‘ಇಂತಹ ಸಾವಿರ ಸೆಲ್ವಂರನ್ನು ನೋಡಿದ್ದೇನೆ…’ ಎನ್ನುತ್ತಲೇ ಎಂಜಿಆರ್ ನಂತರದ ಜಯಾ ಹೋರಾಟಕ್ಕೆ ತಮ್ಮನ್ನು ಹೋಲಿಸಿಕೊಂಡ ಶಶಿಕಲಾ

ಡಿಜಿಟಲ್ ಕನ್ನಡ ಟೀಮ್:

‘ಪನ್ನೀರ್ ಸೆಲ್ವಂ ಅವರ ನಿಜವಾದ ಬಣ್ಣ ಬಯಲಾಗಿದೆ. ನಾನು ಇಂತಹ ಸಾವಿರ ಸೆಲ್ವಂರನ್ನು ನೋಡಿದ್ದೇನೆ…’ ಇದು ಸೋಮವಾರ ತಮಿಳುನಾಡು ಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಿರುವ ಶಶಿಕಲಾ ಅವರು ಪನ್ನೀರ್ ಸೆಲ್ವಂ ವಿರುದ್ಧ ಹರಿಹಾಯ್ದ ರೀತಿ. ಅಷ್ಟೇ ಅಲ್ಲದೇ ಎಂಜಿಆರ್ ಅವರ ನಿಧನದ ನಂತರ ಜಯಲಲಿತಾ ಅವರು ತಮಿಳುನಾಡಿನಲ್ಲಿ ನಡೆಸಿದ ರಾಜಕೀಯ ಪರ್ವಕ್ಕೂ ತಮ್ಮ ಈಗಿನ ಹೋರಾಟಕ್ಕೂ ಸಮೀಕರಿಸಿದ್ದಾರೆ.

ಪೊಯೆಸ್ ಗಾರ್ಡನ್ ನಲ್ಲಿ ಸಹಸ್ರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಶಶಿಕಲಾ, ಸೆಲ್ವಂ ವಿರುದ್ಧ ವಾಗ್ದಾಳಿ ನಡೆಸುವುದರ ಜತೆಗೆ ಸದ್ಯದ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ರಾಜ್ಯಪಾಲರು ಕೂಡಲೇ ತಮಗೆ ಸರ್ಕಾರ ರಚಿಸುವ ಆಹ್ವಾನ ನೀಡಬೇಕು ಎಂದು ಒತ್ತಡ ಹಾಕಿದ್ದಾರೆ. ಶಶಿಕಲಾ ತಮ್ಮ ಭಾಷಣದ ವೇಳೆ ಹೇಳಿದಿಷ್ಟು…

‘ಅಮ್ಮಾ ನಿಧನದ ನಂತರ ಎಐಎಡಿಎಂಕೆ ಪಕ್ಷವನ್ನು ಇಬ್ಬಾಗ ಮಾಡುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾದವು. ಪಕ್ಷದ ಭವಿಷ್ಯದ ಪರಿಸ್ಥಿತಿ ನೆನಪಾಗಿ ಸಾಕಷ್ಟು ನೋವು ಅನುಭವಿಸಿದೆ. ಹೀಗಾಗಿ ನಾನು ಗಟ್ಟಿ ನಿರ್ಧಾರಕ್ಕೆ ಬಂದಿದ್ದೇನೆ. ಸತ್ಯ ಏನೆಂಬುದು ಎಲ್ಲರಿಗೂ ತಿಳಿಯಬೇಕಿದೆ. ನಾನು ಅಮ್ಮನ ಜತೆ 33 ವರ್ಷಗಳ ಕಾಲ ಇದ್ದೆ. ನಾವಿಬ್ಬರೂ ಇಂತಹ ಸಾವಿರ ಸೆಲ್ವಂರನ್ನು ನೋಡಿದ್ದೇವೆ. ಅಮ್ಮನಿಗೆ ಭಾಷಣ ಸೇರಿದಂತೆ ಪಕ್ಷದ ಇತರೆ ಕೆಲಸಗಳಲ್ಲಿ ನಾನು ಸಹಾಯ ಮಾಡುತ್ತಿದೆ. ಎಂದಿಗೂ ನನ್ನನ್ನು ನಾನು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಅವರ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವುದು ಮುಖ್ಯವಾಗಿತ್ತು.

