ಕಂಬಳ ಪರ ವಿಧೇಯಕಕ್ಕೆ ಒಪ್ಪಿಗೆ- ವಿಧಾನ ಸಭೆಯ ಪ್ರಮುಖ ಹೈಲೈಟ್ಸ್, ಬಾಂಗ್ಲಾ ವಿರುದ್ಧ ಭಾರತಕ್ಕೆ ಜಯ- ಧೋನಿ ದಾಖಲೆ ಮುರಿದ ಕೊಹ್ಲಿ, ನೀವು ಕಣ್ತುಂಬಿಸಿಕೊಳ್ಳಬೇಕಾದ ಏರ್ ಶೋ ಚಿತ್ರಗಳು…

ಬೆಂಗಳೂರಿನ ಅಶೋಕ ಹೊಟೇಲ್ ನಲ್ಲಿ ಸೋಮವಾರ ನಡೆದ ‘ಮೇಕ್ ಇನ್ ಕರ್ನಾಟಕ’ ಬಂಡವಾಳ ಹೂಡಿಕೆದಾರರ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಆರ್.ವಿ ದೇಶಪಾಂಡೆ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಅನಂತ ಕುಮಾರ್ ಹಾಗೂ ವೆಂಕಯ್ಯ ನಾಯ್ಡು.

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಕಂಬಳ ಹಾಗೂ ಎತ್ತಿನಗಾಡಿ ಓಟದ ಸ್ಪರ್ಧೆ ಉಳಿವಿಗೆ ರಾಜ್ಯ ಸರ್ಕಾರ ಕಾನೂನಿನ ಬಲ ತುಂಬಿದೆ. ಸೋಮವಾರ ವಿಧಾನಸಭೆಯಲ್ಲಿ ಈ ಕ್ರೀಡೆಗಳಿಗೆ ಸಂಬಂಧಿಸಿದ ವಿಧೇಯಕ್ಕೆ ಅನುಮತಿ ನೀಡಲಾಗಿದೆ. ಪ್ರಾಣಿಗಳ ಮೇಲಿನ ಹಿಂಸಾಚಾರ ತಡೆ ತಿದ್ದುಪಡಿ ಕಾಯ್ದೆಯನ್ನು ಪಶುಸಂಗೋಪನಾ ಸಚಿವ ಎ.ಮಂಜು ಅವರು ಮಂಡಿಸಿದರು. ನಂತರ ಈ ಮಸೂದೆಗೆ ಸರ್ವ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದವು. ಆ ಮೂಲಕ 1960ರ ಕಾಯ್ದೆಗೆ ತಿದ್ದುಪಡಿ ಮಾಡಿ ಕಂಬಳ ಮತ್ತು ಎತ್ತಿನ ಗಾಡಿ ಓಟ ಆಚರಣೆ ಕಾನೂನು ಬದ್ಧವಾಗಿವೆ.

