ಹಿರಿಯ ನಾಗರೀಕರಿಗಿಲ್ಲ ಟೆನ್ಶನ್- ಮೋದಿ ಸರಕಾರದ ಭದ್ರತೆಯ ಪೆನ್ಷನ್ 

authors-rangaswamyಕುಸಿಯುತ್ತಿರುವ ಬಡ್ಡಿ ದರ ಹಿರಿಯ ನಾಗರೀಕರಲ್ಲಿ ನಡುಕು ಹುಟ್ಟಿಸಿರುವುದು ಸುಳ್ಳಲ್ಲ. ಮುಂಬರುವ ದಿನಗಳು ಅಷ್ಟೇನೂ ಆಶಾದಾಯಕವಾಗಿ ಕಾಣುತ್ತಿಲ್ಲ ಹೀಗಿರುವಾಗ ವಿತ್ತ ಸಚಿವ ಜೇಟ್ಲಿ ಈ ಬಾರಿಯ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಭದ್ರತೆ ಒದಗಿಸುವ ಒಂದು ಯೋಜನೆಯನ್ನು ದೇಶದ ಅತಿ ದೊಡ್ಡ ವಿಮಾ ಸಂಸ್ಥೆ ಎಲ್ ಐ ಸಿ ಜೊತೆಗೂಡಿ ಜಾರಿಗೆ ತರುವುದಾಗಿ ಹೇಳಿಕೆ ನೀಡಿದ್ದಾರೆ. ಏನಿದು ಯೋಜನೆ? ಹೇಗೆ ಕಾರ್ಯನಿರ್ವಹಿಸುತ್ತೆ? ಇವುಗಳ ಸಾಧಕ- ಬಾಧಕಗಳೇನು? ನೋಡೋಣ ಬನ್ನಿ.

ಏನಿದು ಯೋಜನೆ?

ಈ ಯೋಜನೆಯ ಹೆಸರು ವರಿಷ್ಠ ಪೆನ್ಷನ್ ಬಿಮಾ ಯೋಜನೆ. ಇದನ್ನು ಪ್ರಥಮವಾಗಿ 2003 ರಲ್ಲಿ ಅಂದಿನ ಏನ್ ಡಿಎ ಸರಕಾರ ಘೋಷಿಸಿತ್ತು. ವರ್ಷದ ನಂತರ ಈ ಯೋಜನೆಯನ್ನು ತೆಗೆದು ಹಾಕಲಾಯಿತು. ಮೋದಿ ಸರಕಾರ ಮತ್ತೆ 2014 ರಲ್ಲಿ ಇದನ್ನು ಜಾರಿಗೆ ತಂದಿತು. ಬ್ಯಾಂಕ್ ಬಡ್ಡಿ ಜೊತೆಗೆ ಇತರ ಎಲ್ಲಾ ಹಣಕಾಸು ಸಂಸ್ಥೆಗಳು ನೀಡುವ ಬಡ್ಡಿ ಆಕರ್ಷಕವಾಗಿತ್ತು. ಹೀಗಾಗಿ ಈ ಯೋಜನೆ ಅಷ್ಟು ಮಹತ್ವ ಪಡೆಯಲಿಲ್ಲ. ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿರುವ ಬಡ್ಡಿ ದರ ಜೊತೆಗೆ ಜಗತ್ತಿನ ಎಲ್ಲೆಡೆ ಇರುವ ಅಸ್ಥಿರತೆ ಈ ಯೋಜನೆಗೆ ಇನ್ನಿಲ್ಲದ ಮಹತ್ವ ತಂದುಕೊಡಲಿದೆ. ನಮ್ಮ ದೇಶದ ಅತಿ ದೊಡ್ಡ ವಿಮಾ ಸಂಸ್ಥೆ ಎಲ್ ಐ ಸಿ ಮೂಲಕ ಕೇಂದ್ರ ಸರಕಾರ ಈ ಯೋಜನೆಯನ್ನು ಸದ್ಯದಲ್ಲೇ ಜಾರಿಗೆ ತರಲಿದೆ.

ಹೇಗೆ ಕಾರ್ಯನಿರ್ವಹಿಸುತ್ತೆ?

ಮುಂದಿನ ಹತ್ತು ವರ್ಷಗಳ ವರೆಗೆ 8% (ಎಂಟು ಪ್ರತಿಶತ) ಠೇವಣಿ ಮೊತ್ತದ ಮೇಲೆ ಬಡ್ಡಿ ನೀಡಲಾಗುವುದು. ಅಂದರೆ ಮುಂಬರುವ ವರ್ಷಗಳಲ್ಲಿ ಬಡ್ಡಿ ದರ ಇನ್ನಷ್ಟು ಕುಸಿದು ಐದು ಪ್ರತಿಶತ ಮುಟ್ಟಿದರೂ ಇದರಿಂದ ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟ) ಯಾವುದೇ ತೊಂದರೆ ಯಾಗುವುದಿಲ್ಲ. ಕೇಂದ್ರ ಸರಕಾರ ಮುಂದಿನ ಹತ್ತು ವರ್ಷ ನಿಗದಿತ 8 ಪ್ರತಿಶತ ಬಡ್ಡಿ ನೀಡುತ್ತಲೇ ಬರುತ್ತದೆ. ಜಾಗತಿಕ ಹಣಕಾಸಿನ ಹೋಯ್ದಾಟ ಹಿರಿಯ ಜೀವಿಗಳ ಸಂಧ್ಯಾಕಾಲದ ನೆಮ್ಮದಿಗೆ ಭಂಗ ತರದಂತೆ ನೋಡಿಕೊಳ್ಳುವ ಕೇಂದ್ರ ಸರಕಾರ ಪ್ರಯತ್ನ ಶ್ಲಾಘನೀಯ. ಉದಾಹರಣೆ ನೋಡಿ ಈ ವರ್ಷ 8 ಪ್ರತಿಶತ ಬಡ್ಡಿ ನೀಡಿದ ಎಲ್ ಐ ಸಿ ಠೇವಣಿ ಹಣದಲ್ಲಿ ಗಳಿಸಿದ್ದು ಕೇವಲ 7 ಪ್ರತಿಶತ ಅಂದುಕೊಳ್ಳಿ. ಅಂದರೆ ಎಲ್ ಐ ಸಿ 1 ಪ್ರತಿಶತ ನಷ್ಟಕ್ಕೆ ಸಿಲುಕಿತು. ವರ್ಷಾಂತ್ಯದ ಲೆಕ್ಕಾಚಾರ ನೋಡಿ ಕೇಂದ್ರ ಸರಕಾರ ಈ ನಷ್ಟವನ್ನು ತನ್ನ ಬೊಕ್ಕಸದಿಂದ ಎಲ್ ಐ ಸಿ ಗೆ ತುಂಬಿಕೊಡುತ್ತದೆ. ಇದೆ ರೀತಿ 2020 ರ ವೇಳೆಗೆ ಎಲ್ ಐ ಸಿ ಠೇವಣಿ ಮೇಲೆ ಗಳಿಸಿದ್ದು ಶೇ.4 ಅಂದುಕೊಂಡರೆ ಉಳಿದ ಶೇ.4 ರಷ್ಟು ಕೇಂದ್ರ ಸರಕಾರ ಭರಿಸುತ್ತದೆ. ಅರ್ಥ ಇಷ್ಟೇ, ನಷ್ಟ ಎಷ್ಟೇ ಇರಲಿ ಅದನ್ನು ಕೇಂದ್ರ ಸರಕಾರ ಭರಿಸಲಿದೆ. ಎಲ್ ಐ ಸಿ ಉದ್ಯಮಕ್ಕೆ ಇದರಿಂದ ಯಾವುದೇ ಪ್ರತಿಕೂಲ ಪರಿಣಾಮ ಇರುವುದಿಲ್ಲ. ಎಲ್ ಐ ಸಿ ಸಂಸ್ಥೆಯ ಮೂಲಸೌಕರ್ಯ ಮತ್ತು ಸಂಪರ್ಕ (ನೆಟ್ವರ್ಕ್ ) ವನ್ನು ಮಾತ್ರವೇ ಕೇಂದ್ರ ಸರಕಾರ ಬಳಸಿಕೊಳ್ಳಲಿದೆ.

hana class

ಇವುಗಳ ಸಾಧಕ- ಬಾಧಕಗಳೇನು?

ಕುಸಿಯುತ್ತಿರುವ ಬ್ಯಾಂಕ್ ಬಡ್ಡಿ ದರ, ಜಾಗತಿಕ ಅಸ್ಥಿರತೆ ಜೊತೆಗೆ ಜಗತ್ತಿನ ಎಷ್ಟೋ ದೇಶಗಳಲ್ಲಿ ನೆಗೆಟಿವ್ ಬಡ್ಡಿ ದರ ಇರುವ ಈ ಕಾಲಘಟ್ಟದಲ್ಲಿ ಶೇ.8 ರಷ್ಟು ಬಡ್ಡಿ ದರ ಮುಂಬರುವ 10 ವರ್ಷಗಳ ವರೆಗೆ ಕೇಂದ್ರ ಸರಕಾರದ ಅಭಯದೊಂದಿಗೆ ಸಿಗುತ್ತದೆ ಎಂದರೆ ಅದಕ್ಕಿಂತ ಹೆಚ್ಚಿನ ಧನಾತ್ಮಕ ಅಂಶ ಇನ್ನೇನುಬೇಕಿದೆ? ಮೂಲಧನ ಕಳೆದುಕೊಳ್ಳುವ ಭಯವೂ ಇಲ್ಲ.

ಈ ಯೋಜನೆಯನ್ನು ಸಿರಿವಂತರು ದುರುಪಯೋಗ ಮಾಡಿಕೊಳ್ಳಬಹುದು ಎನ್ನುವ ಮುಂದಾಲೋಚನೆಯಿಂದ ಕೇಂದ್ರ ಸರಕಾರ ಠೇವಣಿ ಮೊತ್ತವನ್ನು ಪ್ರತಿ ವ್ಯಕ್ತಿಗೆ ಏಳೂವರೆ ಲಕ್ಷಕ್ಕೆ ಸೀಮಿತಗೊಳ್ಳಿಸುವ ಸಾಧ್ಯತೆಯಿದೆ. ಅಂದರೆ ೮ ಪ್ರತಿಶತ ಬಡ್ಡಿ ಪ್ರಕಾರ ತಿಂಗಳಿಗೆ ಐದು ಸಾವಿರ ರೂಪಾಯಿ ಪಿಂಚಣಿ ಬರುತ್ತದೆ. ಮುಂದಿನ ಹತ್ತು ವರ್ಷದಲ್ಲಿ ಹಣದುಬ್ಬರದ ಲೆಕ್ಕಾಚಾರ ಮಾಡಿ ನೋಡಿದರೆ ಐದು ಸಾವಿರ ರೂಪಾಯಿ ವ್ಯಕ್ತಿಯೊಬ್ಬ ತಿಂಗಳಿಗೆ ಬದುಕಲು ಸಾಕೆ? ಎನ್ನುವ ಪ್ರಶ್ನೆ ಹುಟ್ಟಿಹಾಕುತ್ತದೆ. ಇಂದಿನ ದಿನದಲ್ಲೇ ಐದು ಸಾವಿರ ರೂಪಾಯಿಯಲ್ಲಿ ಒಬ್ಬ ವ್ಯಕ್ತಿ ಬದುಕುವುದು ಕಷ್ಟವಿದೆ.

ಈ ಯೋಜನೆಯ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಇನ್ನಷ್ಟೇ ಬರಬೇಕಿದೆ. ಕೇಂದ್ರ ಸರಕಾರ ಹಣದುಬ್ಬರವನ್ನು ಗಮನದಲ್ಲಿ ಇರಿಸಿಕೊಂಡು ಗರಿಷ್ಟ ಹೂಡಿಕೆ ಮೊತ್ತವನ್ನು ೧೫ ಲಕ್ಷಕ್ಕೆ ವ್ಯಕ್ತಿಯೊಬ್ಬನಿಗೆ ನಿಗದಿ ಪಡಿಸಿದರೆ ಇದು ನಿಜಕ್ಕೂ ಅತ್ಯುತ್ತಮ ಯೋಜನೆಯಾಗಲಿದೆ . ಸದ್ಯಕ್ಕೆ ಕೇಂದ್ರ ಸರಕಾರದ ಸೀನಿಯರ್ ಸಿಟಿಝೆನ್ ಸೇವಿಂಗ್ ಸ್ಕೀಮ್ (SCSS )  ಹಿರಿಯ ನಾಗರೀಕರಿಗೆ ಇರುವ ಅತ್ಯುತ್ತಮ ಹೂಡಿಕೆ ಅವಕಾಶ. ಮುಂಬರುವ ತಿಂಗಳುಗಳಲ್ಲಿ ಬಡ್ಡಿ ಇಳಿಯುವ ಸಾಧ್ಯತೆ ಇರುವುದರಿಂದ ವರಿಷ್ಠ ಪೆನ್ಷನ್ ಬಿಮಾ ಯೋಜನೆ ಮಹತ್ವ ಪಡೆಯಲಿದೆ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಅದೇಕೆ ಒಂದು ರುಪಾಯಿಗೆ ಒಂದು ಡಾಲರ್ ಸಮವಲ್ಲ? ಸರ್ಕಾರಗಳಿಗೆ ಹಣದ ಕೊರತೆಯಾದರೆ ಹೆಚ್ಚು ನೋಟುಗಳನ್ನು ಮುದ್ರಿಸಿದರಾಗದೇ? .. ಈ ಮಾದರಿಯ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಕೇಳುವುದಕ್ಕೆ ಮುಜುಗರವೂ ಆಗಿದ್ದಿರಬಹುದು. ಅಂಥ ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply