ಮುಖ್ಯಮಂತ್ರಿಯಾಗಲು ಹೊರಟ ಶಶಿಕಲಾ ಈಗ ಜೈಲಿನತ್ತ ಪಯಣ, ಸೆಲ್ವಂ ಹಾದಿ ಸುಗಮವೇ ಅಥವಾ ಕೊನೆ ಆಟ ಬಾಕಿ ಇದೆಯೇ?

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಹೊರಟಿದ್ದ ಶಶಿಕಲಾ ನಟರಾಜನ್ ಈಗ ಪರಪ್ಪನ ಅಗ್ರಹಾರದ ಜೈಲು ಸೇರುವ ಸ್ಥಿತಿಗೆ ಬಂದಿದ್ದಾರೆ. ಅಕ್ರಮ ಸಂಪತ್ತು ಪ್ರಕರಣದಲ್ಲಿ ದಿವಂಗತ ಜಯಲಲಿತಾ ಅವರ ನಂತರ ಎರಡನೇ ಆರೋಪಿಯಾಗಿದ್ದ ಶಶಿಕಲಾ ಅವರನ್ನು ಅಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆ ಮೂಲಕ ಶಶಿಕಲಾ ಅವರ ಸಿಎಂ ಕುರ್ಚಿ ಏರುವ ಕನಸು ಭಗ್ನವಾಗಿದೆ. ಮತ್ತೊಂದೆಡೆ ಈ ತೀರ್ಪಿನೊಂದಿಗೆ ಜಯಲಲಿತಾ ಅವರ ನಂಬಿಕಸ್ಥ ನಾಯಕ ಪನ್ನೀರ್ ಸೆಲ್ವಂ ತಮಿಳುನಾಡು ರಾಜಕೀಯದಲ್ಲಿ ತಮ್ಮ ಬಲವನ್ನು ಹೆಚ್ಚಿಸಿಕೊಂಡಂತಾಗಿದೆ.

ಶಶಿಕಲಾ ಅವರ ಭವಿಷ್ಯವನ್ನೇ ನಿರ್ಧರಿಸುವ ಈ ತೀರ್ಪಿನ ಮೇಲೆ ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಕುತೂಹಲ ಕೆರಳಿತ್ತು. ಮಂಗಳವಾರ ಬೆಳಗ್ಗೆ 10.30 ಸುಪ್ರೀಂ ಕೋರ್ಟ್ ಶಶಿಕಲಾ ಅವರನ್ನು ಅಪರಾಧಿ ಎಂದು ತೀರ್ಪು ನೀಡುತ್ತಲೇ ತಮಿಳುನಾಡಿನಲ್ಲಿ ಪನ್ನೀರ್ ಸೆಲ್ವಂ ಅವರ ಪಾಳಯದಲ್ಲಿ ಜಯದ ಸಂಭ್ರಮ ಮೂಡಿತ್ತು. ಅವರ ಬೆಂಬಲಿಗರು ಪಟಾಕಿ ಸಿಡಿಸಿ ರಸ್ತೆಗಳಲ್ಲಿ ಕುಣಿದು ಪನ್ನೀರ್ ಸೆಲ್ವಂ ಅವರಿಗೆ ಜೈಕಾರ ಹಾಕಿದರು.

ಈ ಪ್ರಕರಣದಲ್ಲಿ ಶಶಿಕಲಾ ಅಪರಾಧಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಬಂಧಿಸಬೇಕು ಎಂದಿರುವ ನ್ಯಾಯಾಲಯ, 4 ವರ್ಷ ಜೈಲು ಶಿಕ್ಷೆ ಹಾಗೂ ₹ 10 ಕೋಟಿ ದಂಡವನ್ನು ವಿಧಿಸಲಾಗಿದೆ. ಅಲ್ಲದೆ ಶಶಿಕಲಾ ಮುಂದಿನ 10 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಹೀಗಾಗಿ ಶಶಿಕಲಾ ಅವರ ರಾಜಕೀಯ ಕನಸು ಬಹುತೇಕ ಭಗ್ನ ಎಂದೇ ಪರಿಗಣಿಸಲಾಗಿದೆ.

ಶಶಿಕಲಾ ಅವರು ಅಪರಾಧಿಯಾದ ನಂತರವೂ ತಮಿಳುನಾಡಿನಲ್ಲಿ ರಾಜಕೀಯ ತಂತ್ರ ಪ್ರತಿತಂತ್ರಗಳ ಪ್ರಯೋಗ ಮುಂದುವರಿಯುತ್ತಿದೆ. ತೀರ್ಪು ಹೊರ ಬರುತ್ತಿದ್ದಂತೆ ಶಶಿಕಲಾ ಅವರು ತಮ್ಮ ಬೆಂಬಲಿತ ಶಾಸಕರಿರುವ ಗೋಲ್ಡನ್ ಬೇ ರೆಸಾರ್ಟಿನಲ್ಲಿ ಉಳಿದುಕೊಂಡಿದ್ದು, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ತಮ್ಮ ಪಾಳಯದ ಮತ್ತೊಬ್ಬರನ್ನು ಶಾಸಕಾಂಗ ಪಕ್ಷದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿ, ಪನ್ನೀರ್ ಸೆಲ್ವಂ ಅವರಿಗೆ ಪೆಟ್ಟು ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಜತೆಗೆ ಶಶಿಕಲಾ ಅವರ ಪಾಳಯದಲ್ಲಿದ್ದ 22 ಶಾಸಕರು ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಶಶಿಕಲಾ ಬಳಿ ಬಹುಮತವಿಲ್ಲ ಎಂಬ ವರದಿಗಳು ಬರುತ್ತಿವೆ.. ಈ ಎಲ್ಲ ಬೆಳವಣಿಗೆಗಳ ನಡುವೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ.

ಇಲ್ಲಿ ವಿಪರ್ಯಾಸ ಎಂದರೆ ಶಶಿಕಲಾ ವಿರುದ್ಧ ತೀರ್ಪು ಬಂದಿದೆ ಎಂದರೆ, ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಜಯಲಲಿತಾ ಅವರು ತಪ್ಪು ಮಾಡಿದ್ದರು ಎಂಬುದು ಸಾಬೀತಾಗುತ್ತದೆ. ಒಂದು ವೇಳೆ ಜಯಲಲಿತಾ ಅವರು ಬದುಕಿದ್ದಾಗ ಈ ರೀತಿಯಾದ ತೀರ್ಪು ಬಂದಿದ್ದರೆ, ಸಂಭ್ರಮದಲ್ಲಿರುವ ತಮಿಳುನಾಡಿನ ಜನ ಬೇರೆಯದೇ ರೀತಿಯ ಭಾವನೆ ತೋರುತ್ತಿದ್ದರು.

ಇನ್ನು ಈ ಪ್ರಕರಣದಲ್ಲಿ ದೇಶದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾದ ಜಯಲಲಿತಾ ಅವರ ವಿರುದ್ಧ ಸುದೀರ್ಘ ದಶಕಗಳಿಗೂ ಹೆಚ್ಚು ಕಾಲ ಕಾನೂನು ಸಮರದಲ್ಲಿ ಹೋರಾಟ ನಡೆಸಿದ ಕರ್ನಾಟಕದ ಹಿರಿಯ ವಕೀಲರಾದ ಬಿ.ವಿ ಆಚಾರ್ಯ ಅವರಿಗೆ ದೊಡ್ಡ ಜಯ ಸಿಕ್ಕಿದೆ.

Leave a Reply