ಅಂಧರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ, ಪಂದ್ಯದಲ್ಲಿ ಹೀರೋ ಆದ ರಾಜ್ಯದ ಪ್ರಕಾಶ್ ಜಯರಾಮಯ್ಯ

ಡಿಜಿಟಲ್ ಕನ್ನಡ ಟೀಮ್:

ಒಂದೆಡೆ ಭಾರತೀಯ ಕ್ರಿಕೆಟ್ ತಂಡ ತವರಿನಲ್ಲಿ ಸಾಲು ಸಾಲು ಸರಣಿಗಳನ್ನು ಗೆಲ್ಲುತ್ತಿರುವ ಬೆನ್ನಲ್ಲೇ, ಭಾರತೀಯ ಅಂಧರ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದು ತನ್ನ ಪರಾಕ್ರಮವನ್ನು ಮುಂದುವರಿಸಿದೆ. ಭಾನುವಾರ ಬೆಂಗಳೂರಿನಲ್ಲಿ ನಡೆದ ಅಂಧರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಂಪಾದಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 197 ರನ್ ದಾಖಲಿಸಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 17.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 200 ರನ್ ದಾಖಲಿಸಿತು. 2012ರಲ್ಲಿ ವಿಶ್ವಕಪ್ ಗೆದ್ದುಕೊಂಡಿದ್ದ ಭಾರತ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಬಾದರ್ ಮುನಿರ್ ಆಸರೆಯಾದರು. ಆಕರ್ಷಕ 57 ರನ್ ಗಳಿಸಿದ ಬಾದರ್ ತಂಡ ದೊಡ್ಡ ಸವಾಲು ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಭಾರತದ ಪರ ಬೌಲಿಂಗ್ ನಲ್ಲಿ ಕೇತನ್ ಪಟೇಲ್ ಹಾಗೂ ಜಾಫರ್ ಇಕ್ಬಾಲ್ ತಲಾ 2 ವಿಕೆಟ್ ಪಡೆದರೆ, ಅಜಯ್ ಕುಮಾರ್ ರೆಡ್ಡಿ ಮತ್ತು ಸುನಿಲ್ ಆರ್ ತಲಾ 1 ವಿಕೆಟ್ ಗಳಿಸಿದರು.

ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಸುಲಭವಾಗಿಯೇ ಗುರಿ ಮುಟ್ಟಿತು. ಕರ್ನಾಟಕದ ಆಟಗಾರ ಪ್ರಕಾಶ್ ಜಯರಾಮಯ್ಯ (ಅಜೇಯ 99) ಅವರ ಅಮೋಘ ಬ್ಯಾಂಟಿಂಗ್ ನಡೆಸಿದರು. ಮತ್ತೊಬ್ಬ ಆಟಗಾರ ಅಜಯ್ ರೆಡ್ಡಿ 43 ರನ್ ಗಳಿಸಿ ಔಟಾದರೆ, ಕೇತನ್ ಪಟೇಲ್ 26 ರನ್ ಗಳಿಸಿ ಗಾಯಗೊಂಡು ಮೈದಾನದಿಂದ ಹೊರ ನಡೆದರು. ಈ ವೇಳೆ ಸಲೀಸಾಗಿ ಬ್ಯಾಟ್ ಬೀಸುತ್ತಾ ರನ್ ಪೇರಿಸಿದ ಪ್ರಕಾಶ್ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು. ಇವರಿಗೆ ಅಂತ್ಯದವರೆಗೂ ಸಾಥ್ ಕೊಟ್ಟ ವೆಂಕಟೇಶ್ 11 ರನ್ ಗಳಿಸಿದರು.

ಭಾರತ ತಂಡ ವಿಶ್ವಕಪ್ ಗೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಂಡದ ಸಾಧನೆಯನ್ನು ಶ್ಲಾಘಿಸಿದ್ದಾರೆ. ‘ಭಾರತ ಅಂಧರ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದಿರುವುದು ಬಹಳ ಸಂತೋಷವಾಗಿದೆ. ಭಾರತ ತಂಡಕ್ಕೆ ನನ್ನ ಅಭಿನಂದನೆಗಳು. ಅವರ ಈ ಸಾಧನೆಯಿಂದ ಇಡೀ ದೇಶವೇ ಹೆಮ್ಮೆ ಪಡಲಿದೆ’ ಎಂದು ಮೋದಿ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಸಹ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ‘ಕಳೆದ ವರ್ಷ ರಿಯೋದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳ ಮಹತ್ವದ ಸಾಧನೆ ನಂತರ, ಭಾರತೀಯ ಅಂಧರ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಮೂಲಕ ಭಾರತ ಕ್ರೀಡಾ ಇತಿಹಾಸಕ್ಕೆ ಹೊಸ ಅಧ್ಯಾಯವನ್ನು ಬರೆದಿದ್ದಾರೆ’ ಎಂದು ಗೋಯಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply