ತೆರೆಮರೆಯಲ್ಲಿ ಆಟ ಆರಂಭಿಸಿದ ಶಶಿಕಲಾ- ಆಪ್ತ ಪಳನಿಸ್ವಾಮಿ ಶಾಸಕಾಂಗ ಪಕ್ಷದ ನಾಯಕ, ಸೆಲ್ವಂ ಸೇರಿದಂತೆ 19 ಮಂದಿ ಪಕ್ಷದಿಂದ ವಜಾ

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ನೇರವಾಗಿ ಹೋರಾಟ ನಡೆಸಿದ್ದ ಶಶಿಕಲಾ ನಟರಾಜನ್ ಈಗ ತೆರೆ ಮರೆಯಲ್ಲಿ ನಿಂತು ಅಧಿಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ತಮ್ಮ ನಿಷ್ಠಾವಂತ ಬೆಂಬಲಿಗ ಎಡಪ್ಪಡಿ ಕೆ ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿದ್ದಾರೆ. ಆ ಮೂಲಕ ಶಶಿಕಲಾ ರಾಜಕೀಯ ಚದುರಂಗದಾಟದಲ್ಲಿ ಪನ್ನೀರ್ ಸೆಲ್ವಂಗೆ ಚೆಕ್ ಮೇಟ್ ಕೊಟ್ಟಿದ್ದಾರೆ.

ಅಕ್ರಮ ಸಂಪತ್ತು ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ಶಶಿಕಲಾ ಅಂಡ್ ಟೀಂ ತಮ್ಮ ಪ್ಲಾನ್ ಬಿ ಅನ್ನು ಪ್ರಯೋಗಿಸಲಾರಂಭಿಸಿತು. ಸುಪ್ರೀಂ ಕೋರ್ಟ್ ತೀರ್ಪು ಹೊರ ಬೀಳುವ ಹೊತ್ತಿಗಾಗಲೇ ಗೋಲ್ಡನ್ ಬೇ ರೆಸಾರ್ಟ್ ತಲುಪಿದ್ದ ಶಶಿಕಲಾ ತಮ್ಮ ಬೆಂಬಲಿತ ಶಾಸಕರ ಜತೆ ಸಭೆ ನಡೆಸುತ್ತಿದ್ದರು. ಸುಪ್ರೀಂ ಕೋರ್ಟಿನಲ್ಲಿ ತಮ್ಮ ವಿರುದ್ಧ ತೀರ್ಪು ಬಂದ ಮೇಲೆ, ಜಯಲಲಿತಾ ಮಾದರಿಯಲ್ಲಿ ತಮ್ಮ ಆಪ್ತರನ್ನು ಮುಂದಿಟ್ಟುಕೊಂಡು ಅಧಿಕಾರ ನಡೆಸಲು ಮುಂದಾದರು.

ಪಳನಿಸ್ವಾಮಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ ಪನ್ನೀರ್ ಸೆಲ್ವಂ ಹಾಗೂ ಅವರ ಬೆಂಬಲಕ್ಕೆ ನಿಂತ 19 ಮಂದಿಯನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಶಾಲಾ ಶಿಕ್ಷಣ ಸಚಿವ ಕೆ.ಪಂಡಿಯಾರಾಜನ್ ಮತ್ತು ಮಾಜಿ ಸಚಿವ ಸಿ.ಪೊನಿಯನ್, ಪಿ.ಎಚ್ ಪಂಡಿಯನ್, ನಾಥಮ್ ಆರ್. ವಿಶ್ವನಾಥನ್. ಕೆ.ಪಿ ಮುನುಸಾಮಿ ಮತ್ತು ಪಿ.ಮೋಹನ್ ಅವರನ್ನು ಸಹ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ವಜಾಗೊಳಿಸಲಾಗಿದೆ. ಇದರೊಂದಿಗೆ ತಮ್ಮ ವಿರುದ್ಧ ಸಮರ ಸಾರಿದ ಪನ್ನೀರ್ ಸೆಲ್ವಂಗೆ ಶಾಕ್ ಕೊಟ್ಟಿದ್ದಾರೆ ಶಶಿಕಲಾ.

ಎಐಎಡಿಎಂಕೆ ಪಕ್ಷ ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಮ್ಮ ಶಾಸಕರಿಗೆ ಸಂದೇಶ ರವಾನಿಸಿದ ಸೆಲ್ವಂ, ‘ಈವರೆಗಿನ ವಿದ್ಯಮಾನಗಳನ್ನು ಮರೆತು ಎಲ್ಲರೂ ಒಟ್ಟಾಗಿ ಮುನ್ನಡೆಯೋಣ. ಪಕ್ಷ ಒಡೆಯಲು ಮುಂದಾಗಿರುವ ವಿರೋಧ ಪಕ್ಷಗಳನ್ನು ಮಣಿಸೋಣ. ಅಮ್ಮನ ಆತ್ಮ ನಮ್ಮ ಸುತ್ತಲೇ ಸುತ್ತುತ್ತಿದೆ. ಅಮ್ಮ ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸಲಿದ್ದಾರೆ. ಅಮ್ಮನ ಹಾದಿಯಲ್ಲೇ ನಾವು ಸಾಗಿ ಅವರ ರೀತಿಯಲ್ಲಿ ಉತ್ತಮ ಆಡಳಿತ ಹಾಗೂ ಜನರ ಕಲ್ಯಾಣಕ್ಕಾಗಿ ದುಡಿಯಬೇಕು. ನಾವು ಬೇರೆ ಪಕ್ಷದ ಬೆಂಬಲವಿಲ್ಲದೇ ಸರ್ಕಾರ ರಚಿಸುತ್ತೇವೆ’ ಎಂದು ಕರೆ ನೀಡಿದ್ದರು. ಅಲ್ಲದೆ ತಮ್ಮ ಬೆಂಬಲಿತರ ತಂಡವನ್ನು ಗೋಲ್ಡನ್ ಬೇ ರೆಸಾರ್ಟಿಗೆ ಕಳುಹಿಸಿ, ಶಾಸಕರ ಮನವೊಲಿಸಲು ಮುಂದಾದರು.

ಒಟ್ಟಿನಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಕನಸು ಭಗ್ನವಾಗಿದ್ದರೂ, ತಮ್ಮ ಬೆಂಬಲಿಗರ ಮೂಲಕ ಅಧಿಕಾರ ನಡೆಸಲು ಶಶಿಕಲಾ ಮುಂದಾಗಿದ್ದಾರೆ. ಇದರಿಂದಾಗಿ ಪನ್ನೀರ್ ಸೆಲ್ವಂ ಅಧಿಕಾರದಲ್ಲಿ ಮುಂದುವರಿಯುವ ಹಾದಿ ಈಗಲೂ ಸವಾಲಿನಿಂದ ಕೂಡಿದ್ದು, ತಮಿಳುನಾಡಿನ ರಾಜಕೀಯ ಸಮರ ಮತ್ತೊಂದು ಸ್ವರೂಪ ಹಾಗೂ ರೋಚಕತೆ ಪಡೆದುಕೊಂಡಿದೆ.

Leave a Reply