ಎಂಜಿಆರ್ ಅವರು ಸತ್ತ ನಂತರ ಪಕ್ಷವನ್ನು ಉಳಿಸಿ ಬೆಳೆಸಿ ಅಧಿಕಾರಕ್ಕೆ ತರಲು ಅಮ್ಮಾ ಪಟ್ಟ ರೀತಿಯಲ್ಲೇ ನಾನು ಹೋರಾಟ ನಡೆಸುತ್ತಿದ್ದೇನೆ. ಎಂಜಿಆರ್ ಅವರು ಸತ್ತಾಗ ರಾಜಕೀಯಕ್ಕೆ ಪ್ರವೇಶಿಸಲು ಇಷ್ಟವಿಲ್ಲ ಎಂದು ಅಕ್ಕ (ಜಯಲಲಿತಾ) ಹೇಳಿದ್ದರು. ಆಗ ಎಂಜಿಆರ್ ಅವರಿಗೋಸ್ಕರ ನೀವು ರಾಜಕೀಯ ಪ್ರವೇಶಿಸಬೇಕು ಎಂದು ಹೇಳಿದೆ. ಆಗ ಅವರಿಗೆ ನಿಧಾನವಾಗಿ ರಾಜಕೀಯದಲ್ಲಿ ಆಸಕ್ತಿ ಹುಟ್ಟಿಕೊಂಡಿತು.

ಆರಂಭದಲ್ಲಿ ಪನ್ನೀರ್ ಸೆಲ್ವಂ ಅಧಿಕಾರ ವಹಿಸಿಕೊಳ್ಳುವಂತೆ ಕೇಳಿದರು. ಅಮ್ಮನವರ ಸಾವಿನಿಂದ ನೋವಿನಲ್ಲಿದ್ದ ನಾನು ಅದನ್ನು ನಿರಾಕರಿಸಿ, ಆ ಜವಾಬ್ದಾರಿಯನ್ನು ಸೆಲ್ವಂ ಅವರಿಗೆ ನೀಡಿದ್ದೆ. ಈಗ ಸೆಲ್ವಂ ಅವರ ನಿಜವಾದ ಬಣ್ಣ ಬಯಲಾಗುತ್ತಿದೆ. ಕೆಲವರು ಪಕ್ಷವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದು, ಅದು ಎಂದಿಗೂ ಸಾಧ್ಯವಿಲ್ಲ. ಸೆಲ್ವಂ ಎಂದಿಗೂ ಪಕ್ಷಕ್ಕೆ ನಿಷ್ಠೆ ತೋರಿಲ್ಲ. ನಾನು ಅಮ್ಮನವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದರೆ, ಕೆಲವರು ಪಿತೂರಿ ನಡೆಸಲು ಹೊಂಚು ಹಾಕುತ್ತಿದ್ದರು. ಈ ಸರ್ಕಾರ ಉಳಿಸುವುದಕ್ಕಾಗಿ ನನ್ನ ಪ್ರಾಣವನ್ನೇ ಅರ್ಪಿಸಲು ಸಿದ್ಧವಿದ್ದೇನೆ. ಯಾವುದಕ್ಕೂ ನಾವು ಹೆದರುವುದಿಲ್ಲ.’

ಹೀಗೆ ಶಶಿಕಲಾ ಅವರು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ, ಅತ್ತ ಪನ್ನೀರ್ ಸೆಲ್ವಂ ಒಂದು ವಾರದ ನಂತರ ಮುಖ್ಯಮಂತ್ರಿ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಸೋಮವಾರ ಮುಖ್ಯಮಂತ್ರಿ ಕಚೇರಿಗೆ ಹೋದ ಪನ್ನೀರ್ ಸೆಲ್ವಂ ಅಲ್ಲಿಂದಲೇ ರಾಜ್ಯಪಾಲರಾದ ವಿದ್ಯಾಸಾಗರ್ ರಾವ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

Leave a Reply