ವಿಧಾನಸಭೆಯ ಇತರೆ ಮುಖ್ಯಾಂಶಗಳು…

  • ಕಾರ್ಮಿಕರಿಗೆ ಕನಿಷ್ಠ ಮಜೂರಿಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕಿತು. ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಸೂದೆ ಅನುಮೋದನೆಗೆ ಮನವಿ ಮಾಡಿದರು. ‘ಕನಿಷ್ಠ ವೇತನ ಕಾಯ್ದೆಯನ್ನು ಜಾರಿಗೆ ತರುವ ಹಂತದಲ್ಲಿ ದೂರು ಪಡೆಯುವ ಅಧಿಕಾರ ಕಾರ್ಮಿಕ ಆಯುಕ್ತರಿಗೆ ಮಾತ್ರ ನೀಡಲಾಗಿತ್ತು, ಈಗ ಆ ಅಧಿಕಾರವನ್ನು ಸಹಾಯಕ ಕಾರ್ಮಿಕ ಆಯುಕ್ತರಿಗೆ ನೀಡಲಾಗಿದೆ. ಇದರಿಂದ ಕಾರ್ಮಿಕರು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹಕ್ಕು ಪ್ರತಿಪಾದನೆಗೆ ಸುಲಭವಾಗುತ್ತದೆ’ ಎಂದು ಸಚಿವರು ವಿವರಿಸಿದರು.
  • ರಾಜ್ಯಾದ್ಯಂತ ಬಗರ್ ಹುಕುಂ ಭೂಮಿಯನ್ನು ಸಕ್ರಮಗೊಳಿಸಲು ಇದ್ದ ಕಾಲಾವಧಿಯನ್ನು ಸರ್ಕಾರ ಎರಡು ವರ್ಷಗಳ ಅವಧಿಗೆ ವಿಸ್ತರಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನಸಭೆಯಲ್ಲಿ ತಿಳಿಸಿದರು. ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಪಡೆದ ಸಂದರ್ಭದಲ್ಲಿ ಈ ವಿಷಯ ತಿಳಿಸಿದ ಕಾಗೋಡು ತಿಮ್ಮಪ್ಪ, ‘ರಾಜ್ಯಾದ್ಯಂತ ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಲು ಸರ್ಕಾರ ಸಕ್ರಮಾತಿ ಸಮಿತಿಗಳನ್ನು ರಚಿಸಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆ ಮುಂದುವರಿದಿದೆ. ಅರಣ್ಯ ಭೂಮಿಯೂ ಸೇರಿದಂತೆ ಒಟ್ಟಾರೆ ಭೂಮಿಯ ವಿಷಯದಲ್ಲಿ ಅಧಿಕಾರಿಗಳು ಸರಿಯಾಗಿ ಓದಿಕೊಂಡರೆ ಮಾತ್ರ ಈ ಸಮಸ್ಯೆ ಪರಿಹಾರವಾಗುತ್ತದೆ’ ಎಂದರು.
  • ಕರ್ನಾಟಕ ಶಿಕ್ಷಣ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅನುಮೋದನೆ ಮಾಡಲಾಯಿತು. ಆ ಮೂಲಕ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆಯಾಗಲು ಕಾರಣವಾದವರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ₹ 5 ಲಕ್ಷ ದಂಡ ವಿಧಿಸಲಾಗುವುದು.

ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶರಿಗೆ 25 ದಿನಗಳ ಗಡವು

ಹಲವಾರು ನ್ಯಾಯಾಧೀಶರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಸೇರಿದಂತೆ ಇತರೆ ಅಧಿಕಾರಿಗಳಿಗೆ ಪತ್ರ ಬರೆದು, ನಿಂದನೆ ಪ್ರಕರಣ ಎದುರಿಸುತ್ತಿರುವ ಕೋಲ್ಕತಾದ ಹೈಕೋರ್ಟ್ ನ್ಯಾಯಾಧೀಶ ಸಿಎಸ್.ಕರ್ಣನ್ ಅವರಿಗೆ ಸುಪ್ರೀಂ ಕೋರ್ಟ್ 25 ದಿನಗಳ ಗಡುವು ನೀಡಿದೆ.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೆಹೆರ್ ಅವರ ನೇತೃತ್ವದ ಏಳು ಸದಸ್ಯರ ಪೀಠ, ಈ ಕುರಿತ ವಿಚಾರಣೆಯನ್ನು ಮಾ.10 ರಿಂದ ಆರಂಭಿಸಲು ನಿರ್ಧರಿಸಿದ್ದು, ಅಷ್ಟರ ಒಳಗಾಗಿ ಸುಪ್ರೀಂ ಕೋರ್ಟಿನ ನೋಟೀಸ್ ಗೆ ಉತ್ತರಿಸಬೇಕು ಎಂದು ಸೂಚಿಸಲಾಗಿದೆ. ಕಳೆದ ವಾರವೇ ಸುಪ್ರೀಂ ಕೋರ್ಟ್ ನೋಟೀಸ್ ಜಾರಿ ಮಾಡಿತ್ತು. ಆದರೆ ಇದಕ್ಕೆ ಉತ್ತರ ನೀಡದ ಕರ್ಣನ್, ತಮಗೆ ಸೂಕ್ತ ರೀತಿಯ ಸಮಯಾವಕಾಶ ಕೊಟ್ಟಿಲ್ಲ ಎಂದು ಹೇಳಿದ್ದರು. ಹೀಗಾಗಿ ನ್ಯಾಯಾಲಯ 25 ದಿನ ಕಾಲಾವಕಾಶ ಕೊಟ್ಟಿದೆ.

