೇಳಬೇಕು ಎಂದೇನೋ ಕರೆ ಕೊಟ್ಟಿದ್ದರೆ ಆಗದನ್ನು ಪ್ರಚೋದನಾತ್ಮಕ ಎನ್ನಬಹುದಿತ್ತು.

ಇಷ್ಟಕ್ಕೂ ಮೂಲ ಯಾವುದು? ಮೊದಲು ಕಲ್ಲೊಗೆದವರ್ಯಾರು? ಈ ಪ್ರಶ್ನೆಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಮಾಧ್ಯಮಗಳು ಚರ್ಚಿಸುವುದೇ ಇಲ್ಲ. ಕಿರಣ್ ರಿಜಿಜು ಟ್ವೀಟಿಗೆ ಕಾರಣವಾಗಿದ್ದೇ ಕಾಂಗ್ರೆಸ್ಸಿನ ಪ್ರಚೋದನೆ.

ಅರುಣಾಚಲ ಪ್ರದೇಶವನ್ನು ಕೇಂದ್ರದ ಮೋದಿ ಸರ್ಕಾರವು ಹಿಂದು ರಾಜ್ಯವನ್ನಾಗಿ ಪರಿವರ್ತಿಸುತ್ತಿದೆ ಅಂತ ಬೊಬ್ಬೆ ಹೊಡೆದಿದೆ ಅಲ್ಲಿನ ಪ್ರದೇಶ ಕಾಂಗ್ರೆಸ್ ಸಮಿತಿ. ಅರುಣಾಚಲ ಪ್ರದೇಶದಲ್ಲಿ ಯಾವ ಕೋಮು ಜಟಾಪಟಿಗಳೂ ಇಲ್ಲದಿರುವಾಗ, ತಾನು ಅಲ್ಲಿ ಅಧಿಕಾರ ಕಳೆದುಕೊಂಡಿರುವ ಏಕೈಕ ಕಾರಣಕ್ಕಾಗಿ, ಹಿಂದು ವರ್ಸಸ್ ಇತರರು ಅಂತ ಎತ್ತಿಕಟ್ಟುವ ಜಾಯಮಾನ ಕಾಂಗ್ರೆಸ್ಸಿಗೆ ಥರವೇ? ಅರುಣಾಚಲ ಪ್ರದೇಶದ ಅಭಿವೃದ್ಧಿ, ಆಡಳಿತ ನಿರ್ವಹಣೆ ಇತ್ಯಾದಿ ವಿಷಯಗಳಲ್ಲಿ ಕೇಂದ್ರವನ್ನೋ ಅಥವಾ ಅಲ್ಲಿನ ಸರ್ಕಾರವನ್ನೋ ಪ್ರಶ್ನಿಸುವುದಕ್ಕೆ ಕಾಂಗ್ರೆಸ್ ಬಳಿ ಸರಕಿಲ್ಲದಾಯಿತೇ?

rijiju

ಇಂಥದೊಂದು ಹಿಂದು ಫೋಬಿಯಾ ಹುಟ್ಟುಹಾಕುವುದಕ್ಕೆ ಹೋದಾಗ ಸಹಜವಾಗಿಯೇ ಪ್ರತಿಕ್ರಿಯೆ ಬಂದೇ ಬರುತ್ತದೆ. ಹಿಂದು ರಾಜ್ಯ ಅಥವಾ ಹಿಂದು ರಾಷ್ಟ್ರ ಮಾಡುವುದು ಅಂದರೆ ಏನು? ಮತಾಂತರವನ್ನಂತೂ ಮಾಡುವುದಿಲ್ಲ. ಈ ಸಮುದಾಯದ ಜನಸಂಖ್ಯಾ ಹೆಚ್ಚಳವೂ ಆಗಿಲ್ಲ ಎಂಬಂಶಗಳನ್ನು ಆಧರಿಸಿ ಪ್ರತಿಕ್ರಿಯೆ ಕೊಟ್ಟಿದ್ದಾರೆ ಕಿರಣ್ ರಿಜಿಜು. ಇದರಲ್ಲಿ ವಿವಾದ ಎಲ್ಲಿ ಬಂತು?

ಅರುಣಾಚಲದಲ್ಲಿ ಎಲ್ಲರೂ ಶಾಂತಿಯುತವಾಗಿ ಬದುಕುತ್ತಿರುವಾಗ ಕಾಂಗ್ರೆಸ್ಸಿನ ಇಂಥ ಪ್ರಚೋದನಾತ್ಮಕ ಹೇಳಿಕೆ ಏಕೆ ಬರುತ್ತಿದೆ ಅಂತಲೂ ರಿಜಿಜು ಕೇಳಿದ್ದಾರೆ. ನಿಜವಾಗಿ ಪ್ರಶ್ನೆಗೊಳಬೇಕಾಗಿರುವುದು ಈ ಪ್ರಚೋದನೆಯೇ. ಆದರೆ ಕೆಲವು ರಾಷ್ಟ್ರೀಯ ಮಾಧ್ಯಮಕ್ಕೆ ರಿಜಿಜು ಹೇಳಿಕೆಯನ್ನು ವಿವಾದಾತ್ಮಕವಾಗಿಸಿ ಇವತ್ತಿನ ಸುದ್ದಿ ಜಾಗಟೆ ಜೋರಾಗಿಸಿಕೊಳ್ಳುವುದರಲ್ಲೇ ಆಸಕ್ತಿ.

Leave a Reply