ರೈತರ ಸಾಲಮನ್ನಾ- ಕೇಂದ್ರದತ್ತ ಬೊಟ್ಟು ಮಾಡಿದ ಮುಮಂ, ಐಟಿ ದಾಳಿ ಕುರಿತೂ ಕಿಡಿ, ಕಾಶ್ಮೀರ ಎನ್ಕೌಂಟರ್- ಮೂವರು ಯೋಧರು ಹುತಾತ್ಮ, ಆಸೀಸ್ ವಿರುದ್ಧದ ಟೆಸ್ಟ್: ಟೀಂ ಇಂಡಿಯಾ ಪ್ರಕಟ

ಬೆಂಗಳೂರಿನ ಯಲಹಂಕದಲ್ಲಿರುವ ಭಾರತೀಯ ವಾಯು ಸೇನಾ ನೆಲೆಯಲ್ಲಿ ಇಂದಿನಿಂದ ಆರಂಭವಾದ ಏರೋ ಇಂಡಿಯಾ 2017 ಕಾರ್ಯಕ್ರಮದಲ್ಲಿ ಕಣ್ಮನ ಸೆಳೆದ ವರ್ಣರಂಜಿತ ವೈಮಾನಿಕ ಹಾರಾಟ.

ಡಿಜಿಟಲ್ ಕನ್ನಡ ಟೀಮ್:

ಶೇ.50 ರಷ್ಟು ಸಾಲ ಮನ್ನಾ

ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಬರಲು ಸರ್ಕಾರ ಸಿದ್ಧವಿದೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕೃಷಿ ಪತ್ತಿನ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲದ ಶೇ.50 ರಷ್ಟು ಮನ್ನಾ ಮಾಡಲು ಸಿದ್ದ’ ಎಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ‘ರಾಜ್ಯ ಸರ್ಕಾರ ಕೃಷಿ ಪಟ್ಟಿನ ಬ್ಯಾಂಕುಗಳಲ್ಲಿನ ಅರ್ಧದಷ್ಟು ಸಾಲ ಮನ್ನಾ ಮಾಡಲು ಸಿದ್ಧ. ಆದರೆ ಕೇಂದ್ರ ಸರ್ಕಾರ ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಶೇ.50 ರಷ್ಟು ಸಾಲವನ್ನು ಮನ್ನಾ ಮಾಡಬೇಕು. ರಾಜ್ಯದ ನಿಲುವನ್ನು ಕೇಂದ್ರಕ್ಕೆ ಇಂದೇ ತಿಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸಾಲ ಮನ್ನಾ ಮಾಡಲು ಮನವಿ ಮಾಡುತ್ತೇನೆ’ ಎಂದರು.

ಇದೇ ವೇಳೆ ನೇಮಕಾತಿ ಬಗ್ಗೆ ಮಾಹಿತಿ ಕೊಟ್ಟ ಸಿಎಂ, ‘ನಾವು ಅಧಿಕಾರಕ್ಕೆ ಬಂದ ಮೇಲೆ 9600 ಶಿಕ್ಷಕರನ್ನು, 8000 ಪೊಲೀಸರನ್ನು, ಕೇವಲ ಆದ್ಯತಾ ವಲಯದಲ್ಲೇ ಮೂವತ್ತೆರಡು ಸಾವಿರಕ್ಕೂ ಹೆಚ್ಚು ನೇಮಕಾತಿ ಮಾಡಿದ್ದೇವೆ. ಸರ್ಕಾರ ನಿದ್ರಾವಸ್ಥೆಯಲ್ಲಿದ್ದಿದ್ದರೆ ಇಷ್ಟು ನೇಮಕಾತಿ ಸಾಧ್ಯವಾಗುತ್ತಿತ್ತೆ’ ಎಂದು ಪ್ರಶ್ನಿಸಿದರು.

ಇನ್ನು ಐಟಿ ದಾಳಿಗಳ ಬಗ್ಗೆ ಕಿಡಿ ಕಾರಿದ ಸಿದ್ದರಾಮಯ್ಯ, ‘ರಾಜ್ಯ ಕಾಂಗ್ರೆಸ್ ಮುಖಂಡರನ್ನೇ ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿರುವುದು ರಾಜಕೀಯ ಷಡ್ಯಂತ್ರ. ಬಿಜೆಪಿಯಲ್ಲಿರುವವರೆಲ್ಲಾ ಬಿಪಿಎಲ್ ಕಾರ್ಡು ಹೊಂದಿರುವವರೇ? ನಿಮ್ಮಲ್ಯಾರು ಕೋಟ್ಯಾಧೀಶರಿಲ್ಲವೇ?’ ಎಂದು ಟೀಕಿಸಿದರು.