ಮುಂದುವರಿತು ಟೀಂ ಇಂಡಿಯಾ ಜಯದ ಯಾತ್ರೆ

ದುರ್ಬಲ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಸರಣಿಯಲ್ಲಿ ಭಾರತ 208 ರನ್ ಗಳ ಭರ್ಜರಿ ಜಯ ಸಂಪಾದಿಸಿದೆ. ಆ ಮೂಲಕ ಸತತವಾಗಿ 8 ಸರಣಿಗಳನ್ನು (ಎಲ್ಲ ಮಾದರಿಯೂ ಸೇರಿ) ಗೆದ್ದ ಮೊದಲ ಭಾರತ ತಂಡದ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಆ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (7 ಸರಣಿ)ಯ ದಾಖಲೆ ಮುರಿದಿದ್ದಾರೆ.

ಪಂದ್ಯದ ಐದನೇ ದಿನವಾದ ಸೋಮವಾರ ಬಾಂಗ್ಲಾದೇಶ ಬ್ಯಾಟ್ಸ್ ಮನ್ ಗಳು ಭಾರತೀಯ ಬೌಲರ್ ಗಳ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಪರಿಣಾಮ ಬಾಂಗ್ಲಾದೇಶ ಎರಡನೇ ಇನಿಂಗ್ಸ್ ನಲ್ಲಿ 250 ರನ್ ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ಪರ ಮೊಹಮದ್ದುಲ್ಲಾ 64 ರನ್ ದಾಖಲಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರ ಅರ್ಧಶತಕ ಗಳಿಸಲಿಲ್ಲ. ಭಾರತದ ಪರ ರವೀಂದ್ರ ಜಡೇಜಾ ಹಾಗೂ ಅಶ್ವಿನ್ ತಲಾ 4 ವಿಕೆಟ್ ಕಬಳಿಸಿದರೆ, ಇಶಾಂತ್ ಶರ್ಮಾ 2 ವಿಕೆಟ್ ಪಡೆದರು.

ಈ ಪಂದ್ಯದ ಗೆಲುವಿನೊಂದಿಗೆ ಸತತ 19 ಪಂದ್ಯಗಳಲ್ಲಿ ಭಾರತ ತಂಡ ಸೋಲಿಲ್ಲದ ಸರದಾರನಾಗಿದ್ದು, ಈ ಎಲ್ಲ ಪಂದ್ಯಗಳಲ್ಲೂ ವಿರಾಟ್ ನಾಯಕರಾಗಿದ್ದಾರೆ. 2015ರಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಭಾರತ ಈವರೆಗೂ ಯಾವುದೇ ಪಂದ್ಯದಲ್ಲೂ ಸೋತಿಲ್ಲ. ಜತೆಗೆ ಇದು ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಜಯ ಸಾಧಿಸಿದ ಸತತ ಆರನೇ ಟೆಸ್ಟ್ ಸರಣಿ.

ಏರ್ ಶೋ ಚಿತ್ರಪಟಗಳು…

ಈ ವರ್ಷದ ‘ಏರೋ ಇಂಡಿಯಾ 2017’ ಏರ್ ಶೋ ಕಾರ್ಯಕ್ರಮ ನಾಳೆಯಿಂದ ಯಲಹಂಕದ ವಾಯು ಸೇನಾ ನೆಲೆಯಲ್ಲಿ ಐದು ದಿನಗಳ ಕಾಲ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ನಡೆದಿವೆ. ಈ ಏರ್ ಶೋನ ಪೂರ್ವಭಾವಿ ಸಿದ್ಧತೆಯ ಚಿತ್ರಗಳು ಹೀಗಿವೆ…

moh_feb-13-2017-air-show-3-min

moh_feb-13-2017-air-show-4-min

moh_feb-13-2017-air-show-8

Leave a Reply