ಬಂಡಿಪೊರ ಎನ್ಕೌಂಟರ್: ಮೂವರು ಯೋಧರು ಹುತಾತ್ಮ

ಜಮ್ಮು ಕಾಶ್ಮೀರದ ಬಂಡಿಪೊರ ಜಿಲ್ಲೆಯ ಪಿರ್ ಮೊಹಲ್ಲಾ ಮತ್ತು ಹಂಜಿನ ಪ್ರದೇಶಗಳಲ್ಲಿ ನಡೆದ ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಮಂಗಳವಾರ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆ ಮೂಲದ ಉಗ್ರನ ವಿರುದ್ಧದ ಕಾರ್ಯಾಚರಣೆ ವೇಳೆ ತೀವ್ರ ಮಟ್ಟದಲ್ಲಿ ಕಲ್ಲೂ ತೂರಾಟವೂ ನಡೆದಿರುವುದಾಗಿ ವರದಿ ಬಂದಿದೆ. ಈ ಕಾರ್ಯಾಚರಣೆಯಲ್ಲಿ ಮೂವರು ಭಾರತೀಯ ಯೋಧರ ಜತೆಗೆ 11 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಆ ಪೈಕಿ ನಾಲ್ವರು ಭಾರತೀಯ ಸೇನೆ, ಒಬ್ಬ ಸಿಆರ್ ಪಿಎಫ್ ಹಾಗೂ ಉಳಿದ ಆರು ಮಂದಿ ಪೊಲೀಸ್ ಅಧಿಕಾರಿಗಳಾಗಿದ್ದಾರೆ. ಭಾನುವಾರವಷ್ಟೇ ನಾಲ್ವರು ಉಗ್ರರನ್ನು ಕೊಂದಿದ್ದ ಭಾರತೀಯ ಸೇನೆ ಈಗ ಈ ಕಾರ್ಯಾಚರಣೆ ನಡೆಸಿದೆ. ಈ ಉಗ್ರರ ದಾಳಿಯ ಬಗ್ಗೆ ದೇಶದ ರಕ್ಷಣಾ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಾಕಿಸ್ತಾನದ ಮೇಲೆ ಮತ್ತಷ್ಟು ಗುರಿ ನಿರ್ದಿಷ್ಟ ದಾಳಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಟೀಂ ಇಂಡಿಯಾ ಆಯ್ಕೆ

ಇದೇ ತಿಂಗಳು 23 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಇಂದು ಭಾರತ ತಂಡವನ್ನು ಆಯ್ಕೆ ಮಾಡಲಾಯಿತು. ನಿನ್ನೆಯಷ್ಟೇ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಎರಡು ಪಂದ್ಯಗಳಿಗೆ ಮುಂದುವರಿಸಲಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಗಾಯದ ಸಮಸ್ಯೆಗೆ ಸಿಲುಕಿ ತಂಡದಿಂದ ಹೊರಗುಳಿದ ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಮೊದಲ ಪಂದ್ಯವನ್ನು ಪುಣೆಯಲ್ಲಿ (ಫೆ.23-27) ಆಡಲಿದೆ. ಉಳಿದ ಪಂದ್ಯಗಳನ್ನು ಬೆಂಗಳೂರಿನಲ್ಲಿ (ಮಾ.4-8), ರಾಂಚಿಯಲ್ಲಿ (ಮಾ.16-20) ಹಾಗೂ ಧರ್ಮಶಾಲಾದಲ್ಲಿ (ಮಾ.25-29) ಆಡಲಿದೆ.

ಭಾರತ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕರುಣ್ ನಾಯರ್, ವೃದ್ಧಿಮಾನ್ ಸಾಹ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಅಭಿನವ್ ಮುಕುಂದ್, ಹಾರ್ದಿಕ್ ಪಾಂಡ್ಯ.

Leave a Reply